ಪ್ರವಾಹ | ಜಿಲ್ಲಾಧಿಕಾರಿಗಳ ಜತೆಗೆ ಬೊಮ್ಮಾಯಿ ಆನ್‌ಲೈನ್‌ ಸಭೆ; ಮಳೆಹಾನಿ ಪರಿಹಾರಕ್ಕೆ ₹200 ಕೋಟಿ

Basavaraj Bommai
  • ತ್ವರಿತವಾಗಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು
  • ಭೂಕುಸಿತ ಸ್ಥಳಗಳನ್ನು ಗುರುತಿಸಿ; ಮುನ್ನೆಚ್ಚರಿಕೆ ವಹಿಸಿ

ರಾಜ್ಯದಲ್ಲಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ವ್ಯವಸ್ಥೆಯನ್ನು ಬಲಪಡಿಸಲು ಇನ್ನೂ ಎರಡು ಹೆಚ್ಚುವರಿ ಎಸ್‌ಡಿಆರ್‌ಎಫ್‌ ತಂಡಗಳನ್ನು ರಚಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು.

ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಚಿವರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಅವರು, ವಿವಿಧ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ, ಭೂಕುಸಿತ, ಬೆಳೆಹಾನಿ ಮೊದಲಾದ ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡರು.

“ರಾಜ್ಯದಲ್ಲಿ ಈಗಾಗಲೇ ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ತಂಡಗಳನ್ನು ನಿಯೋಜಿಸಿದ್ದು, ಜಿಲ್ಲಾಧಿಕಾರಿಗಳು ಈ ತಂಡದೊಂದಿಗೆ ನಿಕಟ ಸಂಪರ್ಕದಲ್ಲಿದ್ದುಕೊಂಡು, ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲು ಸನ್ನದ್ಧರಾಗಿರಬೇಕು” ಎಂದು ಸೂಚಿಸಿದರು.

ಮಳೆ ಹಾನಿ ಪರಿಹಾರಕ್ಕೆ ₹200 ಕೋಟಿ ಬಿಡಗಡೆ

“ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಹಣದ ಕೊರತೆ ಇಲ್ಲ. 21 ಜಿಲ್ಲೆಗಳಿಗೆ ₹200 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಜೀವಹಾನಿ, ಮನೆ ಹಾನಿ ಪ್ರಕರಣಗಳಲ್ಲಿ ತ್ವರಿತವಾಗಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು” ಎಂದು ತಿಳಿಸಿದರು.

“ಅತಿವೃಷ್ಟಿಯಿಂದ ಹಾನಿಗೊಳಗಾಗಿ ಸಂಪರ್ಕ ಕಡಿತವಾಗುವ ರಸ್ತೆ, ಸೇತುವೆಗಳ ದುರಸ್ತಿಯನ್ನು ಕೂಡಲೇ ಕೈಗೊಂಡು, ಸಂಪರ್ಕ ಮರುಸ್ಥಾಪಿಸಬೇಕು. ಜೊತೆಗೆ, ವಿದ್ಯುತ್ ಕಂಬಗಳು, ಪರಿವರ್ತಕಗಳ ಹಾನಿ ಬಗ್ಗೆಯೂ ಎಚ್ಚರಿಕೆ ವಹಿಸಬೇಕು” ಎಂದು ಬೊಮ್ಮಾಯಿ ಸೂಚನೆ ನೀಡಿದರು.

“ಮಳೆಯಿಂದಾಗಿ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ತ್ವರಿತವಾಗಿ ಮರುಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿ, ಎಲ್ಲ ಎಸ್ಕಾಂಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹೆಚ್ಚುವರಿ ವಿದ್ಯುತ್ ಕಂಬಗಳು, ಪರಿವರ್ತಕಗಳನ್ನು ದಾಸ್ತಾನು ಖಾತರಿಪಡಿಸಿಕೊಳ್ಳುಬೇಕು” ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

“ಬೆಳೆಹಾನಿ ಜಂಟಿ ಸಮೀಕ್ಷೆಯನ್ನು ತ್ವರಿತವಾಗಿ ನಡೆಸಿ, ಬೆಳೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಹಾನಿ ಸಮೀಕ್ಷೆ ವಾಸ್ತವಿಕವಾಗಿರಬೇಕು” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಸುದ್ದಿ ಓದಿದ್ದೀರಾ?: ‘ಹರ್ ಘರ್ ತಿರಂಗಾ’ ಅಭಿಯಾನ| ಕೇಂದ್ರವು ಕಾರ್ಪೊರೇಟ್ ಕಂಪನಿಗಳಿಗೆ ಧ್ವಜ ಪೂರೈಸಲು ಅನುಮತಿ ನೀಡಿದ್ಯಾಕೆ?

ದಿಢೀರ್ ಪ್ರವಾಹದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ

“ಗದಗ ಜಿಲ್ಲೆಯ ಬೆಣ್ಣೆ ಹಳ್ಳ, ಹಾವೇರಿ ಜಿಲ್ಲೆಯ ವರದಾ ನದಿ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ದಿಢೀರ್ ಪ್ರವಾಹ ಉಂಟಾಗುವ ಸ್ಥಳಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಅಣೆಕಟ್ಟುಗಳಿಂದ ನೀರು ಬಿಡುಗಡೆ ಮಾಡುವಾಗ ಆಣೆಕಟ್ಟುಗಳ ಕೆಳ ಭಾಗದ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡಬೇಕು. ರಾಜ್ಯದ ಹಲವಾರು ಕೆರೆಗಳು ತುಂಬಿದ್ದು, ಅಪಾಯದ ಅಂಚಿನ ಕೆರೆಗಳು ಒಡೆಯದಂತೆ ಎಚ್ಚರಿಕೆ ವಹಿಸಬೇಕು” ಎಂದು ತಿಳಿಸಿದರು.

ಭೂಕುಸಿತ ಸ್ಥಳಗಳನ್ನು ಗುರುತಿಸಿ: ಎಚ್ಚರಿಕೆ ವಹಿಸಿ

“ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಣ್ಣಿನ ಕುಸಿತ, ಭೂಕುಸಿತದ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಜನರನ್ನು ಕಡ್ಡಾಯವಾಗಿ ಸ್ಥಳಾಂತರಿಸಬೇಕು. ರಸ್ತೆಗಳ ಮೇಲೆ ಭೂಕುಸಿತ ಉಂಟಾದಲ್ಲಿ ತೆರವುಗೊಳಿಸಲು ತಂಡಗಳನ್ನು ದಿನದ 24 ಗಂಟೆಯೂ ಸನ್ನದ್ಧವಾಗಿರಿಸಬೇಕು” ಎಂದು ಸೂಚಿಸಿದರು.

“ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಉತ್ತಮ ಆಹಾರ ಒದಗಿಸಬೇಕು. ಕಾಳಜಿ ಕೇಂದ್ರಕ್ಕೆ ಬಾರದ ನಿರಾಶ್ರಿತರಿಗೆ 'ಡ್ರೈ ರೇಷನ್ ಕಿಟ್' ಒದಗಿಸಿ” ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

ಸಭೆಯಲ್ಲಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಡಾ. ಸಿ ಎನ್ ಅಶ್ವತ್ಥನಾರಾಯಣ, ನಾರಾಯಣಗೌಡ, ಗೋಪಾಲಯ್ಯ, ಆರಗ ಜ್ಞಾನೇಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್