ಬೆಳಗಾವಿ ಗಡಿ ವಿವಾದ | ವಿಪಕ್ಷಗಳನ್ನೊಳಗೊಂಡ ಸಲಹಾ ಸಮಿತಿ ನೇಮಿಸಿ; ಸಿಎಂಗೆ ಸಿದ್ದರಾಮಯ್ಯ ಆಗ್ರಹ 

  • ಗಡಿ ವಿವಾದದ ತೀರ್ಮಾನ ನ್ಯಾಯಾಲಯದ್ದಲ್ಲ, ಕೇಂದ್ರ ಸರ್ಕಾರದ್ದು
  • ರಾಜ್ಯದ ಒಂದಿಂಚು ಭೂಮಿ, ಒಂದು ಹನಿ ನೀರನ್ನು ಬಿಟ್ಟುಕೊಡುವುದಿಲ್ಲ

ರಾಜ್ಯ ಸರ್ಕಾರ ತಕ್ಷಣ ವಿರೋಧ ಪಕ್ಷಗಳ ನಾಯಕರನ್ನೂ ಸೇರಿಸಿಕೊಂಡು ಸಲಹಾ ಸಮಿತಿಯನ್ನು ರಚಿಸುವ ಮೂಲಕ ಮಹಾರಾಷ್ಟ್ರ ಎತ್ತಿರುವ ಬೆಳಗಾವಿ ಗಡಿ ವಿವಾದಕ್ಕೆ ತಕ್ಕ ಉತ್ತರ ಕೊಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.

ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ತಮಗೆ ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನೀವು ಬರೆದಿರುವ ಪತ್ರ ತಲುಪಿದೆ. ಅತ್ಯಂತ ಮಹತ್ವಪೂರ್ಣವಾದ ಈ ವಿಷಯದ ಬಗ್ಗೆ ವಿಳಂಬವಾಗಿಯಾದರೂ ಕಾರ್ಯಪ್ರವೃತ್ತರಾಗಿರುವುದು ಸಂತೋಷ ಮತ್ತು ಸಮಾಧಾನದ ವಿಷಯ ಎಂದಿದ್ದಾರೆ. ಜೊತೆಗೆ ಈ ಸಂಬಂಧ ಕೆಲ ಮಹತ್ವದ ಸಲಹೆಗಳನ್ನು ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ನೀಡಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಗಡಿ ವಿವಾದದ ವ್ಯಾಜ್ಯ ಸಂಬಂಧಿತ ವಾದಕ್ಕೆ ನಮ್ಮ ವಕೀಲರ ತಂಡವನ್ನು ಇನ್ನಷ್ಟು ಸನ್ನದ್ಧಗೊಳಿಸಬೇಕು, ಗಡಿ ವ್ಯಾಜ್ಯದ ಮೇಲುಸ್ತುವಾರಿಯನ್ನು ಹಿರಿಯ ಸಚಿವರಿಗೆ ಒಪ್ಪಿಸಬೇಕು ಮತ್ತು ನಿಷ್ಕ್ರಿಯಗೊಂಡಿರುವ ಗಡಿ ಸಂರಕ್ಷಣಾ ಸಮಿತಿಯನ್ನು ಪುನರ್ ರಚಿಸಬೇಕು ಎಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಗಡಿ ವಿವಾದದ ಬಗ್ಗೆ ಸತತವಾಗಿ ವಿರೋಧ ಪಕ್ಷಗಳ ಜೊತೆ ಸಮಾಲೋಚನೆ ನಡೆಸುತ್ತಾ ಬಂದಿದೆ. ಕಳೆದ ಒಂದು ತಿಂಗಳಿನಿಂದ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆಯನ್ನು ಎದುರಿಸಲು ವಿರೋಧ ಪಕ್ಷಗಳ ನಾಯಕರನ್ನೂ ಸೇರಿಸಿಕೊಂಡು 16 ಸದಸ್ಯರ ಸಲಹಾ ಸಮಿತಿಯನ್ನೂ ಕೂಡಾ ರಚಿಸಿದೆ.

ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಈ ಸಮಿತಿ ಈಗಾಗಲೇ ಸಭೆ ನಡೆಸಿ ನ್ಯಾಯಾಂಗದ ಹೋರಾಟಕ್ಕೆ ಕಾರ್ಯತಂತ್ರಗಳನ್ನು ರೂಪಿಸಿದೆ. ಸುಪ್ರೀಂ ಕೋರ್ಟಿನಲ್ಲಿ ನಡೆಯುವ ಗಡಿ ವ್ಯಾಜ್ಯ ವಿಚಾರಣೆಯ ಮೇಲುಸ್ತುವಾರಿಗಾಗಿ ಇಬ್ಬರು ಸಚಿವರ ಸಮಿತಿಯನ್ನು ಅಲ್ಲಿನ ಸರ್ಕಾರ ರಚಿಸಿದೆ. ಆದರೆ, ಕರ್ನಾಟಕ ಸರ್ಕಾರ ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರದಷ್ಟೇ ಮುತುವರ್ಜಿ ವಹಿಸಿಲ್ಲ ಎನ್ನುವುದು ವಿಷಾದನೀಯವಾದರೂ ವಾಸ್ತವವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದಾಗ 2015ರಲ್ಲಿ ಮಾಜಿ ಸಚಿವ ಎಚ್ ಕೆ ಪಾಟೀಲ್ ಅವರನ್ನು ಗಡಿಭಾಗದ ಉಸ್ತುವಾರಿ ಸಚಿವರಾಗಿ ನೇಮಕ ಮಾಡಿದ್ದೆ. ಆದರೆ ಈಗಿನ ಸರ್ಕಾರದಲ್ಲಿ ಗಡಿ ಉಸ್ತುವಾರಿಗೆ ಸಚಿವರನ್ನು ನೇಮಿಸದೆ ನಿರ್ಲಕ್ಷ್ಯ ತೋರಿದೆ. ಜೊತೆಗೆ ಗಡಿ ಸಂರಕ್ಷಣಾ ಸಮಿತಿ ಕೂಡಾ ಕಳೆದ ಮೂರು ವರ್ಷಗಳಿಂದ ಒಂದೇ ಒಂದು ಸಭೆ ನಡೆಸದೆ ನಿಷ್ಕ್ರಿಯವಾಗಿದೆ. ನ್ಯಾಯಮೂರ್ತಿ ಕೆ ಎಲ್ ಮಂಜುನಾಥ್ ಅವರು ಸೇರಿದಂತೆ ಸಮಿತಿಯ ಇಬ್ಬರು ಸದಸ್ಯರು ಮೃತರಾಗಿದ್ದಾರೆ. ಗಡಿ ಸಂರಕ್ಷಣಾ ಸಮಿತಿಯನ್ನು ಪುನರ್‌ರಚಿಸುವ ಜೊತೆಯಲ್ಲಿ ಉನ್ನತಾಧಿಕಾರದ ಸಮಿತಿಯನ್ನು ರಚಿಸುವಂತೆ ಕನ್ನಡ ಸಂಘಟನೆಗಳ ಬೇಡಿಕೆಯನ್ನೂ ಕೂಡಾ ರಾಜ್ಯ ಸರ್ಕಾರ ಈಡೇರಿಸಿಲ್ಲ ಎಂದು ಸಿದ್ದರಾಮಯ್ಯ ಪತ್ರದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರವೇ ನೇಮಿಸಿರುವ ಮಹಾಜನ ಆಯೋಗದ ವರದಿಯೇ ಅಂತಿಮ, ಆಯೋಗದ ಶಿಫಾರಸ್ಸಿಗೆ ಕರ್ನಾಟಕ ಬದ್ಧವಾಗಿದ್ದು, ಅದಕ್ಕಿಂತ ಹೊರತಾದ ಯಾವುದೇ ಬದಲಾವಣೆಯನ್ನು ಕರ್ನಾಟಕ ಒಪ್ಪುವುದಿಲ್ಲ. ಎನ್ನುವುದು ಈವರೆಗಿನ ಎಲ್ಲ ರಾಜ್ಯ ಸರ್ಕಾರಗಳ ನಿಲುವಾಗಿದೆ.

ಗಡಿ ವಿವಾದವನ್ನು ತೀರ್ಮಾನಿಸಬೇಕಾಗಿರುವುದು ಕೇಂದ್ರ ಸರ್ಕಾರವೇ ಹೊರತು ನ್ಯಾಯಾಲಯ ಅಲ್ಲ ಎನ್ನುವುದು ಕರ್ನಾಟಕ ಸರ್ಕಾರದ ನಿಲುವಾಗಿದೆ. ಕರ್ನಾಟಕಕ್ಕೆ ಸೇರಿರುವ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟಗೆ ಮೊರೆ ಹೋದ ದಿನದಿಂದ ಇದು ನಮ್ಮ ನಿಲುವಾಗಿದೆ. ಇಲ್ಲಿಯವರೆಗಿನ ಎಲ್ಲ ಸರ್ಕಾರಗಳು ಇದೇ ನಿಲುವನ್ನು ವ್ಯಕ್ತಪಡಿಸುತ್ತಾ ಬಂದಿವೆ. ಇದಕ್ಕೆ ಈಗಿನ ಸರ್ಕಾರವೂ ಬದ್ಧವಾಗಿರಬೇಕು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಳಗಾವಿ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ದಾವೆ ಪುರಸ್ಕಾರ ಯೋಗ್ಯ ಅಲ್ಲ ಎಂದು ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದೆ. ಈ ಅರ್ಜಿ ಇತ್ಯರ್ಥವಾಗುವವರೆಗೆ ಸಾಕ್ಷಿದಾರರ ಪಾಟೀ ಸವಾಲು ದಾಖಲಾತಿ ನಡೆಸದಂತೆ ಸುಪ್ರೀಂ ಕೋರ್ಟಗೆ ಪುನರ್ ಪರಿಶೀಲನಾ ಅರ್ಜಿಯನ್ನೂ ಕೂಡಾ ಹಿಂದೆ ರಾಜ್ಯ ಸರ್ಕಾರ ಸಲ್ಲಿಸಿತ್ತು. ಈ ನಿಲುವಿಗೆ ರಾಜ್ಯ ಸರ್ಕಾರ ಬದ್ಧವಾಗಿರಬೇಕೆಂದು ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಆಗ್ರಹಿಸುವುದಾಗಿ ಹೇಳಿದರು.

ಈ ಸುದ್ದಿ ಓದಿದ್ದೀರಾ? :ರಾಜ್ಯಗಳ ನಡುವೆ ವ್ಯಾಜ್ಯ ಹಚ್ಚಿಹಾಕುವ ಕೆಲಸ ಮಾಡಬಾರದು: ಮಹಾರಾಷ್ಟ್ರ ಮುಖ್ಯಮಂತ್ರಿಗೆ ಸಿಎಂ ಬೊಮ್ಮಾಯಿ ಎಚ್ಚರಿಕೆ

ನೆಲ-ಜಲ-ಭಾಷೆಯ ರಕ್ಷಣೆಗಾಗಿ ರಾಜ್ಯ ಸರ್ಕಾರ ಕೈಗೊಳ್ಳುವ ನ್ಯಾಯಬದ್ಧವಾದ ಎಲ್ಲ ಕ್ರಮಗಳನ್ನು ನಮ್ಮ ಪಕ್ಷ ಸಂಪೂರ್ಣವಾಗಿ ಬೆಂಬಲಿಸುತ್ತದೆ. ನ್ಯಾಯಬದ್ಧವಾಗಿ ಕರ್ನಾಟಕಕ್ಕೆ ಸೇರಿರುವ ಒಂದಿಂಚು ಭೂಮಿ, ಒಂದು ಹನಿ ನೀರನ್ನು ಬಿಟ್ಟು ಕೊಡುವುದಿಲ್ಲ ಎನ್ನುವುದು ನಮ್ಮ ನಿಲುವಾಗಬೇಕು. ನಾನು ನನ್ನ ರಾಜಕೀಯ ಜೀವನದ ಪ್ರಾರಂಭದ ದಿನಗಳಲ್ಲಿಯೇ ಕನ್ನಡ ಕಾವಲು ಸಮಿತಿ ಅಧ್ಯಕ್ಷನಾದವನು. ಮುಖ್ಯಮಂತ್ರಿಯಾಗಿಯೂ ಸಮಸ್ತ ಕರ್ನಾಟಕದ ಹಿತಾಸಕ್ತಿಯ ಕಾವಲುಗಾರನ ಕೆಲಸ ಮಾಡಿದ್ದೇನೆ.

ಬೆಳಗಾವಿ ಗಡಿ ವಿವಾದದ ನ್ಯಾಯಾಂಗ ಹೋರಾಟವನ್ನು ಈಗಿನ ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಾ ಬಂದಿದೆ ಎನ್ನುವುದು ಕನ್ನಡಿಗರು ಮತ್ತು ಕನ್ನಡ ಸಂಘಟನೆಗಳ ಆರೋಪವಾಗಿದೆ. ಹೀಗಾಗಿ ಇವೆಲ್ಲದಕ್ಕೂ ಒಪ್ಪಿತ ರೀತಿಯ ನಿರ್ಧಾರ ತೆಗೆದುಕೊಂಡು ಎಲ್ಲರ ವಿಶ್ವಾಸ ಪಡೆದುಕೊಂಡು, ಅಗತ್ಯ ಕಾನೂನು ಹೋರಾಟವನ್ನು ಸರ್ಕಾರ ರೂಪಿಸುವಂತೆ ತಾವು ಆಗ್ರಹಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180