ಪೇ ಸಿಎಂ ವಿವಾದ | ಪ್ರತಿಪಕ್ಷವಾಗಿರಲು ಕಾಂಗ್ರೆಸ್ ನಾಲಾಯಕ್; ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆಕ್ರೋಶ

  • ಕಾಂಗ್ರೆಸ್ ಗೌರವಯುತ ಪಕ್ಷವಾಗಿ ಉಳಿದಿಲ್ಲ: ಶೆಟ್ಟರ್
  • ಭ್ರಷ್ಟಾಚಾರದ ದಾಖಲೆಗಳಿದ್ದರೆ ಲೋಕಾಯುಕ್ತಕ್ಕೆ ನೀಡಲಿ

ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪೋಸ್ಟರ್ ವಾರ್ ಮೂಲಕ ಕೀಳು ಮಟ್ಟದ ರಾಜಕಾರಣಕ್ಕೆ ಇಳಿದಿರುವ ಕಾಂಗ್ರೆಸ್ ಗೌರವಯುತ ಪಕ್ಷವಾಗಿ ಉಳಿದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಶನಿವಾರ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಇಷ್ಟೊಂದು ಕೀಳು ಮಟ್ಟದ ರಾಜಕಾರಣಕ್ಕೆ ಕಾಂಗ್ರೆಸ್ ಯಾಕೆ ಇಳಿದಿದೆಯೋ ಗೊತ್ತಿಲ್ಲ. ಸರ್ಕಾರದ ವಿರುದ್ಧ ಏನೇ ಆರೋಪ, ದೂರುಗಳಿದ್ದರೆ ಕಾನೂನಾತ್ಮಕವಾಗಿ ನಡೆದುಕೊಳ್ಳುವುದನ್ನು ಬಿಟ್ಟು ಈ ರೀತಿ ಬೀದಿಗೆ ಬಂದು ನಿಲ್ಲುವುದು ಸರಿಯಲ್ಲ" ಎಂದರು.

"ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಸಹಿಸದಿರುವ ಕಾಂಗ್ರೆಸ್ಸಿಗರು ಮುಖ್ಯಮಂತ್ರಿ ಹಾಗೂ ಸರ್ಕಾರದ ವಿರುದ್ಧ ದುರುದ್ದೇಶದಿಂದ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಅವರಲ್ಲಿ ದಾಖಲೆಗಳಿದ್ದರೆ ಅದನ್ನು ಲೋಕಾಯುಕ್ತಕ್ಕೆ ನೀಡಲಿ’ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

"ಡಿ ಕೆ ಶಿವಕುಮಾರ್ ವಿರುದ್ಧ ಭ್ರಷ್ಟಾಚಾರದ ಪ್ರಕರಣಗಳು ದಾಖಲಾಗಿವೆ. ಸಿದ್ದರಾಮಯ್ಯ ಮೇಲೆ ಅರ್ಕಾವತಿ ಹಗರಣದ ಆರೋಪವಿದೆ. ಹೀಗಿದ್ದಾಗ ಅವರು ಯಾವ ನೈತಿಕತೆಯಿಂದ ಆರೋಪ ಮಾಡುತ್ತಿದ್ದಾರೆ? ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸಲು ಕಾಂಗ್ರೆಸ್ ನಾಲಾಯಕ್’ ಎಂದು ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? : ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಕೇವಲ ಲಿಂಗಾಯತರ ಓಲೈಕೆಯಲ್ಲಿದೆ: ಕ್ಷತ್ರಿಯ ಒಕ್ಕೂಟ ಆರೋಪ

"ಒಗ್ಗಟ್ಟೇ ಇಲ್ಲದ ಪಕ್ಷದಲ್ಲಿ ಇರುವ ರಾಹುಲ್ ಗಾಂಧಿ, ಭಾರತ್ ಜೋಡೊ ಪಾದಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದ’ ಎಂದ ಜಗದೀಶ್ ಶೆಟ್ಟರ್, "ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಬೇಕೆಂದು ಅವರದ್ದೇ ಪಕ್ಷದ ಮುಖಂಡರು ಒತ್ತಾಯಿಸುತ್ತಿದ್ದಾರೆ. ಆದರೆ, ಅಧ್ಯಕ್ಷರಾಗಲು ರಾಹುಲ್ ಅವರಿಗೇ ಮನಸ್ಸಿಲ್ಲ. ಹೀಗಿರುವಾಗ ಆ ಪಕ್ಷದ ನಾಯಕತ್ವ ವಹಿಸಿಕೊಂಡು ಅವರೇನು ಮಾಡಬಹುದು ಯೋಚಿಸಿ" ಎಂದು ಶೆಟ್ಟರ್ ವ್ಯಂಗ್ಯವಾಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್