ಮಳೆಗಾಲದ ಅಧಿವೇಶನ | ಎಸ್‌ಟಿ ಮೀಸಲಾತಿ ಹೆಚ್ಚಳ ಕುರಿತ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು

  • ಸದನದ ಬಾವಿಗಿಳಿದ ಶಾಸಕರ ವಿರುದ್ದ ಸಿಟ್ಟಾದ ಸ್ಪೀಕರ್
  • ಸಿದ್ದರಾಮಯ್ಯ ಮಾತಿಗೆ ಬೊಮ್ಮಾಯಿ ಬೆಂಬಲ

ವಿಧಾನಸಭೆ ಮಳೆಗಾಲದ ಅಧಿವೇಶನದ ಮೂರನೇ ದಿನವಾದ ಬುಧವಾರದ ಕಲಾಪದಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸುವ ವಿಚಾರ ಚರ್ಚಿಸಲು ಅವಕಾಶ ನೀಡಬೇಕು ಎಂದು ಪಟ್ಟುಹಿಡಿದು ವಾಲ್ಮೀಕಿ ಸಮುದಾಯದ ಶಾಸಕರು ಸದನದ ಬಾವಿಗಳಿದು ಧರಣಿ ನಡೆಸಿದರು.

ನಿರಂತರ ಮನವಿಯ ಬಳಿಕವೂ ಶಾಸಕರು ಪಟ್ಟು ಸಡಿಲಿಸದೆ ತಮ್ಮ ಆಗ್ರಹ ಮುಂದುವರಿಸಿದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, “ಯಾರ್ರೀ ಇವರಿಗೆ ಹೇಳೋದು..? ಯಾಕ್ರೀ ಈ ರೀತಿ ಮಾಡ್ತೀರಿ..? ಸದನ ಏನು ಹುಚ್ಚಾಸ್ಪತ್ರೆ ಅಂದುಕೊಂಡಿದ್ದೀರಾ..? ಏನಾದರೂ ಮಾತಾಡೋದ್ ಇದ್ರೆ ನನ್ನ ಜೊತೆ ಬಂದು ಚರ್ಚೆ ಮಾಡ್ರೀ. ಅದು ಬಿಟ್ಟು ಸದನದಲ್ಲಿ ಈ ರೀತಿ ಮಾತಾಡೋದು ಸರೀನಾ..?” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭಾಧ್ಯಕ್ಷರ ಮನವಿಗೂ ಶಾಸಕರು, ಸೊಪ್ಪು ಹಾಕದ ಹಿನ್ನೆಲೆಯಲ್ಲಿ ಅವರಿಗೆ ದನಿಗೂಡಿಸಿದ, ಕಾನೂನು ಸಚಿವ ಮಾಧುಸ್ವಾಮಿ, “ನಾನು ನನ್ನ ಕರ್ತವ್ಯ ಮಾಡಬೇಕಿದೆ. ಹೀಗಾಗಿ ಇದಕ್ಕೆ ನೀವು ಇತಿಶ್ರೀ ಹಾಡಬೇಕು. ಇದು ಅತಿಯಾಯ್ತು. ಇದು ಸರಿಯಲ್ಲ ಸರ್, ಇದಕ್ಕೆ ನೀವು ಕಡಿವಾಣ ಹಾಕಬೇಕು” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಇದೊಂದು ಸೂಕ್ಷ್ಮ ವಿಷಯವಾಗಿದೆ. ಇದನ್ನು ಏಕಪಕ್ಷೀಯವಾಗಿ ತೀರ್ಮಾನ ಮಾಡಲು ಆಗುವುದಿಲ್ಲ. ಆದರೆ, ಶಾಸಕರ ಅಭಿಪ್ರಾಯಕ್ಕೆ ಅವಕಾಶ ನೀಡಿ. ಅವರ ಅಭಿಪ್ರಾಯದಂತೆ ನಾವು ಸಿದ್ಧತೆ ಮಾಡಿಕೊಳ್ಳುತ್ತೇವೆ” ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, “ನೀನು, ಕಾನೂನು ಮಂತ್ರಿ, ಸಂಸದೀಯ ಮಂಡಳಿಯ ಮಂತ್ರಿ, ನೀನು ಸ್ಪೀಕರ್ ಗಿಂತ ಸಮಾಧಾನವಾಗಿರಬೇಕು. ತಾಳ್ಮೆ ಕಳೆದುಕೊಳ್ಳಬೇಡ” ಎಂದು ಮಾಧುಸ್ವಾಮಿಗೆ ಸಲಹೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಇದೇನು ಸಂತೆಯೋ, ಜಾತ್ರೆಯೋ, ಹುಚ್ಚಾಸ್ಪತ್ರೆಯೋ? | ಶಾಸಕ, ಸಚಿವರ ವಿರುದ್ಧ ಗುಡುಗಿದ ಸ್ಪೀಕರ್ ಕಾಗೇರಿ

ಬಳಿಕ ಸಿದ್ದರಾಮಯ್ಯ, “ಅಧ್ಯಕ್ಷರೇ, ನೀವು ತಾಳ್ಮೆ ಕಳೆದುಕೊಳ್ಳಬೇಡಿ. ಫ್ರೀಡಂ ಪಾರ್ಕ್ನಲ್ಲಿ 208 ದಿನಗಳಿಂದ ಪ್ರಸನ್ನಾನಂದ ಸ್ವಾಮೀಜಿ ಆಹೋರಾತ್ರಿ ಧರಣಿ ಮಾಡುತ್ತಿದ್ದಾರೆ. ಮೀಸಲಾತಿ ಹೆಚ್ಚಳ ಸಂಬಂಧ ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದಕ್ಕಾಗಿ ಚರ್ಚೆಗೆ ಅವಕಾಶ ಕೊಡಿ” ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಮಾತಿಗೆ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಬೆಂಬಲ ಸೂಚಿಸಿ, “ಮೀಸಲಾತಿ ವಿಚಾರವಾಗಿ ಎಲ್ಲ ಶಾಸಕರು ಮಾತನಾಡಲು ಅರ್ಧ ಗಂಟೆ ಅವಕಾಶ ಮಾಡಿಕೊಡಿ. ಚರ್ಚೆ ನಂತರ ಇದಕ್ಕೆ ಸೂಕ್ತ ಉತ್ತರ ಕೊಡುತ್ತೇನೆ” ಎಂದರು.

ಬಳಿಕ ವಿಷಯದ ಚರ್ಚೆಗೆ ಅವಕಾಶ ಕೊಡುತ್ತೇವೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಶಾಸಕರು ತಮ್ಮ ಧರಣಿ ಕೈಬಿಟ್ಟರು.

ನಿಮಗೆ ಏನು ಅನ್ನಿಸ್ತು?
0 ವೋಟ್