ದಕ್ಷ ಪೊಲೀಸ್ ಅಧಿಕಾರಿಗಳ ಕೈ ಕಟ್ಟಿಹಾಕಿದ ಬಿಜೆಪಿ ಸರ್ಕಾರ: ರಾಮಲಿಂಗಾ ರೆಡ್ಡಿ ಆರೋಪ

  • ಸಂಘರ್ಷಕ್ಕೆ ಇತರೆ ಸಂಘಟನೆಗಳ ಜತೆಗೆ ಆರ್‌ಎಸ್‌ಎಸ್‌ ಕೂಡ ಕಾರಣ
  • ಅಶಾಂತಿ ಸೃಷ್ಟಿಸುವ ಯಾವುದೇ ಸಂಘಟನೆ ಇದ್ದರೂ ನಿಷೇಧಿಸಲಿ

“ದಕ್ಷ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಕೋಮುಗಲಭೆ ನಿಯಂತ್ರಿಸಲು ಹೇಳಿದರೆ ಅವರು ನಿಭಾಯಿಸುತ್ತಾರೆ. ಆದರೆ ಬಿಜೆಪಿ ಸರ್ಕಾರ ತಮ್ಮ ಸಂಘಪರಿವಾರದ ಸಂಘಟನೆಗಳಿಗೆ ಯಾವುದೇ ತೊಂದರೆ ಆಗದಂತೆ ಪೊಲೀಸರ ಕೈಕಟ್ಟಿ ಹಾಕಿದ್ದಾರೆ. ಹೀಗಾಗಿ ನೈತಿಕ ಪೊಲೀಸ್ ಗಿರಿಗೆ ಕಡಿವಾಣ ಇಲ್ಲದಂತಾಗಿದೆ” ಎಂದು ಮಾಜಿ ಗೃಹ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, “ಹಿಜಾಬ್, ಹಲಾಲ್ ಕಟ್ ಸೇರಿದಂತೆ ಅನೇಕ ವಿಚಾರವಾಗಿ ಸಂಘಪರಿವಾರದ ಸಂಘಟನೆಗಳು ಸಾಕಷ್ಟು ಗೊಂದಲ ಸೃಷ್ಟಿಸಿದರು. ಸರ್ಕಾರ ಅವರನ್ನು ನಿಯಂತ್ರಿಸುವ ಕೆಲಸ ಮಾಡಲಿಲ್ಲ” ಎಂದು ದೂರಿದ್ದಾರೆ.

“ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಯಾರೇ ಆದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಶಾಂತಿಗೆ ಭಂಗ ತರುವ ಹೇಳಿಕೆ ನೀಡುತ್ತಿದ್ದರೆ, ಕಾನೂನು ಸುವ್ಯವಸ್ಥೆ ನಾಶವಾಗುತ್ತದೆ. ಇದರಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ” ಎಂದು ಹೇಳಿದ್ದಾರೆ.

“ದೇಶ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಇರಬೇಕು ಎಂದರೆ ಕಟ್ಟುನಿಟ್ಟಿನ ಅಧಿಕಾರಿಗಳನ್ನು ನಿಯೋಜಿಸಬೇಕು. ನಮ್ಮಲ್ಲಿ ಉತ್ತಮ ಅಧಿಕಾರಿಗಳಿದ್ದು, ದಕ್ಷ ಅಧಿಕಾರಿಗಳಿಗೆ ಯಾವುದೇ ಕೊರತೆ ಇಲ್ಲ. ಅಂಥ ಅಧಿಕಾರಿಗಳಿಗೆ ಸರ್ಕಾರ ಸ್ವಾತಂತ್ರ್ಯ ನೀಡಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸಮಾಜದ ಸಾಮರಸ್ಯ ಹಾಳು ಮಾಡುವ ಸಂಘಟನೆಗಳನ್ನು ಬೊಮ್ಮಾಯಿ ನಿಷೇಧಿಸಲಿ: ಸಿದ್ದರಾಮಯ್ಯ ಆಗ್ರಹ

“ಬಿಜೆಪಿ ವಿರೋಧ ಪಕ್ಷದಲ್ಲಿ ಇದ್ದಾಗ ಎಸ್‌ಡಿಪಿಐ (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ನಿಷೇಧ ಆಗಬೇಕು ಎಂದು ಹೇಳುತ್ತಿದ್ದರು. ಈಗ ಅವರದೇ ಸರ್ಕಾರ ಇದ್ದರೂ ನಿಷೇಧ ಮಾಡುತ್ತಿಲ್ಲ. ಎಸ್‌ಡಿಪಿಐ ಮೂಲಕ ಕಾಂಗ್ರೆಸ್ ಮತ ವಿಭಜನೆ ಮಾಡಬಹುದು ಎಂಬ ಕಾರಣಕ್ಕೆ ಬಿಜೆಪಿಯವರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಯಾವುದೇ ಸಂಘಟನೆ ಇದ್ದರೂ ಅವುಗಳನ್ನು ನಿಷೇಧಿಸಲಿ. ಸರ್ಕಾರ ಈ ಸಂಘಟನೆಗಳನ್ನು ನಿಯಂತ್ರಣದಲ್ಲೂ ಇಟ್ಟುಕೊಳ್ಳುತ್ತಿಲ್ಲ, ನಿಷೇಧಿಸುತ್ತಲೂ ಇಲ್ಲ” ಎಂದಿದ್ದಾರೆ.

“ಈ ಎಲ್ಲ ಸಂಘರ್ಷಕ್ಕೆ ಈ ಸಂಘಟನೆಗಳು ಎಷ್ಟು ಕಾರಣವಾಗಿವೆಯೋ, ಅಷ್ಟೆ ಆರ್‌ಎಸ್‌ಎಸ್‌ ಸಂಘಪರಿವಾರದ ಸಂಘಟನೆಗಳೂ ಕಾರಣ. ಈ ವಿಚಾರವಾಗಿ ನಾನು ಪುಸ್ತಕವನ್ನೇ ಬಿಡುಗಡೆ ಮಾಡಿ, ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದೆ” ಎಂದು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್