
- 145 ಸ್ಥಾನಗಳನ್ನು ಗೆದ್ದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ
- ಕಾಲ ಬದಲಾಗಿದೆ; ಚಿಕ್ಕಮಗಳೂರಿನ ಐದೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ
‘ಕಾಂಗ್ರೆಸ್ನವರು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾರೆ. ಅವರ ನಾಯಕ ಯಾರು, ರಾಹುಲ್ ಗಾಂಧೀನಾ? ಮೋದಿ ನೇತೃತ್ವದಲ್ಲಿ ನಾವು ಮುಂದೆ ಹೋಗುತ್ತಿರುವಾಗ ಅವರ ಮುಂದೆ ಯಾರೂ ನಿಲ್ಲಲು ಸಾಧ್ಯವಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದ ಬಿಜೆಪಿ ‘ಜನಸಂಕಲ್ಪ ಯಾತ್ರೆ’ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಕಾಂಗ್ರೆಸ್ನವರು ಒಂದು ಕಾಲದಲ್ಲಿ ಹಣ, ಹೆಂಡ, ತೋಳ್ಬಲ ಮತ್ತು ಅಧಿಕಾರ ಬಲದಿಂದ ಚುನಾವಣೆ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಚಿಕ್ಕಮಗಳೂರಿನ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ನಾವು ಕೇಸರಿಯ ಮೇಲೆ ರಾಜಕಾರಣ ಮಾಡುತ್ತೇವೆ, ತಾಕತ್ತಿದ್ದರೆ ಎದುರಿಸಿ: ಸಿ ಟಿ ರವಿ ಸವಾಲು
“ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 140ರಿಂದ 145 ಸ್ಥಾನಗಳನ್ನು ಗೆದ್ದು ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ. ರಾಜ್ಯದಲ್ಲಿ ನಮ್ಮ ಪಕ್ಷದ ಮುಖಂಡರು ನಡೆಸುತ್ತಿರುವ ಸಮಾವೇಶಗಳಲ್ಲಿ ಸೇರುತ್ತಿರುವ ಅಪಾರ ಸಂಖ್ಯೆಯ ಜನರು ನಾವು ಅಧಿಕಾರಕ್ಕೇರುವ ಸೂಚನೆ ಕೊಡುತ್ತಿದ್ದಾರೆ” ಎಂದು ಯಡಿಯೂರಪ್ಪ ಹೇಳಿದರು.
“ವರುಣನ ಕೃಪೆಯಿಂದ ರಾಜ್ಯದಾದ್ಯಂತ ಜಲಾಶಯಗಳು ತುಂಬಿ ತುಳುಕುತ್ತಿವೆ. ಕಡೂರಿನಲ್ಲಿಯೂ ಸಹ ಒಳ್ಳೆಯ ಬೆಳೆ ಆಗಿದೆ. ರೈತರು ನೆಮ್ಮದಿ, ಗೌರವ ಮತ್ತು ಸ್ವಾಭಿಮಾನದಿಂದ ಬದುಕುವ ಅವಕಾಶ ಸಿಕ್ಕಿದೆ” ಎಂದರು.
“ನಾನು ನಾಲ್ಕನೇ ಭಾರಿಗೆ ಮುಖ್ಯಮಂತ್ರಿಯಾಗಿ ಸರ್ಕಾರ ರಚನೆಯಾದ ಮೂರು ತಿಂಗಳ ಒಳಗೆ ರೈತರು ಮಾಡಿದ್ದ ₹1 ಲಕ್ಷ ಕೃಷಿ ಸಾಲ ಮನ್ನಾ ಮಾಡಿದ್ದೆ. ಆಯುಷ್ಮಾನ್, ಫಸಲ್ ಬಿಮಾ ಜಾರಿಗೆ ತಂದೆ. ಸಿ ಮತ್ತು ಡಿ ದರ್ಜೆ ನೇಮಕಾತಿಯಲ್ಲಿ ಸಂದರ್ಶನ ರದ್ದು, ಕೋವಿಡ್ನಿಂದ ಮೃತಪಟ್ಟ ಕುಟುಂಬಕ್ಕೆ ₹1 ಲಕ್ಷ ಪರಿಹಾರ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇವೆ” ಎಂದರು.