ಬಿಜೆಪಿ ನಾಯಕರ ಕುಮ್ಮಕ್ಕಿನಿಂದ ಹುಬ್ಬಳ್ಳಿಯಲ್ಲಿ ಗಲಭೆ: ಡಿ ಕೆ ಶಿವಕುಮಾರ್ ಆರೋಪ

  • ಹುಬ್ಬಳ್ಳಿ ಗಲಭೆಗೂ ಕಾಂಗ್ರೆಸ್‌ ನಾಯಕರಿಗೂ ಸಂಬಂಧ ಇಲ್ಲ
  • ಸಮಾಜದ ಶಾಂತಿ ಕದಡುವುದೇನಿದ್ದರೂ ಬಿಜೆಪಿ ಕೆಲಸ: ಡಿಕೆಶಿ

ಭಾರತೀಯ ಜನತಾ ಪಕ್ಷದ ಕುಮ್ಮಕ್ಕಿನಿಂದಲೇ ಹುಬ್ಬಳ್ಳಿಯಲ್ಲಿ ಗಲಭೆ ನಡೆಯುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಆರೋಪಿಸಿದ್ದಾರೆ.

ಬೆಂಗಳೂರಿನ ಕಾಂಗ್ರೆಸ್‌ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿರುವ ಡಿ ಕೆ ಶಿವಕುಮಾರ್‌, "ಹುಬ್ಬಳ್ಳಿ ವಿಚಾರದಲ್ಲಿ ಶಾಂತಿ ಕಾಪಾಡಲು ನಮ್ಮ ಪಕ್ಷದ ನಾಯಕರು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದಾರೆ. ಆದರೂ ಬಿಜೆಪಿ ನಾಯಕರು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಸಲಿಗೆ ಈ ಎಲ್ಲಾ ಘಟನೆಗಳಿಗೆ ಮೂಲ ಪ್ರಚೋದನೆ ಬಿಜೆಪಿಯವರ ಕುಮ್ಮಕ್ಕಿನಿಂದಾದ ಟ್ವೀಟ್ ಕಾರಣ. ಈ ಬಗ್ಗೆ ತನಿಖೆ ನಡೆಯಬೇಕು" ಎಂದು ಒತ್ತಾಯಿಸಿದರು.

"ಹುಬ್ಬಳ್ಳಿ ಗಲಭೆಯಲ್ಲಿ ಕೆಲವರು ಕಾನೂನು ಕೈಗೆತ್ತಿಕೊಳ್ಳಲು ಪ್ರಯತ್ನಿಸಿದಾಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದರು. ನಮ್ಮ ಜಿಲ್ಲಾಧ್ಯಕ್ಷರಾದ ಅಲ್ತಾಫ್ ಪರಿಸ್ಥಿತಿ ನಿಯಂತ್ರಿಸುವ ಸಂದರ್ಭದಲ್ಲಿ ಕಲ್ಲೇಟು ತಿಂದು, ಕೈ ಮುರಿದುಕೊಂಡು ನೋವು ಅನುಭವಿಸುತ್ತಿದ್ದಾರೆ” ಎಂದು ಅವರು ಹೇಳಿದರು.

ಗೂಬೆ ಕೂರಿಸುವ ಯತ್ನದಿಂದ ಫಲ ಇಲ್ಲ

ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕರ ಗೂಬೆ ಕೂರಿಸುವ ಯತ್ನಗಳಿಂದ ಫಲ ಇಲ್ಲ ಎಂದೂ ಕಿಡಿಕಾರಿರುವ ಡಿ ಕೆ ಶಿವಕುಮಾರ್‌, “ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರಾಗಲಿ ಅಥವಾ ಮಾಜಿ ಸಚಿವ ಆರ್‌ ಅಶೋಕ್ ಅವರಾಗಲಿ ಗಲಭೆ ಪರಿಸ್ಥಿತಿ ತಿಳಿಗೊಳಿಸಲು ಯಾವುದೇ ಪ್ರಯತ್ನ ಮಾಡಿಲ್ಲ. ಬದಲಿಗೆ ಅವರು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಸುಮ್ಮನೆ ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದರೆ ಯಾವುದೇ ಪ್ರಯೋಜನವಿಲ್ಲ" ಎಂದು ಕಿವಿಮಾತು ಹೇಳಿದರು

ಅಲ್ಲದೆ, "ಬಿಜೆಪಿ ನಾಯಕರು ತಮ್ಮ ಪಕ್ಷದ ಮೇಲಿರುವ 40% ಕಮಿಷನ್ ವಿಚಾರವನ್ನು ಮುಚ್ಚಿಹಾಕುವ ಸಲುವಾಗಿ ಈ ವಿಚಾರವನ್ನು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ” ಎಂದು ಕಿಡಿಕಾರಿದರು.

ಇದನ್ನು ಓದಿದ್ದೀರಾ?: ಪಿಎಸ್‌ಐ ನೇಮಕಾತಿ ಅಕ್ರಮ: ಸಿಐಡಿ ವಿಚಾರಣೆಗೆ ಹಾಜರಾದ 50 ಅಭ್ಯರ್ಥಿಗಳು

“ಕಾಂಗ್ರೆಸ್ ನಾಯಕರಿಗೂ ಹುಬ್ಬಳ್ಳಿ ಗಲಭೆಗೂ ಯಾವುದೇ ಸಂಬಂಧ ಇಲ್ಲ. ನಮ್ಮವರು ಶಾಂತಿ ಕಾಪಾಡಲು ಶ್ರಮಿಸಿದ್ದಾರೆಯೇ ಹೊರತು ಸಮಾಜದಲ್ಲಿ ಶಾಂತಿಯನ್ನು ಕದಡುವುದು ಬಿಜೆಪಿ ಕೆಲಸ”  ಎಂದು ಡಿ ಕೆ ಶಿವಕುಮಾರ್‌ ಪುನರುಚ್ಚರಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್