ಪಿಎಫ್ಐ ಮೇಲೆ ದಾಳಿ ಪ್ರಕರಣ | ಜನರ ಮುಂದೆ ಸತ್ಯಾಂಶ ಇಡುವಂತೆ ಕುಮಾರಸ್ವಾಮಿ ಆಗ್ರಹ

h d kumaraswamy
  • ‘ದಾಳಿಯ ವೇಳೆ ಏನು ಸಿಕ್ಕಿದೆ ಎಂಬುದನ್ನು ಜನರ ಮುಂದಿಡಬೇಕು’
  • ‘ಹಗರಣಗಳ ಕುರಿತು ಜನರ ಗಮನ ಬೇರೆಡೆಗೆ ಸೆಳೆಯಲು ಈ ದಾಳಿ’

'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ಮೇಲೆ ರಾಜ್ಯ ಪೊಲೀಸರು ದಾಳಿ ನಡೆಸಿ ಹಲವರನ್ನು ಬಂಧಿಸಿದ್ದಾರೆ. ದಾಳಿಯ ಬಗ್ಗೆ ರಾಜ್ಯದ ಜನತೆಯ ಮುಂದೆ ವಾಸ್ತವಾಂಶ ಇಡಬೇಕು' ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಜೆಡಿಎಸ್ ಕೇಂದ್ರ ಕಚೇರಿ ಜೆ ಪಿ ಭವನದಲ್ಲಿ ಮಾತನಾಡಿದ ಅವರು, “ರಾಜ್ಯ ಸರ್ಕಾರದ ಮೇಲೆ ಅನೇಕ ಆರೋಪಗಳಿವೆ. ನಾನು ಸ್ವತಃ ಬಿಎಂಎಸ್ ಶಿಕ್ಷಣ ಟ್ರಸ್ಟ್‌ನಲ್ಲಿ ನಡೆದಿರುವ ಅಕ್ರಮ ಬಗ್ಗೆ ಸದನದಲ್ಲಿಯೇ ದಾಖಲೆಗಳ ಸಮೇತ ಮಾಹಿತಿ ನೀಡಿದ್ದೆ. ಇದಲ್ಲದೆ, ಅನೇಕ ಹಗರಣ, ಅಕ್ರಮಗಳ ಬಗ್ಗೆ ಜನರು ರೋಸಿ ಹೋಗಿದ್ದಾರೆ. ಒಂದು ವೇಳೆ ಪಿಎಫ್ಐ ಮೇಲೆ ನಡೆದಿರುವ ದಾಳಿ ಕುರಿತು ನೈಜ ಮಾಹಿತಿ ಕೊಡದಿದ್ದರೆ, ಆರೋಪ ಮತ್ತು ಹಗರಣಗಳ ಕುರಿತು ಜನರ ಗಮನ ಬೇರೆಡೆಗೆ ಸೆಳೆಯಲು ಈ ದಾಳಿ ನಡೆಸಲಾಗಿದೆ ಎಂದೇ ಭಾವಿಸಬೇಕಾಗುತ್ತದೆ” ಎಂದು ಅವರು ತಿಳಿಸಿದರು.

“ಎರಡು ದಿನಗಳಿಂದ ಕರ್ನಾಟಕವೂ ಸೇರಿ ರಾಷ್ಟ್ರಮಟ್ಟದಲ್ಲಿ ಪಿಎಫ್ಐ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ದಾಳಿ ನಡೆದಿದೆ. ಆ ದಾಳಿ ಸಮಯದಲ್ಲಿ ಪಿಎಫ್ಐ ಸಂಘಟನೆಗಳ ವ್ಯಕ್ತಿಗಳ ಬಂಧನವೂ ಆಗಿತ್ತು. ಕಳೆದ ರಾತ್ರಿ ರಾಜ್ಯದ ನಾನಾ ಭಾಗದಲ್ಲಿ ಮಧ್ಯರಾತ್ರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ” ಎಂದರು. 

“ರಾಜ್ಯ ಪೊಲೀಸರು ನಡೆಸಿದ ದಾಳಿಯಲ್ಲಿ ಸಂಘಟನೆಯ ಕಾರ್ಯಕರ್ತರು, ಜಿಲ್ಲಾಧ್ಯಕ್ಷರ‌ ಬಂಧನವಾಗಿದೆ. ಮಧ್ಯರಾತ್ರಿಯಲ್ಲಿ ಕಾರ್ಯಾಚರಣೆ ಎನ್ನುವುದು ಸರ್ಕಾರದ ಆದೇಶವೋ ಅಥವಾ ಪೊಲೀಸರ ಮಾಹಿತಿ ಆಧಾರದ ಮೇಲೆ ದಾಳಿ ಆಗಿದೆಯೋ ಗೊತ್ತಿಲ್ಲ. ಆದರೆ, ಕಾರ್ಯಾಚರಣೆ ಬಗ್ಗೆ ನಾಡಿನ ಜನರ ಮುಂದೆ ವಾಸ್ತವಾಂಶ ಇಡಬೇಕು” ಎಂದವರು ಆಗ್ರಹಪಡಿಸಿದರು.

ಈ ಸುದ್ದಿ ಓದಿದ್ದೀರಾ?: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜ್ಯ ಸರ್ಕಾರದಿಂದ ‘ನಾಗರಿಕ ಸತ್ಕಾರ’

“ಏಕಾಏಕಿ ಈ ಬೆಳವಣಿಗೆಯಿಂದ ರಾಜ್ಯದಲ್ಲಿ ಯಾವುದೇ ಸಮಾಜದ ಮೇಲೆ ಆತಂಕ, ಭಯ ಸೃಷ್ಟಿಯಾಗಬಾರದು. ಇತ್ತೀಚೆಗೆ ಅನೇಕ ಸಂಘಟನೆಗಳು ತಮ್ಮ ಅಜೆಂಡಾ ಪೂರೈಸಲು ಕೆಲಸ ಮಾಡುತ್ತಿವೆ. ಅವುಗಳಿಗೆ ಅರ್ಥಿಕ ಶಕ್ತಿ ಹೇಗೆ ಬರ್ತಿದೆ? ಕೆಲ ಘಟನೆಗಳ ಹಿಂದೆ ಯಾವ ಸಂಘಟನೆಗಳಿವೆ ಎನ್ನುವುದನ್ನು ತನಿಖೆಯಿಂದ ಹೊರಬರಬೇಕು” ಎಂದು ಕುಮಾರಸ್ವಾಮಿ ಹೇಳಿದರು.

“ಕಳೆದ ರಾತ್ರಿ ಏಕಾಏಕಿ ದಾಳಿ ಆಗಿರೋದು‌ ಸಣ್ಣ ಪುಟ್ಟ ಕಾರ್ಯಕರ್ತರಿಗೆ ಆತಂಕ ಉಂಟು ಮಾಡಿದೆ ಎನ್ನುವುದು ನಿಜ. ಈ ದಾಳಿಯ ವೇಳೆ ಏನು ಸಿಕ್ಕಿದೆ. ಯಾವ ದಾಖಲೆ ಇದೆ ಎಂಬುದನ್ನು ಜನರ ಮುಂದಿಡಬೇಕು. ದಾಳಿಯ ಬಗ್ಗೆ ಸತ್ಯ ಹೇಳದೇ ಹೋದರೆ ಕಾಂಗ್ರೆಸ್‌ನ 'ಪೇ‌ಸಿಎಂ' ಅಭಿಯಾನ ಡೈವರ್ಟ್ ಮಾಡೋಕೆ ಸರ್ಕಾರ ಹೀಗೆ ಮಾಡಿದೆ ಎಂಬ ಅನುಮಾನ ಜನರಿಗೆ ಬರುತ್ತದೆ” ಎಂದು ಕುಮಾರಸ್ವಾಮಿ ಹೇಳಿದರು.

ಮಾಜಿ ಶಾಸಕರಾದ ಎಚ್ ಎಂ ರಮೇಶ್ ಗೌಡ, ಶಾರದಾ ಪೂರ್ಯ ನಾಯಕ್, ತಿಮ್ಮರಾಯಪ್ಪ ಹಾಗೂ ಹಿರಿಯ ಮುಖಂಡ ಹರಿಹರದ ಶಿವಶಂಕರ್ ಮತ್ತಿತರರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್