
- ಕಾಂಗ್ರೆಸ್ ಪಕ್ಷದವರಿಗೆ ಈಗ ಜ್ಞಾನೋದಯವಾಗಿದೆ: ಸೋಮಣ್ಣ
- ಯಾವ ಮುಖ ಇಟ್ಟುಕೊಂಡು ಯಾತ್ರೆ ಮಾಡ್ತಿದ್ದಾರೆ: ಅಶೋಕ್
20 ದಿನಗಳ ತಮಿಳುನಾಡು ಮತ್ತು ಕೇರಳ ಪಾದಯಾತ್ರೆ ಮುಗಿಸಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಕರ್ನಾಟಕ ಪ್ರವೇಶಿಸಿದ್ದಾರೆ. ರಾಜ್ಯದಲ್ಲಿ 21 ದಿನ ಪಾದಯಾತ್ರೆ ನಡೆಯಲಿದ್ದು, ಮೊದಲ ದಿನ ಯಾತ್ರೆಗೆ ಸಿಕ್ಕ ಭಾರೀ ಜನಬೆಂಬಲದಿಂದ ಬಿಜೆಪಿ ವಲಯದಿಂದ ತಳಮಳದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
‘ಭಾರತ್ ಜೋಡೋ’ ಯಾತ್ರೆ ಬಗ್ಗೆ ರಾಜ್ಯ ಬಿಜೆಪಿ, “ಇಂದು ರಾಜ್ಯದಲ್ಲಿ ರಾಹುಕಾಲ ಆರಂಭದ ಸಮಯ ಬೆಳಿಗ್ಗೆ 10.30ರಿಂದ. ಆದುದರಿಂದ, ದಿನನಿತ್ಯದ ನೆಮ್ಮದಿ ಮತ್ತು ಶಾಂತಿಗಾಗಿ ರಾಹು ಸಂಬಂಧಿತ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳುವಂತೆ ಜನಹಿತಕ್ಕಾಗಿ ಜಾರಿ” ಎಂದು ಲೇವಡಿ ಮಾಡಿತ್ತು.
ರಾಹುಲ್ ಪಾದಯಾತ್ರೆ ಬಗ್ಗೆ ಇಡೀ ದಿನ ಸರಣಿ ಟ್ವೀಟ್ ಮಾಡಿದ ಬಿಜೆಪಿ, “ಭಾರತ್ ಜೋಡೋ ಯಾತ್ರೆಯೋ ಅಥವಾ ಸಿದ್ದು- ಡಿಕೆಶಿ ಜೋಡಿಸುವ ಜಾತ್ರೆಯೋ” ಎಂಬ ಒಕ್ಕಣೆಯ ಟ್ವೀಟ್ನಲ್ಲಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಕೈ ಹಿಡಿದು ರಾಹುಲ್ ಗಾಂಧಿ ನಗಾರಿ ಬಾರಿಸುತ್ತಿರುವ ವಿಡಿಯೋವನ್ನು ‘ಟ್ರೋಲ್’ ಮಾಡಿತ್ತು.
ಸರಣಿ ಟ್ವೀಟ್ ಮುಂದುವರಿಸಿದ ಬಿಜೆಪಿ, “ರಾಹುಲ್ ಗಾಂಧಿಗೆ ತ್ರಿವರ್ಣ ಧ್ವಜ ನೀಡುವಂತೆ ಸಿದ್ದರಾಮಯ್ಯ ಅವರಿಗೆ ನಿರೂಪಕರು ಮನವಿ ಮಾಡಿದ್ದರು. ಆದರೆ, ಸಿದ್ದರಾಮಯ್ಯ ಅವರನ್ನು ಲೆಕ್ಕಿಸದೆ ಡಿ ಕೆ ಶಿವಕುಮಾರ್ ಅವರು ರಾಹುಲ್ ಗಾಂಧಿಗೆ ಧ್ವಜ ಹಸ್ತಾಂತರಿಸಿದರು. ಈ ಮೂಲಕ ನನ್ನನ್ನು ಸಭೆಗೆ ಕರೆದಿಲ್ಲ ಎಂದಿದ್ದ ಸಿದ್ದರಾಮಯ್ಯಗೆ ವೇದಿಕೆಯಲ್ಲೇ ಟಕ್ಕರ್ ನೀಡಿದರೇ?” ಎಂದು ಪ್ರಶ್ನಿಸಿದೆ.
ಈ ಸುದ್ದಿ ಓದಿದ್ದೀರಾ? ‘ರಾಹು ಸಂಬಂಧಿತ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳಿ’: ಭಾರತ್ ಜೋಡೋ ಯಾತ್ರೆ ಬಗ್ಗೆ ಬಿಜೆಪಿ ಲೇವಡಿ
“ರಾಹುಲ್ ಗಾಂಧಿ ಅವರ ಬೆಳಗ್ಗಿನ ಉಪಹಾರದಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಸಿದ್ದರಾಮಯ್ಯ ಬಣ ನಿರ್ಲಕ್ಷಿಸಿತ್ತು. ಬೇಯಿಸಲು ಡಿಕೆಶಿ ಬೇಕು, ತಿನ್ನುವುದು ಮಾತ್ರ ಸಿದ್ದರಾಮಯ್ಯ! ಡಿಕೆಶಿ ಅವರೇ ನಿಮ್ಮ ಸ್ಕ್ರಿಪ್ಟ್ ಅಲ್ಲೋಲಕಲ್ಲೋಲವಾಗಲು ಕಾರಣವೇನು” ಎಂದು ವ್ಯಂಗ್ಯ ಮಾಡಿತ್ತು.
“ರಾಹುಲ್ ಗಾಂಧಿಯ ಐಷಾರಾಮಿ ಕಂಟೇನರ್ ಯಾತ್ರೆ ಕರ್ನಾಟಕದಲ್ಲಿ ಆರಂಭಗೊಂಡಿದೆ. ಈ ಯಾತ್ರೆಯ ಆರಂಭದೊಂದಿಗೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವಿನ ಶೀತಲ ಸಮರ ಮತ್ತೆ ಜಗಜ್ಜಾಹೀರಾಗಿದೆ. ರಾಹುಲ್ ಗಾಂಧಿ ಅವರೇ, ಭಾರತ ಜೋಡಿಸುವುದಕ್ಕಿಂತ ಇವರಿಬ್ಬರನ್ನು ಜೋಡಿಸುವುದರಲ್ಲೇ ಸುಸ್ತಾಯಿತೇ” ಎಂದು ಬಿಜೆಪಿ ಪ್ರಶ್ನಿಸಿದೆ.
ರಾಹುಲ್ ಯಾತ್ರೆ ಟೀಕಿಸಿದ ಬಿಜೆಪಿ ನಾಯಕರು
ಭಾರತ್ ಜೋಡೋ ಯಾತ್ರೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ವಿ ಸೋಮಣ್ಣ ಮತ್ತು ಆರ್ ಅಶೋಕ್ ಕೂಡ ಟೀಕಿಸಿದ್ದಾರೆ.
“ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಪಕ್ಷದಿಂದ ‘ಭಾರತ್ ಜೋಡೋ’ ಯಾತ್ರೆ ನಡೆಸಲಾಗುತ್ತಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಹೇಳಿಕೆ ಕೊಟ್ಟಿದ್ದಾರೆ.
ಈ ಬಗ್ಗೆ ವಿಜಯಪುರದಲ್ಲಿ ಮಾತನಾಡಿದ ಅವರು, “ಭಾರತ್ ಜೋಡೋ ಯಾತ್ರೆ ಆರಂಭವಾಗಿರುವುದು ತಿಳಿದಿದೆ. ಯಾರು ಭಾರತವನ್ನು ಎರಡು ದೇಶಗಳನ್ನಾಗಿ ವಿಭಜಿಸಿ 'ಭಾರತ್ ತೋಡೋ' ಮಾಡಿದ್ದರೋ ಅವರು ಸಮಾಜದಲ್ಲಿ ಕ್ಷೋಭೆ ಉಂಟು ಮಾಡಿದ್ದರು. ಇವತ್ತಿಗೂ ಆ ಗಾಯದ ಬರೆಯನ್ನು ಯಾರೂ ಮರೆತಿಲ್ಲ. ಅವರೇ ಈಗ ಭಾರತ್ ಜೋಡೋ ಯಾತ್ರೆ ಮಾಡುತ್ತಿರುವುದು ವಿಪರ್ಯಾಸ. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಮಾಡುತ್ತಿದ್ದಾರೆ; ಮಾಡಲಿ” ಎಂದರು.
ಈ ಸುದ್ದಿ ಓದಿದ್ದೀರಾ? ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ‘ಭಾರತ್ ಜೋಡೋ’ ಯಾತ್ರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಕಾಂಗ್ರೆಸ್ಸಿನವರಿಗೆ ಈಗ ಜ್ಞಾನೋದಯವಾಗಿದೆ: ಸೋಮಣ್ಣ
“ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ 75 ವರ್ಷಗಳ ನಂತರ ಕಾಂಗ್ರೆಸ್ ಪಕ್ಷದವರಿಗೆ ಈಗ ಜ್ಞಾನೋದಯವಾಗಿದೆ. ಅವರಿಗೆ ಆಭಾರಿಯಾಗಿದ್ದೇನೆ. ಇವತ್ತು ಭಾರತ್ ಜೋಡೋ ಯಾತ್ರೆ ಕರ್ನಾಟಕದ ನನ್ನ ಉಸ್ತುವಾರಿ ಜಿಲ್ಲೆಯಿಂದ ಆರಂಭವಾಗಿದೆ. ಹಿಂದೆ ಜನತಾ ಪಕ್ಷದ ಅಧ್ಯಕ್ಷರಾಗಿದ್ದ ಚಂದ್ರಶೇಖರ್ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನಡೆದುಕೊಂಡು ಬಂದಿದ್ದರು. ನಾನು ಕೂಡ ನೂರಾರು ಕಿಲೋಮೀಟರ್ ಸುತ್ತಾಡಿಕೊಂಡು ಬಂದಿದ್ದೆ. ಕಾಂಗ್ರೆಸ್ ಪಕ್ಷದ್ದು ಪಾದಯಾತ್ರೆ ಅಲ್ಲ; ಅಲ್ಲಲ್ಲಿ ಹತ್ತುವ- ಇಳಿಯುವ ಯಾತ್ರೆ” ಎಂದು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕುಹಕವಾಡಿದರು.
ಯಾವ ಮುಖ ಇಟ್ಟುಕೊಂಡು ಯಾತ್ರೆ ಮಾಡ್ತಿದ್ದಾರೆ: ಅಶೋಕ್
ಕಂದಾಯ ಸಚಿವ ಆರ್ ಅಶೋಕ್ ಕೂಡ ಭಾರತ್ ಜೋಡೋ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿ, “ಚರ್ಚ್ ಫಾದರ್ ಒಬ್ಬರು ಭಾರತ ನೆಲ ತುಳಿಯಲ್ಲ, ಇದು ಅಪವಿತ್ರ ಭೂಮಿ ಅದಕ್ಕೆ ಚಪ್ಪಲಿ ಹಾಕ್ತೀನಿ ಎಂದು ಹೇಳಿದ್ದರು. ರಾಹುಲ್ ಗಾಂಧಿ ಅವರಿಂದ ಆಶಿರ್ವಾದ ಪಡೆದು ಬಂದಿದ್ದಾರೆ. ಯಾವ ಮುಖ ಇಟ್ಟುಕೊಂಡು ಯಾತ್ರೆ ಮಾಡ್ತಿದ್ದಾರೆ ಗೊತ್ತಿಲ್ಲ. ಭಾರತದ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದವರ ಬಳಿ ಹೋಗಿ ರಾಹುಲ್ ಆಶೀರ್ವಾದ ಪಡೆದುಕೊಂಡಿದ್ದಾರೆ. ಆದ್ದರಿಂದ, ಇಂಥ ಯಾತ್ರೆಗೆ ಜನ ಬೆಲೆ ನೀಡುವುದಿಲ್ಲ” ಎಂದು ಕಿಡಿ ಕಾರಿದರು.
ಒಟ್ಟಾರೆ ರಾಹುಲ್ ಗಾಂಧಿ ಕರ್ನಾಟಕದಲ್ಲಿ ನಡೆಸುತ್ತಿರುವ ಪಾದಯಾತ್ರೆಯ ಮೊದಲ ದಿನವೇ ಬಿಜೆಪಿ ಪಕ್ಷ ಮತ್ತು ಅದರ ಮುಖಂಡರು ತರಹೇವಾರಿ ಪ್ರತಿಕ್ರಿಯೆ ನೀಡಿದ್ದು, ಮುಂದಿನ 20 ದಿನಗಳ ಕಾಲ ಇನ್ನಷ್ಟು ರಾಜಕೀಯ ವಾಗ್ವಾದಗಳಿಗೆ ಈ ಯಾತ್ರೆ ಸಾಕ್ಷಿಯಾಗಲಿದೆ.