ಮಳೆಗಾಲ ಅಧಿವೇಶನ | ಅಶ್ವತ್ಥ ನಾರಾಯಣ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್ ಅಹೋರಾತ್ರಿ ಧರಣಿ‌, ಸಿಎಂ ಮನವೊಲಿಕೆ

  • ವಿಧಾನಸೌಧದಲ್ಲೇ ರಾತ್ರಿ ಮಲಗಲು ನಿರ್ಧರಿಸಿದ್ದ ಜೆಡಿಎಸ್‌ ಸದಸ್ಯರು
  • ಅಹೋ ರಾತ್ರಿ ಧರಣಿ ಕೈ ಬಿಡಲು ಮುಖ್ಯಮಂತ್ರಿಗಳ ಮನವಿ

ಬಿಎಂಎಸ್ ಸಾರ್ವಜನಿಕ ಶಿಕ್ಷಣ ದತ್ತಿ ಟ್ರಸ್ಟ್ ಅಕ್ರಮ ವಿಚಾರದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ ಎಸ್‌ ಅಶ್ವತ್ಥ ನಾರಾಯಣ ಅವರ ರಾಜೀನಾಮೆಗೆ ಆಗ್ರಹಿಸಿ ಎಚ್‌ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಸದಸ್ಯರು ಅಹೋರಾತ್ರಿ ಧರಣಿಗೆ ಮುಂದಾಗಿದ್ದರು. ಆದರೆ ಈ ವಿಚಾರದಲ್ಲಿ ಯಶಸ್ವಿ ಮನವೊಲಿಕೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಧರಣಿ ಹಿಂಪಡೆಯುವಂತೆ ಮಾಡಿದರು.

ವಿಧಾನಸಭೆಯ ಒಂಬತ್ತನೇ ದಿನದ ಕಲಾಪದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಾವು ಈ ಹಿಂದೆ ಸಚಿವರೊಬ್ಬರ ಬಹುಕೋಟಿ ಅಕ್ರಮವನ್ನು ಸದನದಲ್ಲಿ ಬಿಚ್ಚಿಡುವೆ ಎಂದು ಹೇಳಿದ್ದಂತೆಯೇ ನಡೆದುಕೊಂಡ ಅವರು, ದಾಖಲೆ ಸಮೇತ ವಿಚಾರ ಮಂಡಿಸಿದರು.

ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ. ಸಿ ಎಸ್‌ ಅಶ್ವತ್ಥ ನಾರಾಯಣ ಅವರು ಬಿಎಂಎಸ್‌ ಸಾರ್ವಜನಿಕ ದತ್ತಿ ಸಂಸ್ಥೆಯನ್ನು ತಮ್ಮ ಸಹಿ ಮೂಲಕ ಖಾಸಗಿ ಸಂಸ್ಥೆಯನ್ನಾಗಿಸಿರುವ ದಾಖಲೆಗಳನ್ನು ಸದನಕ್ಕೆ ಬಿಡುಗಡೆ ಮಾಡಿದರು. ಸಾರ್ವಜನಿಕ ಶ್ರೇಯೋಭಿವೃದ್ಧಿ ಉದ್ದೇಶದಿಂದ ಸ್ಥಾಪನೆಯಾದ ಸಂಸ್ಥೆಯನ್ನು ಖಾಸಗಿಯನ್ನಾಗಿಸಿದ್ದರ ಹಿಂದಿನ ವಿವರಗಳನ್ನು ಎಳೆಎಳೆಯಾಗಿ ಸದನದ ಮುಂದಿಟ್ಟ ಕುಮಾರಸ್ವಾಮಿ, ಅದರಿಂದ ಸಚಿವರಿಗಾಗುತ್ತಿದ್ದ ಕೋಟಿ ಕೋಟಿ ರೂಪಾಯಿ ಮೌಲ್ಯದ ಲಾಭದ ಲೆಕ್ಕಾಚಾರಗಳನ್ನು ತಿಳಿಸಿದರು.

Image

ಬಳಿಕ ಈ ವಿಚಾರದಲ್ಲಿ ಸಚಿವರ ರಾಜೀನಾಮೆಗೆ ಆಗ್ರಹಿಸಿ, ಮುಖ್ಯಮಂತ್ರಿಗಳು ತುರ್ತು ಕ್ರಮ ಜರಗಿಸುವಂತೆ ಆಗ್ರಹಿಸಿದರು. ಆದರೆ ಈ ಆರೋಪ ತಳ್ಳಿಹಾಕಿದ ಅಶ್ವತ್ಥ ನಾರಾಯಣ ಎಲ್ಲ ಆರೋಪಗಳು ನಿರಾಧಾರವಾದವೆಂದರು.

ಆದರೆ ಇದಕ್ಕೊಪ್ಪದ ಎಚ್‌ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಗಳು ಮಧ್ಯ ಪ್ರವೇಶ ಮಾಡಿ ಉತ್ತರ ಕೊಡಬೇಕು ಹಾಗೆಯೇ ಸಚಿವರ ರಾಜೀನಾಮೆ ಪಡೆಯಬೇಕೆಂದು ಒತ್ತಾಯಿಸಿದರು. ಆದರೆ ಸರ್ಕಾರ ಇದಕ್ಕೊಪ್ಪದ ಹಿನ್ನೆಲೆಯಲ್ಲಿ ಸದನದ ಬಾವಿಗಿಳಿದ ಜೆಡಿಎಸ್‌ ಸದಸ್ಯರು, ಸರ್ಕಾರದ ವಿರುದ್ಧ ತಮ್ಮ ಪ್ರತಿಭಟನೆ ದಾಖಲಿಸಿದರು.

ಸದನದಲ್ಲಾದ ಗದ್ದಲದ ಕಾರಣ ಸ್ಪೀಕರ್ ಕಾಗೇರಿ ಕಲಾಪವನ್ನು ನಾಳೆಗೆ ಮುಂದೂಡುವ ನಿರ್ಧಾರ ಪ್ರಕಟಿಸಿದರು. ಈ ವೇಳೆ ತಮ್ಮ ಪ್ರತಿಭಟನೆ ತೀವ್ರಗೊಳಿಸಿದ ಕುಮಾರಸ್ವಾಮಿ ಆ ಕ್ಷಣವೇ ಪಕ್ಷದ ಸದಸ್ಯರಿಗೆ ಅಹೋರಾತ್ರಿ ಧರಣಿಗೆ ಮುಂದಾಗುವಂತೆ ಕರೆ ನೀಡಿದರು. ಅದರಂತೆ ಎಲ್ಲರ ಸದಸ್ಯರು ಸದನದ ಬಾವಿಯಲ್ಲೇ ಧರಣಿ ಮಾಡಲು ನಿರ್ಧರಿಸಿದರು.

ಧರಣಿ ನಿರತ ಶಾಸಕರ ಮನಪರಿವರ್ತನೆ ಮಾಡಲು ಸ್ಪೀಕರ್‌ ಕಾಗೇರಿ ಸಿಎಂ ಬೊಮ್ಮಾಯಿ ಪ್ರಯತ್ನ ನಡೆಸಿದರು. ಆದರದು ಫಲಕಾಣದ ಹಿನ್ನೆಲೆಯಲ್ಲಿ ಜೆಡಿಎಸ್‌ ಸದಸ್ಯರ ಪ್ರತಿಭಟನೆಗೆ ಅನುವಾಗುವಂತೆ ಹಾಸಿಗೆ ಊಟದ ವ್ಯವಸ್ಥೆ ಕಲ್ಪಿಸಲು ಸ್ಪೀಕರ್ ಆಡಳಿತ ವರ್ಗಕ್ಕೆ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? : ಮಳೆಗಾಲ ಅಧಿವೇಶನ | ಸಾರ್ವಜನಿಕ ಟ್ರಸ್ಟನ್ನು ಖಾಸಗಿ ಟ್ರಸ್ಟನ್ನಾಗಿ ಪರಿವರ್ತಿಸಿದ ಅಶ್ವತ್ಥನಾರಾಯಣ್: ದಾಖಲೆ ಬಿಡುಗಡೆ ಮಾಡಿ ಎಚ್‌ಡಿಕೆ ಆರೋಪ

ಈ ಸಂದರ್ಭದಲ್ಲಿ ಮತ್ತೊಮ್ಮೆ ಮನವೊಲಿಕೆಗೆ ಬಂದ ಮುಖ್ಯಮಂತ್ರಿ ಬೊಮ್ಮಾಯಿ, ನಾಳೆ ಈ ಬಗ್ಗೆ ತಾವೇ ಉತ್ತರ ನೀಡಲಿರುವುದಾಗಿ ತಿಳಿಸಿ ಕುಮಾರಸ್ವಾಮಿ ಮನವೊಲಿಸಿ ಧರಣಿ ಹಿಂಪಡೆಯಲು ಒಪ್ಪಿಸಿದರು. ಈ ಹಿನ್ನೆಲೆಯಲ್ಲಿ ಅಹೋರಾತ್ರಿ ಧರಣಿ ಹಿಂಪಡೆದ ಜೆಡಿಎಸ್‌, ನಾಳಿನ ಕಲಾಪದಲ್ಲಿ ಧರಣಿ ಮುಂದುವರೆಸಲು ನಿರ್ಧರಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್