
- ಬಿಜೆಪಿ ಭ್ರಷ್ಟಾಚಾರದ ಬಗ್ಗೆ 224 ಕ್ಷೇತ್ರಗಳಲ್ಲೂ ಪ್ರಚಾರ ಮಾಡುತ್ತೇವೆ
- ಮತದಾರರ ಮಾಹಿತಿ ಕದ್ದ ಚಿಲುಮೆ ಸಂಸ್ಥೆ ವಿರುದ್ಧ ಹೋರಾಟ
‘ಖಾಸಗಿ ಸಂಸ್ಥೆಗಳು ನಡೆಸಿರುವ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಪಕ್ಷ 130 ಸ್ಥಾನಗಳಲ್ಲಿ ಮುಂದಿದ್ದರೆ, ಆಡಳಿತಾರೂಢ ಬಿಜೆಪಿ ಕೇವಲ 65 ಸ್ಥಾನಗಳಲ್ಲಿ ಮಾತ್ರ ಮುಂದಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, “ಮೂರು ಖಾಸಗಿ ಸಂಸ್ಥೆಗಳ ಸರ್ವೆಗಳಲ್ಲೂ ಕಾಂಗ್ರೆಸ್ ಪಕ್ಷ ಮುಂದಿದೆ. 130 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು 65 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಗೆಲ್ಲಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ನಾವು 224 ಕ್ಷೇತ್ರಗಳಲ್ಲೂ ಪ್ರಚಾರ ಮಾಡುತ್ತೇವೆ. ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ರಾಜ್ಯದಾದ್ಯಂತ ಒಟ್ಟಿಗೆ ಪ್ರವಾಸ ಮಾಡುತ್ತಾರೆ. ಬಿಜೆಪಿ ಜನಸಂಕಲ್ಪ ಯಾತ್ರೆ ಬದಲಿಗೆ, ಕ್ಷಮೆ ಯಾತ್ರೆ ಮಾಡಬೇಕು. ರಾಜ್ಯದ ಜನ ಬಿಜೆಪಿ ಸರ್ಕಾರದಿಂದ ಭ್ರಮನಿರಸನಗೊಂಡಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮತ್ತಷ್ಟು ಅನುಮಾನ ಹುಟ್ಟಿಸಿದ ʼಚಿಲುಮೆʼ ನಡೆ | ಮತಪಟ್ಟಿಯಿಂದ ಮಾಯವಾದ ಹೆಸರು; ವರದಿ ಕೇಳಿದ ಚುನಾವಣಾ ಆಯೋಗ
ಬೊಮ್ಮಾಯಿ, ಅಶ್ವಥ್ ನಾರಾಯಣ ಮೇಲೆ ದೂರು ದಾಖಲಾಗಬೇಕು
ಮತದಾರರ ಸೂಕ್ಷ್ಮ ಮಾಹಿತಿ ಕದ್ದ ಆರೋಪ ಎದುರಿಸುತ್ತಿರುವ ಚಿಲುಮೆ ಸಂಸ್ಥೆ ವಿವಾದದ ಬಗ್ಗೆ ಮಾತನಾಡಿದ ಅವರು, “ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರಿಗೆ ಸೇರಿದ ಚಿಲುಮೆ ಸಂಸ್ಥೆ ಪೊಲೀಂಗ್ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ; ಅವರೆಲ್ಲರೂ ಬಿಜೆಪಿ ಕಾರ್ಯಕರ್ತರು” ಎಂದು ಆರೋಪಿಸಿದರು.
“ಇದೊಂದು ಗಂಭೀರ ಹಗರಣವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಅಶ್ವತ್ಥ ನಾರಾಯಣ ಮತ್ತು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮೇಲೂ ದೂರು ದಾಖಲಾಗಬೇಕು. ಬೆಂಗಳೂರು ಮಾತ್ರವಲ್ಲ; ಇಡೀ ರಾಜ್ಯದಾದ್ಯಂತ ಈ ಕಂಪನಿ ಮಾಹಿತಿ ಕದಿಯುವ ಕೆಲಸ ಮಾಡುತ್ತಿದೆ. ಬಿಜೆಪಿಗೆ ಮತಗಳನ್ನು ಕದಿಯುವ ಕೆಲಸ ಮಾಡುತ್ತಿದೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ” ಎಂದು ಕಿಡಿ ಕಾರಿದರು.
“ಚಿಲುಮೆ ಹಗರಣ ವಿರೋಧಿಸಿ ಶನಿವಾರ (ನ.19) ಬೆಂಗಳೂರಿನಲ್ಲಿ ನಮ್ಮ ನಾಯಕರು ಪ್ರತಿಭಟನೆ ಮಾಡುತ್ತಾರೆ. ರಾಜ್ಯದ ಎಲ್ಲ ಕಡೆ ಈ ತಂತ್ರ ಮಾಡಬೇಕು ಎಂದು ಮುಂದಾಗಿದ್ದರು. ಆ ಮೂಲಕ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಹ್ಯಾಕ್ ಮಾಡಿ, ಮತಗಳನ್ನು ಡಿಲೀಟ್ ಮಾಡೋದು ಇವರ ಉದ್ದೇಶವಾಗಿತ್ತು. ಹೀಗೆ ಎಲ್ಲ ಕಡೆಯಲ್ಲೂ ಈ ಸರ್ಕಾರ ಹಗರಣ ಮಾಡುತ್ತಿದೆ. ಇದನ್ನು ಸರ್ಕಾರ ಎಂದು ಕರೆಯೋದಕ್ಕೆ ನಾಚಿಕೆ ಆಗುತ್ತದೆ” ಎಂದು ಸಲೀಂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.