
- ಹೆಲಿಕಾಫ್ಟರ್ ಮೂಲಕ ರಾಮನಗರಕ್ಕೆ ತೆರಳಿದ ಮುಖ್ಯಮಂತ್ರಿ
- ಹಾನಿಗೀಡಾದವರಿಗೆ ತಕ್ಷಣಕ್ಕೆ 10 ಸಾವಿರ ಪರಿಹಾರ ಘೋಷಣೆ
ಭಾರಿ ಮಳೆ ಅವಾಂತರದಿಂದ ರಾಮನಗರ ಜಿಲ್ಲೆ ತತ್ತರಿಸಿ ಹೋಗಿದೆ. ಸಂಕಷ್ಟದಲ್ಲಿರುವ ಜಿಲ್ಲೆಯ ಪರಿಸ್ಥಿತಿ ಅವಲೋಕನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆರಳಲಿದ್ದಾರೆ.
ಹೆಲಿಕಾಪ್ಟರ್ ಮೂಲಕ ರಾಮನಗರಕ್ಕೆ ತೆರಳಲಿರುವ ಬೊಮ್ಮಾಯಿ ಪ್ರವಾಹಪೀಡಿತ ಸ್ಥಳಗಳ ಪರಿಶೀಲನೆ ನಡೆಸಲಿದ್ದಾರೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಳೆಪೀಡಿತ ಪ್ರದೇಶಗಳ ಪರೀಶಿಲನೆಗೆ ತೆರಳಿದ್ದು, ಖುದ್ದು ಸ್ಥಳದಲ್ಲಿ ಮೊಕ್ಕಾಂ ಹೂಡಿ ಸ್ಥಳೀಯರ ಸಮಸ್ಯೆ ಆಲಿಸುತ್ತಿದ್ದಾರೆ.
ಜೊತೆಗೆ ಜಿಲ್ಲೆಯ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ದೂರವಾಣಿ ಮೂಲಕ ಚರ್ಚಿಸಿ ಮುಂದಿನ ಪರಿಹಾರ ಕಾರ್ಯದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮುಖ್ಯಮಂತ್ರಿಗಳೂ ಅವರ ವಿಚಾರಕ್ಕೆ ಸ್ಪಂದಿಸಿ ಜನರ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? : ಬೆಂಗಳೂರು | ಧಾರಾಕಾರ ಮಳೆಗೆ ಹೈರಾಣಾದ ನಾಗರಿಕರು; ಸೆ.2ರವರೆಗೂ ಮಳೆ ಸಾಧ್ಯತೆ
ಇನ್ನು ಭಾನುವಾರ ಸಂಜೆ ಮಳೆಪೀಡಿತ 16 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಡಿಯೋ ಸಂವಾದ ನಡೆಸಿದ್ದರು. ಮೈಸೂರು-ಬೆಂಗಳೂರು ದಶಪಥ ಕಾಮಗಾರಿ ಹಿನ್ನೆಲೆಯಲ್ಲಿನ ಸಂಚಾರ ಸಮಸ್ಯೆಗೆ ಬದಲಿ ಮಾರ್ಗ ಬಳಕೆ ಬಗ್ಗೆ ಅಗತ್ಯ ಕ್ರಮ ಜರುಗಿಸುವಂತೆ ಸೂಚಿಸಿದ್ದರು.
ಸಭೆಯಲ್ಲಿ ರಾಜ್ಯದಾದ್ಯಂತ ಮಳೆ ಪೀಡಿತ ಪ್ರದೇಶಗಳಲಿ ಮನೆ ಕಳೆದುಕೊಂಡವರಿಗೆ, ತೀವ್ರ ಸಂಕಷ್ಟಕ್ಕೀಡಾದವರಿಗೆ ತುರ್ತಾಗಿ 10 ಸಾವಿರ ರೂಗಳ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಬೆಳೆ ಪರಿಹಾರಕ್ಕೆ ಕ್ರಮ, ವಿದ್ಯುತ್ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸೂಚನೆ, ಜನ ಜಾನುವಾರುಗಳ ಸುರಕ್ಷತೆ ಸೇರಿದಂತೆ ಅಗತ್ಯ ಪರಿಹಾರ ಕ್ರಮ ಜರುಗಿಸಲೂ ಸಿಎಂ ಜಿಲ್ಲಾಧಿಕಾರಿಗಳಿಗೆ ತಾಕೀತು ಮಾಡಿರುವುದಾಗಿ ಹೇಳಿದರು.