ಮಳೆಗಾಲ ಅಧಿವೇಶನ | ಸದನ ಸಮರಕ್ಕೆ ಸಜ್ಜಾದ ಬಿಜೆಪಿ-ಕಾಂಗ್ರೆಸ್: ಶಾಸಕಾಂಗ ಸಭೆಯಲ್ಲಿ ಸಿದ್ಧವಾಯ್ತು ರಣತಂತ್ರ

  • ಸರ್ಕಾರದ ಅಭಿವೃದ್ಧಿ ವಿಚಾರ ಮಾತ್ರ ಸದನದಿಂದ ಹೊರಹೋಗಬೇಕು: ಬಿಜೆಪಿ ತಂತ್ರ
  • ಸರ್ಕಾರದ ಪ್ರತಿ ಲೋಪವನ್ನು ಜನರಿಗೆ ತೋರುವ ಪ್ರಯತ್ನ ಮಾಡಬೇಕು: ಕಾಂಗ್ರೆಸ್ ತಂತ್ರ

ಮಳೆಗಾಲ ಅಧಿವೇಶನದ ಉಳಿದ ಎಂಟು ದಿನಗಳನ್ನು ಯಾವ ರೀತಿ ಬಳಸಿಕೊಳ್ಳಬೇಕೆನ್ನುವುದರ ಬಗ್ಗೆ ಆಡಳಿತ ಹಾಗೂ ವಿಪಕ್ಷ ಸದಸ್ಯರು ಯೋಜನೆ ರೂಪಿಸಿಕೊಂಡಿದ್ದಾರೆ. 

ಮಂಗಳವಾರ ಸಂಜೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರು ತಮ್ಮ ತಮ್ಮ ಪಕ್ಷದ ಶಾಸಕಾಂಗ ಸಭೆ ನಡೆಸಿ ಸದನದೊಳಗಿನ ಕದನಕ್ಕಾಗಿ ರಣತಂತ್ರ ರೂಪಿಸಿಕೊಂಡಿದ್ದಾರೆ. 

ಬಿಜೆಪಿ ಶಾಸಕಾಂಗ ಸಭೆ 

ಆಡಳಿತ ಪಕ್ಷ ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಿ ಅಧಿವೇಶನದಲ್ಲಿ ಸರ್ಕಾರ ಹೇಗೆ ವಿಪಕ್ಷವನ್ನು ಹಿಮ್ಮೆಟ್ಟಿಸಬೇಕೆನ್ನುವುದರ ಬಗ್ಗೆ ಚರ್ಚಿಸಿದೆ. 

ಕಾಂಗ್ರೆಸ್ ಪಕ್ಷವು ತಮ್ಮ ಸರ್ಕಾರದ ಮೇಲೆ ಯಾವುದೇ ವಿಚಾರವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರೂ ಅದಕ್ಕೆ ಸಮರ್ಥ ಉತ್ತರ ಕೊಟ್ಟು ಅದರನ್ನು ಹಿಮ್ಮೆಟ್ಟಿಸಬೇಕು. ಇದಕ್ಕೆ ಎಲ್ಲ ಶಾಸಕರು ಸಹಕಾರ ನೀಡಬೇಕು ಎಂದು ತೀರ್ಮಾನಿಸಲಾಯಿತು.  

Image

ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪವೇನಾದರೂ ಬಂದಲ್ಲಿ ಅವರ ಪಕ್ಷ ಆಡಳಿತ ನಡೆಸುತ್ತಿದ್ದ ಕಾಲದ ಯಾವುದಾದರೂ ಹಗರಣ ಹೊರತೆಗೆದು ತಿರುಗೇಟು ನೀಡಲು ಸೂಚಿಸಲಾಗಿದೆ. ಹಾಗೆಯೇ, ಮಳೆ ಚರ್ಚೆ, ರಾಜಕಾಲುವೆ ಒತ್ತುವರಿ ಸೇರಿದಂತೆ ಇತರ ವಿಚಾರಗಳ ಚರ್ಚೆಯನ್ನೂ ಸಮರ್ಥವಾಗಿ ಮುನ್ನಡೆಸಿ ಸರ್ಕಾರದ ದೃಢ ನಿಲುವುಗಳನ್ನು ತಿಳಿಸುವಂತೆ ಸೂಚಿಸಲಾಗಿದೆ.  

ಸರ್ಕಾರದ ಅಭಿವೃದ್ಧಿ ವಿಚಾರಗಳೇ ಸದನದೊಳಗಿನಿಂದ ಹೊರಹೋಗುವಂತೆ ನೋಡಿಕೊಳ್ಳಬೇಕು ಎಂದು ಬಿಜೆಪಿ ಸಭೆಯಲ್ಲಿ ನಿರ್ಧರಿಸಲಾಗಿದೆ. 

ಕಾಂಗ್ರೆಸ್ ಸಭೆ 

ಕಾಂಗ್ರೆಸ್ ಶಾಸಕಾಂಗ ಸಭೆ, ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಿತು. ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೂಡ ಉಪಸ್ಥಿತರಿದ್ದರು. ಆಡಳಿತ ಪಕ್ಷವನ್ನು ಅದರ ಜನವಿರೋಧಿ ಆಡಳಿತದ ಹಿನ್ನೆಲೆಯಲ್ಲಿ ಕಟ್ಟಿಹಾಕಿ ಇಕ್ಕಟ್ಟಿಗೆ ಸಿಲುಕಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. 

ಸರ್ಕಾರದ ಪ್ರತಿ ಆಡಳಿತ ಲೋಪವನ್ನು ಎತ್ತಿಹಿಡಿದು ಜನರಿಗೆ ತೋರಿಸುವ ಪ್ರಯತ್ನ ಮಾಡಬೇಕು. ಪ್ರತಿ ಹಂತದಲ್ಲೂ ಅದನ್ನು ಎತ್ತಿ ತೋರಿಸುವ ಕೆಲಸವಾಗಬೇಕು ಎಂದು ನಿರ್ಧರಿಸಲಾಯಿತು. ಪ್ರತಿ ಚರ್ಚೆಯಲ್ಲೂ ಸದಸ್ಯರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸೂಚಿಸಲಾಗಿದೆ. 

ಈ ಸುದ್ದಿ ಓದಿದ್ದೀರಾ?: ಅನ್ನಕಸಿದ ಅತಿವೃಷ್ಟಿ | ರಾಜ್ಯದಲ್ಲಿ ಮಳೆಯಿಂದಾದ ಅನಾಹುತಗಳ ಅಸಲಿ ವರದಿ ಇಲ್ಲಿದೆ

ಸದನದ ಹೊರತಾಗಿ ಭಾರತ್ ಜೋಡೋ ರಾಜ್ಯ ವಿಭಾಗದ ಕಾರ್ಯಕ್ರಮ ಸಂಘಟಿಸುವುದು ಮತ್ತು ಅದರ ಜವಾಬ್ದಾರಿ ಹಂಚಿಕೆ ವಿಚಾರದಲ್ಲಿ ಚರ್ಚೆ ನಡೆಯಿತು. ಮಾಜಿ ಶಾಸಕರಿಗೆ ಪಾದಯಾತ್ರೆ ಜವಾಬ್ದಾರಿ ಹೊರಿಸಿ ಉಳಿದ ಶಾಸಕರಿಗೆ ಅಗತ್ಯ ಪರಿಸ್ಥಿತಿಯಲ್ಲಿ ಅದರ ಜವಾಬ್ದಾರಿ ಹೊರುವಂತೆ ಸೂಚಿಸಲಾಗಿದೆ. 

ಭ್ರಷ್ಟಾಚಾರ, ಕಮಿಷನ್ ವಿಚಾರ ಸೇರಿದಂತೆ ಇತರ ವಿಷಯಗಳ ಚರ್ಚೆಯಲ್ಲಿ ಸರ್ಕಾರದಿಂದ ಸ್ಪಷ್ಟ ಉತ್ತರ ಪಡೆದುಕೊಳ್ಳುವಂತೆ ವಿಚಾರ ಮಂಡಿಸಲು ತಿಳಿಸಲಾಗಿದೆ. ಇನ್ನುಳಿದಂತೆ ಇಡೀ ಸದನವನ್ನು ನಿಗದಿತ ಅವಧಿಯಲ್ಲಿ ಸಮರ್ಥವಾಗಿ ಬಳಸಿಕೊಳ್ಳುವಂತೆ ಪಕ್ಷದ ಪ್ರಮುಖರು ಸೂಚಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್