ಈ ದಿನ ವಿಶೇಷ | ಸಿದ್ದರಾಮೋತ್ಸವಕ್ಕೆ ತಿರುಗೇಟು ನೀಡಲು ಸಜ್ಜಾದ ಕಮಲ ಪಡೆ: ʼಹಿಂದʼ ಹೆಗಲೇರಿ ಅಖಾಡಕ್ಕಿಳಿಯಲಿರುವ ಬಿಜೆಪಿ

ಸಿದ್ದರಾಮಯ್ಯನವರ ಅಹಿಂದ ಮಾದರಿಯಲ್ಲೇ ತಾನೂ ಹಿಂದ (ಹಿಂದುಳಿದ, ದಲಿತ) ಸಮಾವೇಶಗಳನ್ನ ಮಾಡಿ ಆ ವರ್ಗಗಳನ್ನು ತನ್ನತ್ತ ಒಲಿಸಿಕೊಂಡು ಚುನಾವಣೆಗೆ ಸಿದ್ಧವಾಗಲು ಬಿಜೆಪಿ ಕಾರ್ಯಕ್ರಮ ರೂಪಿಸಿದೆ. ಆ ಮೂಲಕ ತನ್ನ ನಿದ್ರೆ ಕಸಿದುಕೊಂಡ ಸಿದ್ದರಾಮೋತ್ಸವಕ್ಕೆ ತಿರುಗೇಟು ಕೊಡಲು ರಾಜ್ಯ ಬಿಜೆಪಿ ಅಣಿಯಾಗುತ್ತಿದೆ.

ಸಿದ್ದರಾಮೋತ್ಸವದ ಬೆಳವಣಿಗೆ ಜೊತೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ ಸೂಚನೆಗಳು ರಾಜ್ಯ ಬಿಜೆಪಿ ಪಾಳಯಯಲ್ಲಿ ಹೊಸ ಕಸುವು ತುಂಬಲಾರಂಭಿಸಿವೆ. ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಸೇರಿದ್ದ ಜನಸಾಗರ ನೋಡಿದ ಬಳಿಕ ಭ್ರಮಾಲೋಕದಲ್ಲಿದ್ದ ಬಿಜೆಪಿ ವಾಸ್ತವಕ್ಕಿಳಿದಿದೆ.

ಹೀಗೇ ಸಾಗುತ್ತಾ ಹೋದರೆ ಮುಂದೆ ಅಧಿಕಾರಕ್ಕೇರುವುದಾಗಲಿ, ಅಧಿಕಾರಕ್ಕೆ ಬೇಕಾದ ಶಾಸಕರ ಸಂಖ್ಯೆಯನ್ನು ಗಳಿಸುವುದಕ್ಕಾಗಲಿ ಆಗದೇ ಹೋಗಬಹುದು ಎನ್ನುವ ಆತಂಕ ಎದುರಾಗಿದೆ. ಹೀಗಾಗಿ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯುವ ರೀತಿಯಲ್ಲೇ ತಾನೂ ಪಕ್ಷ ಸಂಘಟನೆ ಮಾಡಲು ಬಿಜೆಪಿ ಮುಂದಾಗಿದೆ.

ಈ ಸಲುವಾಗಿ ರಾಜ್ಯದಾದ್ಯಂತ ಸಮಾವೇಶಗಳನ್ನು ಮಾಡಲು ಕಮಲ ಪಕ್ಷ ನಿರ್ಧರಿಸಿದೆ. ಅಹಿಂದ ಮಾದರಿಯಲ್ಲೇ ತಾನೂ ಹಿಂದ (ಹಿಂದುಳಿದ, ದಲಿತ) ಸಮಾವೇಶಗಳನ್ನ ಮಾಡಿ, ಆ ವರ್ಗಗಳನ್ನು ತನ್ನತ್ತ ಒಲಿಸಿಕೊಂಡು ಚುನಾವಣೆಗೆ ಸಿದ್ಧವಾಗಲು ಕಾರ್ಯಕ್ರಮ ರೂಪಿಸಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಪಕ್ಷವು ಹಿಂದುಳಿದ ವರ್ಗಗಳಿಗೆ ಮತ್ತು ದಲಿತ ಸಮುದಾಯಕ್ಕೆ ನೀಡುತ್ತಿರುವ ಪ್ರಾತಿನಿಧ್ಯವನ್ನೇ ಬಂಡವಾಳವಾಗಿಸಿಕೊಳ್ಳಲು ಬಿಜೆಪಿ ಚಿಂತಿಸಿದೆ. ಅದರಂತೆ ಆ ಸಮುದಾಯಗಳಲ್ಲಿ ಪಕ್ಷದ ಪರವಾಗಿ ಪ್ರಚಾರ ಮಾಡಲು ಬೂತ್ ಮಟ್ಟದಲ್ಲಿ ಅಭಿಯಾನ ರೂಪದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಬಿಜೆಪಿ ಯೋಜನೆ ಹಾಕಿಕೊಂಡಿದೆ.

ಈ ಹಿಂದೆ ಬಿಜೆಪಿ ಓಬಿಸಿ ಮೋರ್ಚಾದ ಕಾರ್ಯಕಾರಿಣಿ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹಿಂದುಳಿದ ವರ್ಗಗಳ ಮತ ಕ್ರೋಡೀಕರಣದ ಬಗ್ಗೆ ಸಲಹೆ ನೀಡಿ, ಆ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಸೂಚಿಸಿದ್ದರು.

ಈ ಸುದ್ದಿ ಓದಿದ್ದೀರಾ? : ಈ ದಿನ ವಿಶೇಷ: ಯಡಿಯೂರಪ್ಪ ನೀಡಿದ ಎಚ್ಚರಿಕೆಯ ಮಾತಿಗೆ ನಡುಗಿದ ಬಿಜೆಪಿ; ಮುಂದೇನು ಮಾಡುತ್ತಾರೆ ಅಮಿತ್ ಶಾ?

ಈಗ ಅದೇ ತಳಹದಿ ಮೇಲೆ ದಲಿತರು ಮತ್ತು ಒಬಿಸಿ ಸಮುದಾಯದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಪುಟಗಳಲ್ಲಿ ನೀಡಿರುವ ಸಚಿವ ಸ್ಥಾನ, ವಿವಿಧ ನಿಗಮ ಮಂಡಳಿಗಳಲ್ಲಿ ನೀಡಿರುವ ಪ್ರಾತಿನಿಧ್ಯ, ಪಕ್ಷದ ವಿವಿಧ ಘಟಕಗಳಲ್ಲಿ ನೀಡಿರುವ ಪ್ರಾತಿನಿಧ್ಯದ ಕುರಿತು ಆ ಸಮುದಾಯಗಳ ಜೊತೆಗೆ ಸಮಾಜಕ್ಕೂ ತಿಳಿಸುವ ಪ್ರಯತ್ನವಾಗಬೇಕು. ಹಾಗೆಯೇ ಈ ವಿಚಾರಗಳು ಹೆಚ್ಚು ಪ್ರಚಾರಕ್ಕೆ ಬರುವಂತೆ ನೋಡಿಕೊಂಡು ಮುಂದಿನ ಕಾರ್ಯಕ್ರಮ ರೂಪಿಸಲು ಬಿಜೆಪಿ ಚಿಂತನೆ ನಡೆಸಿದೆ.

ಸಿದ್ದರಾಮೋತ್ಸವ ನಡೆದ ದಾವಣಗೆರೆಯಲ್ಲೇ ಪ್ರಚಾರ ಸಮಾವೇಶದ ಅಂತಿಮ ಕಾರ್ಯಕ್ರಮ ನಡೆಸಿ ಅಲ್ಲೇ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಚಿಂತನೆ ನಡೆಸಲಾಗುತ್ತಿದೆ. 

ಒಟ್ಟಿನಲ್ಲಿ ದಾವಣಗೆರೆಯಲ್ಲಿ ಸಿದ್ದರಾಮೋತ್ಸವದ ಹೆಸರಿನಲ್ಲಿ ಕಾಂಗ್ರೆಸ್ ಹಚ್ಚಿದ ಪ್ರಚಾರದ ಕಿಡಿಗೆ ಅದೇ ನೆಲದಲ್ಲೇ ನಿಂತು ಉತ್ತರ ಕೊಡಲು ಬಿಜೆಪಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದಕ್ಕಾಗಿ ಬಿಜೆಪಿ ಸೂಕ್ತ ಸಮಯವನ್ನು ನಿಗದಿ ಮಾಡಲು ಚಿಂತಿಸುತ್ತಿದೆ.  

ನಿಮಗೆ ಏನು ಅನ್ನಿಸ್ತು?
0 ವೋಟ್