ಕರ್ನಾಟಕ ಚುನಾವಣಾ ತಂತ್ರ| ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯಲ್ಲಿ ಬಿಎಸ್‌ ವೈಗೆ ಮಣೆ

  • ಚುನಾವಣಾ ತಂತ್ರಗಾರಿಕೆಯ ಭಾಗವಾಗಿ ಪ್ರಭಾವಿ ನಾಯಕ ಬಿಎಸ್‌ ವೈ ಆಯ್ಕೆ
  • ಸಿದ್ದರಾಮಯ್ಯ ಪರ ಜನಬೆಂಬಲಕ್ಕೆ ಪ್ರತಿಯಾಗಿ ಯಡಿಯೂರಪ್ಪ ಮುಂಚೂಣಿಗೆ

ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್‌ ಸಂತೋಷ್‌ ಅವರಿಗೆ ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯತ್ವ ಲಭ್ಯವಾಗಿದೆ.

ನೂತನವಾಗಿ ರಚನೆಯಾಗಿರುವ ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯಲ್ಲಿ ಜೆಪಿ ನಡ್ಡಾ, ನರೇಂದ್ರ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ, ಕೆ. ಲಕ್ಷ್ಮಣ್, ಇಕ್ಬಾಲ್ ಸಿಂಗ್ ಲಾಲ್ ಪುರ, ಸುಧಾ ಯಾದವ್, ಸತ್ಯ ನಾರಾಯಣ್ ಜತಿಯಾ ಮತ್ತು ಸರ್ಬಾನಂದ ಸೋನಾವಾಲ್ ಅವರುಗಳ ಜೊತೆಗೆ ಯಡಿಯೂರಪ್ಪ ಹಾಗೂ ಬಿ ಎಲ್ ಸಂತೋಷ್ ಇರಲಿದ್ದಾರೆ.

ಯಡಿಯೂರಪ್ಪ  ಹಾಗೂ ಬಿ ಎಲ್ ಸಂತೋಷ್‌ ಅವರಿಗೆ ಸ್ಥಾನ ನೀಡುವ ಸಲುವಾಗಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಹಾಗೂ ಶಿವರಾಜ್‌ ಚೌಹಾಣ್‌ ಅವರನ್ನು ಕೈಬಿಡಲಾಗಿದೆ. 

ಮುಂಬರುವ ಕರ್ನಾಟಕ ಚುನಾವಣೆ ಗಮನದಲ್ಲಿಟ್ಟುಕೊಂಡು ಯಡಿಯೂರಪ್ಪನವರಿಗೆ ಈ ಜವಾಬ್ದಾರಿ ನೀಡಲಾಗಿದೆ ಎನ್ನುವುದು ರಾಜಕೀಯ ಪಡಸಾಲೆ ಲೆಕ್ಕಾಚಾರ. ಅಲ್ಲದೆ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಬಲವರ್ಧನೆಯಾಗುತ್ತಿರುವ ಬಗ್ಗೆ ಬಿಜೆಪಿ ಆತಂಕಗೊಂಡಿದೆ. ದಾವಣಗೆರೆಯ ಸಿದ್ದರಾಮೋತ್ಸವದಲ್ಲಿ ಹರಿದು ಬಂದ ಜನಸಾಗರ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ಬೆಂಗಳೂರಿನಲ್ಲಿ ಡಿ ಕೆ ಶಿವಕುಮಾರ್‌ ನೇತೃತ್ವದಲ್ಲಿ ಕೆಪಿಸಿಸಿ ಆಯೋಜಿಸಿದ್ದ ಸ್ವಾತಂತ್ರದ ನಡಿಗೆ ಜಾಥಾಕ್ಕೆ ಅನಿರೀಕ್ಷಿತ ಪ್ರಮಾಣದಲ್ಲಿ ಜನ ಸೇರಿದ ಬೆಳವಣಿಗೆಗಳು ಬಿಜೆಪಿ ಹೈಕಮಾಂಡ್‌ ಮಟ್ಟದಲ್ಲಿ ಕರ್ನಾಟಕದ ಬಿಜೆಪಿ ಭವಿಷ್ಯದ ಬಗ್ಗೆ ಚರ್ಚೆಗೆ ಗ್ರಾಸವಾಗಿವೆ. 

ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಪ್ರತಿಯಾಗಿ ಯಡಿಯೂರಪ್ಪ ಅವರಂಥ ದೊಡ್ಡ ಸಮುದಾಯ ಬಲದ ನಾಯಕರನ್ನು ನಿರ್ಲಕ್ಷಿಸುವ ಬದಲಾಗಿ ಅವರಿಗೆ ಘನತೆಯ ಸ್ಥಾನಮಾನ ನೀಡಿ ಅವರನ್ನು ಮುಂದಿಟ್ಟುಕೊಂಡೇ ಚುನಾವಣೆಗೆ ಹೋಗುವುದು ಸುರಕ್ಷಿತ ಎಂಬ ತೀರ್ಮಾನಕ್ಕೆ ಹೈಕಮಾಂಡ್‌ ಬಂದಿದೆ. ಆ ಹಿನ್ನೆಲೆಯಲ್ಲಿಯೇ ಇದೀಗ ಯಡಿಯೂರಪ್ಪ ಅವರನ್ನು ಮತ್ತೆ ಮುನ್ನೆಲೆಗೆ ತರುವ ತಂತ್ರದ ಭಾಗವಾಗಿ ಅವರನ್ನು ಸಂಸದೀಯ ಮಂಡಳಿಗೆ ಬಡ್ತಿ ನೀಡಲಾಗಿದೆ ಎಂಬ ರಾಜಕೀಯ ವಿಶ್ಲೇಷಣೆಗಳೂ ಇವೆ.

ಅಂದಹಾಗೆ ಬಿಜೆಪಿಯಲ್ಲಿನ ನೀತಿ ನಿಯಮ ಮತ್ತು ಚುನಾವಣಾ ವಿಷಯಗಳ ಕುರಿತ ತೀರ್ಮಾನ ಕೈಗೊಳ್ಳುವ ಉನ್ನತ ಸಮಿತಿಯೇ ಬಿಜೆಪಿ ಸಂಸದೀಯ ಮಂಡಳಿ. ಈ ಹಿಂದೆ ಕರ್ನಾಟಕದಿಂದ ದಿ. ಅನಂತ ಕುಮಾರ್ ಸಂಸದೀಯ ಮಂಡಳಿಗೆ ಸದಸ್ಯರಾಗಿದ್ದರು.

ಈ ಸುದ್ದಿ ಓದಿದ್ದೀರಾ? : ರಾಜ್ಯ ಪ್ರವಾಸ ಮೂಲಕ ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್ಸಿನತ್ತ ಎಳೆದು ತರುವರೇ ಎಂ ಬಿ ಪಾಟೀಲ್‌?

ಇದೀಗ ಬಿ ಎಲ್‌ ಸಂತೋಷ್‌ ಹಾಗೂ ಯಡಿಯೂರಪ್ಪನವರಿಗೆ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿರುವುದಕ್ಕೆ ಬಿಜೆಪಿ ರಾಜ್ಯ ಘಟಕ ಹರ್ಷ ವ್ಯಕ್ತಪಡಿಸಿದೆ. ಪಕ್ಷಾಧ್ಯಕ್ಷರು, ಮುಖ್ಯಮಂತ್ರಿಗಳನ್ನೂ ಒಳಗೊಂಡಂತೆ ಇತರ ನಾಯಕರು ಹೊಸ ಸದಸ್ಯರನ್ನು ಅಭಿನಂದಿಸಿದ್ದು ದೇಶಾದ್ಯಂತ ಪಕ್ಷ ಸಂಘಟನೆಗೆ ಒತ್ತುಕೊಡಲು ಸಹಕಾರವಾಗಲಿದೆ ಎಂದು ತಿಳಿಸಿದೆ.

ಇದರ ನಡುವೆ ತಮಗೆ ಉನ್ನತ ಸ್ಥಾನ ನೀಡಿದ್ದಕ್ಕಾಗಿ ಯಡಿಯೂರಪ್ಪ ಅವರು ಪ್ರಧಾನಿ ಮೋದಿಯವರಿಗೆ ಕರೆ ಮಾಡಿ ಧನ್ಯವಾದ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್