ಮಳೆಗಾಲ ಅಧಿವೇಶನ | ಬಿಎಂಎಸ್ ಟ್ರಸ್ಟ್ ಗದ್ದಲ; ಅನಿರ್ದಿಷ್ಟಾವಧಿಗೆ ವಿಧಾನಸಭೆ ಕಲಾಪ ಮುಂದೂಡಿದ ಸ್ಪೀಕರ್

Mansoon Session
  • ಸಂಧಾನ ಸಭೆ ವಿಫಲ; ಅಶ್ವತ್ಥನಾರಾಯಣ ರಾಜೀನಾಮೆಗೆ ಪಟ್ಟು
  • ಮೀಸಲಾತಿ ಕುರಿತು ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ

15ನೇ ಮಳೆಗಾಲದ ಅಧಿವೇಶನದ ವಿಧಾನಸಭೆ ಕಲಾಪವನ್ನು ಸಭಾಧ್ಯಕ್ಷ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅನಿರ್ದಿಷ್ಟಾವಧಿಗೆ ಮುಂದೂಡಿದರು.

ಉನ್ನತ ಶಿಕ್ಷಣ ಸಚಿವ ಸಿ ಎನ್ ಅಶ್ವತ್ಥನಾರಾಯಣ ಅವರಿಗೆ ಸಂಬಂಧಿಸಿದ ಬಿಎಂಎಸ್ ಟ್ರಸ್ಟ್ ಹಗರಣದ ಬಗ್ಗೆ ಗುರುವಾರ ನಾಲ್ಕು ಗಂಟೆ ನಂತರ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸುದೀರ್ಘವಾಗಿ ಮಾತನಾಡಿ ಆರೋಪ ಮಾಡಿದ್ದರು. ಸಚಿವರ ರಾಜೀನಾಮೆಗೆ ಒತ್ತಾಯಿಸಿ ಸದನದಲ್ಲೇ ಅಹೋರಾತ್ರಿ ಧರಣಿ ನಡೆಸಿದ್ದರು.

ಜೆಡಿಎಸ್‌ನ ‘ಬಿಎಂಎಸ್ ಟ್ರಸ್ಟ್’ ವಿವಾದ ಮತ್ತು ಕಾಂಗ್ರೆಸ್‌ನ ‘ಪೇ ಸಿಎಂ’ ವಿವಾದದ ಗದ್ದಲಗಳ ಕಾರಣಕ್ಕೆ ಸದನವನ್ನು ಮುಂದೂಡಬೇಕಾಯಿತು.

ಶುಕ್ರವಾರ ಬೆಳಿಗ್ಗೆ ಎಂದಿನಂತೆ ಕೊನೇ ದಿನದ ವಿಧಾನಸಭೆ ಕಲಾಪಗಳು ಆರಂಭವಾಯಿತು. ಬಿಎಂಎಸ್‌ ಟ್ರಸ್ಟ್‌ ಅಕ್ರಮ ಕುರಿತು ಗುರುವಾರ ಪ್ರಸ್ತಾಪಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ತನಿಖೆ ನಡೆಸುವಂತೆ ಪಟ್ಟು ಹಿಡಿದರು. ಜೆಡಿಎಸ್‌ಗೆ ಕಾಂಗ್ರೆಸ್‌ ಸದಸ್ಯರು ಸಹ ಬೆಂಬಲ ಸೂಚಿಸಿದರು. 

ಪ್ರತಿಪಕ್ಷಗಳ ಗದ್ದಲದಿಂದ ಸದನದಲ್ಲಿ ಗಲಾಟೆ ಆರಂಭವಾಯಿತು. ಪ್ರಶ್ನೋತ್ತರ ಅವಧಿಯ ಕಲಾಪ ಸಹ ನಡೆಯಲಿಲ್ಲ. ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಸದಸ್ಯರು ಘೋಷಣೆ ಕೂಗುವುದು ಮುಂದುವರೆಸಿದರು. ಅಲ್ಲದೇ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ್ ವಿರುದ್ಧ 'ಪ್ರೈವೇಟ್ ಅಶ್ವತ್ಥ, ಪಬ್ಲಿಕ್ ನಾರಾಯಣ್' ಭಿತ್ತಿಪತ್ರ ಪ್ರದರ್ಶಿಸಿದರು. 

ಮುಖ್ಯಮಂತ್ರಿಗಳ ಸಂಧಾನ ಸಭೆ ವಿಫಲ

ಬಿಎಂಎಸ್ ಟ್ರಸ್ಟ್ ವಿವಾದದಿಂದ ಕಲಾಪ ನಡೆಯದ ಹಿನ್ನೆಲೆಯಲ್ಲಿ ಸದನವನ್ನು ಕೆಲಕಾಲ ಮುಂದೂಡಲಾಯಿತು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಭೆ ನಡೆಸಿ ಜೆಡಿಎಸ್ ಸದಸ್ಯರನ್ನು ಸಮಾಧಾನಪಡಿಸುವ ಯತ್ನ ನಡೆಯಿತು. 

ಸಭೆಯಲ್ಲಿ ಎಚ್‌ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು. ಆದರೆ, ಅಶ್ವತ್ಥ ನಾರಾಯಣ ರಾಜೀನಾಮೆ ಮತ್ತು ತನಿಖೆಗೆ ಕುಮಾರಸ್ವಾಮಿ ಪಟ್ಟು ಹಿಡಿದಿದ್ದರಿಂದ ಸಂಧಾನ ಸಭೆ ವಿಫಲವಾಯಿತು. ಈ ವೇಳೆ ಜೆಡಿಎಸ್‌ ನಾಯಕರು ಪುನಃ ಸದನದಲ್ಲಿ ಧರಣಿ ಮುಂದುವರಿಸಲು ನಿರ್ಧರಿಸಿದರು.

ಈ ಸುದ್ದಿ ಓದಿದ್ದೀರಾ?: ಮಳೆಗಾಲ ಅಧಿವೇಶನ | ಬಿಎಂಎಸ್ ಟ್ರಸ್ಟ್ ಗಲಾಟೆ; ಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಸಭೆ ನಂತರ ಸದನ ಪುನರಾರಂಭವಾದಾಗ ವಿಧಾನಸಭೆಯು ಗದ್ದಲದ ಗೂಡಾಯಿತು. ಶಾಸಕರನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದಾಗ ಕಾಗೇರಿ ಅವರು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. 

ಮೀಸಲಾತಿ ಕುರಿತು ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ

ಅಧಿವೇಶನವನ್ನು ಮುಂದೂಡುವುದಕ್ಕೂ ಮೊದಲು ಮೀಸಲಾತಿ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲ ಹೊತ್ತು ಮಾತನಾಡಿದರು. "ನ್ಯಾ. ನಾಗಮೋಹನ್ ದಾಸ್ ಸಮಿತಿ ಮತ್ತು ಸುಭಾಷ್ ಅಡಿ ನೇತೃತ್ವದ ಸಮಿತಿ ವರದಿಗಳು ಸರ್ಕಾರಕ್ಕೆ ಸಲ್ಲಿಕೆ ಆಗಿವೆ. ಮುಂದಿನ ನಿರ್ಧಾರ ಕೈಗೊಳ್ಳುವ ಸಲುವಾಗಿ ಒಂದು ವಾರದೊಳಗೆ ಸರ್ವಪಕ್ಷ ನಾಯಕರ ಸಭೆ ಕರೆಯಲಾಗುವುದು" ಎಂದರು.

"ರಾಜ್ಯ ಸರ್ಕಾರಕ್ಕೆ ಎಲ್ಲ ಸಮುದಾಯದಗಳ ಬಗ್ಗೆ ಸಹಾನುಭೂತಿ ಇದೆ. ಆಯಾ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲಾಗುವುದು. ಇದಕ್ಕೆ ನಾವು ಬದ್ಧವಾಗಿದ್ದೇವೆ. ಆದ್ದರಿಂದ ಕಳೆದ ಕೆಲವು ದಿನಗಳಿಂದ ಮೀಸಲಾತಿ ಪಟ್ಟು ಹಿಡಿದು ನಡೆಸುತ್ತಿರುವ ಪ್ರತಿಭಟನೆ ಕೈಬಿಡಬೇಕು” ಎಂದು ಅವರು ಮನವಿ ಮಾಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್