
- ನಮ್ಮಲ್ಲಿ ಸಮಸ್ಯೆ ಇರಬಹುದು. ಎಲ್ಲವೂ ಸರಿ ಎಂದು ಹೇಳುವುದಿಲ್ಲ ಎಂದ ಕೆಪಿಸಿಸಿ ಅಧ್ಯಕ್ಷ
- ಯಾರೇ ಅಭ್ಯರ್ಥಿ ಆದರೂ ನೀವು ಮತ ಹಾಕಬೇಕಿರುವುದು ಕಾಂಗ್ರೆಸ್ಗೆ ಎಂದ ಡಿಕೆಶಿ
ಕಾಂಗ್ರೆಸ್ ಪಕ್ಷಕ್ಕೆ ಅದರದ್ದೇ ಆದ ಸಿದ್ಧಾಂತ ಇದೆ. ಕಾಂಗ್ರೆಸ್ ಜಾತಿ ಮೇಲೆ ನಿಂತ ಪಕ್ಷವಲ್ಲ, ಬದಲಿಗೆ ನೀತಿ ಮೇಲೆ ನಿಂತಿದೆ. ಇಂತಹ ಪಕ್ಷದ ಭಾಗವಾಗಿರುವ ನಾವೆಲ್ಲ, ನೀತಿ ಮೇಲೆ ದೇಶ ಕಟ್ಟಲು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಮೂಡಿಗೆರೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, "ನನಗೆ ನಿಮ್ಮ ಹೂವಿನ ಹಾರ, ಜೈಕಾರ ಬೇಡ. ನಾನು ಅದಕ್ಕಾಗಿ ಇಲ್ಲಿಗೆ ಬಂದಿಲ್ಲ. ಬದಲಾಗಿ ಮುಂದಿನ ಚುನಾವಣೆಯಲ್ಲಿ ಮೂಡಿಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ವಿಧಾನಸೌಧಕ್ಕೆ ನೀವು ಕಳಿಸಿ ಕೊಟ್ಟಾಗ ಅದೇ ನನಗೆ ಹೂವಿನ ಹಾರ, ಜೈಕಾರ ಹಾಕಿದಂತೆ" ಎಂದು ಶಿವಕುಮಾರ್ ಹೇಳಿದರು.

ಚುನಾವಣೆಯಲ್ಲಿ ನೀವು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಬೇಕು. ಯಾರೇ ಅಭ್ಯರ್ಥಿ ಆದರೂ ನಿಜವಾದ ಅಭ್ಯರ್ಥಿಗಳು ನಾನು, ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು. ಹೀಗಾಗಿ ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಈ ಕ್ಷೇತ್ರ ಬಹಳ ಜನನಾಯಕರನ್ನು ನೀಡಿದೆ. ಮುಂದಿನ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಯಾವ ಮೀಸಲಾತಿ ಸಿಗುತ್ತದೋ ನೋಡಬೇಕು. ಇಲ್ಲಿನ ಜನ ವಿದ್ಯಾವಂತರು, ಬುದ್ಧಿವಂತರು ಇದ್ದಾರೆ. ಹೀಗಾಗಿ ಜನ ಸೇವೆ ಮಾಡುವವರನ್ನು ಆಯ್ಕೆ ಮಾಡಿ ಕಳುಹಿಸಿ ಎಂದು ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಅದರದೇ ಆದ ಸಿದ್ಧಾಂತ ಇದೆ. ಕಾಂಗ್ರೆಸ್ ಜಾತಿ ಮೇಲಲ್ಲ, ನೀತಿ ಮೇಲೆ ನಿಂತಿದೆ. ಆದರೆ ಕೇಂದ್ರದ ಮೋದಿ ಸರ್ಕಾರ ಈ ದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ಜನರಲ್ಲಿ ಧರ್ಮ, ದ್ವೇಷದ ವಿಷ ಬೀಜ ಬಿತ್ತುತ್ತಿದ್ದಾರೆ. ಅವರು ಭಾವನೆಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಶಿವಕುಮಾರ್ ಕಿಡಿಕಾರಿದರು.

ರಾಹುಲ್ ಗಾಂಧಿ ಅವರು ಇದರ ವಿರುದ್ಧ ಹೋರಾಡಿ ದೇಶವನ್ನು ಒಂದುಗೂಡಿಸಲು ಭಾರತ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಭಾರತ ಜೋಡೋ ಯಾತ್ರೆ ಸಂದರ್ಭದಲ್ಲಿ ವಯಸ್ಸಾದ ಮಹಿಳೆ ಸೌತೇಕಾಯಿ ತಂದು ಕೊಟ್ಟು, ಇದು ನಿಮ್ಮ ಅಜ್ಜಿ ಇಂದಿರಾಗಾಂಧಿಯವರು ಕೊಟ್ಟ ಜಮೀನಿನಲ್ಲಿ ಬೆಳೆದದ್ದು ಎಂದರು. ಇದು ಈ ದೇಶದ ಇತಿಹಾಸ. ಈ ದೇಶಕ್ಕೆ ಶಕ್ತಿ ತುಂಬಲು ಬಡವರಿಗೆ ಜಮೀನು, ನಿವೇಶನ ನೀಡಿದ್ದು, ಬ್ಯಾಂಕ್ ರಾಷ್ಟ್ರೀಕರಣ ಮಾಡಿದ್ದು, ಉದ್ಯೋಗ ಮಾಡಿದ್ದು ಕಾಂಗ್ರೆಸ್ ಪಕ್ಷ.
ಬಿಜೆಪಿ ಇಂತಹ ಒಂದು ಯೋಜನೆ ಜಾರಿ ತಂದಿಲ್ಲ. ಅವರು ನೋಟು ರದ್ದು, ಆರ್ಟಿಕಲ್ 370, ಏಕರೂಪ ನಾಗರಿಕ ಕಾಯ್ದೆ, ಇಂತಹ ಭಾವನಾತ್ಮಕ ವಿಚಾರಗಳತ್ತ ಗಮನಹರಿಸಿದ್ದಾರೆ. ಭಾವನೆ ಬಿಟ್ಟು ಜನರ ಹೊಟ್ಟೆ ತುಂಬುವ ಯಾವ ಕಾರ್ಯಕ್ರಮವನ್ನು ಬಿಜೆಪಿ ಸರ್ಕಾರ ನೀಡಿದೆ? ಎಂದು ಶಿವಕುಮಾರ್ ಪ್ರಶ್ನಿಸಿದರು.

ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಡಿ ಕೆ ಶಿವಕುಮಾರ್, ನಿಮ್ಮ ಅಧಿಕಾರ ಅವಧಿಯಲ್ಲಿ ಜನರ ಬದುಕಿನಲ್ಲಿ ಬದಲಾವಣೆ ತರಲು ಯಾವ ನಿರ್ಧಾರ ಕೈಗೊಂಡಿದ್ದೀರಿ ಎಂದು ಸಿ. ಟಿ ರವಿ, ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರನ್ನು ಕೇಳಲು ಬಯಸುತ್ತೇನೆ. ಬೆಲೆ ಏರಿಕೆಯಿಂದ ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಆದಾಯ ಡಬಲ್ ಆಗುತ್ತೆ ಎಂದರು. ಆಯಿತಾ? ರಸಗೊಬ್ಬರ, ಪೆಟ್ರೋಲ್, ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಾಗಿದೆ. ಆದಾಯ ಪಾತಾಳಕ್ಕೆ ಕುಸಿದು, ವೆಚ್ಚ ಆಕಾಶಕ್ಕೆ ಏರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಸೇರಲು ಮುಂದಾಗಿದ್ದ ವೈದ್ಯರೋರ್ವರಿಗೆ ಸಿಬಿಐ ದಾಳಿ ಮಾಡಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಈ ಡಿ.ಕೆ. ಶಿವಕುಮಾರ್ ಅವರಿಗೆ ಕಿರುಕುಳ ಕೊಟ್ಟಂತೆ ಬೇರೆ ನಾಯಕರಿಗೆ ಕಿರುಕುಳ ನೀಡುತ್ತೀರಾ? ಬಿಜೆಪಿಯ ಬೆದರಿಕೆಗೆ ಕಾಂಗ್ರೆಸ್ನ ಯಾವುದೇ ನಾಯಕರು ಹೆದರುವುದಿಲ್ಲ. ಹುಟ್ಟಿದ ಮೇಲೆ ಸಾಯಲೇಬೇಕು. ಈ ಸರ್ಕಾರ ಬಿಜೆಪಿಯ ಒಬ್ಬ ನಾಯಕರ ಮೇಲೆ ದಾಳಿ ಮಾಡಿಲ್ಲ. ಯಾರು ಹೇಗಿದ್ದರು, ಈಗ ಹೇಗಿದ್ದಾರೆ ಎಂದು ನನಗೂ ಗೊತ್ತಿದೆ. ಇದಕ್ಕೆ ಉತ್ತರ ನೀಡಬೇಕಾಗಿರುವುದು ನಾನಲ್ಲ, ನೀವು ಎಂದು ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

ಮಲೆನಾಡು ಹಾಗೂ ಕರಾವಳಿ ಪ್ರದೇಶಕ್ಕೆ ಕಾಂಗ್ರೆಸ್ ಪಕ್ಷ ಪ್ರತ್ಯೇಕ ಪ್ರಣಾಳಿಕೆ ನೀಡುತ್ತದೆ. ಈ ಭಾಗದ ರೈತರ ಹಾಗೂ ಜನರ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಪರಿಹರಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ತಿಳಿಸಿದರು.
ಬಗರ್ ಹುಕುಂ ವಿಚಾರವಾಗಿ ಮಾತನಾಡಿದ ಡಿಕೆಶಿ, ಅರಣ್ಯ ಭೂಮಿ ವಿಚಾರದಲ್ಲಿ ಪರಿಶಿಷ್ಟರಿಗೆ 25 ವರ್ಷ ಸಾಮಾನ್ಯ ವರ್ಗದವರಿಗೆ 75 ವರ್ಷ ಎಂದು ಇದೆ. ಈ ವಿಚಾರವಾಗಿ ರಾಹುಲ್ ಗಾಂಧಿಯವರ ಜತೆ ಚರ್ಚೆ ಮಾಡಿದ್ದು, ರೈತರು ಎಂದರೆ ಎಲ್ಲರೂ ಒಂದೇ. ಮುಂದೆ ಯಾವುದೇ ಒತ್ತಡ ಬಂದರೂ ನೀವು ಜಮೀನಿನಿಂದ ಹೊರ ಹೋಗಬೇಡಿ. ಕಾಂಗ್ರೆಸ್ ಸರ್ಕಾರ ನಿಮ್ಮ ರಕ್ಷಣೆ ಮಾಡಲಿದೆ. ಇದು ಕಾಂಗ್ರೆಸ್ ಸಂಕಲ್ಪ. ನೀವು ನಮ್ಮ ಮೇಲೆ ವಿಶ್ವಾಸ ಇಡಿ. ನಾವು ನುಡಿದಂತೆ ನಡೆಯುತ್ತೇವೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? : ಮೋದಿಗೇನು ರಾವಣನಂತೆ ನೂರು ತಲೆಗಳಿವೆಯೇ ಎಂದ ಮಲ್ಲಿಕಾರ್ಜುನ ಖರ್ಗೆ; ಬಿಜೆಪಿಯಿಂದ ಖಂಡನೆ
ಕಾರ್ಯಕರ್ತರಲ್ಲಿ ಮನವಿ ಮಾಡಿದ ಶಿವಕುಮಾರ್, ನಿಮ್ಮಲ್ಲಿ ಏನೇ ಭಿನ್ನಾಭಿಪ್ರಾಯ ಇದ್ದರೂ ಅದನ್ನು ಪಕ್ಕಕ್ಕೆ ಇಡಿ. ನಿಮ್ಮ ವೈಯಕ್ತಿಕ ವಿಚಾರಕ್ಕೆ ಕಾರ್ಯಕರ್ತರನ್ನು ಬಲಿ ನೀಡುವುದು ಬೇಡ. ನಾವು ತ್ಯಾಗದ ಮನೋಭಾವ ಬೆಳೆಸಿಕೊಳ್ಳಬೇಕು, ನಾವು ಯಾರನ್ನೇ ಅಭ್ಯರ್ಥಿ ಮಾಡಿದರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಎಲ್ಲರೂ ಒಗ್ಗಟ್ಟಿನಿಂದ ಬೂತ್ಗೆ ಹೋಗಿ ಪಕ್ಷ ಸಂಘಟನೆ ಮಾಡಬೇಕು. ಬೇರೆ ಪಕ್ಷದ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಬೇರೆ ಪಕ್ಷದಿಂದ ಬಂದ ಮಾತ್ರಕ್ಕೆ ನಿಮ್ಮ ಕುರ್ಚಿಗೆ ಕಂಟಕ ಬರುವುದಿಲ್ಲ. ಪಕ್ಷಕ್ಕೆ ಬಲ ತುಂಬುವ ಬಗ್ಗೆ ಗಮನಹರಿಸಿ. ಎಲ್ಲರೂ ಸಕ್ರಿಯವಾಗಿ ಕೆಲಸ ಮಾಡಿ. ಕಾಂಗ್ರೆಸ್ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿ ಎಂದು ಶಿವಕುಮಾರ್ ಮನವಿ ಮಾಡಿದರು.
"ನಮ್ಮಲ್ಲಿ ಸಮಸ್ಯೆ ಇರಬಹುದು. ಎಲ್ಲವೂ ಸರಿ ಎಂದು ಹೇಳುವುದಿಲ್ಲ. ನಾವು ತಪ್ಪು ಮಾಡಿದ್ದೇವೆ. ಈ ಬಾರಿ ನಮ್ಮ ತಪ್ಪು ಸರಿಮಾಡಿಕೊಳ್ಳಲು ಅವಕಾಶ ನೀಡಿ. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ನಿಮ್ಮ ಮನೆ ಬಾಗಿಲಿಗೆ ಅಧಿಕಾರ ಬರುತ್ತಿದೆ. ನಾನು ಇಡೀ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಸಿದ್ದರಾಮಯ್ಯ ಅವರು ಪ್ರವಾಸ ಮಾಡಲಿದ್ದಾರೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ" ಎಂದು ಶಿವಕುಮಾರ್ ಪಕ್ಷದ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.