
- ಸಾಹಿತಿಗಳು, ಪ್ರಗತಿಪರರಿಗೆ ಮುಂದುವರೆದ ಬೆದರಿಕೆ ಪತ್ರಗಳು
- ಸಿದ್ದರಾಮಯ್ಯ, ಹರಿಪ್ರಸಾದ್, ಕುಮಾರಸ್ವಾಮಿಯವರಿಗೂ ಪತ್ರ
ಹಿರಿಯ ಬರಹಗಾರ್ತಿ, ಮಾಜಿ ಸಚಿವೆ ಬಿ ಟಿ ಲಲಿತಾ ನಾಯಕ್ ಅವರಿಗೆ ಮತ್ತೊಂದು ಪ್ರಾಣ ಬೆದರಿಕೆ ಪತ್ರ ಬಂದಿದ್ದು, ತಿಂಗಳಲ್ಲಿ ಮೂರನೇ ಬಾರಿಗೆ ಬಂದಿರುವ ಪತ್ರ ಇದಾಗಿದೆ.
ಹಿಂದೂ ಕಾರ್ಯಕರ್ತ ಎಂದು ಹೇಳಿಕೊಂಡು ಕಳೆದ ತಿಂಗಳು ಹೀಗೆ ಪತ್ರ ಬರೆದಿದ್ದ ಕಿಡಿಗೇಡಿಗಳು ಕಾಂಗ್ರೆಸ್, ಜೆಡಿಎಸ್ ಮತ್ತು ಪ್ರಗತಿಪರ ಚಿಂತಕರಿಗೆ ಬೆದರಿಕೆ ಒಡ್ಡಿದ್ದರು. ಶನಿವಾರ (ಜು.16) ಮತ್ತೊಂದು ಬೆದರಿಕೆ ಪತ್ರವನ್ನು ಯಾರೋ ದುಷ್ಕರ್ಮಿಗಳು ಲಲಿತಾ ನಾಯಕ್ ನಿವಾಸಕ್ಕೆ ಕಳುಹಿಸಿದ್ದಾರೆ.
ತಿಂಗಳಲ್ಲಿ ಮೂರು ಬೆದರಿಕೆ ಪತ್ರ
ಇದೇ ತಿಂಗಳ 3 ಮತ್ತು 7 ನೇ ತಾರೀಖಿನಂದು ಬೆದರಿಕೆ ಪತ್ರಗಳನ್ನು ಬಿ ಟಿ ಲಲಿತಾ ನಾಯಕ್ ಅವರಿಗೆ ಅನಾಮಿಕರು ಕಳುಹಿಸಿದ್ದರು. ಕ್ಷಮೆ ಕೇಳದಿದ್ದರೆ ಕೊಲೆ ಮಾಡುವುದಾಗಿ ದಿನಾಂಕ 16.07.2022ರಂದು ಸಂಜೆ 3ನೇ ಪತ್ರ ಲಲಿತಾ ನಾಯಕ್ ನಿವಾಸಕ್ಕೆ ಬಂದಿದೆ.
ಪತ್ರದಲ್ಲೇನಿದೆ?
ಹಿರಿಯ ಸಾಹಿತಿಗಳು ಮತ್ತು ಚಿಂತಕರಾದ ದೇವನೂರ ಮಹಾದೇವ, ಬರಗೂರು ರಾಮಚಂದ್ರಪ್ಪ, ಎಸ್ ಜಿ ಸಿದ್ದರಾಮಯ್ಯ, ರಾಜಕೀಯ ನಾಯಕರುಗಳಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ, ಡಿ ಕೆ ಶಿವಕುಮಾರ್, ಕಪಿಲ್ ಸಿಬಲ್, ಲಲಿತಾ ನಾಯಕ್, ಲೀನಾ, ಮಹುವಾ ಮೊಯಿತ್ರಾ, ಜ್ಞಾನಪ್ರಕಾಶ ಸ್ವಾಮೀಜಿಗಳ ಫೋಟೋಗಳನ್ನು ಬೆದರಿಕೆ ಪತ್ರದಲ್ಲಿ ಅಂಟಿಸಲಾಗಿದೆ. ಇನ್ನೂ ಕೆಲವರ ಫೋಟೋ ಸಿಕ್ಕಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

“ಇವರು ಅಪ್ಪಟ್ಟ ದೇಶದ್ರೋಹಿಗಳು. ನಮ್ಮ ದೇಶದ ಸೈನಿಕರು, ಪೊಲೀಸರು ಮತ್ತು ನಾಗರಿಕರ ಮೇಲೆ ಇಸ್ಲಾಮಿಕ್ ಮತಾಂಧರು ಹಾಗೂ ಭಯೋತ್ಪಾದಕರು ದಾಳಿ ಮಾಡಿದಾಗ ತುಟಿಯನ್ನೇ ಬಿಚ್ಚುವುದಿಲ್ಲ. ಪಠ್ಯ ಪುಸ್ತಕದಲ್ಲಿ ದೇಶಪ್ರೇಮ, ದೇಶಭಕ್ತಿ ಹಾಗೂ ನಾಡಭಕ್ತಿಯ ಪಾಠ ಸೇರಿಸುತ್ತೇವೆಂದರೆ ಉರಿದು ಬೀಳುತ್ತಿದ್ದಾರೆ. ಅದಕ್ಕೆ ಇಂತಹ ದುರುಳುರು, ದುರ್ಬುದ್ಧಿಯುಳ್ಳವರು ಮುಂದಿನ ದಿನಗಳಲ್ಲಿ ದುರ್ಮರಣಕ್ಕೀಡಾಗುತ್ತಾರೆ. ಬಿ ಟಿ ಲಲಿತಾ ನಾಯಕ್ ಅವರೆ, ನಮ್ಮ ಸೈನಿಕರು, ನಾಡಿನ ಜನತೆ ಮುಂದೆ ಕ್ಷಮೆ ಕೇಳಿ, ಇಲ್ಲದಿದ್ದರೆ ದುರ್ಮರಣಕ್ಕೆ ಸಿದ್ಧರಾಗಿ” ಎಂದು ಬರೆದು ಕಳುಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕೋವಿಡ್ ಹಣದಲ್ಲಿ ಅಕ್ರಮವಾಗಿದ್ದರೆ ನಮ್ಮ ವಿರುದ್ಧ ತನಿಖೆ ಮಾಡಿಸಿ: ಡಿ ಕೆ ಶಿವಕುಮಾರ್ ಸವಾಲ್
ಸರ್ಕಾರಿಪ್ರೇರಿತ ಭಯೋತ್ಪಾದನೆ: ಬಿ ಕೆ ಹರಿಪ್ರಸಾದ್
ತಮಗೆ ಬಂದಿರುವ ಬೆದರಿಕೆ ಪತ್ರದ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿರುವ ಬಿ ಕೆ ಹರಿಪ್ರಸಾದ್, “ಕರ್ನಾಟಕದಲ್ಲಿ ಇತ್ತೀಚೆಗೆ ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಹೇಳಿಕೆ ನೀಡುತ್ತಿರುವ ಪ್ರತಿಪಕ್ಷ ನಾಯಕರಿಗೆ ಮತ್ತು ಸಾಹಿತಿಗಳಿಗೆ ಜೀವ ಬೆದರಿಕೆ ಹಾಕುವ ಹೊಸ ವಿಧಾನ ಜಾರಿಗೆ ಬಂದಿದೆ" ಎಂದು ಟೀಕಿಸಿದರು.

“ನಿರಂತರವಾಗಿ ಸಾಹಿತಿಗಳು ಮತ್ತು ಬರಹಗಾರರು ಈ ಬಗ್ಗೆ ಪೊಲೀಸರ ಗಮನಕ್ಕೆ ತಂದಿದ್ದರೂ ಸಹ ಎಫ್ಐಆರ್ ದಾಖಲು ಮಾಡಿಕೊಳ್ಳದೆ ಸರ್ಕಾರ ಲಜ್ಜೆಗೇಡಿತನ ಪ್ರದರ್ಶನ ಮಾಡಿದೆ. ಸಾಂವಿಧಾನಿಕವಾಗಿ ಯಾವುದೇ ಸ್ಥಾನಮಾನಗಳನ್ನು ಇಟ್ಟುಕೊಳ್ಳದ ಮೋಹನ್ ಭಾಗವತ್ ರಾಜ್ಯಕ್ಕೆ ಬಂದಾಗ ಸಂಪೂರ್ಣವಾದ ಪೊಲೀಸ್ ಬಂದೋಬಸ್ತ್ ನೀಡಿ, ರಾಷ್ಟ್ರಿಯ ಹೆದ್ದಾರಿಗಳನ್ನು ಬಂದ್ ಮಾಡುತ್ತಾರೆ. ಆದರೆ, ನಾನು ಪ್ರತಿಪಕ್ಷ ನಾಯಕನಾಗಿ ಆರು ತಿಂಗಳಾಗುತ್ತಾ ಬಂದಿದೆ. ನನಗೆ ಇವತ್ತಿಗೂ ಸಹ ಪೊಲೀಸ್ ರಕ್ಷಣೆ ವಿಚಾರದಲ್ಲಿ ಕ್ರಮ ಕೈಗೊಂಡಿಲ್ಲ. ಸಂಘ ಪರಿವಾರದ ನಾಯಕರಿಗೆ ವೈ-ಪ್ಲಸ್ ಭದ್ರತೆ ನೀಡಿದ್ದಾರೆ. ಈ ಬೆದರಿಕೆಗಳನ್ನು ನೋಡಿದರೆ ಇದೊಂದು ರೀತಿಯ ಸರ್ಕಾರಿ ಪ್ರೇರಿತ ಭಯೋತ್ಪಾದನೆ” ಎಂದು ಹೇಳಿದರು.
“61 ಜನಕ್ಕೆ ಬೆದರಿಕೆ ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿದಂತೆ ನಮಗೆಲ್ಲ ಪತ್ರ ಬರೆದಿದ್ದಾರೆ. ನಾವು ಭಯ ಬೀಳುವುದಿಲ್ಲ. ಎಲ್ಲ ಪತ್ರಗಳನ್ನು ಬರೆದಿರುವವರೂ ಒಬ್ಬರೇ ಇರಬಹುದು. ಅವರನ್ನು ಇದುವರೆಗೂ ಹಿಡಿದಿಲ್ಲ ಎಂದರೆ, ಸರ್ಕಾರ ಬೇಕಂತಲೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ” ಎಂದು ಹರಿಪ್ರಸಾದ್ ಆರೋಪ ಮಾಡಿದರು.