
- ಕಾಂಗ್ರೆಸ್ ಮುಖಂಡರಿಂದ ಬಾಲಿಶಃ, ಹುಡುಗಾಟಿಕೆಯ ವರ್ತನೆ
- ಅವ್ಯವಹಾರ ಆಗಿದ್ದರೆ ಕ್ರಮ ತೆಗೆದುಕೊಳ್ಳಲು ಸರ್ಕಾರ ಸಿದ್ಧವಿದೆ
‘ಪ್ರತಿ ವಿಷಯಕ್ಕೂ ಮುಖ್ಯಮಂತ್ರಿ ರಾಜೀನಾಮೆ ಕೇಳುವುದು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ಬಾಲಿಶಃ ವರ್ತನೆ; ಇದು ಕಾಂಗ್ರೆಸ್ ಪಕ್ಷದ ಟೂಲ್ಕಿಟ್ನ ಒಂದು ಭಾಗ’ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಆರೋಪಿಸಿದರು.
ಮಲ್ಲೇಶ್ವರದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಮುಖ್ಯಮಂತ್ರಿ ರಾಜೀನಾಮೆ ಕೇಳುವುದು ಹುಡುಗಾಟಿಕೆಯೇ? ಮತದಾರರ ಜಾಗೃತಿ ಮತ್ತು ಮಾಹಿತಿ ಸಂಗ್ರಹಕ್ಕೆ ಸಂಬಂಧಿಸಿದ ವಿಷಯದಲ್ಲಿ ಮುಖ್ಯಮಂತ್ರಿಯವರ ರಾಜೀನಾಮೆ ಕೇಳುವುದು ಮೂರ್ಖತನ” ಎಂದರು.
“ಮತದಾರರ ಮಾಹಿತಿ ಸಂಗ್ರಹ ಮತ್ತು ಮತದಾರರ ಜಾಗೃತಿಯ ಕಾರ್ಯವನ್ನು ‘ಚಿಲುಮೆ’ ಸಂಸ್ಥೆಗೆ 2018ರಲ್ಲಿ ಸಮ್ಮಿಶ್ರ ಸರ್ಕಾರ ಕೊಟ್ಟಿತ್ತು. ಟೆಂಡರ್ ಕರೆಯದೆ ಈ ಕೆಲಸವನ್ನು ನೀಡಲಾಗಿತ್ತು. ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಈ ಕೆಲಸ ನೀಡಿದ್ದು, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಆಗ ಏನು ಮಾಡುತ್ತಿದ್ದರು” ಎಂದು ಪ್ರಶ್ನಿಸಿದರು.
“ಹಾಗಿದ್ದರೆ, ರಾಜೀನಾಮೆ ಕೊಡಬೇಕಾದವರು ಯಾರು? ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರು ರಾಜೀನಾಮೆ ಕೊಡಬೇಕು. ಇದರಲ್ಲೇನೂ ಅವ್ಯವಹಾರ ಆಗಿಲ್ಲ. ಬಿಎಲ್ಓಗಳಿಗೆ ಐಡಿ ಕೊಟ್ಟ ವಿಚಾರ ಗೊತ್ತಾದೊಡನೆ ಚಿಲುಮೆ ಸಂಸ್ಥೆಗೆ ಕೊಟ್ಟಿದ್ದ ಆದೇಶವನ್ನು ಬಿಬಿಎಂಪಿ ಹಿಂದಕ್ಕೆ ಪಡೆದಿದೆ” ಎಂದು ಸ್ಪಷ್ಟಪಡಿಸಿದರು.
ಈ ಸುದ್ದಿ ಓದಿದ್ದೀರಾ? 'ಚಿಲುಮೆ' ಸಂಸ್ಥೆಯ ಕೃಷ್ಣಪ್ಪ ರವಿಕುಮಾರ್ಗೂ ಸಚಿವ ಅಶ್ವತ್ಥನಾರಾಯಣಗೂ ಅವಿನಾಭಾವ ಸಂಬಂಧ: ಕಾಂಗ್ರೆಸ್
“2018ರಲ್ಲಿ ದಿನ ಒಂದಕ್ಕೆ ₹5 ಸಾವಿರ ಈ ಸಂಸ್ಥೆಗೆ ಕೊಟ್ಟಿದ್ದಾರೆ. ಬಿಬಿಎಂಪಿ ಕಡೆಯಿಂದ ಲ್ಯಾಪ್ ಟಾಪ್ ಕೊಟ್ಟಿದ್ದು, ಜಾಗೃತಿ ಮೂಡಿಸಲು ಬೇಕಿದ್ದ ಕರಪತ್ರಗಳು, ಬ್ಯಾನರ್ಗಳು, ಶಾಮಿಯಾನ ಮೈಕ್ ವ್ಯವಸ್ಥೆಗೆ ಹಣ ಖರ್ಚು ಮಾಡಿದ್ದಾರೆ. ಇದರಲ್ಲಿ ಅವ್ಯವಹಾರ ಆಗಿದ್ದರೆ, ನ್ಯೂನತೆ ಇದ್ದರೆ ಪೊಲೀಸ್ ಕಮೀಷನರ್ಗೆ ದೂರು ಕೊಡಲಾಗುತ್ತದೆ. ಅಗತ್ಯ ಕ್ರಮ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ” ಎಂದು ವಿವರಿಸಿದರು.
ಸಿದ್ದರಾಮಯ್ಯರನ್ನು ಮೊದಲು ಬಂಧಿಸಬೇಕು
“ಸಿದ್ದರಾಮಯ್ಯ ಜಾತಿ ಗಣತಿಗೆ ₹200 ಕೋಟಿ ಕೊಟ್ಟಿದ್ದೇನೆ ಎಂದಿದ್ದರು. 158 ಕೋಟಿ ಖರ್ಚಾಗಿದೆ. ಆದರೆ, ಆ ವರದಿಯನ್ನೇ ಅಂಗೀಕರಿಸಿಲ್ಲ. ಅದು ಏನಾಗಿದೆ? ಇದು ಜನರ ಹಣ. ಸಿದ್ದರಾಮಯ್ಯರನ್ನು ಮೊದಲು ಬಂಧಿಸಿ” ಎಂದು ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಮುಖ್ಯಮಂತ್ರಿಯವರನ್ನು ಆಗ್ರಹಿಸಿದರು.
“ಸಿದ್ದರಾಮಯ್ಯ ಪುರಾವೆ ಇಲ್ಲದೆ ಮಾತನಾಡುತ್ತಾರೆ. ಅವರು ನಿರುದ್ಯೋಗಿಯಾಗಿ ಬಹಳ ಬಿಡುವಾಗಿದ್ದಾರೆ. ಅವರ ಅಲೆಮಾರಿತನಕ್ಕೆ ನಾವೇನು ಮಾಡಲು ಸಾಧ್ಯ? ಅವರು ಕಂಗೆಟ್ಟು ಏನೇನೋ ಆಪಾದನೆ ಮಾಡುತ್ತಾರೆ. ಇದೊಂದು ಟೂಲ್ ಕಿಟ್. ಈ ಟೂಲ್ ಕಿಟ್ಗೆ ನಾವು ಬೆದರುವುದಿಲ್ಲ. ಹೆದರುವವರೂ ಅಲ್ಲ; ಇದಕ್ಕೆ ಜನರೇ ಉತ್ತರ ಕೊಡುತ್ತಾರೆ” ಎಂದರು.