ದಲಿತ ಬಾಲಕನ ಸಾವಿನ ಬಗ್ಗೆ ಮಾತನಾಡದ ಕಾಂಗ್ರೆಸ್ ಮುಖಂಡರ ನಾಲಿಗೆ ಬಿದ್ದುಹೋಗಿದೆಯೇ?: ನಾರಾಯಣಸ್ವಾಮಿ

  • ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ನಡವಳಿಕೆ ಜನರಿಗೆ ಅರ್ಥವಾಗಿದೆ
  • ರಾಜಸ್ಥಾನ ಮುಖ್ಯಮಂತ್ರಿ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹಿಸಬೇಕು

ರಾಜಸ್ಥಾನದಲ್ಲಿ ನೀರಿನ ಮಡಿಕೆ ಮುಟ್ಟಿದ ಬಾಲಕನನ್ನು ಶಿಕ್ಷಕನೊಬ್ಬ ತೀವ್ರವಾಗಿ ಥಳಿಸಿದ ನಂತರ ಬಾಲಕ ಮೃತಪಟ್ಟಿರುವುದು ಹೃದಯವಿದ್ರಾವಕ ಕೃತ್ಯ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಘಟನೆ ಬಗ್ಗೆ ಕಾಂಗ್ರೆಸ್‌ನವರು ದೇಶದಲ್ಲಿ ಒಂದೇ ಒಂದು ಹೇಳಿಕೆ ಕೊಡದಿರುವುದು ಅವರ ದಲಿತ ವಿರೋಧಿ ನೀತಿಗೆ ಸ್ಪಷ್ಟ ಉದಾಹರಣೆ” ಎಂದು ಆರೋಪಿಸಿದರು.

“ರಾಜ್ಯದಲ್ಲಿ ನಡೆಯುವ ಸಣ್ಣಪುಟ್ಟ ಘಟನೆಗೆ ತಕ್ಷಣ ಪ್ರತಿಕ್ರಿಯೆ ಕೊಡುವ ಕಾಂಗ್ರೆಸ್ ಮುಖಂಡರ ನಾಲಿಗೆ ಬಿದ್ದುಹೋಗಿದೆಯೇ? ನಾನು ಸದಾ ದಲಿತರ ಪರ ಎನ್ನುವ ನಾಯಕರು ಇವತ್ತು ಎಲ್ಲಿ ಹೋಗಿದ್ದಾರೆ” ಎಂದು ಅವರು ಪ್ರಶ್ನಿಸಿದರು.

“ರಾಜಸ್ಥಾನದಲ್ಲಿ ಶಾಸಕರು ಸೇರಿದಂತೆ ಅನೇಕ ಕೌನ್ಸಿಲರ್‌ಗಳು ಹಾಗೂ ದಲಿತ ಮುಖಂಡರು ಇದೀಗ ರಾಜೀನಾಮೆ ಪರ್ವ ಆರಂಭಿಸಿದ್ದಾರೆ. ದಲಿತರಿಗೂ ಕಾಂಗ್ರೆಸ್ ಪಕ್ಷದ ಗೋಸುಂಬೆ ರಾಜಕೀಯ, ದಲಿತ ವಿರೋಧಿ ನಡವಳಿಕೆ ಅರ್ಥವಾಗಿದೆ" ಎಂದು ಅವರು ನುಡಿದರು. 

ಘಟನೆ ಖಂಡಿಸಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ

“ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜೀನಾಮೆಗೆ ಆಗ್ರಹಿಸಿ ಗುರುವಾರ (ಆ.18) 11 ಗಂಟೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಗುವುದು” ಎಂದು ಛಲವಾದಿ ನಾರಾಯಣಸ್ವಾಮಿ ಘೋಷಣೆ ಮಾಡಿದರು.

“ವೀರ ಸಾವರ್ಕರ್ ಅವರ ಫೋಟೋವನ್ನು ಮುಸ್ಲಿಂ ಪ್ರದೇಶದಲ್ಲಿ ಯಾಕೆ ಇಟ್ಟಿದ್ದೀರಿ ಎಂದು ಸಿದ್ದರಾಮಯ್ಯ ಕೇಳುತ್ತಾರೆ. ಹಾಗಿದ್ದರೆ, ಈ ದೇಶದಲ್ಲಿ ಹಿಂದೂಗಳು, ಮುಸಲ್ಮಾನರು, ದಲಿತರಿಗೆ ಬೇರೆ ಬೇರೆ ಎನ್ನುವ ಪ್ರದೇಶಗಳಿವೆಯೇ? 60ಕ್ಕೂ ಹೆಚ್ಚು ವರ್ಷ ದೇಶವನ್ನಾಳಿದ ನೀವು ಈ ದೇಶವನ್ನು ಯಾವ ಪರಿಸ್ಥಿತಿಯಲ್ಲಿ ಇಟ್ಟಿದ್ದೀರಿ ಎನ್ನುವುದು ಇದರಿಂದ ಅರ್ಥವಾಗುತ್ತದೆ” ಎಂದು ಟೀಕಿಸಿದರು.

ಈ ಸುದ್ದಿ ಓದಿದ್ದೀರಾ?: ‘ಸರ್ಕಾರ ನಡೀತಾ ಇಲ್ಲ..’ ಎಂಬ ಹೇಳಿಕೆ ಹಿಂದಿನ ಮರ್ಮವೇನು? ಮಾಧುಸ್ವಾಮಿ ಮೇಲೆ ಯಡಿಯೂರಪ್ಪ ಬಣ ಮುಗಿಬಿದ್ದಿದ್ಯಾಕೆ?

“ಸಿದ್ದರಾಮಯ್ಯರಿಗೆ ತಾಕತ್ತಿದ್ದರೆ ರಾಜಸ್ಥಾನದ ಮುಖ್ಯಮಂತ್ರಿ ತಕ್ಷಣ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಬೇಕು. ಸಣ್ಣಸಣ್ಣ ವಿಚಾರಕ್ಕೂ ಬೊಮ್ಮಾಯಿಯವರ ರಾಜೀನಾಮೆ ಕೇಳುವ ನಿಮಗೆ ನಾಚಿಕೆ ಆಗುವುದಿಲ್ಲವೇ? ಪ್ರತಿದಿನ ಹೆಣ್ಣುಮಕ್ಕಳ ತೇಜೋವಧೆ ಮಾಡುವ ಪ್ರಿಯಾಂಕ್ ಖರ್ಗೆಯವರು, 'ಕೆಲಸ ಸಿಗಲು ಬರಿಯ ಲಂಚವಲ್ಲ; ಮಂಚವನ್ನೂ ಹತ್ತಬೇಕು' ಎನ್ನುತ್ತಾರೆ. ಪ್ರಿಯಾಂಕ್‌ಗೆ ದಲಿತ ಬಾಲಕನ ಸಾವು ಕಾಣಲಿಲ್ಲವೇ” ಎಂದು ಪ್ರಶ್ನಿಸಿದರು.

“ಕಲಬುರ್ಗಿ ಜಿಲ್ಲೆಯ ಚಿತ್ತಾಪುರದಲ್ಲಿ ಮುಸಲ್ಮಾನರಿಂದ ಹೊಡೆತ ತಿಂದು ಒಬ್ಬರು ಬೀದಿಯಲ್ಲೇ ಸಾವನ್ನಪ್ಪಿದಾಗ ಮುಸ್ಲಿಂ ಮತ ಕೈತಪ್ಪುವ ಭೀತಿಯಿಂದ ಪ್ರಿಯಾಂಕ್ ಖರ್ಗೆ ಮಾತನಾಡಿರಲಿಲ್ಲ. ಈಚೆಗೆ ಇನ್ನೊಂದು ಹತ್ಯೆ ಆದಾಗಲೂ ಅವರು ಮಾತನಾಡಲಿಲ್ಲ. ದಲಿತರು ಸತ್ತರೂ ಕಾಂಗ್ರೆಸ್‌ನವರು ಹೇಳಿಕೆ ಕೊಡುವುದಿಲ್ಲ. ಆದರೆ, ಮುಸ್ಲಿಮರಿಗೆ ಸಂಬಂಧಿಸಿದ ಸಣ್ಣ ವಿಚಾರವನ್ನೂ ದೊಡ್ಡದಾಗಿ ಮಾಡಿ ಹಿಂದೂ-ಮುಸ್ಲಿಮರ ಮಧ್ಯೆ ವಿರಸ ತಂದಿಟ್ಟು ದೇಶ ಒಡೆಯುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

“ಅಸ್ಪೃಶ್ಯತೆ ವಿರುದ್ಧ ಕಾಂಗ್ರೆಸ್ ಮುಖಂಡರು ದೊಡ್ಡ ಭಾಷಣ ಮಾಡುತ್ತಾರೆ. ಆದರೆ, ದಲಿತರ ಪರವಾಗಿ ನಾವಿದ್ದೇವೆ ಎನ್ನುವ, ದಲಿತರ ಪರ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ಸಿಗರು, ಅದೇ ಪಕ್ಷದ ಸರ್ಕಾರ ಇರುವ ರಾಜಸ್ಥಾನದಲ್ಲಿ ನಡೆದ ಘಟನೆಯನ್ನು ಬಹಳ ಲಘುವಾಗಿ ತೆಗೆದುಕೊಂಡಿದ್ದಾರೆ” ಎಂದು ಟೀಕಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್