ಈದಿನ ಸಂದರ್ಶನ| ಎಸಿಬಿ ರದ್ದು: ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಸಿಕ್ಕ ನ್ಯಾಯ: ಎಸ್‌ ಆರ್‌ ಹಿರೇಮಠ್‌

ಸಾರ್ವಜನಿಕ ಜೀವನ ಮತ್ತು ಆಡಳಿತ ವ್ಯವಸ್ಥೆಯ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ಮರು ಸ್ಥಾಪಿಸುವ ತಮ್ಮ ಪ್ರಯತ್ನಗಳಿಗೆ ನ್ಯಾಯಾಲಯ ಬೆನ್ನಿಗೆ ನಿಂತಿದೆ ಎಂಬ ಸಮಾಧಾನ ಆ ಹೋರಾಟಗಾರರದ್ದು. ಅಂತಹ ಹೋರಾಟದ ಮುಂಚೂಣಿಯಲ್ಲಿರುವ ಎಸ್‌ ಆರ್‌ ಹಿರೇಮಠ್‌ ಅವರು ಎಸಿಬಿ ರದ್ದತಿ ಕುರಿತು ಹೈಕೋರ್ಟ್‌ ಆದೇಶದ ಕುರಿತು ಮಾತನಾಡಿದ್ದಾರೆ. ಅವರ ಜೊತೆಗಿನ ಆ ಮಾತುಕತೆಯ ಕಿರುಸಂದರ್ಶನ ಇಲ್ಲಿದೆ..

ರಾಜ್ಯ ‍ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್‌ ನೀಡಿರುವ ಆದೇಶ ಭ್ರಷ್ಟಾಚಾರದ ವಿರುದ್ಧ ಹೋರಾಟಗಾರರು ಮತ್ತು ಸಾರ್ವಜನಿಕರಲ್ಲಿ ಹೊಸ ಭರವಸೆ ಮೂಡಿಸಿದೆ. ವರ್ಷಗಳ ಕಾಲ ಬಹುತೇಕ ನಿಷ್ಕ್ರಿಯವಾಗಿದ್ದ ಲೋಕಾಯುಕ್ತಕ್ಕೂ ನ್ಯಾಯಾಲಯದ ಈ ಆದೇಶ ಹೊಸ ಶಕ್ತಿ ತುಂಬಿದೆ.

ಅದರಲ್ಲೂ ಮುಖ್ಯವಾಗಿ ಲೋಕಾಯುಕ್ತವನ್ನು ಬಲಹೀನಗೊಳಿಸಿ, ಅದಕ್ಕೆ ಪರ್ಯಾಯವಾಗಿ ಎಸಿಬಿ ಎಂಬ ದುರ್ಬಲ ಕಣ್ಗಾವಲು ವ್ಯವಸ್ಥೆಯನ್ನು ಸೃಷ್ಟಿಸಿದ ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರ ಪರ ನಿಲುವಿನ ವಿರುದ್ಧ ವರ್ಷಗಳ ಕಾಲ ಹೋರಾಟ ನಡೆಸಿದ್ದ ಹಲವು ಜನಪರ ಹೋರಾಟಗಾರರಿಗೆ ನ್ಯಾಯಾಲಯದ ಈ ತೀರ್ಪು ನೆಮ್ಮದಿ ತಂದಿದೆ. ಸಾರ್ವಜನಿಕ ಜೀವನ ಮತ್ತು ಆಡಳಿತ ವ್ಯವಸ್ಥೆಯ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ಮರು ಸ್ಥಾಪಿಸುವ ತಮ್ಮ ಪ್ರಯತ್ನಗಳಿಗೆ ನ್ಯಾಯಾಲಯ ಬೆನ್ನಿಗೆ ನಿಂತಿದೆ ಎಂಬ ಸಮಾಧಾನ ಆ ಹೋರಾಟಗಾರರದ್ದು.

Eedina App

ಹಾಗೆ, ಎಸಿಬಿ ಮತ್ತದರ ‍ಭ್ರಷ್ಟಾಚಾರದ ಬಗ್ಗೆ ಸಮರ ಸಾರಿದ ಪ್ರಮುಖರಲ್ಲಿ ಸಾಮಾಜಿಕ ಹೋರಾಟಗಾರ ಎಸ್‌ ಆರ್‌ ಹಿರೇಮಠ್‌ ಒಬ್ಬರು.

ಮರಳಿ ಲೋಕಾಯುಕ್ತ ಬಲಪಡಿಸುವುದು ಮತ್ತು ಎಸಿಬಿ ರದ್ದತಿಯ ಹೈಕೋರ್ಟ್ ನಿರ್ಧಾರದ ಕುರಿತು ಈದಿನ.ಕಾಮ್‌ ನೊಂದಿಗೆ ಹಿರೇಮಠ್‌ ಅವರು ಮಾತನಾಡಿದ್ದಾರೆ. ಅವರೊಂದಿಗಿನ ಆ ಚುಟುಕು ಸಂದರ್ಶನದ ಪೂರ್ಣಪಾಠ ಇಲ್ಲಿದೆ.

AV Eye Hospital ad

ಎಸಿಬಿ ರದ್ದು ಆದೇಶದ ಬಗ್ಗೆ ನಿಮ್ಮ ಮೊದಲ ಪ್ರತಿಕ್ರಿಯೆ ಏನು?

ಕರ್ನಾಟಕ ಸರ್ಕಾರ ಮಾಡಬಾರದ ಕೆಲಸ ಮಾಡಿ ಲೋಕಾಯುಕ್ತವನ್ನು ಹಿಂದಕ್ಕೆ ಒಯ್ದು ಎಸಿಬಿ ರಚನೆ ಮಾಡಿ ಮಹಾಪರಾಧ ಮಾಡಿದ್ದರು. ಆದರೆ ಇದನ್ನು ಈಗ ಕರ್ನಾಟಕ ಹೈಕೋರ್ಟ್‌ ರದ್ದು ಮಾಡಿ ಮರಳಿ ಲೋಕಾಯುಕ್ತಕ್ಕೆ ಶಕ್ತಿ ತುಂಬಲು ಅನುವು ಮಾಡಿಕೊಟ್ಟಿರುವುದು ಸ್ವಾಗತಾರ್ಹ. ಹಾಗೆಯೇ ಇದೊಂದು ಐತಿಹಾಸಿಕ ತೀರ್ಪು ಕೂಡ. ಹೀಗಾಗಿ ನಾವೆಲ್ಲರೂ ಸ್ವಾಗತಿಸಬಹುದಾದ ನಿರ್ಧಾರ ಇದು.

ಎಸಿಬಿ ರದ್ದು ಕೋರಿ ನೀವು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಕಾರಣಗಳೇನು?

ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ನೀಡಿದ ವರದಿ ಹಿನ್ನೆಲೆಯಲ್ಲಿ ಪ್ರಕರಣದ ಆರೋಪಿಗಳಾದ ಗಾಲಿ ಜನಾರ್ಧನ ರೆಡ್ಡಿ ಸಹೋದರರು ಜೈಲಿಗೆ ಹೋಗುವಂತಾಗಿತ್ತು. ಆದರೆ ಅದಾದ ಬಳಿಕ ಲೋಕಾಯುಕ್ತರಾದ ಭಾಸ್ಕರ್‌ ರಾವ್, ಅವರ ಪುತ್ರನ ಅಕ್ರಮಕ್ಕೆ ಕೈ ಜೋಡಿಸಿ ಅಧಿಕಾರ ಕಳೆದುಕೊ‍ಳ್ಳುವಂತಾಗಿದ್ದು, ಬಳ್ಳಾರಿ ಪಾದಯಾತ್ರೆ ಮೂಲಕ ಅಕ್ರಮ ಗಣಿಗಾರಿಕೆಯ ಭ್ರಷ್ಟಾಚಾರ ತೊಲಗಿಸಲು ಪಣ ತೊಟ್ಟಿದ್ದ ಸಿದ್ದರಾಮಯ್ಯ, ಮುಖ್ಯಮಂತ್ರಿ ಆದ ಬಳಿಕ ಅದಕ್ಕೆ ವಿರುದ್ಧವಾಗಿ ನಡೆದುಕೊಂಡು ಎಸಿಬಿ ರಚನೆ ಮಾಡಿದರು. ನಂತರ ಅದರ ನೆರಳಿನಲ್ಲಿ ತಮ್ಮ ನಿಷ್ಠ ಭ್ರಷ್ಟ ಅಧಿಕಾರಿಗಳಿಗೆ, ರಾಜಕಾರಣಿಗಳನ್ನು ಸಂರಕ್ಷಣೆ ಮಾಡುವ ವ್ಯವಸ್ಥೆಯಾಗಿ ಎಸಿಬಿಯನ್ನು ನೋಡಿಕೊಂಡರು. ಇವೆಲ್ಲದರ ಪರಿಣಾಮ, ನ್ಯಾಯಕ್ಕಾಗಿ ನಾವು ಹೋರಾಟ ಮಾಡಲೇಬೇಕಾಯ್ತು.

ಎಸಿಬಿಯ ಕಾರ್ಯಶೈಲಿ ಬಗ್ಗೆ ನಿಮಗೆ ಅಸಮಾಧಾನವುಂಟಾಗಲು ಕಾರಣಗಳೇನು?

ಭ್ರಷ್ಟಾಚಾರ ನಿಯಂತ್ರಣಕ್ಕೆ ಮೈಸೂರು ಸಂಸ್ಥಾನವೇ ಮೊದಲು ಎಸಿಬಿಯಂತಹ ಪ್ರಯತ್ನ ಮಾಡಿತ್ತು. ಎಸಿಬಿ ರೂಪದ ಸಂಸ್ಥೆಗಳಿಗೆ ಶಕ್ತಿ ಸಾಲಾದಾದಾಗ ಮುಂದಿನ ಹೆಜ್ಜೆಯಾಗಿ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು, ಭ್ರಷ್ಟಾಚಾರ ತೊಡೆದುಹಾಕಲು ರಾಷ್ಟ್ರ ಮಟ್ಟದಲ್ಲಿ ಲೋಕಪಾಲ ಹಾಗೂ ರಾಜ್ಯಗಳಲ್ಲಿ ಲೋಕಾಯುಕ್ತ ಜಾರಿಗೆ ಶಿಫಾರಸು ಮಾಡಿದ್ದರು.

1970ರ ದಶಕದ ಜೆಪಿ ಚಳುವಳಿ ಫಲವಾಗಿ ಬಳಿಕ ಅಧಿಕಾರಕ್ಕೆ ಬಂದ ಜನತಾ ಪರಿವಾರದ ಸರ್ಕಾರ, ಮೊದಲ ಬಾರಿ ಲೋಕಾಯುಕ್ತ ಜಾರಿಗೆ ತಂದಿತ್ತು. ಹೀಗೆ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಲೋಕಾಯುಕ್ತ ವ್ಯವಸ್ಥೆ ಜಾರಿಗೆ ಬಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಅದರಂತೆ ರೂಪ ಬದಲಾಯಿಸಿಕೊಂಡ ಈಗಿನ ಎಸಿಬಿಯೂ ತನ್ನ ಕರ್ತವ್ಯ ಮರೆತು ನಿಂತಿದ್ದೇ ಅದರ ಬಗ್ಗೆ ಅಸಮಾಧಾನ ಮೂಡಲು ಕಾರಣವಾಯ್ತು. ಜೊತೆಗೆ ಆಡಳಿತ ಸರ್ಕಾರಗಳ ಕೈಗೊಂಬೆಯಂತೆ ಕೆಲಸ ಮಾಡಲಾರಂಭಿಸಿದ್ದೂ ಅದರ ಹೆಸರು ಕೆಡಲು ಮತ್ತೊಂದು ನೆಪವಾಯ್ತು.

ಲೋಕಾಯುಕ್ತದ ಬಗ್ಗೆ ನಿಮಗೆ ಇದ್ದ ನಂಬಿಕೆಗೆ ಆಧಾರವೇನು?

ಮಾನ್ಯ ಸಂತೋಷ್‌ ಹೆಗ್ಡೆಯವರ ಕಾರ್ಯವೈಖರಿ, ಲೋಕಾಯುಕ್ತರಾಗಿ ಅವರು ಮಾಡಿದ ಕೆಲಸ ಮತ್ತು ಸಂ‍ಸ್ಥೆ ಘನತೆ ಎತ್ತಿಹಿಡಿಯಲು ಅವರು ಬೇಧಿಸಿದ ಪ್ರಕರಣಗಳೇ ನಮ್ಮೆಲ್ಲರಿಗೂ ಆ ಸಂ‍ಸ್ಥೆ ಮೇಲಿನ ಭರವಸೆ ಇಮ್ಮಡಿಸಲು ಕಾರಣ. ರಾಜ್ಯದಲ್ಲಿದ್ದ ಅಕ್ರಮ ಗಣಿಗಾರಿಕೆಯ ಮೂಲ ಬೇರುಗಳನ್ನು ಅಲುಗಿಸಿ ತೋರಿಸಿದವರು ಸಂತೋಷ್‌ ಹೆಗ್ಡೆ. ಆ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಂಬ ಸಂಸ್ಥೆಯ ಶಕ್ತಿ ಮತ್ತು ಸಾಧ್ಯತೆಗಳನ್ನು ಕಂಡುಕೊಂಡ ನಾವು, ಅಂತಹ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಅದರ ಬದಲಾಗಿ ಎಸಿಬಿಯನ್ನು ತಂದ ಅಂದಿನ ಸರ್ಕಾರದ ನಡೆ ಕಂಡು ದಿಗ್ಭ್ರಮೆಗೊಳಗಾಗಿದ್ದೆವು. 

ಎಸಿಬಿಯಲ್ಲಿ ಸರ್ಕಾರದ ನೇರ ಹಸ್ತಕ್ಷೇಪಕ್ಕೆ ಅವಕಾಶವಿದೆ ಎನ್ನುವುದು ನಿಮ್ಮ ಮುಖ್ಯ ಆಕ್ಷೇಪಣೆಯೋ? ಅಥವಾ ಬೇರೆ ಏನಾದರೂ ಕಾರಣಗಳಿವೆಯೋ?

ನಮ್ಮ ವ್ಯವಸ್ಥೆಯೊಳಗೆ ಮಂತ್ರಿಗಳು, ಅಧಿಕಾರಿಗಳೇ ‍ಭ್ರಷ್ಟರು. ಹಣ ಮಾಡುವುದೊಂದೇ ಭ್ರಷ್ಟಾಚಾರವಲ್ಲ, ಅಧಿಕಾರ ದುರುಪಯೋಗ ಮಾಡಿಕೊಳ್ಳುವುದೂ ಇದರ ಒಂದು ಭಾಗ. ಹೀಗಿದ್ದಾಗ ಇವರುಗಳು ಈ ಸಂಸ್ಥೆಯನ್ನು ಚೆನ್ನಾಗಿ ಇಡಲು ಹೇಗೆ ಬಿಡುತ್ತಾರೆ. ಏಕೆಂದರೆ ಲೋಕಾಯುಕ್ತ ಎನ್ನುವ ಸಂಸ್ಥೆಯನ್ನು ನಿಧಾನವಾಗಿ ಶಕ್ತಿಹೀನವನ್ನಾಗಿಸಿದರು. ಲೋಕಾಯುಕ್ತರಾಗಲು ಇದ್ದ ಅರ್ಹತಾ ಮಾನದಂಡವನ್ನು ಬದಲಾಯಿಸಲು ಅದಕ್ಕೆ ತಿದ್ದುಪಡಿ ತಂದು ಅದನ್ನು ಕಳೆಗುಂದಿಸಿದವರು ಸಿದ್ದರಾಮಯ್ಯ. ವಿಶ್ವನಾಥ್‌ ಶೆಟ್ಟಿ ಅವರ ಆಡಳಿತ ಅವಧಿಯೇ ಇದಕ್ಕೆ ನೇರ ಸಾಕ್ಷಿ.

ಈಗಿನ ಬಿಎಸ್‌ ಪಾಟೀಲರೂ ಕೂಡ ಅದೇ ಮಾದರಿಯವರು. ಭ್ರಷ್ಟರನ್ನು ರಕ್ಷಣೆ ಮಾಡಲು ತಂದ ಹೊಸ ನೀತಿ ಹಿನ್ನೆಲೆಯಲ್ಲಿ ಲೋಕಾಯುಕ್ತ ಸತ್ವ ಕಳೆದುಕೊಂಡು ಎಸಿಬಿ ರಚನೆಯಾಯ್ತು. ಅಂದರೆ ಸಶಕ್ತ ಸಂಸ್ಥೆಯೊಂದನ್ನು ಅದರ ಅಧಿಕಾರ ಕಾರ್ಯವ್ಯಾಪ್ತಿಯನ್ನು ಕುಗ್ಗಿಸುವಂತೆ ಮಾಡಿದ್ದರ ಫಲವಾಗಿ ಹುಟ್ಟಿದ್ದೇ ಈ ಎಸಿಬಿ. ಇದರಿಂದ ಹೆಚಿನದೇನನ್ನು ನಾವು ನಿರೀಕ್ಷಿಸಬಹುದು ಹೇಳಿ.. ಕೆ.ಎಲ್‌ ಮಂಜುನಾಥ್‌ ಅವರ ಪ್ರಕರಣವೂ ಇಲ್ಲಿ ಉಲ್ಲೇಕಾರ್ಹವೇ.

ಎಸಿಬಿ ಬಗ್ಗೆ ನ್ಯಾಯಮೂರ್ತಿ ಸಂದೇಶ್ ಎತ್ತಿರುವ ಪ್ರಶ್ನೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ನ್ಯಾಯಮೂರ್ತಿ ಸಂದೇಶ್‌ ಅವರ ಹೇಳಿಕೆಯಲ್ಲಿ ಏನೂ ದೋಷವಿಲ್ಲ. ಪೊಲೀಸ್‌ ಅಧಿಕಾರಿ ಅಲೋಕ್ ಕುಮಾರ್ ಅವರ ನಾಲ್ಕು ಕೋಟಿ ಹಣ ಹೊಂದಾಣಿಕೆ ಪ್ರಕರಣ, ಅದರ ತನಿಖೆ ವಿಚಾರ ಏನಾಯ್ತು ಎನ್ನುವುದನ್ನು ನೋಡಿದ್ದೇವಲ್ಲಾ. ಇದೇ ಎಸಿಬಿಯ ಕಳಂಕಿತ ಕಾರ್ಯ ವೈಖರಿಗೆ ಹಿಡಿದ ಕನ್ನಡಿ ಎನ್ನುವುದು ನನ್ನ ಅಭಿಪ್ರಾಯ.

ಲೋಕಾಯುಕ್ತದಲ್ಲಿ (ಈ ಹಿಂದಿನ ಲೋಕಾಯುಕ್ತ) ಎಷ್ಟು ಜನರಿಗೆ ಶಿಕ್ಷೆಯಾಗಿದೆ ಎನ್ನುವುದನ್ನು ನೋಡಿದರೆ ಅದು ಬಹಳ ಕಡಿಮೆ ಅನ್ನಿಸುವುದಿಲ್ಲವಾ?       

ಲೋಕಾಯುಕ್ತದಿಂದ ಆದ ಶಿಕ್ಷೆ ಪ್ರಮಾಣ ಕಡಿಮೆಯೇ. ಇದು ನಿಜವೇ. ಪ್ರಾಮಾಣಿಕ ಕೆಲಸ ಮಾಡಲು ಬಿಡದಿದ್ದಾಗ ಅಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಾಗಲು ಹೇಗೆ ಸಾಧ್ಯ ನೀವೇ ಹೇಳಿ.

ಲೋಕಾಯುಕ್ತವನ್ನು ಬಲಪಡಿಸುವುದು ಅಂದರೆ ಏನು ಮತ್ತು ಹೇಗೆ?

ಮಾನ್ಯ ಮಾಜಿ ಲೋಕಾಯುಕ್ತರಾದ ಸಂತೋಷ್‌ ಹೆಗ್ಡೆಯವರು ಈ ಹಿಂದೆ ಲೋಕಾಯುಕ್ತ ಬಲಪಡಿಸಲು ನೀಡಿದ್ದ ವರದಿಯ ಶಿಫಾರಸುಗಳ ನೇರ ಅನುಷ್ಠಾನವೇ ಇದನ್ನು ಬಲಪಡಿಸಲು ಇರುವ ಏಕೈಕ ಮಾರ್ಗ.

ಲೋಕಾಯುಕ್ತ ವ್ಯವಸ್ಥೆ ಮೊದಲಿದ್ದ ಸ್ಥಿತಿಗೆ ಬಂದರೆ ಎಲ್ಲವೂ ಸರಿಯಾಗುತ್ತಾ?

ಸಂತೋಷ್ ಹೆಗಡೆಯವರ ಅಧಿಕಾರಾವಧಿ ಮುಗಿದ ಬಳಿಕ, ಬಂದವರು ಇದನ್ನು ಸರಿಯಾಗಿ ನೋಡಿಕೊಂಡಿಲ್ಲ. ಕೆಪಿಎಸ್‌ ಸಿಗೆ ಬಂದ ಭ್ರಷ್ಟಾಚಾರದ ಪ್ರತಿರೂಪ ಶ್ಯಾಮ್‌ ಭಟ್, ಮಾಲಿನ್ಯ ನಿಯಂತ್ರಣ ಮಂಡಳಿ ಉಸ್ತುವಾರಿ ಹೊತ್ತ ಲಕ್ಷಣ್‌, ಹೀಗೆ ಸಾಲುಸಾಲು ಕಳಂಕಿತರನ್ನೇ ಅಧಿಕಾರಕ್ಕೆ ತಂದವರು ಸಿದ್ದರಾಮಯ್ಯ. ಹೀಗಿರುವಾಗ ಎಸಿಬಿಯಂತಹ ಸಂಸ್ಥೆಗಳು ಪಕ್ಷಪಾತವಿಲ್ಲದೆ ಕೆಲಸ ಮಾಡಲು ಸಾಧ್ಯವೇ? ಈ ಕಾರಣಕ್ಕಾಗಿ  ಪ್ರಜಾಪ್ರಭುತ್ವದ ಮಾಲೀಕರಾದ ನಾವುಗಳು ಪ್ರತಿ ಸಂಸ್ಥೆಗಳನ್ನು ಅದರ ಮುಕ್ತ ಕಾರ್ಯ ಮಾಡಲು ಬಿಡುವಂತೆ ನೋಡಿಕೊಳ್ಳಬೇಕು. ನಾ ಖಾವೂಂಗಾ ನಾ ಖಾನೇ ದೂಂಗಾ ಎನ್ನುವ ನಡೆತೆಯಂತೆ ಪರ್ಸೆಂಟೇಜ್‌ ರಾಜಕಾರಣಕ್ಕೆ ಅವಕಾಶ ಕೊಡದೆ ಕೆಲಸ ಮಾಡಿಸಬೇಕು. ಆಗ ಲೋಕಾಯುಕ್ತ ಸಂಸ್ಥೇಗೂ ಬೆಲೆ ಬಂದೇ ಬರುತ್ತದೆ.

ಎಲ್ಲ ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಜನರಲ್ಲಿ ಅನುಮಾನ, ಶಂಕೆ ಹುಟ್ಟಿಕೊಳ್ಳುತ್ತಿರುವ ಮತ್ತು ವ್ಯವಸ್ಥೆಯ ಮೇಲೆ ಜನ ಭರವಸೆ ಕಳೆದುಕೊಳ್ಳುತ್ತಿರುವ ಕಾಲದಲ್ಲಿ ಲೋಕಾಯುಕ್ತದಿಂದ ನ್ಯಾಯ ಸಿಗಬಹುದು ಎನ್ನುವ ನಿರೀಕ್ಷೆ ಸರಿಯೆ?

ಯಾವುದೇ ಸಂಸ್ಥೆಯ ಬಗ್ಗೆ ಅನುಮಾನ ಇರುವುದು ಸಹಜ. ಆದರೆ ಜನ ಅವುಗಳ ನಿಜ ಸ್ವರೂಪ ಅರ್ಥ ಮಾಡಿಕೊಂಡು ಅದರ ಅವಶ್ಯಕತೆ ಏನಿದೆ ಎಂದು ಅರಿತು, ನಿರ್ಭಿಡೆಯಿಂದ ಸರಿಯಾದ ಸಾಧನ ಬಳಸಿ ಉತ್ತರದಾಯಿ (ಅಕೌಂಟೆಬಲ್) ಆಗಿ ಜನಸೇವೆ ಮಾಡುವಂತೆ ಮಾಡಿದ್ರೆ ಎಲ್ಲವೂ ಸಾಧ್ಯ. ಸರ್ಕಾರಿ ಸಂಸ್ಥೆಗಳ ಮೇಲೆ ಕುರುಡು ವಿಶ್ವಾಸ ಇಡುವುದರ ಬದಲು ಅವುಗಳ ಸಶಕ್ತೀಕರಣದ ಬಗ್ಗೆ ಗಮನ ವಹಿಸಿದಾಗ ಲೋಕಾಯುಕ್ತ ಸಂ‍ಸ್ಥೆಯೂ ಸೇರಿದಂತೆ ಉಳಿದ ಸಂಸ್ಥೆಗಳನ್ನು ಬಲಪಡಿಸಬಹುದು.

ನಿಮಗೆ ಏನು ಅನ್ನಿಸ್ತು?
3 ವೋಟ್
eedina app