ಮಳೆಗಾಲ ಅಧಿವೇಶನ | ಬಿಎಂಎಸ್ ಟ್ರಸ್ಟ್ ಗಲಾಟೆ; ಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

Mansoon Session
  • ಗದ್ದಲದ ನಡುವೆಯೇ ನಾಲ್ಕು ವಿದೇಯಕಗಳ ಮಂಡನೆ!
  • ಮಾಣಿಪ್ಪಾಡಿ ವರದಿ ಪ್ರತಿಗೆ ಬಿ ಕೆ ಹರಿಪ್ರಸಾದ್ ಬೇಡಿಕೆ

ಬಿ ಎಂ ಶ್ರೀನಿವಾಸಯ್ಯ (ಬಿಎಂಎಸ್) ಟ್ರಸ್ಟ್ ವಿವಾದ ಮತ್ತು ವಕ್ಫ್ ಆಸ್ತಿ ಕಬಳಿಕೆ ಸಂಬಂಧದ ಅನ್ವರ್ ಮಾಣಿಪ್ಪಾಡಿ ವರದಿ ವಿಚಾರದ ಗದ್ದಲದಲ್ಲಿಯೇ ವಿಧಾನ ಪರಿಷತ್ ಕಲಾಪವನ್ನು ಅನಿರ್ಧಿಷ್ಠಾವಧಿಗೆ ಮುಂದೂಡಲಾಯಿತು.

ಗದ್ದಲದ ನಡುವೆಯೇ ಸರ್ಕಾರ ನಾಲ್ಕು ಪ್ರಮುಖ ವಿಧೇಯಕಗಳಿಗೆ ಪರಿಷತ್‌ನಿಂದ ಅನುಮೋದನೆ ಪಡೆಯಿತು. ಗುರುವಾರ (ಸೆ.22) ವಿಧಾನ ಸಭೆಯಲ್ಲಿ ಅಂಗೀಕಾರವಾಗಿದ್ದ ಕಂದಾಯ ಮತ್ತು ಶಿಕ್ಷಣ ಇಲಾಖೆಗೆ ಸಂಬಂಧಿಸಿದ ವಿಧೇಯಕಗಳಿಗೆ ಮೇಲ್ಮನೆಯಲ್ಲಿ ಒಪ್ಪಿಗೆ ದೊರಕಿತು.

2022ನೇ ಸಾಲಿನ ಕರ್ನಾಟಕ ಭೂ ಕಬಳಿಕೆ ನಿಷೇಧ ತಿದ್ದುಪಡಿ ವಿಧೇಯಕ, ಕರ್ನಾಟಕ ಸ್ಟಾಂಪ್ ತಿದ್ದುಪಡಿ ವಿಧೇಯಕ, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿದ್ದುಪಡಿ ವಿಧೇಯಕ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕಗಳನ್ನು ಧ್ವನಿಮತದ ಮೂಲಕ ವಿಧಾನ ಪರಿಷತ್‌ನಲ್ಲಿ ಅಂಗೀಕರಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.

ಗದ್ದಲದ ನಡುವೆಯೇ ವಿಧೇಯಕಗಳ ಮಂಡನೆ!

ವಿಧೇಯಕಗಳು ಅಂಗೀಕಾರದ ವೇಳೆ ಸಭಾಪತಿ ಪೀಠದ ಮುಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಜಮಾವಣೆಗೊಂಡು ‘ಬಿಎಂಎಸ್’ ಮತ್ತು ‘ಪೇ ಸಿಎಂ’ ಹಗರಣಗಳ ಆರೋಪದ ಭಿತ್ತಿಪತ್ರ ಪ್ರದರ್ಶಿಸಿ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.

ಈ ಸುದ್ದಿ ಓದಿದ್ದೀರಾ?: ಪಿಎಸ್ಐ ನೇಮಕಾತಿ ಹಗರಣ | ಅಮೃತ್ ಪೌಲ್ ಮಂಪರು ಪರೀಕ್ಷೆ ನಡೆಸಿದರೆ ರಾಜಕಾರಣಿಗಳ ಪಾತ್ರ ಹೊರಬರುತ್ತದೆ: ಸಿದ್ದರಾಮಯ್ಯ

“ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರೂ ಕೂಡ ಕಾಂಗ್ರೆಸ್ ಸರ್ಕಾರದ ವಿರುದ್ಧ ಭಿತ್ತಿಪತ್ರ ಪ್ರದರ್ಶನ ಮಾಡಿದರು. ಗದ್ದಲದ ನಡುವೆಯೇ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ 10 ದಿನಗಳ ಕಲಾಪದ ಸಾರಾಂಶವನ್ನು ಸದನದಲ್ಲಿ ಮಂಡಿಸಿದರು. ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಕಲಾಪವನ್ನು ಸಭಾಪತಿ ಮಲ್ಕಾಪುರೆ ಅನಿರ್ಧಿಷ್ಟಾವಧಿಗೆ ಮುಂದೂಡಿದರು.

ಮಾಣಿಪ್ಪಾಡಿ ವರದಿ ಪ್ರತಿಗೆ ಬಿ ಕೆ ಹರಿಪ್ರಸಾದ್ ಬೇಡಿಕೆ

ಪರಿಷತ್ತಿನಲ್ಲಿ ಶೂನ್ಯ ವೇಳೆ ಕಲಾಪ ಮುಗಿಯುತ್ತಿದ್ದಂತೆ ಮಾತನಾಡಿದ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್, “ಗದ್ದಲದ ನಡುವೆ ಸಚಿವರು ಮಾಣಿಪ್ಪಾಡಿ ವರದಿ ಮಂಡಿಸಿದ್ದಾರೆ. ನಮಗೆ ಅದರ ಪ್ರತಿ ಕೊಡಿ" ಎಂದು ಎಂದು 59ರ ಅಡಿ ಚರ್ಚೆಗೆ ಅವಕಾಶ ಕೋರಿ ನಿಲುವಳಿ ಸೂಚನೆ ಮಂಡಿಸಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆದು, ಗದ್ದಲ ಉಂಟಾಯಿತು.

ಹರಿಪ್ರಸಾದ್ ಬೇಡಿಕೆಗೆ ಪ್ರತಿಕ್ರಿಯಿಸಿದ ಸಭಾಪತಿ ಮಲ್ಕಾಪುರೆ, “ಕಾಂಗ್ರೆಸ್ ನಿಲುವಳಿ ಸೂಚನೆ ಪರಿಶೀಲಿಸಿದ್ದೇನೆ. ಮಾಣಿಪ್ಪಾಡಿ ವರದಿ ಸ್ಥಾಯಿ ಸಮಿತಿ ನೀಡಿದ ವರದಿಯಲ್ಲ; ಅಲ್ಪಸಂಖ್ಯಾತ ಆಯೋಗದ‌ ಕಾಯ್ದೆಯಂತೆ ಮಂಡಿಸಿದ್ದಾರೆ. ಇದು ಇತ್ತೀಚೆಗೆ ನಡೆದ ಘಟನೆಯಲ್ಲ. ಹಾಗಾಗಿ ನಿಯಮ‌ 59ರ ನಿಲುವಳಿ ಸೂಚನೆ ತಿರಸ್ಕಾರ ಮಾಡುತ್ತೇನೆ” ಎಂದು ರೂಲಿಂಗ್ ನೀಡಿದರು. ಸಭಾಪತಿಗಳ ನಿರ್ಧಾರಕ್ಕೆ ಕಾಂಗ್ರೆಸ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್