ಶೇ.40 ಕಮಿಷನ್ ಖಂಡಿಸಿ ಒಂದು ವರ್ಷ ಕಾಮಗಾರಿ ನಿಲ್ಲಿಸಿ: ಗುತ್ತಿಗೆದಾರರಿಗೆ ಎಚ್ ಡಿ ಕುಮಾರಸ್ವಾಮಿ ಕಿವಿಮಾತು

h d kumaraswamy
  • ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಯಾರಿಗೂ ಇಲ್ಲ
  • ಕೆಂಪಣ್ಣ ವಿರುದ್ಧ ಮಾನನಷ್ಟ ಮೊಕದ್ದಮೆ; ಯಾರಿಗೆ ಇದೆ?

ನೀವು ನಡೆಸುವ ಕಾಮಗಾರಿಗಳಿಗೆ ಪರ್ಸೆಂಟೇಜ್ ಯಾಕೆ ಕೊಡುತ್ತೀರಿ? ಕಮಿಷನ್ ಕೇಳಿದರೆ ಕಾಮಗಾರಿ ಮಾಡುವುದಿಲ್ಲವೆಂದು ಒಂದು ವರ್ಷ ಕೆಲಸ ನಿಲ್ಲಿಸಿ, ಆಗ ತಂತಾನೆ ಎಲ್ಲವೂ ಸರಿ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರಾಜ್ಯದ ಗುತ್ತಿಗೆದಾರರಿಗೆ ಕಿವಿಮಾತು ಹೇಳಿದ್ದಾರೆ.

ಜೆಡಿಎಸ್ ಕೇಂದ್ರ ಕಚೇರಿ ಜೆ ಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ”ಟೆಂಡರ್‌ನಲ್ಲಿ ಭಾಗವಹಿಸುವುದು ಬಿಟ್ಟು ಸರ್ಕಾರಕ್ಕೆ ಬಿಸಿ ಮುಟ್ಟಿಸಿ. ಪರ್ಸೆಂಟೇಜ್ ವಿರುದ್ಧ ಬೀದಿಗೆ ಇಳಿಯಿರಿ. ದಾಖಲೆಗಳನ್ನು ಜನರ ಮುಂದಿಡಿ. ಸುಖಾಸುಮ್ಮನೆ ಹೇಳಿಕೆಗಳಿಂದ ಪ್ರಯೋಜನ ಇಲ್ಲ” ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

“ಶೇ.40 ಕಮಿಷನ್ ಬಗ್ಗೆ ಕೆಲ ಗುತ್ತಿಗೆದಾರರು ಆರೋಪ ಮಾಡಿದ್ದಾರೆ. ಯಾವುದಾದರೂ ಸಾಕ್ಷಿ ಇದ್ದರೆ ತನಿಖೆ ನಡೆಸುವುದಾಗಿ ಸರ್ಕಾರ ಹೇಳುತ್ತಿದೆ. ತನಿಖೆಗೆ ಕೊಟ್ಟರೆ ಸಾಕ್ಷಿ ಕೊಡುತ್ತೇವೆಂದು ಗುತ್ತಿಗೆದಾರರು ಹೇಳುತ್ತಾರೆ. ಇದರಿಂದ ಪ್ರಯೋಜನ ಆಗಲ್ಲ” ಎಂದರು. 

“ನಾನು ಎರಡು ಬಾರಿ ಮುಖ್ಯಮಂತ್ರಿಯಾದಾಗಲೂ ಈ ಪರ್ಸೆಂಟೇಜ್ ಏನೂ ಇರಲಿಲ್ಲ. ನಾನು ಲಾಟರಿ ನಿಷೇಧ ಮಾಡಿದಾಗ ಇದ್ದ ಕಿಂಗ್ ಪಿನ್‌ಗಳು, ಮಂತ್ರಿಗಳು ಎಷ್ಟೆಷ್ಟು 'ಆಫರ್' ಕೊಟ್ಟರು ಎನ್ನುವುದು ಗೊತ್ತಿದೆ. ಆಮಿಷ ಒಡ್ಡಿದವರು ಇನ್ನೂ ಬದುಕಿದ್ದಾರೆ. ಆದರೂ ಎಲ್ಲವನ್ನು ಧಿಕ್ಕರಿಸಿ ಲಾಟರಿ ನಿಷೇಧ ಮಾಡಿದ್ದೆ. ಅಂತಹ ಬದ್ಧತೆ ಈ ಸರ್ಕಾರಕ್ಕೆ ಇದೆಯಾ” ಎಂದು ಪ್ರಶ್ನಿಸಿದರು.

“ನನ್ನ ಕಾಲದಲ್ಲಿ ನಾನಂತೂ ಇದಕ್ಕೆ ಅವಕಾಶ ಕೊಡಲಿಲ್ಲ. ನಮ್ಮ ಮೆಟ್ರೋ ಯೋಜನೆಯ ಬೈಯ್ಯಪ್ಪನಹಳ್ಳಿ - ಮಹಾತ್ಮ ಗಾಂಧಿ ರಸ್ತೆ ನಡುವಿನ ಮೊದಲ ಹಂತದ ಯೋಜನೆಗೆ ಒಪ್ಪಿಗೆ ನೀಡಿದಾಗ ಅದರ ಗುತ್ತಿಗೆದಾರರು ಯಾರು ಎಂಬುದೇ ನನಗೆ ಗೊತ್ತಿರಲಿಲ್ಲ. ಆದರೆ, ಯೋಜನೆ ಕಾಲಮಿತಿಯಲ್ಲಿ ಮುಗಿಯಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದೆ. ಮುಖ್ಯಮಂತ್ರಿ ಕಚೇರಿ ಅಷ್ಟು ಪಾರದರ್ಶಕವಾಗಿತ್ತು. ಮೈತ್ರಿ ಸರ್ಕಾರದ ಅವಧಿಯಲ್ಲಿ ಕೂಡ ಕಮಿಷನ್ ವ್ಯವಹಾರ ನಡೆದಿದೆ. ನನ್ನ ಕಚೇರಿಯಲ್ಲಿ ನಡೆದಿಲ್ಲ” ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಈ ಸುದ್ದಿ ಓದಿದ್ದೀರಾ?: ನಳಿನ್ ಕುಮಾರ್ ಕಟೀಲ್ ವಿರುದ್ಧ ಹೆಚ್ಚಿದ ಕಾರ್ಯಕರ್ತರ ಆಕ್ರೋಶ | ರಾಜ್ಯ ಬಿಜೆಪಿಗೆ ಶೀಘ್ರದಲ್ಲೇ ಹೊಸ ಸಾರಥಿ ನೇಮಕ!

ಅವರಿಗೆ ಮಾನ ಮರ್ಯಾದೆ ಇದೆಯಾ?

ಸಚಿವ ಮುನಿರತ್ನ ಅವರು ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ಯಾರಿಗಿದೆ ಮಾನ, ಮರ್ಯಾದೆ? ಮಾನನಷ್ಟ ಮೊಕದ್ದಮೆ ಹೂಡುವುದಕ್ಕೆ. ಅದರ ಬಗ್ಗೆ ಚರ್ಚೆ ಬೇಡ. ಅವರು ಶಾಸಕರಾಗುವುದಕ್ಕೂ ಮೊದಲು ಗುತ್ತಿಗೆದಾರರೇ ಆಗಿದ್ದರು. ಆ ಸಂದರ್ಭದಲ್ಲಿ ಗಂಗಾನಗರದಲ್ಲಿ ಗೋಡೆ ಕುಸಿದು ಒಂದು ಮಗು ಮೃತಪಟ್ಟಿತ್ತು. ಆಗ ಇವರೇ (ಮುನಿರತ್ನ) ತಾನೇ ಗುತ್ತಿಗೆದಾರರು. ಅವರು ಏನೇನು ಮಾಡಿದ್ದಾರೆ ಅಂತ ಗೊತ್ತಿದೆ” ಎಂದು ಮುನಿರತ್ನ ಬಗ್ಗೆ ಕಿಡಿಕಾರಿದರು.

“ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಯಾರಿಗೂ ಕಮಿಷನ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಇದಕ್ಕೆ ಕಾಂಗ್ರೆಸ್, ಬಿಜೆಪಿ ಯಾರು ಹೊರತಲ್ಲ. ಸಿದ್ದರಾಮಯ್ಯ ಬಂದು ಪರ್ಸಂಟೇಜ್ ವ್ಯವಹಾರವನ್ನು ಕಡಿಮೆ ಮಾಡಲಿಲ್ಲ. ಮೈತ್ರಿ ಸರ್ಕಾರ ಇದ್ದಾಗ ಯಾರೆಲ್ಲ ಏನು ಮಾಡಿದರು ಅಂತಾನೂ ಬಿಡಿಸಿ ಹೇಳಿದರೆ ದೊಡ್ಡ ಕತೆ ಆಗುತ್ತದೆ. ಮೊದಲು ವಿಧಾನಸೌಧದಿಂದಲೆ ಸ್ವಚ್ಛ ಮಾಡಬೇಕು. ನನ್ನ ಪಕ್ಷಕ್ಕೆ ಐದು ವರ್ಷ ಸ್ವತಂತ್ರ ಸರ್ಕಾರ ಕೊಡಿ, ಕಮಿಷನ್ ವ್ಯವಹಾರವನ್ನು ಬುಡ ಸಮೇತ ಕಿತ್ತು ಹಾಕುತ್ತೇನೆ” ಎಂದು ಕುಮಾರಸ್ವಾಮಿ ಭರವಸೆ ನೀಡಿದರು.

“ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಎಲ್ಲ ವಿಷಯಗಳನ್ನೂ ಪ್ರಸ್ತಾಪ ಮಾಡುತ್ತೇನೆ. ಜನರ ಪರವಾಗಿ ಎಲ್ಲ ವಿಷಯಗಳನ್ನೂ ಹೇಳುತ್ತೇನೆ” ಎಂದರು.

“ಈದ್ಗಾ ಮೈದಾನದ ವಿಚಾರದಲ್ಲಿ ಹೈಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು. ನ್ಯಾಯಾಲಯದ ತೀರ್ಪಿಗೆ ತಲೆಬಾಗಿ, ಬೆಂಗಳೂರಿನ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡುತ್ತೇನೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಆಗಾಗ ಇಂತಹ ಘಟನೆಗಳು ಆಗುವ ಮೂಲಕ ಅವರ ಹುಳುಕುಗಳನ್ನು ಮುಚ್ಚಿಕೊಳ್ಳಲು ಅನುಕೂಲ ಆಗುತ್ತಿದೆ. ಇಂತಹ ವಿಚಾರಗಳನ್ನು ಸರ್ಕಾರ ಲಘುವಾಗಿ ತೆಗೆದುಕೊಳ್ಳಬಾರದು” ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್