ಆಡಿಯೋ ಬಹಿರಂಗ ಪ್ರಕರಣ | ಸದನಕ್ಕೆ‌ ಅಸಲಿ ಆಡಿಯೋ ತಂದ ಬಿಜೆಪಿ ಶಾಸಕ ದಡೇಸಗೂರ್!

  • ಪಿಎಸ್ಐ ಅಕ್ರಮದೊಳಗೆ ಸಿಲುಕಿಸಲು ಪ್ರಯತ್ನ ನಡೆದಿದೆ
  • ಸದನಕ್ಕೆ ಮೂಲ ಆಡಿಯೋ ದಾಖಲೆ ನೀಡುತ್ತೇನೆ ಎಂದ ಶಾಸಕ

ಪಿಎಸ್ಐ ಹಗರಣಕ್ಕೆ ಸಂಬಂಧಿಸಿದಂತೆ ಹಣದ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಹೊತ್ತಿರುವ ಬಿಜೆಪಿ ಶಾಸಕ ಬಸವರಾಜ ದಡೇಸಗೂರ್ ತಮ್ಮ ವಿರುದ್ಧದ ಆರೋಪವನ್ನು ಅಲ್ಲಗಳೆದಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ದಡೇಸಗೂರ್, ಪಿಎಸ್ಐ ಹಗರಣದಲ್ಲಿ ನನ್ನನ್ನು ಸಿಲುಕಿಸಲು ಷಢ್ಯಂತ್ರ ಮಾಡಲಾಗಿದೆ. ನಾನು ಯಾವುದೇ ಹಣ ಪಡೆದಿಲ್ಲ. ಸರ್ಕಾರಕ್ಕೂ ಯಾವುದೇ ಹಣ ತಲುಪಿಸಿಲ್ಲ ಎಂದರು.

ಆಡಿಯೋ ವಿಚಾರದ ಬಗ್ಗೆ ಸ್ಪಷ್ಟೀಕರಣ ನೀಡಿದ ಅವರು, ನಾನು ಪಂಚಾಯ್ತಿ ಕ್ಷೇತ್ರವೊಂದರ ಸಮಸ್ಯೆ ಬಗೆಹರಿಸುವ ವಿಚಾರದಲ್ಲಿ 2020ರಲ್ಲಿ ಮಾತನಾಡಿದ ಆಡಿಯೋ ಅದು. ಆವಾಗ ಪಿಎಸ್ಐ ಹಗರಣ ಇರಲಿಲ್ಲ, ನನ್ನ ವಿರೋಧಿಗಳು ನಾನು ಮಾತನಾಡಿದ ಆಡಿಯೋಗೆ ಪಿಎಸ್‌ಐ ಹಗರಣದ ವಿಚಾರ ಜೋಡಿಸಿದ್ದಾರೆ. ನನ್ನ ಆಡಿಯೋ ಎಡಿಟ್ ಮಾಡಿದ್ದಾರೆ ಎಂದರು.

ಆರೋಪ ಮಾಡುವವರು ಮಾಡಲಿ, ನಾನು ದಾಖಲೆ ಸಮೇತ ಸದನಕ್ಕೆ ಬಂದಿದೇನೆ. ಆಡಿಯೋ ಸಿಡಿ ಕೂಡ ಜೊತೆಗೆ ತಂದಿದ್ದೇನೆ. ಸದನದಲ್ಲಿ ಇದರ ಬಗ್ಗೆ ಪ್ರಸ್ತಾಪವಾದಾಗ ಅದಕ್ಕೆ ಉತ್ತರ ನೀಡುತ್ತೇನೆ ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? : ಪಿಎಸ್ಐ ನೇಮಕಾತಿ ಹಗರಣ| ಹಣ ಕೊಟ್ಟವರಿಗೆ ಧಮ್ಕಿ ಹಾಕಿದ ಬಿಜೆಪಿ ಶಾಸಕ ದಢೇಸಗೂರ; ಮತ್ತೊಂದು ಆಡಿಯೋ ವೈರಲ್! 

ಪೋನ್‌ನಲ್ಲಿ ನನ್ನೊಂದಿಗೆ ಮಾತನಾಡಿದ್ದ ಪರಸಪ್ಪನೇ ಸ್ಪಷ್ಟೀಕರಣ ನೀಡಿದ್ದು ಪಿಎಸ್ ಐ ಪರೀಕ್ಷೆಯಲ್ಲಿ ನನ್ನ ಮಗ ಫಿಸಿಕಲ್ ಎಕ್ಸಾಂ ಅನ್ನೇ ಪಾಸ್ ಮಾಡಿರಲಿಲ್ಲ ಎಂದಿದ್ದಾರೆ. ಹೀಗಿರುವಾಗ ನಾನು ಆತನಿಗೆ ಹುದ್ದೆ ಕೊಡಿಸಲು ಹೇಗೆ ಸಾಧ್ಯ ಎಂದು ಬಸವರಾಜ ದಡೇಸಗೂರ್‌ ಪ್ರಶ್ನಿಸಿದರು.

ನನ್ನ ವಿರುದ್ಧ ದಾಖಲೆ ಬಿಡುಗಡೆ ಮಾಡಿದ ಶಾಸಕರು ನನ್ನ ಸ್ನೇಹಿತರೇ. ಅವರು ವೀಡಿಯೋ ಬಿಡುಗಡೆ ಮಾಡುವುದಿದ್ದರೆ ಅದಕ್ಕೆ ನನ್ನ ಸ್ವಾಗತವಿದೆ ಎಂದು ಬಿಜೆಪಿ ಶಾಸಕ ಬಸವರಾಜ ದಡೇಸಗೂರ್ ಹೇಳಿದರು.

ನಿಮಗೆ ಏನು ಅನ್ನಿಸ್ತು?
4 ವೋಟ್