ಭ್ರಷ್ಟಾಚಾರವನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್ ಪಕ್ಷ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

HIRIYURU CM SANKALPA YATRE
  • ಸಾಮಾಜಿಕ ನ್ಯಾಯವೆನ್ನುವ ಕಾಂಗ್ರೆಸ್, ಸಾಮಾಜಿಕ ಅನ್ಯಾಯವನ್ನೇ ಮಾಡಿದೆ
  • ಭದ್ರಾ ಮೇಲ್ದಂಡೆ ಯೋಜನೆಯಡಿ ವಾಣಿವಿಲಾಸಕ್ಕೆ 5 ಟಿಎಂಸಿ ಕಾಯಂ ನೀರು 

"ದೇಶದಾದ್ಯಂತ ಭ್ರಷ್ಟಾಚಾರವನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್ ಪಕ್ಷ. ರಾಜ್ಯದಲ್ಲಿ ಲೋಕಾಯುಕ್ತವನ್ನು ಮುಚ್ಚಿ ಎಸಿಬಿಯನ್ನು ಪ್ರಾರಂಭಿಸಿದರು. ಆ ಸಂದರ್ಭದಲ್ಲಿ 50 ಕ್ಕಿಂತ ಹೆಚ್ಚು ಪ್ರಕರಣಗಳು ಕಾಂಗ್ರೆಸ್‌ನವರ ಮೇಲಿತ್ತು. ಇದಕ್ಕಾಗಿಯೇ ಲೋಕಾಯುಕ್ತವನ್ನು ಮುಚ್ಚಿಹಾಕಿದರು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಬುಧವಾರ ನಡೆದ ಬಿಜೆಪಿ 'ಜನ ಸಂಕಲ್ಪ' ಯಾತ್ರೆ ಉದ್ಘಾಟಿಸಿ ಮಾತನಾಡಿದ ಬೊಮ್ಮಾಯಿ, "ತಾವೇ ಶುದ್ಧಹಸ್ತರು ಎನ್ನುವಂತೆ ಮಾತನಾಡುವ ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ಭ್ರಷ್ಟಾಚಾರ ಮಾಡಿದೆ" ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

Eedina App

"ಸಾಮಾಜಿಕ ನ್ಯಾಯವೆಂದು ಮಾತನಾಡುವ ಕಾಂಗ್ರೆಸ್, ಸಾಮಾಜಿಕ ಅನ್ಯಾಯವನ್ನೇ ಮಾಡಿದೆ. ಹೆಚ್ಚಿನ ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತ ಕಳೆದುಕೊಂಡಿದೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಪರ ಬರುವ ಫಲಿತಾಂಶ ಕರ್ನಾಟಕ ರಾಜ್ಯದಲ್ಲೂ ಪಕ್ಷದ ಗೆಲುವಿಗೆ ಮುನ್ನುಡಿ ಬರೆಯಲಿದೆ" ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

"ಅರ್ಧ ದಶಕಕ್ಕೂ ಹೆಚ್ಚು ಕಾಲ ಕರ್ನಾಟಕವನ್ನು ಕಾಂಗ್ರೆಸ್ ಆಳಿದೆ. ಇಷ್ಟು ವರ್ಷ ಕಾಲ ಅಭಿವೃದ್ಧಿಯನ್ನು ಬಿಟ್ಟು ಬೇರೆ ಎಲ್ಲವನ್ನೂ ಮಾಡಿದೆ" ಎಂದ ಬೊಮ್ಮಾಯಿ, "ಇಲ್ಲಿನ ಜನ ಮತ ಹಾಕಿ ಗೆಲ್ಲಿಸಿದ ಕಾಂಗ್ರೆಸ್ ಪಕ್ಷ, ಜನರಿಗೆ ನೀರು ಪೂರೈಸುವ ಮೂಲಕ ಜನರ ಋಣವನ್ನು ತೀರಿಸುವ ಕೆಲಸ ಮಾಡಲಿಲ್ಲ" ಎಂದು ಕುಟುಕಿದರು.

AV Eye Hospital ad

"ಕಾಂಗ್ರೆಸ್‌ನವರು ಮತ್ತೆ ಅಧಿಕಾರಕ್ಕೆ ಬರಬೇಕೆಂದು ಹಂಬಲಿಸುತ್ತಿದ್ದಾರೆ. ಅದಕ್ಕಾಗಿ ಭಾರತ್‌ ಜೋಡೋ ಹೆಸರಿನಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ನ ಪಾದಯಾತ್ರೆ ಸಂಪೂರ್ಣವಾಗಿ ವಿಫಲವಾಗಿದೆ. ಜನಸಂಕಲ್ಪ ಯಾತ್ರೆಯನ್ನು ಕಂಡು ಕಾಂಗ್ರೆಸ್ ಪಕ್ಷ ಗಾಬರಿಯಾಗಿದೆ. ಆದ್ದರಿಂದ ಆರೋಪಗಳನ್ನು ಮಾಡಿ ಬಿಜೆಪಿಯ ಹೆಸರನ್ನು ಕೆಡಿಸುವ ಪ್ರಯತ್ನವನ್ನು ಆ ಪಕ್ಷದವರು ಮಾಡುತ್ತಿದ್ದಾರೆ" ಎಂದ ಮುಖ್ಯಮಂತ್ರಿಗಳು, "ಕಾಂಗ್ರೆಸ್‌ನ ಈ ಹಿಂದಿನ ಅಧಿಕಾರದ ಐದು ವರ್ಷಗಳಲ್ಲಿ ಅನ್ನಭಾಗ್ಯದಲ್ಲಿ ಕನ್ನ, ಎಸ್‌ಸಿ ಎಸ್‌ಟಿಗಳಿಗೆ ನೀಡುವ ದಿಂಬು ಹಾಸಿಗೆಗಳಲ್ಲಿ ಕನ್ನ, ಸಣ್ಣ ನೀರಾವರಿ, ಜಲಸಂಪನ್ಮೂಲ, ವಿದ್ಯುಚ್ಛಕ್ತಿಯಲ್ಲಿ ಭ್ರಷ್ಟಾಚಾರ ಮಾಡಿದ್ದೇ ಇವರ ಸಾಧನೆಯಾಗಿತ್ತು" ಎಂದು ಹೇಳಿದರು.

HIRIYURU SNKALPA YATRE

ವಾಣಿವಿಲಾಸ ಸಾಗರ ಜಲಾಶಯದ ಅಭಿವೃದ್ಧಿ

"ವಾಣಿವಿಲಾಸ ಸಾಗರ ಜಲಾಶಯದ ಕಾಲುವೆಗಳು ಮುಚ್ಚಿಹೋಗಿದ್ದು, ಅವುಗಳ ಆಧುನೀಕರಣಕ್ಕಾಗಿ 738 ಕೋಟಿ ರೂ.ಗಳನ್ನು ನೀಡಲಾಗಿದೆ. ಕಾಲುವೆಗಳನ್ನು ನವೀಕರಣಗೊಳಿಸುವ ಮೂಲಕ ರೈತರ ಕೃಷಿಗೆ ಸಹಕರಿಸಲಾಗುವುದು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

"ವಾಣಿ ವಿಲಾಸ ಸಾಗರ ಜಲಾಶಯದ ನಿರ್ವಹಣೆ ಯೋಜನೆಯಡಿ 20 ಕೋಟಿ ರೂ. ನೀಡಲಾಗಿದ್ದು, ವಾಣಿ ವಿಲಾಸ ಸಾಗರ ಜಲಾಶಯವನ್ನು ಇನ್ನಷ್ಟು ಗಟ್ಟಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವಾಣಿ ವಿಲಾಸ ಸಾಗರ ಜಲಾಶಯ ಪ್ರವಾಸಿ ಆಕರ್ಷಣೆಯಾಗಿದ್ದು, ಇಲ್ಲೊಂದು ಸುಂದರ ಉದ್ಯಾನವನ್ನು ನಿರ್ಮಿಸಲು ಸರ್ಕಾರ ಅನುಮತಿ ನೀಡಲಿದೆ. ಹಾಗೆಯೇ ಇಲ್ಲಿಗೆ ಭದ್ರಾ ಮೇಲ್ದಂಡೆ ಯೋಜನೆಯಡಿ 5 ಟಿಎಂಸಿ ನೀರನ್ನು ಕಾಯಂ ಆಗಿ ಒದಗಿಸಲು ಆದೇಶ ನೀಡಲಾಗುವುದು" ಎಂದು ಬೊಮ್ಮಾಯಿ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? : 12 ಹೈಡೆನ್ಸಿಟಿ ರಸ್ತೆ ನಿರ್ಮಾಣಕ್ಕೆ 280 ಕೋಟಿ ರೂ. ಮಂಜೂರು: ಮುಖ್ಯಮಂತ್ರಿ ಬೊಮ್ಮಾಯಿ

ಸಂಕಲ್ಪ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಶಾಸಕರಾದ ಪೂರ್ಣಿಮಾ ಶ್ರೀನಿವಾಸ, ಎಂ. ಚಂದ್ರಪ್ಪ, ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್ ಮತ್ತಿತರರು ಹಾಜರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app