ಕಾಂಗ್ರೆಸ್ಸಿಗೆ ಬಿಜೆಪಿಯ ಪ್ರತಿತಂತ್ರ: ಸಿದ್ದರಾಮಯ್ಯ ವಿರುದ್ಧ ಮೋದಿಯವರನ್ನು ಮುಂದಿಟ್ಟು ಚುನಾವಣೆಗೆ ಹೋಗಲು ಚಿಂತನೆ

ಸಿದ್ದರಾಮೋತ್ಸವದ ವರ್ಚಸ್ಸಿನಿಂದಾಗಿ ಸತ್ವ ಕಳೆದುಕೊಳ್ಳುವಂತಾಗಿದ್ದ ಬಿಜೆಪಿ, ಈಗ ಮಾಸ್ ಲೀಡರ್ ಸಿದ್ದರಾಮಯ್ಯ ಎದುರಿಗೆ ಪ್ರಧಾನಿ ಮೋದಿಯವರನ್ನಿಟ್ಟು ಮುಂದಿನ ಚುನಾವಣೆ ಗೆಲ್ಲುವ ರಣತಂತ್ರ ರೂಪಿಸಿದೆ. 

ಮುಂದಿನ ಬಾರಿಯೂ ಬಿಜೆಪಿ ಸರ್ಕಾರ ಎಂಬ ದೃಢ ವಿಶ್ವಾಸದಲ್ಲಿದ್ದ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ನಿರೀಕ್ಷೆಯೀಗ ಹುಸಿಯಾಗಿದೆ. ಸಿದ್ದರಾಮಯ್ಯ-75 ಅಮೃತ ಮಹೋತ್ಸವ ಕಾರ್ಯಕ್ರಮ ಬಿಜೆಪಿಯ ಇಷ್ಟು ದಿನಗಳ ಲೆಕ್ಕಾಚಾರವನ್ನು ಬುಡಮೇಲಾಗಿಸಿದೆ. ಜೊತೆಗೆ ಪಕ್ಷದಿಂದ ಸಿದ್ದರಾಮಯ್ಯ ಎದುರು ನಿಲ್ಲುವ ನಾಯಕನ್ಯಾರು ಎನ್ನುವ ಪ್ರಶ್ನೆಯನ್ನೂ ಹುಟ್ಟುಹಾಕಿದೆ. ಸಿದ್ದರಾಮೋತ್ಸವದ ಬಳಿಕ ಬಿಜೆಪಿ ನಾಯಕರ ಬಾಯಿಂದ ಬಂದ ಪ್ರತಿಕ್ರಿಯೆಗಳು ಈ ವಿಚಾರವನ್ನು ಮತ್ತಷ್ಟು ಗಟ್ಟಿಗೊಳಿಸಿವೆ.‌

ಮತ್ತೆ ಪುಟಿದೇಳಲೇಬೇಕಾದ ಅನಿವಾರ್ಯತೆಯಲ್ಲಿರುವ ಬಿಜೆಪಿ ಈ ವಿಚಾರಕ್ಕಾಗಿ ಮರುತಯಾರಿ ಆರಂಭಿಸಿದೆ. ಸಾಧ್ಯವಾದರೆ ಜನನಾಯಕ ಸಿದ್ದರಾಮಯ್ಯ ಎದರು ರಾಜ್ಯದ ಕೇಸರಿ ಪಡೆಯನ್ನು ಸಂಘಟಿತವಾಗಿ ಹೋರಾಟಕ್ಕಿಳಿಸುವುದು. ಇಲ್ಲದಿದ್ದರೆ ಬಿಜೆಪಿ ಮಾಸ್ಟರ್ ಟ್ರಂಪ್ ಕಾರ್ಡ್ ನರೇಂದ್ರ ಮೋದಿಯವರ ಸಹಕಾರ ಪಡೆದು  ಚುನಾವಣೆ ಗೆಲ್ಲುವುದು ಎನ್ನುವ ನಿರ್ಣಯವನ್ನು ಮಾಡಿಕೊಂಡಿದೆ. ಆದರೆ, ಇದಕ್ಕೂ ಮೊದಲು ತಾನೇ ಒಂದು ಸುತ್ತಿನ ವಿಮರ್ಶಾತ್ಮಕ ಸಭೆ ನಡೆಸಿ ಲೋಪದೋಷಗಳ ಪತ್ತೆ ಮಾಡಿಕೊಂಡು ಮುನ್ನಡೆಯುವ ನಿರ್ಧಾರವನ್ನೂ ಬಿಜೆಪಿ ಮಾಡಿಕೊಂಡಿದೆ. 

ಬಿಜೆಪಿ ಆತ್ಮವಿಮರ್ಶೆ  
ಸರ್ಕಾರದ ವಿರುದ್ಧ ಕಾಂಗ್ರೆಸ್ ಸಿಡಿಸಿದ 40% ಕಮಿಷನ್ ಹಗರಣದಿಂದ ಆರಂಭಗೊಂಡಂತೆ ಮೊನ್ನೆ ಮೊನ್ನೆ ಕರಾವಳಿಯಲ್ಲಿ ನಡೆದ ಸರಣಿ ಕೊಲೆಗಳವರೆಗಿನ ಘಟನೆಗಳು ರಾಜ್ಯ ಸರ್ಕಾರದ ಇಮೇಜನ್ನು ಇನ್ನಿಲ್ಲದಂತೆ ಹಾಳುಮಾಡಿವೆ. ಅದರಲ್ಲೂ ಈಶ್ವರಪ್ಪ ರಾಜೀನಾಮೆ, ಪಿಎಸ್ಐ ಹಗರಣದ ವಿಚಾರವನ್ನು ನಿಭಾಯಿಸುವಲ್ಲಿ ಎಡವಿದ ಗೃಹ ಸಚಿವರು, ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣದ ಬಳಿಕ ಸರ್ಕಾರದ ವಿರುದ್ಧ ತಿರುಗಿಬಿದ್ದ ಕಾರ್ಯಕರ್ತರು, ಹಾಗೆಯೇ ಏನೋ ಮಾಡಲು ಹೋಗಿ ಮತ್ತೇನೋ ಮಾಡಿದ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯ, ಕಾರ್ಯಕರ್ತರನ್ನು ಸೆಳೆಯಲು ಸಿ ಟಿ ರವಿ ಕೊಟ್ಟ ಮಾತು ಹೀಗೆ ಹತ್ತು ಹಲವು ವಿಚಾರಗಳು ಪಕ್ಷಕ್ಕಿದ ಇಮೇಜಿಗೆ, ಜನಬೆಂಬಲಕ್ಕೆ ಹೊಡೆತ ನೀಡಿವೆ. 

ಎಲ್ಲಕ್ಕಿಂತ ಮಿಗಿಲಾಗಿ ಪಕ್ಷದ ಯಶಸ್ವಿ ನಾಯಕ ಬಿ ಎಸ್ ಯಡಿಯೂರಪ್ಪ ಅವರು ಪಕ್ಷದ ಚುನಾವಣಾ ರಾಜಕಾರಣದಿಂದ ದೂರ ಉಳಿಯುತ್ತಿರುವುದು ಪಕ್ಷಕ್ಕೆ ಇನ್ನಿಲ್ಲದ ಹೊಡೆತ ನೀಡಿದೆ ಎನ್ನುವ ಸತ್ಯದ ಅರಿವು ಪಕ್ಷಕ್ಕಾಗಿದೆ. ಮರಳಿ ಇವೆಲ್ಲವನ್ನೂ ಪಕ್ಷ ಪಡೆಯಬೇಕಾದರೆ ಹೊಸತನದಿಂದ ಕೂಡಿದ ಕಾರ್ಯಕ್ರಮಗಳು, ಪ್ರಚಾರ ಅಂಶಗಳ ಅವಶ್ಯಕತೆ ಇದೆ. ಅವೆಲ್ಲವನ್ನೂ ಶ್ರದ್ಧಾಪೂರ್ವಕವಾಗಿ ಸಿದ್ಧಪಡಿಸಬೇಕಿದೆ ಎಂಬ ವಿಚಾರಗಳು ಚರ್ಚೆಯಾಗುತ್ತಿವೆ.

ಇವೆಲ್ಲದರ ಜೊತೆಗೆ ಅದೃಷ್ಟದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಚಾರದಲ್ಲಿ ಪಕ್ಷ ಇಟ್ಟುಕೊಂಡಿದ್ದ ನಿರೀಕ್ಷೆಗಳೂ ಹುಸಿಯಾಗಿವೆ. ಯಡಿಯೂರಪ್ಪ ಬಳಿಕ ಸಮಾಜವಾದದ ಹಿನ್ನೆಲೆಯನ್ನಿಟ್ಟುಕೊಂಡು ಪಕ್ಷಕ್ಕೆ ಹೊಸತನ ರೂಪ ಕೊಡುತ್ತಾರೆಂದಿದ್ದ ಬೊಮ್ಮಾಯಿ ಕೂಡ ಆ ವಿಚಾರದಲ್ಲಿ ಸೋತಿದ್ದಾರೆ. ಸೀಟು ಉಳಿಸಿಕೊಳ್ಳುವ ಉಮೇದಿನಲ್ಲಿ ಸಂಘಕ್ಕೆ ತಲೆ ಬಾಗಿ, ಮೂಲ ಬಿಜೆಪಿಗರನ್ನೂ ಮೀರಿಸಿದ ಹಿಂದುತ್ವ ಪ್ರತಿಪಾದನೆಯನ್ನು ಬೊಮ್ಮಾಯಿ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಸಿಕ್ಕ ಅವಕಾಶವನ್ನು ತಾನೇಕೆ ಬಳಸಿಕೊಳ್ಳಬಾರದೆಂಬಂತೆ ಕಾಣುತ್ತಿರುವ ಸಿ ಟಿ ರವಿ ನಡೆ ಪಕ್ಷದೊಳಗೆ ಹೊಸ ಗೊಂದಲ ಸೃಷ್ಟಿಸಿದೆ. ಹೀಗಾಗಿ ಬಿಜೆಪಿ ಮುಂದೇನು ಎನ್ನುವ ಪ್ರಶ್ನೆಯೀಗ ಕಾರ್ಯಕರ್ತರ ಜೊತೆ ಪಕ್ಷದ ಸಂಘಟಕರನ್ನೂ ಕಾಡುತ್ತಿದೆ.

ಈಸುದ್ದಿ ಓದಿದ್ದೀರಾ? : ಈ ದಿನ ವಿಶೇಷ| ಕಾಂಗ್ರೆಸ್ ಉತ್ಸವವಾಗಿ ಬದಲಾದ ಸಿದ್ದರಾಮಯ್ಯ ಅಮೃತ ಮಹೋತ್ಸವದ ಹಕೀಕತ್ತು ಏನು?

ಮತ್ತೊಂದು ಕಡೆ ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬಂದಿದ್ದ ಬಿಜೆಪಿ ಚುನಾವಣಾ ನಿಪುಣ ಅಮಿತ್ ಶಾ ಕೂಡ ಈ ವಿಚಾರದ ಬಗ್ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಸಿದ್ದರಾಮೋತ್ಸವದ ಪರಿಣಾಮ ಮತ್ತು ಪಕ್ಷದ ಸದ್ಯದ ಸಂಘಟನೆ ಬಗ್ಗೆ ಹಲವು ಅಮೂಲ್ಯ ಮಾಹಿತಿಯನ್ನು ಯಡಿಯೂರಪ್ಪ ಶಾ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ. ಈ ಎಲ್ಲ ವಿಚಾರಗಳನ್ನಿಟ್ಟುಕೊಂಡಿರುವ ರಾಜ್ಯ ಬಿಜೆಪಿ ನೂತನ ಸಂಘಟನಾ ಕಾರ್ಯದರ್ಶಿ ರಾಜೇಶ್, ಪಕ್ಷ ಸಂಘಟನಾ ಸಭೆಯ ಮುಂದಿನ ಕಾರ್ಯಸೂಚಿ ರೂಪಿಸಲು ದೆಹಲಿಯ ಹಿರಿಯರ ನೆರವು ಪಡೆಯಲು ಮುಂದಾಗಿದ್ದಾರೆ.

ವರಿಷ್ಠರ ಹೊಸ ಸೂತ್ರ  
ರಾಜ್ಯ ಬಿಜೆಪಿ ನಾಯಕರ ಮಾಹಿತಿ ಜೊತೆಗೆ ಖುದ್ದು ತಾವೇ ಪಡೆದುಕೊಂಡ ವಿಚಾರಗಳನ್ನು ಸಮೀಕರಿಸಿ ಕರ್ನಾಟಕದಲ್ಲಿ ಪಕ್ಷ ಸಂಘಟನೆ ವಿಚಾರವಾಗಿ ಹೊಸ ಸೂತ್ರ ಪ್ರಯೋಗಕ್ಕೆ ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ. ಇಲ್ಲಗಳ ಪಟ್ಟಿಯನ್ನು ಪಕ್ಕಕ್ಕೆ ಸರಿಸಿ ಮುನ್ನಡೆಯಲು ಸೂಚಿಸಿದ್ದಾರೆ. ಅದಕ್ಕಾಗಿ ಹೊಸ ಸೂತ್ರ ಸಿದ್ಧಮಾಡಿಕೊಟ್ಟಿರುವ ಅಮಿತ್ ಶಾ, ಕಾಂಗ್ರೆಸ್ ಮಾದರಿಯಲ್ಲೇ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎದುರಿಸಲು ಸಿದ್ಧವಾಗುವಂತೆ ಕರೆ ನೀಡಿದ್ದಾರೆ.

ಅಗತ್ಯ ಬಿದ್ದರೆ ಮೋದಿಯವರನ್ನೆ ಮುಖವಾಣಿಯನ್ನಾಗಿಸಿ ಮತಯಾಚನೆ ಮಾಡೋಣ ಎನ್ನುವ ವಿಶ್ವಾಸವನ್ನೂ ಪಕ್ಷದ ನಾಯಕರಿಗೆ ನೀಡಿದ್ದಾರೆ. ಜೊತೆಗೆ ಸಿದ್ದರಾಮೋತ್ಸವದ ಎದುರು ಜನೋತ್ಸವದ ಪ್ರತಿಬಿಂಬವನ್ನಿಟ್ಟು ಪಕ್ಷದ ಹಿಂದಿನ ಹಿಂದುತ್ವದ ನೆಲೆ ಬಿಟ್ಟು ಅಭಿವೃದ್ದಿ ಕೆಲಸಗಳನ್ನಿಟ್ಟುಕೊಂಡು ಜನರ ಮುಂದೆ ನಿಲ್ಲಲು ಸೂಚಿಸಿದ್ದಾರೆ. ಆ ಮೂಲಕ ಮಾಸ್ ಲೀಡರ್ ಸಿದ್ದರಾಮಯ್ಯ ಎದುರಿಗೆ ಪ್ರಧಾನಿ ಮೋದಿಯವರನ್ನಿಟ್ಟು ವಿಕಾಸವಾದದ ಜಾದೂ ಪ್ರದರ್ಶಿಸಿ ಚುನಾವಣೆ ಗೆಲ್ಲುವುದು ಬಿಜೆಪಿಯ ಮುಂದಿನ ಚುನಾವಣಾ ತಂತ್ರವಾಗಿದೆ.

ವರಿಷ್ಠರ ಈ ನಿರ್ಧಾರ ಪಕ್ಷದೊಳಗೆ ಹೊಸ ಹುರುಪು ತುಂಬಿದರೂ ಸಿದ್ದರಾಮಯ್ಯ ಎದುರು ನಿಲ್ಲಬಲ್ಲ ರಾಜ್ಯ ನಾಯಕರಾರೂ ಇಲ್ಲ ಎಂಬುದನ್ನು ಹೊಸ ಲೆಕ್ಕಾಚಾರ ಮುಂದಿಟ್ಟ ಬಿಜೆಪಿ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್