ಬಿಎಂಎಸ್‌ ಟ್ರಸ್ಟ್ ಅಕ್ರಮ | ನನ್ನ ಪತ್ರಕ್ಕೆ ಪ್ರಧಾನಿಗಳ ಉತ್ತರ ಏನಿರಲಿದೆ ಎನ್ನುವ ಕುತೂಹಲವಿದೆ: ಎಚ್‌ಡಿಕೆ

  • 20% ಕಮೀಷನ್ ಬಗ್ಗೆ ಮೊದಲು ಹೇಳಿದವರೇ ಮೋದಿ
  • ಬಿಜೆಪಿ ಭಂಡತನದಿಂದ ವಿತಂಡವಾದ ಮಾಡುತ್ತಿದೆ  

ಬಿಎಂಎಸ್ ಸಾರ್ವಜನಿಕ ಶಿಕ್ಷಣ ದತ್ತಿ ಟ್ರಸ್ಟ್‌ ಬಹುಕೋಟಿ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶೀಘ್ರವೇ ಪತ್ರ ಬರೆದು, ಹಗರಣದ ಕುರಿತ ಎಲ್ಲ ದಾಖಲೆಗಳನ್ನು ಅವರ ಕಚೇರಿಗೆ ತಲುಪಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿರುವ ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನನ್ನ ಪತ್ರಕ್ಕೆ ಅವರ ಉತ್ತರ ಹೇಗಿರಲಿದೆ ಎನ್ನುವ ಕುತೂಹಲವಿದೆ" ಎಂದಿದ್ದಾರೆ. 

"ಪ್ರಧಾನಿ ಸಮಯ ಬಂದಾಗಲೆಲ್ಲ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಲೇ ಇದ್ದಾರೆ. 20% ಕಮೀಷನ್ ಬಗ್ಗೆ ಮೊದಲು ಮಾತನಾಡಿದ್ದೆ ಅವರು. ಈಗ ಅವರದೇ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ 100% ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈಗ ಅವರು ಏನು ಹೇಳುತ್ತಾರೆ ಎನ್ನುವುದನ್ನು ನಾನು ಕಾದು ನೋಡುತ್ತೇನೆ" ಎಂದು ಕುಮಾರಸ್ವಾಮಿ ಹೇಳಿದ್ದಾರೆ.

"ವಿಧಾನಸಭೆಯಲ್ಲಿ ದಾಖಲೆಗಳನ್ನಿಟ್ಟು ಮಾತನಾಡಿದರೂ ಬಿಜೆಪಿ ಸರಕಾರಕ್ಕೆ ತನಿಖೆ ಮಾಡಿಸುವ ದೈರ್ಯ ಇಲ್ಲ. ತಾಕತ್ತು, ಧಮ್ ಎಂದೆಲ್ಲ ಮಾತನಾಡುವ ಮುಖ್ಯಮಂತ್ರಿಗಳಿಗೆ ತನಿಖೆಗೆ ಆದೇಶ ನೀಡುವ ದೈರ್ಯ ಇಲ್ಲ" ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಬಿಜೆಪಿ ಭಂಡತನ ಪ್ರದರ್ಶನ ಮಾಡುತ್ತಿದೆ. ದಾಖಲೆಗಳನ್ನು ಇಟ್ಟು ಹಗರಣದ ಬಗ್ಗೆ ಹೇಳಿದರೂ ಸರಕಾರ ವಿತಂಡವಾದ ಮಾಡುತ್ತಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್