ಮಳೆಗಾಲ ಅಧಿವೇಶನ | ಎರಡು ದಿನದಲ್ಲಿ ಬೆಳೆ ಪರಿಹಾರ ವಿತರಣೆ: ಸಚಿವ ಆರ್ ಅಶೋಕ್

  • ಶೀಘ್ರ ಬೆಳೆ ಹಾನಿಗೆ ಪರಿಹಾರ ಧನ ವಿತರಿಸುತ್ತೇವೆ
  • ಮಳೆಹಾನಿ ಪರಿಹಾರಕ್ಕಾಗಿ 116 ಕೋಟಿ ಬಿಡುಗಡೆ

ಅತಿವೃಷ್ಟಿಯಿಂದಾಗಿ ಆಗಿರುವ ಬೆಳೆ ಹಾನಿಗೆ ಇನ್ನೆರಡು ದಿನಗಳಲ್ಲಿ ಪರಿಹಾರ ಧನ ವಿತರಿಸಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು.

ವಿಧಾನಮಂಡಲ ಮುಂಗಾರು ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ನಿಯಮ 69ರ ಅಡಿ ರಾಜ್ಯದ ಮಳೆ ಹಾನಿ ಸಮಸ್ಯೆ ಕುರಿತಂತೆ ಚರ್ಚೆ ನಡೆಸುತ್ತಿದ್ದರು. ಈ ವೇಳೆ ರಾಜ್ಯದ ಬೆಳೆಹಾನಿಗೆ ಸರ್ಕಾರ ಇದುವರೆಗೆ ಪರಿಹಾರ ಧನ ನೀಡಿಲ್ಲ ಏಕೆ ಎಂದು ಪ್ರಶ್ನಿಸಿದರು. ಜೊತೆಗೆ ಹಾನಿಗೊಳಗಾಗಿರುವ ಎಲ್ಲಾ ಬೆಳೆಗೂ ಪರಿಹಾರ ಕೊಡಬೇಕು ಎಂಬ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದರು.

ಈ ಸುದ್ದಿ ಓದಿದ್ದೀರಾ?: ಮಳೆಗಾಲ ಅಧಿವೇಶನ | ಒತ್ತುವರಿಯಾದ ರಾಜಕಾಲುವೆ 20 ವರ್ಷದಲ್ಲಿ ತೆರವಾಗಿದ್ದೆಷ್ಟು? 

ಇದಕ್ಕೆ ಉತ್ತರವಾಗಿ ಮಾತನಾಡಿದ ಸಚಿವ ಆರ್ ಅಶೋಕ್, "ಬೆಳೆಹಾನಿ ಪರಿಹಾರವನ್ನು ಸರ್ಕಾರ ಘೋಷಿಸಿದೆ. ಬೇರೆ ರಾಜ್ಯಗಳಿಗಿಂತ ಮುಂಚಿತವಾಗಿ ನಮ್ಮಲ್ಲಿ ಪರಿಹಾರ ನೀಡಲಾಗುತ್ತಿದೆ. ಆದರೆ ತಾವು ಹೇಳಿದಂತೆಯೇ ರೈತರಿಗೆ ಹಣ ತಲುಪಿಲ್ಲ. ಮಳೆ ಇನ್ನೂ ಬರುತ್ತಿರುವ ಕಾರಣ ಸರ್ವೆಕಾರ್ಯ ನಡೆಸಲಾಗುತ್ತಿಲ್ಲ. ಆದರೂ ಇರುವ ಮಾಹಿತಿಗಳ ಆಧಾರದಲ್ಲಿ ರೈತರಿಗೆ ಸೇರಬೇಕಾದ ಪರಿಹಾರದ ಹಣವನ್ನು ಇನ್ನೆರಡು ದಿನಗಳಲ್ಲಿ ಅವರ ಕೈಸೇರುವಂತೆ ಮಾಡುತ್ತೇವೆ" ಎಂದು ಹೇಳಿದರು.

ಒಟ್ಟಾರೆ ಈ ಸಲುವಾಗಿ 116 ಕೋಟಿ ರೂಪಾಯಿಗಳನ್ನು ಸರ್ಕಾರ ಮಳೆಹಾನಿ ಪರಿಹಾರಕ್ಕಾಗಿ ಬಿಡುಗಡೆ ಮಾಡಿದೆ ಎಂದು ಸದನಕ್ಕೆ ಸಚಿವರು ಮಾಹಿತಿ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್