ವಿಧಾನಸಭೆ ಚುನಾವಣೆ-2023 | ಅಭ್ಯರ್ಥಿಗಳ ಆಯ್ಕೆಗೆ ಸಮೀಕ್ಷೆ ಮೊರೆ ಹೋದ ಕಾಂಗ್ರೆಸ್ ನಾಯಕರು

  • ಸಂಘಟನೆ ವಿಚಾರದಲ್ಲಿ ಕೆಳ ಹಂತದಿಂದ ಕೆಲಸ ಮಾಡಿದವರಿಗೆ ಟಿಕೆಟ್ 
  • ಎರಡು ಹಂತದ ಪರಾಮರ್ಷೆ ಬಳಿಕ ಅರ್ಹರಿಗೆ ಅದೃಷ್ಟ ಪರೀಕ್ಷೆ ಅವಕಾಶ

ಮುಂಬರುವ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್‌ ಪಕ್ಷ ಭರ್ಜರಿ ತಯಾರಿ ನಡೆಸುತ್ತಿದೆ. ಈಗಾಗಲೇ ಕ್ಷೇತ್ರ ಸಮೀಕ್ಷೆ ನಡೆಸಿ ಪಕ್ಷದ ಗೆಲುವಿನ ಸಂ‍ಖ್ಯಾ ಬಲ ತಿಳಿದುಕೊಳ್ಳುವ ಸಲುವಾಗಿ ಸರ್ವೆ ಮೊರೆ ಹೋಗಿದ್ದ ಕೈ ಪಡೆ, ಈಗ ಅಭ್ಯರ್ಥಿಗಳ ಆಯ್ಕೆಗೂ ಅದೇ ಮಾನದಂಡ ಅನುಸರಿಸುತ್ತಿದೆ.

ಆದರೆ, ಈ ಬಾರಿ ಖಾಸಗಿ ಸಂ‍ಸ್ಥೆಯ ಬದಲು ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯೇ ಸರ್ವೆ ನಡೆಸಲಿದೆ. ಹೌದು, ಇದೇ ವಿಚಾರವನ್ನೇ ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಪಕ್ಷ ಸಂಘಟನಾ ಸಭೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅದ್ಯಕ್ಷ ಡಿ ಕೆ ಶಿವಕುಮಾರ್ ಪಕ್ಷದ ಸದಸ್ಯರಿಗೆ ತಿಳಿಸಿದ್ದು.

ಕೆಲಸ ಮಾಡಿದವರಿಗಷ್ಟೇ ಈ ಬಾರಿ ಟಿಕೆಟ್‌ ಎನ್ನುವ ಮಾತನ್ನು ಹೇಳುವ ಮೂಲಕ ಕೆಪಿಸಿಸಿ ಅದ್ಯಕ್ಷರು, ನಾಯಕರ ಭಜನೆ ಮಾಡಿಕೊಂಡು ಟಿಕೆಟ್‌ ಲಾಭಿ ನಡೆಸುತ್ತಿರುವರಿಗೆ ಸಂದೇಶವೊಂದನ್ನ ರವಾನಿಸಿದ್ದಾರೆ. ಆ ಮೂಲಕ ತಮ್ಮನ್ನೂ ಮೀರಿದ ಲೆಕ್ಕಾಚಾರವೊಂದು ಅಭ್ಯರ್ಥಿ ಆಯ್ಕೆಯಲ್ಲಿ ನಡೆಯಲಿದೆ ಎನ್ನುವ ಸೂಚನೆ ನೀಡಿದ್ದಾರೆ.

ಬಿಜೆಪಿಯ ಕಾಂಗ್ರೆಸ್‌ ಮುಕ್ತ ಭಾರತದ ಘೋಷಣೆಯನ್ನು ಪ್ರಚಾರಕ್ಕೆ ತರುವವರೆಗೂ ತಾನು ಹೇಳಿದವರಿಗೇ ಟಿಕೆಟ್‌ ಎನ್ನುವ ನೀತಿಯನ್ನು ಕಾಂಗ್ರೆಸ್‌ ಅನುಸರಿಸುತ್ತಿತ್ತು. ಆದರೆ, ಅದ್ಯಾವಾಗ ಪಕ್ಷದ ಸಾಂಪ್ರದಾಯಿಕ ಆಯ್ಕೆ ವಿಚಾರಕ್ಕೆ ಬಿಜೆಪಿ ಪೆಟ್ಟು ನೀಡಿತೋ ಅಂದಿನಿಂದ ಕಾಂಗ್ರೆಸ್ ಸಮೀಕ್ಷೆ ಮೊರೆ ಹೋಯಿತು. ಆವಾಗಿನಿಂದ ಅಭ್ಯರ್ಥಿ ಆಯ್ಕೆಗೆ ಕೈಪಡೆ ದ್ವಿಸೂತ್ರ ಅನುಸರಿಸುತ್ತಿದೆ.

ಆದರಲ್ಲಿ ಮೊದಲನೆಯದ್ದು ನಾಯಕರಿಂದ ಆಯ್ಕೆ, ಈ ಸೂತ್ರದಂತೆ ಚುನಾವಣಾ ಅಭ್ಯರ್ಥಿಯಾಗುವವರನ್ನು ಕಾಂಗ್ರೆಸ್‌ ಮುಖಂಡರು ಕ್ಷೇತ್ರ, ಹಿನ್ನೆಲೆ, ಕೆಲಸ ಕಾರ್ಯ ಇವುಗಳ ಲೆಕ್ಕಾಚಾರದ ಮೇಲೆ ಗುರುತಿಸಿ, ಅವರ ಹೆಸರುಗಳನ್ನ ಪಟ್ಟಿ ಮಾಡಿಟ್ಟುಕೊಳ್ಳವುದು. ಎರಡನೇ ಸೂತ್ರದ ಪ್ರಕಾರ ಎಐಸಿಸಿ ಕಳುಹಿಸಿಕೊಡುವ ತಂಡದ ಸಮೀಕ್ಷೆ ವರದಿ.

ಡಿ ಕೆ ಶಿವಕುಮಾರ್ ಹೇಳಿದಂತೆ ಮಾತಿನ ಒಳ ಮರ್ಮ ಈ ಎಐಸಿಸಿ ತಂಡ ಸಮೀಕ್ಷೆ. ಪ್ರತಿಬಾರಿಯಂತೆ ಈ ಬಾರಿಯೂ ಈ ತಂಡ ಸಮೀಕ್ಷೆ ನಡೆಸಿದರೂ ಸಮೀಕ್ಷಾ ವಿಧಾನದಲ್ಲಿ ಮಾಡಿಕೊಂಡಿರುವ ಬದಲಾವಣೆ ಟಿಕೆಟ್‌ ಆಕಾಂಕ್ಷಿಗಳಿಗೆ ಕೊಂಚ ಚಿಂತೆ ಹುಟ್ಟಿಸಿದೆ.

ಈ ಬಾರಿ ಸಮೀಕ್ಷೆ ನಡೆಸಲು ಬಂದಿರುವ ತಂಡ ಕೆಪಿಸಿಸಿಯ ಮೇಲ್ಪಂಕ್ತಿಯ ನಾಯಕರುಗಳನ್ನ ಹೊರತು ಪಡಿಸಿ, ಉಳಿದವರ ಗಮನಕ್ಕೆ ಬಾರದಂತೆ ಜನರ ನಡುವೆ ನಿಂತು, ತನ್ನ ಸಮೀಕ್ಷಾ ಕಾರ್ಯವನ್ನು ಅಂತಿಮಗೊಳಿಸಿಕೊಳ್ಳುತ್ತಿದೆ. ಅಷ್ಟರ ಮಟ್ಟಿಗೆ ಗೌಪ್ಯತೆ ಕಾಪಾಡಿಕೊಳ್ಳುವುದರ ಜೊತೆಗೆ ಪಕ್ಷದೆಡೆಗಿನ ಜನರ ನಿಜನಾಡಿ ಮಿಡಿತ ಅರಿಯುವ ಕೆಲಸ ಮಾಡುತ್ತಿದೆ.

ಈ ಸುದ್ದಿ ಓದಿದ್ದೀರಾ?: ಟೇಪ್ ಕಟ್ ಮಾಡೋದು, ಮದುವೆ ಅಟೆಂಡ್‌ ಮಾಡೋದಷ್ಟೇ ನಿಮ್ಮಗಳ ಕೆಲಸವಲ್ಲ: ಡಿಕೆಶಿ ಹೀಗೆ ಹೇಳಿದ್ದು ಯಾರಿಗೆ?

ಬಳಿಕ ಇಲ್ಲಿನ ಸಮೀಕ್ಷಾ ವರದಿಯನ್ನು ಕೆಪಿಸಿಸಿ ಅದ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರಿಬ್ಬರಿಗೆ ನೀಡಲಿದೆ. ಅದರ ಜೊತೆಗೆ ಇದೇ ವರದಿಯನ್ನು ರಾಷ್ಟ್ರೀಯ ಅಧ್ಯಕ್ಷರು ಮತ್ತವರ ಚುನಾವಣಾ ಸಮಿತಿ ಎದುರು ಮಂಡಿಸಲಿದೆ. ಅಂತಿಮವಾಗಿ ರಾಜ್ಯ ನಾಯಕರರೊಂದಿಗೆ ಚರ್ಚಸಿ ನಿಜ ಲೆಕ್ಕಾಚಾರ ಪರಾಮರ್ಷಿಸಿ ಹೈಕಮಾಂಡ್‌ ನಾಯಕರು ಅರ್ಹರಿಗೆ ಟಿಕೆಟ್‌ ಅಂತಿಮಗೊಳಿಸಲಿದ್ದಾರೆ.

ಕಾಂಗ್ರೆಸ್‌ ಪಕ್ಷದ ಈ ಮಾನದಂಡವೀಗ ಕುರ್ಚಿಗಂಟಿಕೊಂಡು, ಕೂತಲ್ಲಿಂದಲೇ ಟಿಕೆಟ್‌ ಗಿಟ್ಟಿಸಿಕೊಳ್ಳುತ್ತಿದ್ದ ಅಭ್ಯರ್ಥಿಗಳ ಮೇಲೆ ಪರಿಣಾಮ ಬೀರಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್