ಜನರ ಜೀವನ ಬದಲಿಸುವಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ವಿಫಲ: ಡಿಕೆಶಿ ವಾಗ್ದಾಳಿ

D K Shivakumar
  • ‘ನಾವು ಮಾತು ತಪ್ಪಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇವೆ’
  • ‘ಬಿಜೆಪಿ, ಜೆಡಿಎಸ್ ನಮ್ಮ ರೀತಿ ಹೋರಾಟ ಮಾಡಿದ್ದಾರಾ?’

“ಕಳೆದ ಮೂರುವರೆ ವರ್ಷಗಳಿಂದ ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಜನರ ಜೀವನದಲ್ಲಿ ಬದಲಾವಣೆ ತರಲು ಎಲ್ಲ ರೀತಿಯಲ್ಲೂ ವಿಫಲವಾಗಿದೆ. ರೈತರ ಆದಾಯ ದುಪ್ಪಟ್ಟು, ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿ, ಪ್ರತಿ ಪ್ರಜೆಯ ಖಾತೆಗೆ 15 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದ ಬಿಜೆಪಿ ಯಾವುದನ್ನಾದರೂ ಈಡೇರಿಸಿದೆಯಾ?” ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಶ್ನಿಸಿದರು.

ತುಮಕೂರಿನಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ, “ಬಿಜೆಪಿ 600 ಭರವಸೆ ನೀಡಿ, ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಲ್ಲಿ 1 ಲಕ್ಷದ ವರೆಗಿನ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದರು. ಅಚ್ಛೇದಿನ ನೀಡುತ್ತೇವೆ ಎಂದಿದ್ದರು. ಯಾವುದಾದರೂ ಸಿಕ್ಕಿದೆಯಾ? ಕೋವಿಡ್ ಸಮಯದಲ್ಲಿ ಪರಿಹಾರ ನೀಡಲಿಲ್ಲ. ಈ ದುರಾಡಳಿತ ಕೊನೆ ಆಗಬೇಕು. ಈಗ ಪರೀಕ್ಷೆ ಕಾಲ ಬಂದಿದೆ. 45 ದಿನಗಳ ನಂತರ ನಿಮ್ಮ ಸರ್ಕಾರ ಬರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ಗುಬ್ಬಿಯ ಶ್ರೀನಿವಾಸ್, ಮಧು ಜಿ ಮಾದೇಗೌಡ, ಮಧು ಬಂಗಾರಪ್ಪ, ಕೋಲಾರದ ಶ್ರೀನಿವಾಸ ಗೌಡರು, ವೈಎಸ್‌ವಿ ದತ್ತಾ, ಮಂಜುನಾಥ ಗೌಡರು, ದೇವೇಂದ್ರಪ್ಪ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇವರೆಲ್ಲರೂ ನಾಯಕರು, ಜನಪ್ರತಿನಿಧಿಗಳು, ವಿದ್ಯಾವಂತರು. ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ನೀಡುತ್ತಿದ್ದಾರೆ” ಎಂದು ವಿಶ್ಲೇಷಿಸಿದರು.

“ರಾಹುಲ್ ಗಾಂಧಿ ಅವರು 3,570 ಕಿ.ಮೀ ಹೆಜ್ಜೆ ಹಾಕಿದ್ದಾರೆ. ನಮ್ಮ ರಾಜ್ಯದಲ್ಲಿ 511 ಕಿ.ಮೀ ಹೆಜ್ಜೆ ಹಾಕಿದ್ದೇವೆ. ರಾಜ್ಯದಲ್ಲಿ ಸಾಮರಸ್ಯಕ್ಕೆ, ಬೆಲೆ ಏರಿಕೆ ನಿಯಂತ್ರಣಕ್ಕೆ, ಯುವಕರ ಭವಿಷ್ಯ ರಕ್ಷಿಸಿ, ಮೇಕೆದಾಟು ಆಣೆಕಟ್ಟು ಕಟ್ಟಿ ಕಾವೇರಿ ಜಲಾನಯನ ಪ್ರದೇಶಕ್ಕೆ ನೀರು ಒದಗಿಸಲು ಹೆಜ್ಜೆ ಹಾಕಿದ್ದೇವೆ. ಬಿಜೆಪಿ, ಜೆಡಿಎಸ್ ಈ ರೀತಿ ಒಂದು ಹೋರಾಟ ಮಾಡಿದ್ದಾರಾ” ಎಂದು ಪ್ರಶ್ನಿಸಿದರು.

“ಬಿಜೆಪಿ ನಿಮ್ಮ ಭಾವನೆ ಕೆರಳಿಸುತ್ತಿದೆ. ನಾವು ನುಡಿದಂತೆ ನಡೆಯುತ್ತೇವೆ. ನಾವು ಮಾತು ತಪ್ಪಿದರೆ ರಾಜಕೀಯ ಬದುಕಿನಿಂದ ನಿವೃತ್ತಿ ಪಡೆಯುತ್ತೇವೆ ಎಂಬ ಶಪಥ ಮಾಡುತ್ತೇವೆ. ಇದು ಕಾಂಗ್ರೆಸ್ ಪಕ್ಷದ ವಚನ. ನಮ್ಮ ಯೋಜನೆ ಕೇಳಿದ ನಂತರ ಬಿಜೆಪಿ ನಾಯಕರ ಮನಸ್ಸು ವಿಲವಿಲನೆ ಒದ್ದಾಡುತ್ತಿದೆ. ಜೆಡಿಎಸ್, ಕುಮಾರಸ್ವಾಮಿಯ ಎದೆ ಢವಢವ ಎಂದು ಹೊಡೆದು ಕೊಳ್ಳುತ್ತಿದೆ. ನಿಮ್ಮ ಕೈಯಲ್ಲಿ ಅಧಿಕಾರ ಇದ್ದಾಗ ಯಾಕೆ ಇಂತಹ ಕಾರ್ಯಕ್ರಮ ನೀಡಲಿಲ್ಲ? ನಾವು ಘೋಷಣೆ ಮಾಡಿದ ನಂತರ ಈಗ ಬಿಜೆಪಿಯವರು ನಾವು ಈ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ” ಎಂದು ಕುಟುಕಿದರು.

“ರಾಜ್ಯ ಸರ್ಕಾರ ಫೆ. 17ರಂದು ಬಜೆಟ್ ಮಂಡನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಅವರು ಬಜೆಟ್ ನಲ್ಲಿ ಏನು ಹೇಳಿದರೂ ಜಾರಿಗೆ ಬರುವುದಿಲ್ಲ. ಅವರು ತಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ಯೋಜನೆ ಜಾರಿ ಮಾಡಲಿಲ್ಲ. ಆದರೆ, ನಾವು ಒಳ್ಳೆ ಕೆಲಸ ಮಾಡುತ್ತೇವೆ ಎಂದು ಹೋರಟರೆ ಅದು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ” ಎಂದರು. 

ಈ ಸುದ್ದಿ ಓದಿದ್ದೀರಾ? ಪಿಎಸ್ಐ ನೇಮಕಾತಿ ಹಗರಣ | ಪ್ರಕರಣದಿಂದ ಕೈಬಿಡಲು ಸಿಐಡಿಯಿಂದ 3 ಕೋಟಿ ರೂ. ಬೇಡಿಕೆ; ಆರ್‌.ಡಿ ಪಾಟೀಲ್ ಗಂಭೀರ ಆರೋಪ

ಫೆಬ್ರುವರಿ ಮೊದಲ ವಾರದಿಂದ ಪ್ರತಿ ತಾಲೂಕಿಗೆ ಭೇಟಿ

“ಫೆಬ್ರುವರಿ ಮೊದಲ ವಾರದಿಂದ ಪ್ರತಿ ತಾಲೂಕಿಗೆ ಭೇಟಿ ಮಾಡುತ್ತೇವೆ. ಮೊದಲು ನಾನು ದಕ್ಷಿಣ ಭಾಗದ ಜಿಲ್ಲೆಗಳ ಕ್ಷೇತ್ರಗಳಿಗೆ, ಸಿದ್ದರಾಮಯ್ಯನವರು ಉತ್ತರ ಭಾಗದ ಜಿಲ್ಲೆಗಳಲ್ಲಿ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ನಂತರ ನಾನು ಉತ್ತರ ಭಾಗದ ಕ್ಷೇತ್ರಗಳಿಗೆ ಹೋದರೆ, ಸಿದ್ದರಾಮಯ್ಯನವರು ದಕ್ಷಿಣ ಜಿಲ್ಲೆಗಳ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ನೀವು ಪ್ರತಿ ಮನೆಗೆ ನಮ್ಮ ಯೋಜನೆಗಳ ಬಗ್ಗೆ ಮಾಹಿತಿ ತಲುಪಿಸಬೇಕು. ಪಕ್ಷದ ಸದಸ್ಯತ್ವ ಮಾಡಿದ ರೀತಿ ಪ್ರಚಾರ ಮಾಡಿ. ನಿಮ್ಮ ಆಶೀರ್ವಾದ ನಮಗೆ ನೀಡಿ ಜಿಲ್ಲೆಯಿಂದ 10 ಶಾಸಕರನ್ನು ಆರಿಸಿ ಕಳುಹಿಸಬೇಕು” ಎಂದು ಮನವಿ ಮಾಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app