ಮಳೆಗಾಲ ಅಧಿವೇಶನ | ನಗರ ಭೂ ಮಿತಿ ಕಾಯ್ದೆಯಡಿ ಭೂಮಿ ಪಡೆದು ಸರ್ಕಾರಕ್ಕೆ ಕೋಟ್ಯಂತರ ರೂ. ವಂಚಿಸಿದ ಚಾಲಾಕಿ ಬಿಲ್ಡರ್!

  • ಕಾಯ್ದೆ ಹೆಸರಿನಲ್ಲಿ ಸರ್ಕಾರಿ ಭೂಮಿ ಪಡೆದು ಲೇಔಟ್‌ ನಿರ್ಮಾಣ
  • ಅಕ್ರಮಕ್ಕೆ ಸಹಕರಿಸಿದ್ದ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಆಗ್ರಹ

ನಗರ ಭೂ ಮಿತಿ ಕಾಯ್ದೆಯ ಲಾಭ ಪಡೆದ ಬೆಂಗಳೂರಿನ ಲಗ್ಗೆರೆ ನಿವಾಸಿ ಕೆ ಗೋಪಿನಾಥ್ ಎಂಬುವವರು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದ ಭೂಮಿಯನ್ನೇ ವಾಪಸ್ ಪಡೆದುಕೊಂಡು, ಅದರಲ್ಲಿ ಅಕ್ರಮ ಲೇಔಟ್‌ ನಿರ್ಮಾಣ ಮಾಡಿ ಮಾರಾಟ ಮಾಡಿದ್ದಾರೆ. ದುರಂತವೆಂದರೆ, ಈ ಕಾಯ್ದೆಯಡಿ ಆತನಿಗೆ 11 ಎಕರೆ ಭೂಮಿ ಲಭಿಸಿದೆ. ಈ ಅಕ್ರಮವು ಬೆಂಗಳೂರಿನ ಜಿಲ್ಲಾಧಿಕಾರಿ ವರದಿಯಲ್ಲಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಸದಸ್ಯ ಕೃಷ್ಣಭೈರೇಗೌಡ ಆಗ್ರಹಿಸಿದರು.

ವಿಧಾನಸಭೆ ಕಲಾಪದಲ್ಲಿ ಬುಧವಾರ ನಿಯಮ 69ರಡಿ ಈ ವಿಷಯ ಪ್ರಸ್ತಾಪಿಸಿದ ಕೃಷ್ಣಭೈರೇಗೌಡ, "ಸರ್ಕಾರ ಗೋಪಿನಾಥ್‌ಗೆ ಮಂಜೂರು ಮಾಡಿರುವ 11 ಎಕರೆ ಭೂಮಿಯನ್ನು ಕೂಡಲೇ ವಾಪಸ್ ಪಡೆದುಕೊಳ್ಳಬೇಕು. ಹಾಗೆಯೇ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಭಾರೀ ಲಾಭ ಮಾಡಿಕೊಂಡಿರುವ ಗೋಪಿನಾಥ್‌ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕು. ಹಾಗೆಯೇ ಇದಕ್ಕೆ ಸಹಕರಿಸಿರುವ ಎಲ್ಲ ಅಧಿಕಾರಿಗಳ ಬಗ್ಗೆ ತನಿಖೆ ನಡೆಸಿ ಅವರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಬೇಕು" ಎಂದು ಒತ್ತಾಯಿಸಿದರು.

Eedina App

ಗೋಪಿನಾಥ್‌ ಅವರ ಭೂಗಳ್ಳತನದ ಬಗ್ಗೆ ಸದನಕ್ಕೆ ವಿವರವಾದ ಮಾಹಿತಿಯನ್ನು ಕೃಷ್ಣಭೈರೇಗೌಡ ನೀಡಿದರು. ನಗರ ಪ್ರದೇಶದಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಭೂಮಿ ಹೊಂದಿದ್ದ ಕಾರಣಕ್ಕೆ ಕೇಂದ್ರ ಸರ್ಕಾರದ ನಗರ ಭೂ ಮಿತಿ ಕಾಯ್ದೆಯಡಿ ಕೆ ಗೋಪಿನಾಥ್ ಕುಟುಂಬದ 16 ಎಕರೆ 10 ಗುಂಟೆ ಭೂಮಿಯನ್ನು (4 ಎಕರೆಗೂ ಹೆಚ್ಚು ಖರಾಬ್ ಭೂಮಿ ಸೇರಿ) ಮುಟ್ಟುಗೋಲು ಹಾಕಿಕೊಂಡು ಕೊಳಚೆ ನಿರ್ಮೂಲನಾ ಮಂಡಳಿಗೆ ನೀಡಿತ್ತು.

ಸರ್ಕಾರದ ಮುಟ್ಟುಗೋಲು ನೀತಿ ಪ್ರಶ್ನಿಸಿದ್ದ ಗೋಪಿನಾಥ್‌ಗೆ ಕೆಎಟಿ, ನಂತರ ಹೈಕೋರ್ಟ್‌ನಲ್ಲೂ ಹಿನ್ನಡೆಯಾಗಿತ್ತು. ಈ ವೇಳೆ ಆ ಭೂಮಿಗೆ ಪರಿಹಾರ ನೀಡಿರುವುದನ್ನೂ ಉಲ್ಲೇಖಿಸಲಾಗಿತ್ತು. ನಂತರ 1999ರಲ್ಲಿ ನಗರ ಭೂ ಮಿತಿ ರದ್ದತಿ ಕಾಯ್ದೆ ತಂದ ಸರ್ಕಾರ, ಈಗಾಗಲೇ ಮುಟ್ಟುಗೋಲು ಹಾಕಿಕೊಂಡಿರುವ ಭೂಮಿಗೆ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಹೇಳಿತ್ತು.

AV Eye Hospital ad

ಆದರೆ, ಗೋಪಿನಾಥ್ ತಮ್ಮಿ೦ದ ಮುಟ್ಟುಗೋಲು ಹಾಕಿಕೊಂಡ ಭೂಮಿಗೆ ಸರ್ಕಾರದಿಂದ ಪರಿಹಾರ ಕೋರಿದರು. ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದ ಭೂಮಿಯಲ್ಲಿ 4.20 ಎಕರೆಯನ್ನು ಆತನಿಗೆ ವಾಪಸ್ ನೀಡಿ ಮತ್ತೆ ಯಾವುದೇ ಪರಿಹಾರ ಕೋರದಂತೆ ಷರತ್ತು ವಿಧಿಸಿತ್ತು. ಆ ನಂತರವೂ ಗೋಪಿನಾಥ್ ಉಳಿದ 7 ಎಕರೆಗೂ ಹೆಚ್ಚು ಭೂಮಿಯಲ್ಲಿ ಅಕ್ರಮವಾಗಿ ಲೇಔಟ್ ಮಾಡಿ ತಾವೇ ಅನೇಕ ಜನರಿಗೆ ಜಿಪಿಎ ಮಾಡಿಕೊಟ್ಟಿದ್ದಾರೆ. 2009ರಲ್ಲಿ ಸರ್ಕಾರಕ್ಕೆ ಸುಳ್ಳು ಮಾಹಿತಿಯೊಂದಿಗೆ ಮನವಿ ಸಲ್ಲಿಸಿ ಜಾಲಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ 11 ಎಕರೆ ಪಡೆದುಕೊಂಡಿದ್ದರು ಎಂದು ತಿಳಿಸಿದರು.

ಇದರ ಜೊತೆಗೆ ಗೋಪಿನಾಥ್‌ ಅವರ ರಾಜಕೀಯ ನಂಟಿನ ಬಗೆಗೂ ಮಾಹಿತಿ ನೀಡಿದ ಕೃಷ್ಣಭೈರೇಗೌಡ, ಗೋಪಿನಾಥ್ ವಿಧಾನ ಪರಿಷತ್‌ನ ಬಿಜೆಪಿ ಶಾಸಕರೊಬ್ಬರ ಸಂಬಂಧಿ ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? : ಬೆಂಗಳೂರು | ಪಾವತಿ ಪಾರ್ಕಿಂಗ್‌ ವ್ಯವಸ್ಥೆ ಜಾರಿ; ವಾಹನ ಸವಾರರಿಂದ ಬಿಬಿಎಂಪಿಗೆ ಛೀಮಾರಿ

ಕೃಷ್ಣಭೈರೇಗೌಡ ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರ ನೀಡಿದ ಕಂದಾಯ ಸಚಿವ ಆರ್ ಅಶೋಕ್, "ಕೆ.ಗೋಪಿನಾಥ್ ನಡೆಸಿರುವ ಭೂ ಅಕ್ರಮದ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ. ಆ ವರದಿಯನ್ನು ಪರಿಶೀಲಿಸಿ ಕಾನೂನಾತ್ಮಕವಾಗಿ ಕ್ರಮ ವಹಿಸುತ್ತೇವೆ. ಆ ವ್ಯಕ್ತಿಗೆ ಮಂಜೂರಾಗಿರುವ 11 ಎಕರೆ ಭೂಮಿಯನ್ನು ಸರ್ಕಾರಕ್ಕೆ ಉಳಿಸಿಕೊಳ್ಳಲು ಕ್ರಮ ಕೈಗೊಳಲಾಗುವುದು" ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app