ಕಾಂಗ್ರೆಸ್‌ ಪಾದಯಾತ್ರೆ ರಾಜಕಾರಣಕ್ಕೆ ಬಿಜೆಪಿಯ ಪ್ರತಿತಂತ್ರ: 'ಅಮೃತ ನಡಿಗೆ' ವಿರುದ್ಧ 'ಅಮೃತ ರ‍್ಯಾಲಿ'

  • ಕಾಂಗ್ರೆಸ್ ಬಿಜೆಪಿ ನಡುವೆ ಪಾದಯಾತ್ರೆ ರಾಜಕಾರಣ 
  • ಆಗಸ್ಟ್ 15ಕ್ಕೆ ಎರಡೂ ಪಕ್ಷಗಳ ಬೃಹತ್ ಜನ ರ‍್ಯಾಲಿ

ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಗಸ್ಟ್ 15ರಂದು ಪ್ರತಿಪಕ್ಷ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ರಾಜಕೀಯಕ್ಕೆ ತಕ್ಕ ಪ್ರತಿತಂತ್ರ ರೂಪಿಸಲು ಆಡಳಿತಾರೂಢ ಬಿಜೆಪಿ ಸಿದ್ಧತೆ ನಡೆಸಿದೆ. 

ದೇಶಾಭಿಮಾನ, ರಾಷ್ಟ್ರಭಕ್ತಿ ಹೀಗೆ ಭಾವನಾತ್ಮಕ ವಿಚಾರಗಳನ್ನೇ ಮುಂದಿಟ್ಟುಕೊಂಡು ಇಲ್ಲಿಯವರೆಗೆ ರಾಜಕಾರಣ ಮಾಡುತ್ತಿದ್ದ ಬಿಜೆಪಿ ಈಗ ಅದೇ ವಿಚಾರದಲ್ಲಿ ಹಿಂದೆ ಬಿದ್ದಿದೆ.

ಇತ್ತ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಬಿಜೆಪಿಯ ದೇಶಭಕ್ತಿ ಪ್ರಚಾರ ತಂತ್ರಗಾರಿಕೆಯನ್ನು ಕಾಂಗ್ರೆಸ್ ತನ್ನ ದಾಳವಾಗಿ ಬಳಸಿಕೊಂಡು ದೇಶದುದ್ದಕ್ಕೂ 'ಭಾರತ್ ಜೋಡೋ' ಹೆಸರಿನಲ್ಲಿ ಪಾದಯಾತ್ರೆ ನಡೆಸಿ ಪಕ್ಷ ಸಂಘಟನೆ ಮಾಡಿಕೊಂಡು ಚುನಾವಣೆಗೆ ಇಳಿಯಲು ಸಿದ್ಧತೆ ಮಾಡಿಕೊಂಡಿದೆ. ರಾಜದಲ್ಲೂ ಇದರ ಭಾಗವಾಗಿ ಅಮೃತ ನಡಿಗೆ ಹೆಸರಿನಲ್ಲಿ ಪಾದಯಾತ್ರೆ ನಡೆಯಲಿದೆ.

ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಜನರನ್ನು ಸೆಳೆದ ಕಾಂಗ್ರೆಸ್ ತಂತ್ರಗಾರಿಕೆ, ಈಗ ಪಾದಯಾತ್ರೆ ವಿಚಾರದಲ್ಲಿಯೂ ಯಶ ಕಂಡುಕೊಂಡರೆ ತಮಗೆ ಕುತ್ತು ನಿಶ್ಚಿತ ಎನ್ನುವುದು ಬಿಜೆಪಿಗೆ ಅರಿವಾಗಿದೆ. ಹೀಗಾಗಿ ತಾನು ಈ ವಿಚಾರದಲ್ಲಿ ಹಿಂದೆ ಬೀಳಬಾರದೆಂದು ಕಾಂಗ್ರೆಸ್‌ಗೆ ಪತ್ರಿತಂತ್ರ ರೂಪಿಸಿ ಆ ನಿಟ್ಟಿನಲ್ಲಿ ಮುನ್ನಡೆಯಲು ಸಜ್ಜಾಗಿದೆ.

ಆಗಸ್ಟ್ 15ರಂದು ಕಾಂಗ್ರೆಸ್‌ ಅಮೃತ ನಡಿಗೆ ಆಯೋಜಿಸುವ ಮೂಲಕ ಪಾದಯಾತ್ರೆ ನಡೆಸಲು ಮುಂದಾಗಿದೆ. ಇದರ ಸಮಾರೋಪ ಸಮಾರಂಭ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೂ ಮುನ್ನ ಕಾಂಗ್ರೆಸ್ ರಾಜ್ಯದಾದ್ಯಂತ 75 ಕಿ.ಮೀ ಪಾದಯಾತ್ರೆ ನಡೆಸಲಿದೆ.

ಈ ಸುದ್ದಿ ಓದಿದ್ದೀರಾ? : ಅಮೃತ ಮಹೋತ್ಸವ ಪಾದಯಾತ್ರೆ| ಕಾರ್ಯಕ್ರಮಕ್ಕೆ ಬರುವವರಿಗೆ ಪ್ರಯಾಣ ವೆಚ್ಚ ರಿಯಾಯ್ತಿ ಕೊಡಿ: ಸರ್ಕಾರಕ್ಕೆ ಡಿಕೆಶಿ ಮನವಿ 

ಮತ್ತೊಂದು ಕಡೆ  ಬಿಜೆಪಿ ಬೆಂಗಳೂರಿನಲ್ಲೇ 1 ಕಿಮೀ ಬೃಹತ್ ರ‍್ಯಾಲಿ ಆಯೋಜಿಸಿದೆ. ಘರ್ ಘರ್ ತಿರಂಗಾ ಅಭಿಯಾನಕ್ಕೆ ಅಮೃತ ರ‍್ಯಾಲಿ ಜೋಡಿಸಿಕೊಂಡು ಜನರನ್ನ ತನ್ನತ್ತ ಸೆಳೆದುಕೊಳ್ಳುವುದು ಬಿಜೆಪಿ ಸದ್ಯದ ಲೆಕ್ಕಚಾರ. 1 ಲಕ್ಷ ಜನರ ಉಪಸ್ಥಿತಿಯಲ್ಲಿ ಅಮೃತ ರ‍್ಯಾಲಿಯ ಸಮಾಪ್ತಿಯನ್ನು ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸುವುದಕ್ಕೆ ಬಿಜೆಪಿ ತಯಾರಾಗಿದೆ.

ಹೀಗೆ ಪಾದಯಾತ್ರೆ ನೆಪದಲ್ಲಿ ಎರಡೂ ಪಕ್ಷಗಳು ಜನಾಭಿಪ್ರಾಯ ರೂಪಿಸಿಕೊಳ್ಳಲು ಮುಂದಾಗಿರುವುದಕ್ಕೆ ಜನತಾ ಜನಾರ್ದನ ಅದೇನು ಪ್ರತಿಕ್ರಿಯೆ ಕೊಡುತ್ತಾನೆ ಎನ್ನುವುದೇ ಮುಂದಿನ ಕುತೂಹಲ.

ನಿಮಗೆ ಏನು ಅನ್ನಿಸ್ತು?
0 ವೋಟ್