ಆಝಾನ್ ವಿಚಾರದಲ್ಲಿ ಅಶಾಂತಿ ಸೃಷ್ಟಿಸುತ್ತಿರುವವರು ಭಯೋತ್ಪಾದಕರು: ಬಿ ಕೆ ಹರಿಪ್ರಸಾದ್ ವಾಗ್ದಾಳಿ

  • ಶಾಂತಿ ಕದಡುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಆಗ್ರಹ
  • ಶಾಂತಿ ಕದಡುತ್ತಿರುವವರು ಸಂಘ ಪರಿವಾರದ ಆಕ್ಟೋಪಸ್ ಇದ್ದ ಹಾಗೆ: ಆರೋಪ

ರಾಜ್ಯದಲ್ಲಿ ಧರ್ಮ-ಧರ್ಮಗಳ ನಡುವೆ ವಿಷ ಬೀಜ ಬಿತ್ತುವವರು ಹಾಗೂ ಅಶಾಂತಿ ಸೃಷ್ಟಿಸುವ ಮೂಲಕ ಅಭಿಯಾನವನ್ನು ಪ್ರಾರಂಭ ಮಾಡುತ್ತಿರುವವರು ಭಯೋತ್ಪಾದಕರು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. 

ಉನ್ನತ ಶಿಕ್ಷಣ ಇಲಾಖೆ ಆಯುಕ್ತರ ವಿರುದ್ಧ ವಿಕಾಸಸೌಧದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, “ಆಝಾನ್ ವಿಚಾರ ಮುಂದಿಟ್ಟುಕೊಂಡು ರಾಜ್ಯಾದ್ಯಂತ ಅಶಾಂತಿ ಸೃಷ್ಟಿಸುತ್ತಿರುವವರನ್ನು ಕೂಡಲೇ ಯುಎಪಿಎ (ದೇಶದ್ರೋಹ) ಕಾಯ್ದೆ ಅಡಿಯಲ್ಲಿ ಬಂಧನ ಮಾಡಬೇಕು” ಎಂದು ಆಗ್ರಹಿಸಿದರು. 

Eedina App

“ಸರ್ಕಾರ ತನ್ನ ವೈಫಲ್ಯ ಮುಚ್ಚಿ ಹಾಕಲು ಸಮಾಜ ವಿರೋಧಿ ಶಕ್ತಿಗಳನ್ನು ಬಳಸಿಕೊಳ್ಳುತ್ತಿದೆ. ಶಾಂತಿ ಕದಡುತ್ತಿರುವವರು ಸಂಘ ಪರಿವಾರದ ಆಕ್ಟೋಪಸ್ ಇದ್ದ ಹಾಗೆ, ಇವರ ಕೈಯಲ್ಲಿ ಇಂಥಹ ಕೆಲಸ ಮಾಡಿಸುತ್ತಿದ್ದಾರೆ‌. ರಾಜ್ಯದಲ್ಲಿ ಶಾಂತಿ ಕದಡಲು ಯಾರು ಪ್ರಯತ್ನ ಮಾಡುತ್ತಿದ್ದಾರೋ ಅವರನ್ನು ಭಯೋತ್ಪಾದಕರು ಎಂದು ಪರಿಗಣಿಸಿ ಯುಎಪಿಎ ಅಡಿಯಲ್ಲಿ ಬಂಧಿಸಬೇಕು” ಎಂದರು. 

ಈ ಸುದ್ದಿ ಓದಿದ್ದೀರಾ?: ಸುಪ್ರಭಾತ ಅಭಿಯಾನದ ನೆಪದಲ್ಲಿ ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ: ಆರಗ ಜ್ಞಾನೇಂದ್ರ ಎಚ್ಚರಿಕೆ

AV Eye Hospital ad

ಮರಿತಿಬ್ಬೇಗೌಡರ ಹೋರಾಟಕ್ಕೆ ಬೆಂಬಲ

"1200 ಉಪನ್ಯಾಸಕರ ವರ್ಗಾವಣೆಯ ಸರ್ಕಾರದ ನಿರ್ಣಯ ಅವೈಜ್ಞಾನಿಕವಾಗಿದೆ. ಸಚಿವರ ಗಮನಕ್ಕೆ ತರುವ ನಿಟ್ಟಿನಲ್ಲಿ ಪರಿಷತ್ ಸದಸ್ಯ ಮರಿತಿಬ್ಬೇಗೌಡರ ಧರಣಿಗೆ ಬೆಂಬಲ ನೀಡಿದ್ದೇವೆ. ಏಪ್ರಿಲ್, ಮೇ ತಿಂಗಳಲ್ಲಿ ಕಾಲೇಜು ಪರೀಕ್ಷೆ, ಮೌಲ್ಯಮಾಪನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅವೈಜ್ಞಾನಿಕ ವರ್ಗಾವಣೆ ಸರಿಯಲ್ಲ" ಎಂದರು.

“ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಉಪನ್ಯಾಸಕರಲ್ಲಿ ಗರ್ಭಿಣಿ ಮಹಿಳೆಯರು, ಅಂಗವಿಕಲರು ಇರುತ್ತಾರೆ. ಅವರನ್ನು ಏಕಾಏಕಿ ವರ್ಗಾವಣೆ ಮಾಡುತ್ತಿರುವುದು ದಂಧೆಯ ಭಾಗವಾಗಿದೆ. ಸರ್ಕಾರದಲ್ಲಿ ಕೆಲವರು ಕಮಿಷನ್ ದಂಧೆ ನಡೆಸುವುದಕ್ಕೆ ಕುಖ್ಯಾತಿ ಪಡೆದಿದೆ” ಎಂದರು. 

“ಶಿಕ್ಷಕರ ವರ್ಗಾವಣೆಯಲ್ಲಿ ಕಮಿಷನ್ ದಂಧೆಯ ಊಹಾಪೋಹಗಳು ಇವೆ. ವರ್ಗಾವಣೆ ನೀತಿಯನ್ನು ಸರ್ಕಾರ ತರಬೇಕು. ಏಕಾಏಕಿ ವರ್ಗಾವಣೆ ಮಾಡುವುದರಿಂದ ಶೈಕ್ಷಣಿಕ ಕೆಲಸಗಳಿಗೆ ಅಡ್ಡಿ ಆಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ತೊಂದರೆ ಆಗುತ್ತಿದೆ. ಮರಿತಿಬ್ಬೇಗೌಡರ ಧರಣಿ ಹಿನ್ನೆಲೆಯಲ್ಲಿ ಸಚಿವರು ಖುದ್ದಾಗಿ ಭೇಟಿ ನೀಡಿ ಮಾತನಾಡಬೇಕು. ಅಧಿಕಾರಿಗಳ ಮಾತು ಕೇಳಿಕೊಂಡು ವರ್ಗಾವಣೆ ಮಾಡಬಾರದು. ಸಚಿವರು ತಕ್ಷಣವೇ ವರ್ಗಾವಣೆ ಪ್ರಕ್ರಿಯೆ ರದ್ದು ಮಾಡಬೇಕು" ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ಸದಸ್ಯರಾದ ವೆಂಕಟೇಶ್, ಗೋವಿಂದ ರಾಜು, ಮೋಹನ್ ಕೊಂಡಜ್ಜಿ ಭಾಗವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app