ಚಿಲುಮೆ ವೋಟರ್ ಗೇಟ್ ಅಕ್ರಮ | ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ವಜಾಕ್ಕೆ ಕಾಂಗ್ರೆಸ್ ಆಗ್ರಹ

RAMESH BABU CHILUME PC
  • ತುಷಾರ್ ಗಿರಿನಾಥ್ ಸಿಎಂ ನಿರ್ದೇಶನದ ಮೇರೆಗೆ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ
  • ನಕಲಿ ಬಿಎಲ್ಒ ಗುರುತಿನ ಚೀಟಿಯ ನೆರವಿನಿಂದಾಗಿ ವೋಟರ್ ಗೇಟ್ ಅಕ್ರಮ ನಡೆದಿದೆ

'ಚಿಲುಮೆ' ವೋಟರ್ ಗೇಟ್ ಅಕ್ರಮದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ, ನಗರ ಚುನಾವಣಾ ಉಸ್ತುವಾರಿ ತುಷಾರ್ ಗಿರಿನಾಥ್ ಅವರನ್ನು ವಜಾಗೊಳಿಸುವಂತೆ ಕಾಂಗ್ರೆಸ್ ಮುಖಂಡ ರಮೇಶ್ ಬಾಬು ಆಗ್ರಹಿಸಿದರು.

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿನ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಮೇಶ್ ಬಾಬು, "ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ, ಸಚಿವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮತದಾರರ ಪಟ್ಟಿಯಲ್ಲಿ ಕೆಲವರ ಹೆಸರು ಕೈಬಿಟ್ಟು, ತಮಗೆ ಅನುಕೂಲವಾಗುವ ಮತದಾರರ ಹೆಸರು ಸೇರಿಸುವ ಕಾರ್ಯವನ್ನು 'ಚಿಲುಮೆ' ಸಂಸ್ಥೆ ಮಾಡಿದೆ. ನಕಲಿ ಬಿಎಲ್ಒ ಗುರುತಿನ ಚೀಟಿಯ ನೆರವಿನಿಂದಾಗಿ ಈ ಅಕ್ರಮ ನಡೆದಿದೆ. ಹೀಗಾಗಿ ಗುರುತಿನ ಚೀಟಿ ವಿತರಣೆ ಹೊಣೆ ಲೋಪವನ್ನು ತುಷಾರ್ ಗಿರಿನಾಥ್ ಅವರೇ ಹೊರಬೇಕು" ಎಂದು ರಮೇಶ್ ಬಾಬು ಹೇಳಿದರು.

"ಅಕ್ರಮಕ್ಕೆ ಕಾರಣರಾದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ತುಷಾರ್ ಗಿರಿನಾಥ್ ಅವರನ್ನು ಚುನಾವಣಾಧಿಕಾರಿ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕು. ಹಾಗೆಯೇ  ಹಿರಿಯ ಐಎಎಸ್ ಅಧಿಕಾರಿಯಾಗಿರುವ ಹಿನ್ನೆಲೆಯಲ್ಲಿ ವಿಚಾರಣೆ ಬಾಕಿಗೆ ಒಳಪಟ್ಟು ಅವರನ್ನ ಅಮಾನತು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆಯೋಗ ಶಿಫಾರಸ್ಸು ಮಾಡಬೇಕು" ಎಂದು ಪಕ್ಷದ ಪರವಾಗಿ ಒತ್ತಾಯಿಸುತ್ತಿರುವುದಾಗಿ ರಮೇಶ್ ಬಾಬು ತಿಳಿಸಿದರು.

ಇನ್ನು ವೋಟರ್ ಐಡಿ ಅಕ್ರಮದ ವಿಚಾರವಾಗಿ ಮಾಹಿತಿ ನೀಡಿದ ರಮೇಶ್ ಬಾಬು, "ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನಿಖೆ ಮಾಡಲು ಸಾಧ್ಯವಿಲ್ಲ, ಅದನ್ನು ಕೇಂದ್ರ ಚುನಾವಣಾ ಆಯೋಗ ಮಾಡಬೇಕಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ತಿಳಿಸಿದ್ದರು. ನಾವು ಅದನ್ನು ಒಪ್ಪಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೆವು" ಎಂದು ರಮೇಶ್ ಬಾಬು ಹೇಳಿದರು.

ದೂರಿನ ಉಲ್ಲೇಖದ ಬಗ್ಗೆ ಮಾಹಿತಿ ನೀಡಿದ ರಮೇಶ್ ಬಾಬು, "ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಯಾದ ತುಷಾರ್ ಗಿರಿನಾಥ್ ಅವರು ಬೆಂಗಳೂರು ವ್ಯಾಪ್ತಿಗೆ ಸಂಬಂಧಿಸಿದ 28 ಕ್ಷೇತ್ರಗಳಿಗೆ ಚುನಾವಣಾಧಿಕಾರಿ ಆಗಿದ್ದಾರೆ. ಅವರ ಕೆಳಗೆ 28 ಎಆರ್‌ಒಗಳನ್ನು ನೇಮಕ ಮಾಡಿಕೊಂಡಿದ್ದಾರೆ. ಅವರು ಮುಖ್ಯಮಂತ್ರಿ ನಿರ್ದೇಶನದ ಮೇರೆಗೆ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು, ಅದರಿಂದ ತಪ್ಪಿಸಿಕೊಳ್ಳಲು ಮೂವರು ಎಆರ್‌ಒಗಳನ್ನು ವಜಾ ಮಾಡಿ ತನಿಖೆ ಮಾಡುವುದಾಗಿ ಹೇಳಿದ್ದಾರೆ. ಇಲ್ಲಿ ನಿಜಕ್ಕೂ ವಜಾಗೊಳ್ಳಬೇಕಾಗಿರುವುದು ತುಷಾರ್ ಗಿರಿನಾಥ್" ಎಂದರು.

 ಈ ಸುದ್ದಿ ಓದಿದ್ದೀರಾ ? : ಮತದಾರರ ಪಟ್ಟಿ ಅಕ್ರಮ | ಚುನಾವಣಾ ಆಯೋಗಕ್ಕೆ ಪ್ರತ್ಯೇಕ ದೂರು ನೀಡಿದ ಬಿಜೆಪಿ, ಜೆಡಿಎಸ್

"ಚುನಾವಣಾ ಆಯೋಗದ ಕಾನೂನು ಪ್ರಕಾರ 1950ರ ಜನಪ್ರತಿನಿಧಿ ಕಾಯ್ದೆ ಕಲಂ 32ರ ಅಡಿಯಲ್ಲಿ ಯಾವುದೇ ಚುನಾವಣಾ ಅಧಿಕಾರಿ ಅಕ್ರಮಗಳಲ್ಲಿ ಶಾಮೀಲಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕನಿಷ್ಠ 3 ತಿಂಗಳಿಂದ 2 ವರ್ಷಗಳವರೆಗೂ ಶಿಕ್ಷೆ ನೀಡಬೇಕಾಗುತ್ತದೆ. ಇದನ್ನು ಚುನಾವಣಾ ಆಯೋಗವೇ ಮಾಡಬೇಕಾಗುತ್ತದೆ. ಆ ಕಾರಣಕ್ಕಾಗಿ ನಾನು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇನೆ" ಎಂದು ರಮೇಶ್ ಬಾಬು ತಿಳಿಸಿದರು.      

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180