ಬಿಜೆಪಿ ಸಂಸದೀಯ ಮಂಡಳಿ‌ ಸದಸ್ಯರಾಗಿ ಬಿ ಎಸ್ ಯಡಿಯೂರಪ್ಪ | ಮುಖ್ಯಮಂತ್ರಿ ಬೊಮ್ಮಾಯಿ ಹರ್ಷ

Bommai-Yadiyurappa
  • ಕರ್ನಾಟಕ ಬಿಜೆಪಿಗೆ ಆನೆ ಬಲ ಬಂದಂತಾಗಿದೆ ಎಂದ ಸಿಎಂ
  • ಅಭಿನಂದಿಸಿದ ನಳಿನ್‌ಕುಮಾರ್ ಕಟೀಲ್ ಮತ್ತು ಸಿ ಟಿ ರವಿ

ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಬಿ ಎಸ್ ಯಡಿಯೂರಪ್ಪ ಅವರನ್ನು ಹೈಕಮಾಂಡ್ ಪಕ್ಷದ ಸಂಸದೀಯ ಮಂಡಳಿ ಸಭೆಯ ಸದಸ್ಯರನ್ನಾಗಿ ನೇಮಕ ಮಾಡಿರುವುದಕ್ಕೆ ರಾಜ್ಯದ ಪ್ರಮುಖರು ಹರ್ಷ ವ್ಯಕ್ತಪಡಿಸಿದ್ದಾರೆ.

“ನಿಕಟ ಪೂರ್ವ ಮುಖ್ಯಮಂತ್ರಿ ಹಾಗೂ ರೈತ ನಾಯಕ ಬಿ ಎಸ್ ಯಡಿಯೂರಪ್ಪ ಅವರು ಭಾರತೀಯ ಜನತಾ ಪಕ್ಷದ ಸಂಸದೀಯ ಮಂಡಳಿ ಸಭೆಯ ಸದಸ್ಯರಾಗಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

“ಬಿಜೆಪಿ ಪಕ್ಷದೊಳಗಿನ ಅತ್ಯಂತ ಉನ್ನತ ವೇದಿಕೆ ಎನಿಸಿರುವ ಸಂಸದೀಯ ಮಂಡಳಿಗೆ ಯಡಿಯೂರಪ್ಪ ಅವರನ್ನು ನೇಮಕ ಮಾಡುವುದರ ಮೂಲಕ ಅತಿ ದೊಡ್ಡ ಗೌರವದ ಸ್ಥಾನ ನೀಡಿದೆ” ಎಂದು ಬೊಮ್ಮಾಯಿ‌ ಹರ್ಷ ವ್ಯಕ್ತಪಡಿಸಿದರು. 

ಯಡಿಯೂರಪ್ಪ ಅವರ ನೇಮಕಾತಿ ಆದೇಶ ಹೊರ ಬರುತ್ತಿದ್ದಂತೆಯೆ ಅವರಿಗೆ ಬೊಮ್ಮಾಯಿ ಕರೆ ಮಾಡಿ ಶುಭ ಕೋರಿದ್ದಾರೆ. “ತಾವು ಈ ಹುದ್ದೆಗೆ ಏರಿರುವುದರಿಂದ ಕರ್ನಾಟಕ ಬಿಜೆಪಿಗೆ ಆನೆ ಬಲ ಬಂದಂತಾಗಿದೆ. ಕರ್ನಾಟಕ‌ ಬಿಜೆಪಿಗೆ ಅಭೂತಪೂರ್ವ ಬೆಂಬಲ ಸಿಕ್ಕಂತಾಗಿದೆ. 2023ರಲ್ಲಿ ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ನಿಶ್ಚಿತ. ತಮ್ಮನ್ನು ಈ ಉನ್ನತ  ಹುದ್ದೆಗೆ ನೇಮಕ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಹಾಗೂ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ದಾ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ” ಎಂದು ಅವರು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸಂತಸ

ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯಲ್ಲಿ ರಾಜ್ಯದ ಇಬ್ಬರಿಗೆ ಸ್ಥಾನ ನೀಡಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ಸ್ವಾಗತಿಸಿದ್ದಾರೆ. 

“ರಾಜ್ಯದ ಪಕ್ಷದ ಹಿರಿಯರು, ಮಾರ್ಗದರ್ಶಕರು ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರನ್ನು ಸಂಸದೀಯ ಮಂಡಳಿಯಲ್ಲಿ ಸೇರಿಸಿರುವುದು ಮಹತ್ವದ ಕ್ರಮ” ಎಂದು ಅವರು ತಿಳಿಸಿದ್ದಾರೆ.

“ದೇಶದೆಲ್ಲೆಡೆ ಪಕ್ಷದ ಸಂಘಟನೆ ಮತ್ತು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ದೃಷ್ಟಿಯಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಈ ನಿರ್ಧಾರ ಮಾಡಿದ್ದು, ಅವರಿಗೆ ಪಕ್ಷದ ರಾಜ್ಯ ಘಟಕದ ಪರವಾಗಿ ಹಾಗೂ ವೈಯಕ್ತಿಕವಾಗಿ ಧನ್ಯವಾದ ಸಮರ್ಪಿಸುತ್ತೇನೆ" ಎಂದು ಕಟೀಲ್ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ರಾಜ್ಯ ರಾಜಕೀಯ ಆಟದಲ್ಲಿ ಇನ್ನೂ ನಾನಿದ್ದೇನೆ ಎಂಬುದನ್ನು ಬಿಜೆಪಿಗೆ ಎಚ್ಚರಿಸಿದರೇ ಯಡಿಯೂರಪ್ಪ?

ಉಭಯ ನಾಯಕರಿಗೆ ಸಿ ಟಿ ರವಿ ಅಭಿನಂದನೆ

ನಮ್ಮ ಹಿರಿಯ ನಾಯಕ, ಅಪ್ರತಿಮ ಸಂಘಟಕ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಿ ಎಸ್‌ ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಬಿ ಎಲ್‌ ಸಂತೋಷ್‌ ಅವರನ್ನು ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸಿ ಪಕ್ಷವನ್ನು ಚುನಾವಣೆಗೆ ಸಿದ್ಧಪಡಿಸುವ ಮಹತ್ಕಾರ್ಯ ಯಡಿಯೂರಪ್ಪನಂಥ ಧುರೀಣರ ಹೆಗಲಿಗೇರಿರುವುದು ರಾಜ್ಯದ ಲಕ್ಷಾಂತರ ಕಾರ್ಯಕರ್ತರಲ್ಲಿ ಹೊಸ ಹುರುಪು ತಂದಿದೆ” ಎಂದು ವಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಶ್ರಮವರಿಯದ ಸೇನಾನಿಯಾಗಿ ಪಕ್ಷಕ್ಕಾಗಿ ಅಂದಿಗೂ-ಇಂದಿಗೂ ಸೇವೆ ಸಲ್ಲಿಸುತ್ತಿರುವ ಯಡಿಯೂರಪ್ಪನವರ ನಾಯಕತ್ವ ಗುಣ ಹಾಗೂ ಅನುಭವ ಪಕ್ಷದ ಪಾಲಿಗೆ ಅತಿದೊಡ್ಡ ಶಕ್ತಿಯಾಗಿ ಪರಿಣಮಿಸಲಿದೆ. ಸಂಸದೀಯ ಮಂಡಳಿಗೆ ಬಿ ಎಸ್‌ ಯಡಿಯೂರಪ್ಪ ಹಾಗೂ ಬಿ ಎಲ್‌ ಸಂತೋಷ್‌ ನೇಮಕವಾಗಿರುವ ವಿಚಾರ ವೈಯಕ್ತಿಕವಾಗಿ ನನಗೆ ಅತ್ಯಂತ ಖುಷಿ ನೀಡಿದ್ದು, ಅವರಿಂದ ಮಾರ್ಗದರ್ಶನ ಪಡೆಯಲು ಉತ್ಸುಕನಾಗಿ ಎದುರು ನೋಡುತ್ತಿದ್ದೇನೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್