ಈ ದಿನ ವಿಶೇಷ: ಯಡಿಯೂರಪ್ಪ ನೀಡಿದ ಎಚ್ಚರಿಕೆಯ ಮಾತಿಗೆ ನಡುಗಿದ ಬಿಜೆಪಿ; ಮುಂದೇನು ಮಾಡುತ್ತಾರೆ ಅಮಿತ್ ಶಾ?

ಬಿಜೆಪಿ ಪಕ್ಷದೊಳಗೆ ಹೊಂದಾಣಿಕೆಯಾಗದ ನಾಯಕತ್ವದ ತಾಳಮೇಳದ ಬಗೆಗೂ ಯಡಿಯೂರಪ್ಪ ಅಮಿತ್ ಶಾ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೇ ಸಾಗುತ್ತಾ ಹೋದರೆ ಮುಂದಿನ ಚುನಾವಣೆ ವೇಳೆಗೆ ಬಹಳ ಸಂಕಷ್ಟದ ದಿನಗಳನ್ನು ಪಕ್ಷ ಎದುರಿಸಬೇಕಾಗುತ್ತದೆಂಬ ವಿಷಯವನ್ನೂ ಅವರು ಅಮಿತ್ ಶಾಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಸ್ವಪಕ್ಷ ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪಕ್ಷದ ವರಿಷ್ಠರ ಮೂಲಕ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಾರೆ. ಅವರು ಕೊಟ್ಟಿರುವ ಸಂದೇಶ ಬಿಜೆಪಿಗರನ್ನು ಹೌಹಾರುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ತುರ್ತಾಗಿ ಪಕ್ಷದ ಪ್ರಮುಖರ ಸಭೆ ಕರೆದು ಮುಂದಿನ ಕಾರ್ಯತಂತ್ರ ರೂಪಿಸಲು ಬಿಜೆಪಿ ಮುಖಂಡರು ನಿರ್ಧರಿಸಿದ್ದಾರೆ.

ಯಡಿಯೂರಪ್ಪ ನೀಡಿರುವ ಆ ಎಚ್ಚರಿಕೆ, ಪಕ್ಷದೊಳಗೆ ಸಂಚಲನ ಸೃಷ್ಟಿಸುವ ಜೊತೆಗೆ ಹೀಗಾದರೆ ಮುಂದೆ ಹೇಗೆ ಎನ್ನುವ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

ಅಂದಹಾಗೆ, ಯಡಿಯೂರಪ್ಪ ರಾಜ್ಯ ಬಿಜೆಪಿ ವಿಚಾರದಲ್ಲಿ ಕೆಲವು ಮಹತ್ವದ ಮಾಹಿತಿಯನ್ನು ಬಿಜೆಪಿಯ ಚುನಾವಣಾ ತಂತ್ರಗಾರರೆಂದು ಬಿಂಬಿತರಾಗಿರುವ ಅಮಿತ್ ಶಾ ಅವರಿಗೆ ನೀಡಿದ್ದಾರೆ. ಎರಡು ದಿನಗಳ ಹಿಂದೆ ಬೆಂಗಳೂರಿಗೆ ಕಾರ್ಯಕ್ರಮವೊಂದರ ನಿಮಿತ್ತ ಬಂದಿದ್ದ ಅಮಿತ್ ಶಾ ಅವರನ್ನು ಪ್ರತ್ಯೇಕವಾಗಿ ಭೇಟಿಯಾದ ಯಡಿಯೂರಪ್ಪ, ರಾಜ್ಯ ಬಿಜೆಪಿಯೊಳಗಿನ ಬೆಳವಣಿಗೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. 

ಈ ವೇಳೆ ಪಕ್ಷದೊಳಗೆ ಹೊಂದಾಣಿಕೆಯಾಗದ ನಾಯಕತ್ವದ ತಾಳಮೇಳದ ಬಗೆಗೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೇ ಸಾಗುತ್ತಾ ಹೋದರೆ ಮುಂದಿನ ಚುನಾವಣೆ ವೇಳೆಗೆ ಬಹಳ ಸಂಕಷ್ಟದ ದಿನಗಳನ್ನು ಪಕ್ಷ ಎದುರಿಸಬೇಕಾಗುತ್ತದೆಂಬ ವಿಷಯವನ್ನೂ ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ.

ಅಮಿತ್ ಶಾ ಜೊತೆಗಿನ ಚರ್ಚೆ ವೇಳೆ ಸಿದ್ದರಾಮಯ್ಯ ಅಮೃತ ಮಹೋತ್ಸವದ ವಿಚಾರವಾಗಿ ಮಾತನಾಡಿದ ಯಡಿಯೂರಪ್ಪ, ಕಾರ್ಯಕ್ರಮದಲ್ಲಿ ನೆರೆದಿದ್ದ ಜನಸಾಗರದ ಬಗ್ಗೆ ತಮ್ಮ ವಿಶ್ಲೇಷಣೆಯನ್ನು ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ ಹೆಸರಿಗೇ ಇಷ್ಟೊಂದು ಜನ ಸೇರಿದ್ದಾರೆ ಎಂದಾದರೆ‌, ಇದೇ ರೀತಿ ಕಾಂಗ್ರೆಸ್ ಪ್ರತಿ ಸಮುದಾಯಕ್ಕೊಂದು ಸಮಾವೇಶ ಮಾಡುತ್ತಾ ಹೋದರೆ ಬಿಜೆಪಿಗೆ ಬಹಳ ಕಷ್ಟವಾಗುವುದಾಗಿ ಬಿಎಸ್‌ವೈ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಅಮಿತ್ ಶಾ ಭೇಟಿ ಮಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ: ಮಗನ ಟಿಕೆಟ್ ಬಗ್ಗೆ ಬಿಎಸ್‌ವೈ ಪ್ರಸ್ತಾಪ

ಕೋಮು ಸೌಹಾರ್ದತೆ ಕದಡಿರುವ ಕಳಂಕವೂ ತಮ್ಮ ಪಕ್ಷದ ಮೇಲಿರುವ ಕಾರಣ ಈಗ ಅಹಿಂದ ವರ್ಗ ನಿಜಕ್ಕೂ ಕಾಂಗ್ರೆಸ್ ಬೆನ್ನಿಗೆ ನಿಲ್ಲುವುದರಲ್ಲಿ ಅನುಮಾನವಿಲ್ಲ. ಇದರ ಜೊತೆಜೊತೆಗೆ ತಮ್ಮ ಪಕ್ಷದ ಕಾರ್ಯಕರ್ತರೂ ಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಆ ವರ್ಗದಲ್ಲಿ ತಳಸಮುದಾಯದ ಹುಡುಗರ ಸಂಖ್ಯೆ ಜಾಸ್ತಿ ಇದೆ. ಅವರಿಗೂ ಸಿದ್ದರಾಮೋತ್ಸವದ ಬಿಸಿ ಸೋಕಿ ಬದಲಾವಣೆ ಪ್ರಾರಂಭವಾದರೆ ಪಕ್ಷಕ್ಕೆ ಹೊಡೆತ ಬೀಳುವುದರಲ್ಲಿ ಎರಡು ಮಾತಿಲ್ಲ ಎಂದು ಯಡಿಯೂರಪ್ಪ ಅಮಿತ್ ಶಾಗೆ ಹೇಳಿದ್ದಾರೆ. 

ಹಾಗೆಯೇ, "ಜನಾಭಿಪ್ರಾಯ ನಿಧಾನವಾಗಿ ಕಾಂಗ್ರೆಸ್‌ನತ್ತ ತಿರುಗುತ್ತಿದೆ. ಈ ಸಮಾವೇಶವೂ ಜನಾಭಿಪ್ರಾಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಇಷ್ಟೆಲ್ಲಾ ಆದರೂ ನಮ್ಮ ಪಕ್ಷದವರು ಇನ್ನೂ ಅವರನ್ನು ಜರಿಯುತ್ತಾ ಕೂರುವುದನ್ನು ಬಿಟ್ಟು ಜನರ ಬಳಿಗೆ ಹೋಗದೇ ಇದ್ದರೆ ಬಹುದೊಡ್ಡ ಆಘಾತ ಕಟ್ಟಿಟ್ಟ ಬುತ್ತಿ" ಎಂದು ಯಡಿಯೂರಪ್ಪ ಎಚ್ಚರಿಸಿದ್ದಾರೆ. 

"ಹಾಗೂ ಹೀಗೂ ಒಂದಷ್ಟು ಹಳೆ ಲೆಕ್ಕಾಚಾರ ಮತ್ತು ಪಕ್ಷದ ವರ್ಚಸ್ಸು ನೋಡಿ ಹಲವು ಶಾಸಕರು ನಮ್ಮ ಪಕ್ಷಕ್ಕೆ ಬರಲು ಕಾದು ನಿಂತಿದ್ದಾರೆ. ಜನರಂತೆ ಅವರೂ ಸಿದ್ದರಾಮೋತ್ಸವ ನೋಡಿ ಮನಸ್ಸು ಬದಲಾಯಿಸಿದರೆ ನಮ್ಮ ಪಕ್ಷಕ್ಕೆ ಬರುವುದಿರಲಿ, ನಮ್ಮ ಪಕ್ಷದಿಂದಲೇ ಅವರತ್ತ ಹೋದರೂ ಅಚ್ಚರಿ ಪಡಬೇಕಿಲ್ಲ" ಎಂದು ಬಿಎಸ್‌ವೈ ಅಮಿತ್ ಶಾಗೆ ಕಟುಸತ್ಯದ ಅರಿವನ್ನು ಮಾಡಿಸಿದ್ದಾರೆ.

"ಇದರ ಜೊತೆಗೆ ನಾನೂ ಚುನಾವಣಾ ರಾಜಕಾರಣದಿಂದ ದೂರ ಸರಿಯುವ ಮಾತನ್ನಾಡಿರುವುದು ಕಾಂಗ್ರೆಸ್‌ಗೆ ಲಾಭವಾಗಿದೆ. ಈ ಕಾರಣಕ್ಕಾಗಿ ನೀವುಗಳು ಒಪ್ಪುವುದಾದರೆ ರಾಜ್ಯ ಸುತ್ತಿ ಪಕ್ಷ ಸಂಘಟನೆ ಮಾಡುತ್ತೇನೆ. ಉಳಿದವರಿಗೆ ಆಡಳಿತದ ನೆಲೆಗಟ್ಟಿನಲ್ಲಿ ಪಕ್ಷ ಬಲಪಡಿಸಲು ಹೇಳಿ. ನಾನೇ ಕಟ್ಟಿದ ಪಕ್ಷ ಹೀಗೆ ಸೊರಗುವುದನ್ನು ನೋಡಲು ನನ್ನಿಂದ ಸಾಧ್ಯವಿಲ್ಲ. ಹೀಗಾಗಿ ಆಪರೇಷನ್ ಕಮಲ ಹೋಗಲಿ, ಆಪರೇಷನ್ ಹಸ್ತ ಆಗದಂತೆ ನೋಡಿಕೊಳ್ಳಿ" ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗ್ತಿದೆ. 

ಈ ಸುದ್ದಿ ಓದಿದ್ದೀರಾ? : ತೆವಳುತ್ತಿದ್ದ ಕಾಂಗ್ರೆಸ್ಸಿಗೆ ʼಬೂಸ್ಟರ್ ಡೋಸ್ʼ ಕೊಟ್ಟ ʼಸಿದ್ದರಾಮೋತ್ಸವʼ: ಅಸಲಿ ಆಟ ಈಗ ಶುರು!

ಯಡಿಯೂರಪ್ಪನವರ ಅನುಭವದ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿರುವ ಅಮಿತ್ ಶಾ, ರಾಜ್ಯ ಬಿಜೆಪಿಗರಿಗೆ ಶೀಘ್ರ ಪಕ್ಷ ಸಂಘಟನೆಯ ಹೊಸ ಆಯಾಮಗಳನ್ನು ಹುಡುಕುವಂತೆ ಸೂಚಿಸಿದ್ದಾರೆ. ಜೊತೆಗೆ ಸಾಮೂಹಿಕ ನಾಯಕತ್ವದಡಿ ಜನರ ಬಳಿ ತೆರಳಿ, ಮರಳಿ ಪಕ್ಷದ ವರ್ಚಸ್ಸು ವೃದ್ಧಿಸಲು ಕೆಲಸ ಮಾಡುವಂತೆ ತಾಕೀತು ಮಾಡಿದ್ದಾರೆ.

ಈ ಬೆಳವಣಿಗೆಗಳಾದ ಬಳಿಕ ರಾಜ್ಯ ಬಿಜೆಪಿಯೊಳಗೂ ಕೊಂಚ ಸಂಚಲನ ಮೂಡಿದ್ದು ಸಿದ್ದರಾಮೋತ್ಸವಕ್ಕೆ ಪರ್ಯಾಯ ವೇದಿಕೆ ರೂಪಿಸುವ ಸಿದ್ಧತೆಯೂ ಆರಂಭವಾಗಿದೆ. ಅತಿ ಶೀಘ್ರದಲ್ಲೇ ಇದರ ಅನಾವರಣವೂ ಆಗಲಿದೆ. ಅಲ್ಲಿ ಬಿಜೆಪಿ ನಿಜ ಶಕ್ತಿ ಪ್ರದರ್ಶನವಾಗಲಿದೆ ಎನ್ನುವುದು ಬಿಜೆಪಿ ಮೂಲಗಳ ಮಾಹಿತಿ.

ನಿಮಗೆ ಏನು ಅನ್ನಿಸ್ತು?
0 ವೋಟ್