ಶಿಕ್ಷಣ ಇಲಾಖೆ ವಿವಾದದ ಕೇಂದ್ರ ಮಾಡಿದ ಅಪ್ರಯೋಜಕ ಸಚಿವ ನಾಗೇಶ್ ರಾಜೀನಾಮೆ ನೀಡಲಿ: ಬಿ ಕೆ ಹರಿಪ್ರಸಾದ್ ವಾಗ್ದಾಳಿ

  • ಶಿಕ್ಷಣ ಸಚಿವ ಬಿ ಸಿ ನಾಗೇಶ್ ರಾಜೀನಾಮೆಗೆ ಆಗ್ರಹ
  • ಮರು ಮುದ್ರಣದ ಹೆಸರಿನಲ್ಲಿ ತೆರಿಗೆ ಹಣ ದುರುಪಯೋಗ

ದೇಶಕ್ಕೆ ಮಾದರಿಯಾಗಬೇಕಿದ್ದ ರಾಜ್ಯದ ಶಿಕ್ಷಣ ಇಲಾಖೆಯನ್ನು ವಿವಾದದ ಕೇಂದ್ರವನ್ನಾಗಿಸಿದ ಅಪಕೀರ್ತಿ ಶಿಕ್ಷಣ ಸಚಿವ ಬಿ ಸಿ ನಾಗೇಶ್‌ಗೆ ಸಲ್ಲಬೇಕು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ನಾಡಿನ ಸಾಂಸ್ಕೃತಿಕ ನಾಯಕರಿಗೆ ಅಪಮಾನ ಮಾಡಿ, ದೇಶದ ಎದುರು ಮಾನ ಕಳೆಯುವಂತೆ ಮಾಡಿದ್ದು ಸಾಕಾಗಿಲ್ಲ. ಇಲ್ಲಿಯವರೆಗೂ ಪರಿಷ್ಕರಣೆಯ ಬಗ್ಗೆ ಬಂದಿರುವ ಆಕ್ಷೇಪಗಳಿಗೆ ಉತ್ತರ ನೀಡುವ ಎದೆಗಾರಿಕೆಯೂ ಇಲ್ಲ. ದಿನಕ್ಕೊಂದು ಅವಾಂತರಗಳು, ಹಗರಣಗಳು ಧಾರಾವಾಹಿಯಂತೆ ಕಂತುಗಳಲ್ಲಿ ಬರುತ್ತಿವೆ. ಈಗ ಇಡೀ ಇಲಾಖೆಯನ್ನು ಭಿಕ್ಷೆ ಬೇಡುವ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಇಂತಹ ಅಪ್ರಯೋಜಕ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರಿಂದ ಇಡೀ ಶಿಕ್ಷಣ ಇಲಾಖೆ ಅಧ್ವಾನದ ಕೂಪವಾಗಿದೆ” ಎಂದು ಅವರು ಆರೋಪಿಸಿದ್ದಾರೆ.

Eedina App

“ಶಾಲೆಗಳು ಆರಂಭಕ್ಕೆ ಮುನ್ನ ಪೂರ್ವಯೋಜಿತ ತಯಾರಿಗಳೊಂದಿಗೆ ಪ್ರಾರಂಭಿಸಲಾಗುತ್ತೆ. ಶಾಲೆಗಳಿಗೆ ಪಠ್ಯಪುಸ್ತಕ ಸರಬರಾಜು, ಶಿಥಿಲಗೊಂಡಿರುವ ಕೊಠಡಿಗಳ ದುರಸ್ತಿಗೆ ಹಣ ಬಿಡುಗಡೆ, ಶಾಲಾ ಮಕ್ಕಳಿಗೆ ಶೂ ನೀಡುವುದು ಸೇರಿದಂತೆ ಮೂಲ ಸೌಕರ್ಯಗಳ ತಯಾರಿಗಳೊಂದಿಗೆ ಪ್ರಾರಂಭ ಮಾಡಲಾಗುತ್ತೆ. ಆದರೆ, ಶಿಕ್ಷಣ ಇಲಾಖೆ ಹಾಗೂ ಸಚಿವರು ಕೇವಲ ಪಠ್ಯ ಪರಿಷ್ಕರಣೆ ನೆಪದಲ್ಲಿಯೇ ಕಾಲ ಕಳೆಯುತ್ತಿದ್ದಾರೆ” ಎಂದು ಹೇಳಿದ್ದಾರೆ.

“ಶಾಲೆಗಳು ಪ್ರಾರಂಭವಾಗಿ ಒಂದೂವರೆ ತಿಂಗಳು ಕಳೆದಿದೆ. ಇಲ್ಲಿವರೆಗೂ ಶಾಲೆಗಳಿಗೆ ಪಠ್ಯ ಪುಸ್ತಕ ತಲುಪಿಸಿಲ್ಲ ಎಂಬ ದೂರುಗಳು ಬರುತ್ತಿವೆ. ಇನ್ನೊಂದೆಡೆ ಪಠ್ಯ ಪರಿಷ್ಕರಣೆ ನೆಪದಲ್ಲಿ ಆಗಿರುವ ಪ್ರಮಾದಗಳಿಗೆ ತೇಪೆ ಹಚ್ಚಿ, ಮರು ಮುದ್ರಣ ಮಾಡಿಸುತ್ತೇವೆಂದು ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ಈಗಾಗಲೇ ಕೆಲವು ಶಾಲೆಗಳಿಗೆ ತಲುಪಿರುವ ಪಠ್ಯ ಪುಸ್ತಕಗಳ ಕತೆಗಳೇನು? ಹೊಸದಾಗಿ ಮುದ್ರಣವಾಗುವ ಪುಸ್ತಕಗಳನ್ನ ಸರಬರಾಜು ಯಾವಾಗ ಮಾಡಲಾಗುತ್ತೆ? ಮುದ್ರಣ-ಮರು ಮುದ್ರಣದ ಹೆಸರಿನಲ್ಲಿ ನೂರಾರು ಕೋಟಿ ರೂ. ಖರ್ಚು ಮಾಡಿ ಜನರ ತೆರಿಗೆ ಹಣವನ್ನ ದುರುಪಯೋಗ ಮಾಡುತ್ತಿರುವುದು ಯಾಕೆ? ಒಬ್ಬ ‘ಟ್ರೋಲರ್’ ಅವಿವೇಕಿ ಮಾಡಿದ ತಪ್ಪಿಗೆ ಜನರ ಹಣ ಪೋಲು ಮಾಡುತ್ತಿದೆ ಈ ಸರ್ಕಾರ” ಎಂದು ವಾಗ್ದಾಳಿ ನಡೆಸಿದ್ದಾರೆ.

AV Eye Hospital ad

“ರಾಜ್ಯದಲ್ಲಿ 75,675 ಶಾಲೆಗಳ ಕೊಠಡಿ ದುರಸ್ತಿ ಮಾಡಬೇಕಾಗಿದೆ. 2,682 ಕೋಟಿ ರೂ. ಹಣ ವ್ಯಯ ಮಾಡಬೇಕಿದೆ ಎಂದು ಶಿಕ್ಷಣ ಇಲಾಖೆ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪ್ರಸ್ತಾಪನೆ ಸಲ್ಲಿಸಿದೆ. ಸಾವಿರಾರು ಶಾಲೆಗಳು ಶಿಥಿಲಗೊಂಡಿರುವ ಮಾಹಿತಿ ಮೊದಲೇ ಇದ್ದರೂ ಶಿಕ್ಷಣ ಇಲಾಖೆ ಶಾಲೆಗಳು ಪ್ರಾರಂಭವಾಗುವ ಮುನ್ನವೇ ಎಚ್ಚೆತ್ತುಕೊಂಡು ಕ್ರಿಯಾ ಯೋಜನೆ ರೂಪಿಸಲಿಲ್ಲ ಯಾಕೆ” ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಪೌರ ಕಾರ್ಮಿಕರ ಬೇಡಿಕೆ ಈಡೇರಿಕೆ ವಿಚಾರದಲ್ಲಿ ಅಧಿಕೃತ ಆದೇಶ ಹೊರಡಿಸಿ : ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ 

“ಕಾಂಗ್ರೆಸ್ ಅವಧಿಯಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಭಾಗ್ಯ ಜಾರಿಗೆ ತಂದಿತ್ತು. ಯೋಜನೆಯಿಂದ 60ರಿಂದ 70 ಲಕ್ಷ ವಿದ್ಯಾರ್ಥಿಗಳು ಫಲಾನುಭವಿಯಾಗಿದ್ದರು. ಖಾಸಗಿ ಶಾಲಾ ಮಕ್ಕಳ ರೀತಿಯೇ ಸರ್ಕಾರಿ ಶಾಲೆಯಲ್ಲಿ ಕಲಿಯುವ ಲಕ್ಷಾಂತರ ಮಕ್ಕಳು ಕೂಡ ಶೂ ಧರಿಸಿಕೊಂಡೆ ಶಾಲೆಗೆ ಬರುತ್ತಿದ್ದರು. ಈ ಸರ್ಕಾರ ಬಡವರ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಕೊಡಿಸದೇ ಇರುವಷ್ಟು ದಾರಿದ್ರ್ಯ ಬಂದಿದೆ. 2019-20ನೇ ಸಾಲಿನ ಕೊನೆದಾಗಿ ಸರ್ಕಾರ ಈ ಯೋಜನೆಗೆ ಹಣ ಬಿಡುಗಡೆ ಮಾಡಿದ್ದು ಬಿಟ್ಟರೇ, 2020-21, 2021-22 ಮತ್ತು ಈ ವರ್ಷ ಹಣವನ್ನೇ ಮೀಸಲಿಟ್ಟಿಲ್ಲ. ಕನಿಷ್ಠ ಅದರ ಬಗ್ಗೆ ಇಲ್ಲಿವರೆಗೆ ಚರ್ಚೆಯೂ ನಡೆಸಿಲ್ಲ, ಶಿಕ್ಷಣ ಇಲಾಖೆ ಈ ಮಟ್ಟದ ಆರ್ಥಿಕ ದಿವಾಳಿತನ ಎದುರಿಸುತ್ತಿದ್ಯಾ? ರಾಷ್ಟ್ರೋತ್ಥಾನ ಪರಿಷತ್‌ನ ಪಠ್ಯ ಪುಸ್ತಕ ಖರೀದಿಗೆ ನೂರಾರು ಕೋಟಿ ರೂ. ಶೀಘ್ರವಾಗಿ ಬಿಡುಗಡೆ ಮಾಡುವ ಸರ್ಕಾರಕ್ಕೆ, ಬಡ ಮಕ್ಕಳ ಮೇಲೆ ಯಾಕೆ ಇಷ್ಟು ತಾತ್ಸಾರ? ಕೇವಲ ಸಂಘಪರಿವಾರವನ್ನು ಒಲೈಕೆ ಮಾಡುವುದರಲ್ಲೇ ಕಾಲ ಕಳೆಯುತ್ತಿದೆ” ಎಂದು ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

“ಬಡ ಮಕ್ಕಳಿಗೆ ಶೂ ಕೊಡಲು ಯೋಗ್ಯತೆ ಇಲ್ಲದ ಮಂತ್ರಿಗಳು ಅಪ್ರಯೋಜಕರು. ಪ್ರತಿನಿತ್ಯ ಶಿಕ್ಷಣ ಇಲಾಖೆಯನ್ನು ವಿವಾದದ ಕೇಂದ್ರವನ್ನಾಗಿ ಮಾಡಿದ್ದಾರೆ. ಶಿಕ್ಷಣ ಇಲಾಖೆ ನಿಭಾಯಿಸಲು ಶಕ್ತರಲ್ಲದ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಕೂಡಲೇ ರಾಜೀನಾಮೆ ನೀಡಬೇಕೆಂದು” ಹರಿಪ್ರಸಾದ್‌ ಆಗ್ರಹಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app