ಬಿಬಿಎಂಪಿ ಚುನಾವಣೆಗೆ ಮೊದಲೇ ಕಾಂಗ್ರೆಸ್ ಪಕ್ಷ ಸೋಲೊಪ್ಪಿಕೊಂಡಿದೆ: ಸಚಿವ ಅಶ್ವತ್ಥನಾರಾಯಣ್

BJP Karnataka
  • ಕಾಂಗ್ರೆಸ್‌ನವರು ಗೂಂಡಾಗಿರಿ ಸಂಸ್ಕೃತಿ ಮತ್ತು ತೋಳ್ಬಲ ಪ್ರದರ್ಶಿಸುತ್ತಿದ್ದಾರೆ
  • 243 ಸದಸ್ಯ ಸಂಖ್ಯೆಗೆ ಅನುಗುಣವಾಗಿ ಸಮಿತಿ ರಚಿಸಿ ಮೀಸಲಾತಿ ನಿಗದಿ 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಸಂಬಂಧ ವಾರ್ಡ್ ವಿಂಗಡಣೆ, ಮೀಸಲಾತಿ ವಿಚಾರದಲ್ಲಿ ಆಕ್ಷೇಪಣೆ ಸಲ್ಲಿಸದೆ ಕಾಂಗ್ರೆಸ್ ಪಕ್ಷದವರು ಗೂಂಡಾಗಿರಿ ಸಂಸ್ಕೃತಿ ಮತ್ತು ತೋಳ್ಬಲ ಪ್ರದರ್ಶಿಸುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಸಿ ಎನ್ ಅಶ್ವತ್ಥನಾರಾಯಣ ಆರೋಪ ಮಾಡಿದರು.

ಮಲ್ಲೇಶ್ವರದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, “ಬಿಬಿಎಂಪಿ ವಿಚಾರದಲ್ಲಿ ನಮ್ಮ ಸರ್ಕಾರ ಕಾನೂನಿನ ಪ್ರಕಾರ ಕ್ರಮ ವಹಿಸಿದೆ. ಕಾನೂನು ಉಲ್ಲಂಘನೆ ಆಗಿದ್ದರೆ, ತಕರಾರಿದ್ದರೆ ತೋರಿಸಲಿ. ಚುನಾವಣೆ ನಡೆಯದಂತೆ ನೋಡಿಕೊಳ್ಳುವುದು ಕಾಂಗ್ರೆಸ್ ಕೆಲಸ. ಕಾಂಗ್ರೆಸ್ ಬಿಬಿಎಂಪಿ ಚುನಾವಣೆಯಲ್ಲಿ ಸೋಲು ಒಪ್ಪಿಕೊಂಡಿದೆ. ನಾವು ಬಿಬಿಎಂಪಿ ಚುನಾವಣೆ ನಡೆಸಿಯೇ ಸಿದ್ಧ. ಇದರಲ್ಲಿ ಯಾವುದೇ ಗೊಂದಲವಿಲ್ಲ” ಎಂದರು.

“ಮಾಜಿ ಸಚಿವರು, ಕಾಂಗ್ರೆಸ್ ಮುಖಂಡರಿಗೆ ಕಾನೂನಿನ ಅರಿವಿಲ್ಲ. ವಿಧಾನಸೌಧದಲ್ಲಿ ಅವರ ರೀತಿ ನೀತಿಯನ್ನು ಕಾಂಗ್ರೆಸ್ಸಿಗರು ಪ್ರದರ್ಶನ ಮಾಡಿದ್ದಾರೆ. ಕಾಂಗ್ರೆಸ್ಸಿಗರಿಗೆ ಸಂವಿಧಾನ, ಕಾನೂನಿನ ವ್ಯವಸ್ಥೆಯ ಅರಿವಿಲ್ಲ. ಇದು ಅತ್ಯಂತ ಖಂಡನೀಯ” ಎಂದರು.

“ಸಿದ್ದರಾಮಯ್ಯ ಪದೇಪದೆ ನಿವೃತ್ತಿ ಹೇಳಿಕೆ ಕೊಡುತ್ತಾರೆ. ಕಾಂಗ್ರೆಸ್ ಎಲ್ಲ ಕಡೆ ನೆಲೆ ಕಳೆದುಕೊಳ್ಳುತ್ತಿದೆ. 75 ವರ್ಷಕ್ಕಾದರೂ ಅವರು ಮಾರ್ಗದರ್ಶಿ ಆಗಬೇಕಿತ್ತು. ಅವರ ಹೇಳಿಕೆಯನ್ನು ಅವರಾದರೂ ಪಾಲಿಸಬೇಕು. ಬಿಜೆಪಿ, ಪಕ್ಷದ ಉತ್ಸವ ಮಾಡುತ್ತದೆ; ನಾವು ವ್ಯಕ್ತಿಪೂಜೆ ಮಾಡುವುದಿಲ್ಲ. ಪಕ್ಷ ಎಂದರೆ ಮನೆಯಂತೆ. ಮನೆ ಎಂದ ಮೇಲೆ ಸಣ್ಣಪುಟ್ಟ ಗೊಂದಲ ಸಹಜ. ಅದನ್ನು ಬಗೆಹರಿಸಿಕೊಳ್ಳುತ್ತೇವೆ” ಎಂದು ನುಡಿದರು.

“ಜಮೀರ್, ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ ಅವರ ಪ್ರಕಾರ ಮುಸಲ್ಮಾನ ಮಹಿಳೆಯರು ಜನಪ್ರತಿನಿಧಿ ಆಗಬಾರದೇ? ಅವರೆಲ್ಲರದು ರಾಜಕೀಯ ಸ್ಟಂಟ್. ವೇದಿಕೆಗಳನ್ನು ಬಳಸದೆ ಕಾನೂನು ಕೈಗೆ ತೆಗೆದುಕೊಳ್ಳುವ ಮತ್ತು ಬಾಯಿಗೆ ಬಂದಂತೆ ಮಾತನಾಡಿ ವಿಧಾನಸೌಧದ ಘನತೆಯನ್ನು ಹಾಳು ಮಾಡಿದ್ದು ಖಂಡನೀಯ. ಮುಖ್ಯ ಕಾರ್ಯದರ್ಶಿ ಹಾಗೂ ಉನ್ನತಾಧಿಕಾರಿಗಳ ಮುಂದೆ ನೀಡಿದ ಹೇಳಿಕೆ ಖಂಡನೀಯ” ಎಂದು ತಿಳಿಸಿದರು.

“ಬೆಂಗಳೂರಿಗೆ ಪ್ರತ್ಯೇಕ ಕಾಯಿದೆ ತರುವ ಬೇಡಿಕೆ ಇತ್ತು. ನೂತನ ಕಾಯಿದೆಯನ್ನು ನಮ್ಮ ಸರ್ಕಾರ ಜಾರಿಗೊಳಿಸಿದೆ. ಕೋರ್ಟ್ ತೀರ್ಪಿನ ಆಧಾರದಡಿ ನಮ್ಮ ಸರ್ಕಾರವು 'ಡಿಲಿಮಿಟೇಶನ್' ಮಾಡಿದೆ. ಎಲ್ಲ ಸವಾಲಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆದಿದೆ” ಎಂದರು.

ಈ ಸುದ್ದಿ ಓದಿದ್ದೀರಾ?: ‘ಹರ್ ಘರ್ ತಿರಂಗಾ’ ಅಭಿಯಾನ| ಕೇಂದ್ರವು ಕಾರ್ಪೊರೇಟ್ ಕಂಪನಿಗಳಿಗೆ ಧ್ವಜ ಪೂರೈಸಲು ಅನುಮತಿ ನೀಡಿದ್ಯಾಕೆ?

“ಮೀಸಲಾತಿ ವಿಚಾರದಲ್ಲೂ ಪುನರ್ ಪರಿಶೀಲನೆ ಅನಿವಾರ್ಯವಾಗಿತ್ತು. 243 ಸದಸ್ಯ ಸಂಖ್ಯೆಗೆ ಅನುಗುಣವಾಗಿ ಸಮಿತಿ ರಚಿಸಿ ಮೀಸಲಾತಿ ನಿಗದಿ ಮಾಡಲಾಗಿದೆ. ಶೇ.50 ಒಬಿಸಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಕೊಟ್ಟಿದೆ. ಸಾಮಾನ್ಯ ವರ್ಗಕ್ಕೆ ಶೇ. 50, ಮಹಿಳೆಯರಿಗೆ ಶೇ.50 ಮೀಸಲಾತಿ ಕೊಟ್ಟಿದೆ. ಇದಕ್ಕೆ ವಿರೋಧ, ಆಕ್ಷೇಪಣೆ ಇದ್ದರೆ ಅದಕ್ಕೆ ಅವಕಾಶವಿದೆ” ಎಂದು ಹೇಳಿದರು.

“ಬಿಜೆಪಿಯಲ್ಲಿ ವಲಸಿಗರು, ಮೂಲ ಪಕ್ಷದವರು ಎಂಬ ವ್ಯತ್ಯಾಸ ಇಲ್ಲ. ಕಾನೂನಿನ ಪ್ರಕಾರ ಹಾಗೂ ಕಾಲಬದ್ಧವಾದ ರೀತಿಯಲ್ಲಿ ಚುನಾವಣೆಗೆ ಸಿದ್ಧರಾಗಿದ್ದೇವೆ. ಕಾನೂನು ಪ್ರಕಾರ ಶೇ. 50 ಮಹಿಳಾ ಮೀಸಲಾತಿಯನ್ನು ನೀಡಿದ್ದೇವೆ. ಇಡೀ ಬೆಂಗಳೂರನ್ನು ಒಂದು ಘಟಕವಾಗಿ ಪರಿಗಣಿಸಿ 243ಕ್ಕೆ ಯಾವ ಪ್ರಕಾರ ಎಷ್ಟು ಮೀಸಲಾತಿ ಕೊಡಬೇಕೆಂದು ಪರಿಗಣಿಸಲಾಗಿದೆ. ವಿಧಾನಸಭಾ ಕ್ಷೇತ್ರವಾರು ಘಟಕ ಪರಿಗಣಿಸಲು ಅವಕಾಶವಿಲ್ಲ” ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ವಿಧಾನಸಭೆಯ ಮುಖ್ಯ ಸಚೇತಕ ಎಂ. ಸತೀಶ್ ರೆಡ್ಡಿ ಮಾತನಾಡಿ, “ಗಾಂಧಿನಗರದ ಶಾಸಕರು ತಮ್ಮ ಪ್ರತಿಭಟನೆ ಮಾಡಿದ್ದರು. ಆದರೆ, ಅವರು ಯಾವುದೇ ಆಕ್ಷೇಪಣೆ ಸಲ್ಲಿಸಿರಲಿಲ್ಲ. 2015ರಲ್ಲಿ ಜೆಡಿಎಸ್‌ನಲ್ಲಿದ್ದ ಜಮೀರ್ ಅವರು ಹೆಚ್ಚು ಮಹಿಳಾ ಪ್ರತಿನಿಧಿಗಳ ಬಗ್ಗೆ ಆಗ ಪ್ರಶ್ನೆ ಎತ್ತಿರಲಿಲ್ಲ. ಈಗ ಯಾಕೆ ಮಾತನಾಡುತ್ತಾರೆ” ಎಂದು ಪ್ರಶ್ನಿಸಿದರು.

“ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು, ಹಿಂದಿನ ಚುನಾವಣೆಯಲ್ಲಿ ಹೆಚ್ಚು ಮಹಿಳೆಯರಿಗೆ ಅವಕಾಶ ಕೊಟ್ಟಿದ್ದರು. ಆದರೂ ನಾವು ಗೆದ್ದು ಬಂದಿದ್ದೇವೆ. ಕಾಂಗ್ರೆಸ್ಸಿಗರು ಮಹಿಳಾ ವಿರೋಧಿಗಳು. ಮಹಿಳೆಯರಿಗೆ ಹೆಚ್ಚು ಅವಕಾಶ ಕೊಟ್ಟದ್ದನ್ನು ಸ್ವಾಗತಿಸಬೇಕಿತ್ತು. ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸುತ್ತಿದೆ” ಎಂದು ಆಕ್ಷೇಪಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್