
- ನಮ್ಮ ಇತಿಹಾಸವನ್ನು ಎಸ್ ಎಲ್ ಬೈರಪ್ಪ ಸರಿಯಾಗಿ ಓದಿ ನೋಡಲಿ
- ಟಿಪ್ಪು ಪ್ರತಿಮೆ ನಿರ್ಮಾಣ ; ಅದು ಪಕ್ಷಕ್ಕೆ ಬಿಟ್ಟ ವಿಚಾರ ಎಂದ ಮೊಯ್ಲಿ
ಕಥೆ ಕಾದಂಬರಿ ಬರೆದವರೆಲ್ಲ ಇತಿಹಾಸಕಾರರಲ್ಲ. ಇಂತವರು ಟಿಪ್ಪು ಸುಲ್ತಾನನ ಬಗ್ಗೆ ಮಾತನಾಡಿದ್ದಕ್ಕೆ ಬೆಲೆ ಕೊಡುವ ಅಗತ್ಯತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಾ. ಎಂ ವೀರಪ್ಪ ಮೊಯ್ಲಿ, ಟಿಪ್ಪು ಪ್ರತಿಮೆ ವಿಚಾರವಾಗಿ ಎಸ್ ಎಲ್ ಭೈರಪ್ಪ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವೀರಪ್ಪ ಮೊಯ್ಲಿ, ಎಲ್ಲ ಸಾಹಿತಿಗಳು ಇತಿಹಾಸಕಾರಲ್ಲ. ನಮ್ಮ ಇತಿಹಾಸವನ್ನು ಭೈರಪ್ಪ ಸರಿಯಾಗಿ ಓದಿ ನೋಡಲಿ. ಕಾದಂಬರಿ ಬರೆದವರೆಲ್ಲ ಇತಿಹಾಸಕಾರ ಆಗುವುದಿಲ್ಲ. ಇತಿಹಾಸದಲ್ಲಿ ಟಿಪ್ಪು ಬಗ್ಗೆ ಏನು ಹೇಳಿದ್ದಾರೆ ಎಂದು ಓದಿ ನೋಡಬೇಕು ಎಂದವರು ಕಿವಿಮಾತು ಹೇಳಿದರು.
ಟಿಪ್ಪು ಸುಲ್ತಾನ್ ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ. ಹೀಗಾಗಿ ಟಿಪ್ಪು ಸುಲ್ತಾನ್ ಪ್ರತಿಮೆ ಏಕೆ ನಿರ್ಮಾಣ ಮಾಡಬಾರದು ಎಂದು ಟಿಪ್ಪು ವಿರುದ್ಧ ಗುಡುಗುವವರನ್ನು ವೀರಪ್ಪ ಮೊಯ್ಲಿ ಪ್ರಶ್ನಿಸಿದರು.
ಯುದ್ಧ ಮಾಡುವಾಗ ಕೆಲವರು ಸಾಯುತ್ತಾರೆ. ಅದಕ್ಕೆ ಚಕ್ರವರ್ತಿಯೇ ಕಾರಣ ಎಂದು ಆರೋಪ ಮಾಡುವುದು ಸರಿಯಲ್ಲ. ಟಿಪ್ಪು ಉತ್ತಮ ಆಡಳಿತಗಾರ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದವನು. ದೇಶಕ್ಕಾಗಿ ಮಕ್ಕಳನ್ನು ಒತ್ತೆ ಇಟ್ಟವನು ಎಂದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಮೆ ನಿರ್ಮಾಣ ಮಾಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಆ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.
ಇದೇ ವೇಳೆ ಕೆಂಪೇಗೌಡ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮದ ಆಹ್ವಾನದ ವಿಚಾರದಲ್ಲಿ ಸರ್ಕಾರ ಮಾಡಿಕೊಂಡ ಎಡವಟ್ಟಿನ ಬಗ್ಗೆ ಮಾತನಾಡಿದ ವೀರಪ್ಪ ಮೊಯ್ಲಿ, ಕಾರ್ಯಕ್ರಮಕ್ಕೆ ನನಗೂ ಆಹ್ವಾನ ಇತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ಮಾಡಿದ್ದರು. ಆದರೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಇರಲಿಲ್ಲ. ಈ ಬಗ್ಗೆ ಸಿದ್ದರಾಮಯ್ಯ ಬಳಿ ಚರ್ಚಿಸಿ ಕಾರ್ಯಕ್ರಮಕ್ಕೆ ಹೋಗದಿರಲು ನಿರ್ಧರಿಸಿದೆವು ಎಂದರು.
ಈ ಸುದ್ದಿ ಓದಿದ್ದೀರಾ? : 'ಟಿಪ್ಪು ನಿಜ ಕನಸುಗಳು' ಪುಸ್ತಕದ ವಿರುದ್ಧ ಮೊಕದ್ದಮೆ ದಾಖಲಿಸುವೆ; ಶಾಸಕ ತನ್ವೀರ್ ಸೇಠ್
ಎಸ್ ಎಂ ಕೃಷ್ಣ ಅವಧಿಯಲ್ಲಿ ಬೆಂಗಳೂರು ಏರ್ಪೋರ್ಟ್ ನಿರ್ಮಾಣವಾಗಿತ್ತು. ವಿಮಾನ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ಎಂ ಕೃಷ್ಣ ಕೂಡಾ ಇದ್ದರು. ಆದರೆ ಅವರನ್ನು ವೇದಿಕೆ ಮೇಲೆ ಕೂರಿಸಿಲ್ಲ. ಬಿಜೆಪಿಯವರು ಇಂತಹ ಕೃತ್ಞರು ಎಂದು ವೀರಪ್ಪ ಮೊಯ್ಲಿ ಕಿಡಿಕಾರಿದರು.