
- ಕಾಂಗ್ರೆಸ್ ಯಾರಿಗೆ ಬೇಕಾದರೂ ದೂರು ನೀಡಲಿ, ತನಿಖೆಯಿಂದ ಸತ್ಯ ಹೊರಬರಲಿದೆ
- ನಮ್ಮ ಮೇಲಿನ ಕಾಂಗ್ರಸ್ ಆರೋಪ ನಿರಾಧಾರ; ಅವರಿಗೇ ಇದು ತಿರುಗುಬಾಣವಾಗಲಿದೆ
"ಮತದಾರರ ಗುರುತಿನ ಚೀಟಿ ಪ್ರಕರಣದ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ತಿಳಿದುಕೊಳ್ಳಲು 2013ರಿಂದ ಆರಂಭಗೊಂಡಂತೆ ಇಲ್ಲಿಯವರೆಗೆ ಸಮಗ್ರ ತನಿಖೆ ನಡೆಸಲು ಸೂಚಿಸಲಾಗಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಮುಖ್ಯಮಂತ್ರಿಗಳ ಸರ್ಕಾರಿ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, "ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ. ಆ ಮೂಲಕ ಸತ್ಯ ಜನರಿಗೆ ತಿಳೀಯಬೇಕು. ಹೀಗಾಗಿ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರದಲ್ಲಿದ್ದ 2013 ನೇ ಇಸವಿಯಿಂದಲೂ ತನಿಖೆಯಾಗಬೇಕು ಎಂದು ಸೂಚನೆ ನೀಡಲಾಗಿದೆ. 2013 ರಿಂದ ಯಾವ ಆದೇಶಗಳನ್ನು ನೀಡಿದ್ದಾರೆ ಎಂಬ ಎಲ್ಲ ಸತ್ಯಗಳು ಹೊರಗೆ ಬರಲಿ ಎಂಬ ಉದ್ದೇಶದಿಂದ ಈ ತನಿಖೆಗೆ ಆದೇಶ ನೀಡಲಾಗಿದೆ" ಎಂದು ಸಿಎಂ ಬೊಮ್ಮಾಯಿ ಹೇಳಿದರು.
2013ರಿಂದಲೂ ಚಿಲುಮೆ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಇತರ ಜವಾಬ್ದಾರಿಗಳನ್ನು ವಹಿಸಿದ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದೇನೆ. ನಿರಾಧಾರ ಆರೋಪ ಮಾಡುತ್ತಿರುವ ಕಾಂಗ್ರೆಸ್ ನ ಈ ಪ್ರಯತ್ನ, ಮುಂದಿನ ದಿನಗಳಲ್ಲಿ ಅವರಿಗೆ ತಿರುಗುಬಾಣವಾಗಲಿದೆ.@BJP4Karnataka pic.twitter.com/IiuodOF3jx
— Basavaraj S Bommai (@BSBommai) November 20, 2022
"ಚುನಾವಣಾ ಆಯೋಗದ ನಿಯಮಾವಳಿಗಳನ್ನು ಗಾಳಿಗೆ ತೂರಿ ಕಾಂಗ್ರೆಸ್ ಸರ್ಕಾರ 'ಚಿಲುಮೆ' ಸಂಸ್ಥೆಗೆ ಆದೇಶವನ್ನು ನೀಡಿದ್ದು, ತನಿಖೆಯ ಮೂಲಕವೇ ಈ ಎಲ್ಲ ಸತ್ಯಗಳು ಹೊರಬರಲಿವೆ. ನಮ್ಮ ಮೇಲಿನ ಕಾಂಗ್ರೆಸ್ ಆರೋಪ ನಿರಾಧಾರ. ಈ ಪ್ರಕರಣ ಅವರಿಗೇ ತಿರುಗುಬಾಣವಾಗಲಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
"ನಮ್ಮ ಸರ್ಕಾರದ ಆದೇಶದಲ್ಲಿ ಮತದಾನದ ಜಾಗೃತಿ ಮೂಡಿಸುವ ಕಾರ್ಯಕ್ಕೆ ಆದೇಶ ನೀಡಲಾಗಿದ್ದು, 'ಚಿಲುಮೆ' ಸಂಸ್ಥೆಗೆ ಯಾವುದೇ ರಾಜಕೀಯ ಪಕ್ಷದ ಜೊತೆ ಸಂಬಂಧವಿರಬಾರದು ಎಂಬ ಷರತ್ತನ್ನು ವಿಧಿಸಲಾಗಿದೆ. ಆದರೆ, ಸಿದ್ದರಾಮಯ್ಯ ಅವರು ನೀಡಿರುವ ಆದೇಶದಲ್ಲಿ ಚುನಾವಣಾ ಆಯೋಗ ನಿರ್ವಹಿಸಬೇಕಾದ ಮತ ಪರಿಷ್ಕರಣೆಯ ಕಾರ್ಯವನ್ನೇ ಸಂಸ್ಥೆಗೆ ನೀಡಿದ್ದಾರೆ. ಚುನಾವಣಾ ಆಯೋಗ ನಿರ್ವಹಿಸಬೇಕಾದ ಕಾರ್ಯವನ್ನು ಖಾಸಗಿ ಸಂಸ್ಥೆಗೆ ವಹಿಸಿರುವುದೇ ಅಕ್ಷಮ್ಯ ಅಪರಾಧ. ಅವರ ಅವಧಿಯಲ್ಲಿ ತಹಶೀಲ್ದಾರರವರಿಗೆ ಬಿಎಲ್ಓಗಳ ನೇಮಕ ಮಾಡುವ ಆದೇಶವನ್ನೂ ನೀಡಿದ್ದಾರೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಹದ್ದುಮೀರಿ ಅಧಿಕಾರದ ದುರುಪಯೋಗ ಮಾಡಲಾಗಿದೆ" ಎಂದು ಬೊಮ್ಮಾಯಿ ಹೇಳಿದರು.
"ಮತದಾರರ ಪರಿಷ್ಕರಣೆಯ ಕಾರ್ಯದಲ್ಲಿ ಮತದಾರರ ಹೆಸರನ್ನು ಸೇರಿಸುವುದು ಹಾಗೂ ಕೈಬಿಡುವುದು ಚುನಾವಣಾ ಆಯೋಗದ ಕೆಲಸವೇ ಹೊರತು ಸರ್ಕಾರದ್ದಲ್ಲ. ನಮ್ಮ ಸರ್ಕಾರದ ಮೇಲೆ ರಾಜಕೀಯ ಪ್ರೇರಿತವಾಗಿ ಆರೋಪ ಹೊರಿಸಲಾಗುತ್ತಿದೆ" ಎಂದು ಮುಖ್ಯಮಂತ್ರಿಗಳು ದೂರಿದರು.
ಮತದಾರರ ವಿವರ ಪಡೆಯಲು ಏಜೆನ್ಸಿಯಾಗಿ ಸಚಿವರು ಬಳಸಿಕೊಂಡಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, "ಎಲ್ಲ ಪಕ್ಷಗಳು ಸಂಸ್ಥೆಗಳನ್ನು ಏಜೆನ್ಸಿಯಾಗಿ ಬಳಸಿಕೊಳ್ಳುತ್ತವೆ. ರಾಜಕೀಯ ಪಕ್ಷಗಳು ಸಮೀಕ್ಷೆಯನ್ನು ಮಾಡಿಸುತ್ತವೆ. ಇಲ್ಲಿ ಸರ್ಕಾರ ಯಾವ ರೀತಿಯ ಆದೇಶವನ್ನು ನೀಡಿದೆ ಎಂಬುದಷ್ಟೇ ಮುಖ್ಯ. ನಮ್ಮ ಸರ್ಕಾರದ ಆದೇಶದಲ್ಲಿ ರಾಜಕೀಯ ಪಕ್ಷಗಳೊಂದಿಗೆ ಸಂಬಂಧವಿರಬಾರದು ಎಂಬ ಷರತ್ತು ವಿಧಿಸಲಾಗಿದೆ. ಅವರ ಆದೇಶದಲ್ಲಿ ಈ ಷರತ್ತನ್ನು ವಿಧಿಸಿಯೇ ಇಲ್ಲ ಮತ್ತು ಬಿಎಲ್ಓ ನೇಮಕಾತಿಗೂ ಅನುಮತಿಯನ್ನು ಕಾನೂನುಬಾಹಿರವಾಗಿ ನೀಡಿದ್ದಾರೆ" ಎಂದು ಮುಖ್ಯಮಂತ್ರಿಗಳು ಆರೋಪಿಸಿದರು.
ಇನ್ನು ವೋಟರ್ ಗೇಟ್ ಪ್ರಕರಣದ ವಿಚಾರವಾಗಿ ಉನ್ನತ ಮಟ್ಟದ ತನಿಖೆ ಮಾಡಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, "ಈ ಮೊದಲು ಕೇವಲ 2022ರದ್ದು ತನಿಖೆ ಮಾಡಿಸಲು ಸೂಚಿಸಲಾಗಿತ್ತು. ಆದರೆ ಈಗ 2013 ರಿಂದ ತನಿಖೆ ಮಾಡಿಸಲು ಸೂಚಿಸಲಾಗಿದ್ದು, ಎಲ್ಲ ಸತ್ಯಗಳೂ ಹೊರಬರಲಿವೆ" ಎಂದರು.
"ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂಬುದು ಕಾಂಗ್ರೆಸ್ನವರ ಆರೋಪವಾಗಿದೆ. 27 ಲಕ್ಷ ಮತದಾರರನ್ನು ಕೈಬಿಡಲಾಗಿದೆ ಎಂಬುದು ಶುದ್ಧ ಸುಳ್ಳು. ಶಿವಾಜಿನಗರ ಕ್ಷೇತ್ರದಲ್ಲಿ ಕೇವಲ 15000 ಹೆಸರನ್ನು ಹಾಗೂ ಕೆ.ಆರ್.ಪುರ, ಮಹಾದೇವಪುರಗಳಲ್ಲಿ ಕೇವಲ 45 ರಿಂದ 47 ಸಾವಿರ ಹೆಸರುಗಳನ್ನು ಕೈಬಿಡಲಾಗಿದೆ. ಆದ್ದರಿಂದ ಈ ಆರೋಪ ನಿರಾಧಾರ" ಎಂದು ಬೊಮ್ಮಾಯಿ ಹೇಳಿದರು.
ಈ ಸುದ್ದಿ ಓದಿದ್ದೀರಾ? : ಚಿಲುಮೆ ವೋಟರ್ ಗೇಟ್| ಅಸ್ತಿತ್ವ ಉಳಿಸಿಕೊಳ್ಳುವ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ ನಾಯಕರು: ಬಿಜೆಪಿ ವ್ಯಂಗ್ಯ
"ಈ ಬಾರಿ ಚುನಾವಣಾ ಆಯೋಗವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಎರಡು ಪ್ರದೇಶಗಳಲ್ಲಿ ಇರುವ ವೋಟರ್ ಐಡಿಗಳನ್ನು ತೆಗೆಯುವ ಕೆಲಸವನ್ನು ಮಾಡುತ್ತಿದೆ. ಈ ರೀತಿ ನಕಲಿ ಮತದಾರರನ್ನು ತೆಗೆದರೆ ಮಾತ್ರ ನ್ಯಾಯಸಮ್ಮತವಾದ ಚುನಾವಣೆ ನಡೆಸಲು ಸಾಧ್ಯ. ಬೇರೆ ಪ್ರದೇಶದಲ್ಲಿದ್ದವರನ್ನು ಬೇರೆ ಯಾವುದೇ ಪ್ರದೇಶಕ್ಕೆ ಸೇರಿಸಿ ಮತ ಹಾಕಿಸುವ ಕಾಂಗ್ರೆಸ್ನವರ ತಂತ್ರ ನಿಲ್ಲಲಿದೆ ಎಂಬ ಆತಂಕದಿಂದ ಈ ರೀತಿ ಗುಲ್ಲೆಬ್ಬಿಸಿದ್ದಾರೆ" ಎಂದು ಬೊಮ್ಮಾಯಿ ತಿಳಿಸಿದರು.
ಕೇಂದ್ರ ಚುನಾವಣಾ ಆಯೋಗಕ್ಕೂ ಕಾಂಗ್ರೆಸ್ ದೂರು ನೀಡಲಿದೆ ಎಂಬುದಕ್ಕೆ ಉತ್ತರಿಸಿದ ಸಿಎಂ ಬೊಮ್ಮಾಯಿ, "ಅವರು ಯಾರಿಗೆ ಬೇಕಾದರೂ ದೂರು ನೀಡಲಿ; ನ್ಯಾಯ ಹಾಗೂ ಸತ್ಯ ಖಂಡಿತ ಹೊರಬರಲಿದೆ ಹಾಗೂ ಅವರು ಎಬ್ಬಿಸಿರುವ ಈ ಪ್ರಕರಣ ಅವರಿಗೆ ತಿರುಗುಬಾಣವಾಗಲಿದೆ" ಎಂದು ಮುಖ್ಯಮಂತ್ರಿಗಳು ಹೇಳಿದರು.