ಸರ್ಕಾರಿ ಆಸ್ಪತ್ರೆಯಲ್ಲಿ ಲಂಚಕ್ಕೆ ಬೇಡಿಕೆ | ಬಿಡದಿ ಆಸ್ಪತ್ರೆ ವೈದ್ಯೆ ಅಮಾನತಿಗೆ ಆದೇಶಿಸಿದ ಸಚಿವ ಸುಧಾಕರ್

Dr K Sudhakar
  • ಬಿಡದಿ ವೈದ್ಯೆಯ ವಿರುದ್ಧ ಇಲಾಖಾ ತನಿಖೆ ನಡೆಸಲು ಆದೇಶ
  • ಆರೋಗ್ಯ ಇಲಾಖೆಗೆ ಮುಜುಗರ ತರಿಸುವಂತೆ ಲಂಚಕ್ಕೆ ಬೇಡಿಕೆ

ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದ ಬಾಣಂತಿಯನ್ನು ಡಿಸ್ಚಾರ್ಜ್‌ ಮಾಡಲು ಲಂಚಕ್ಕಾಗಿ ಬೇಡಿಕೆ ಇಟ್ಟ ರಾಮನಗರ ಜಿಲ್ಲೆಯ ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆಯನ್ನು ಅಮಾನತು ಮಾಡಿರುವುದಾಗಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ತಿಳಿಸಿದ್ದಾರೆ.

ಸಂಬಂಧ ಟ್ವೀಟ್‌ ಮಾಡಿ ಮಾಹಿತಿ ಹಂಚಿಕೊಂಡಿರುವ ಅವರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಲಂಚಕ್ಕಾಗಿ ಬೇಡಿಕೆ ಇಟ್ಟಿರುವ ಪ್ರಕರಣದಲ್ಲಿ ಆರೋಪಿ ವೈದ್ಯೆಯ ವಿರುದ್ಧ ಇಲಾಖಾ ತನಿಖೆ ನಡೆಸಲು ಆದೇಶಿಸಲಾಗಿದ್ದು, ತನಿಖೆಯ ವರದಿ ಬರುವವರೆಗೂ ಆರೋಪಿಯನ್ನು ಅಮಾನತಿನಲ್ಲಿಡಲಾಗುವುದು ಎಂದು ತಿಳಿಸಿದ್ದಾರೆ.

Eedina App

ಕೇವಲ ಸುಸಜ್ಜಿತ ಕಟ್ಟಡಗಳು, ಅತ್ಯಾಧುನಿಕ ಉಪಕರಣಗಳು, ಅತ್ಯುತ್ತಮ ಭೌತಿಕ ಮೂಲಸೌಕರ್ಯಗಳಿಂದ ಒಂದು ಒಳ್ಳೆಯ ಆಸ್ಪತ್ರೆಯಾಗುವುದಿಲ್ಲ. ಸೇವಾ ಮನೋಭಾವ, ಸಾಮಾಜಿಕ ಕಳಕಳಿ, ಮಾನವೀಯತೆಯುಳ್ಳ ವೃತ್ತಿಪರ ವೈದ್ಯರಿಂದ ಒಂದು ಆಸ್ಪತ್ರೆ ಒಳ್ಳೆಯ ಆಸ್ಪತ್ರೆ ಎನಿಸಿಕೊಳ್ಳುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂತಹ ಭ್ರಷ್ಟಾಚಾರ, ಅಶಿಸ್ತು, ಕರ್ತವ್ಯ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ. ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ಮನೋಧರ್ಮ ಇಲ್ಲದ ವೈದ್ಯರು, ಸಿಬ್ಬಂದಿಗಳನ್ನು ಮುಲಾಜಿಲ್ಲದೆ ಕರ್ತವ್ಯದಿಂದ ವಜಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.

AV Eye Hospital ad

ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ. ಶಶಿಕಲಾ ಹಾಗೂ ಡಾ. ಐಶ್ವರ್ಯಾ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಇಂದು ಮುಂಜಾನೆ ವಿಧಾನಪರಿಷತ್ ಸದಸ್ಯ ಗೋವಿಂದರಾಜು, ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಲಂಚಾವತಾರದ ಬಗ್ಗೆ ವಿಡಿಯೋ ಹಂಚಿಕೊಂಡು ಆರೋಗ್ಯ ಇಲಾಖೆಗೆ ಛೀಮಾರಿ ಹಾಕಿದ್ದರು.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೇ, ಡಿಎಚ್ಒ ಡಾ. ಕಾಂತರಾಜು ಹಾಗೂ ತನಿಖಾಧಿಕಾರಿ ಡಾ. ಮಂಜುನಾಥ್ ನೇತೃತ್ವದ ತಂಡವು ಬಿಡದಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಆಸ್ಪತ್ರೆಯಲ್ಲಿ ಲಂಚಕ್ಕೆ ಬೇಡಿಕೆ; ಸರ್ಕಾರವನ್ನು ತರಾಟೆಗೆತ್ತಿಕೊಂಡ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು

ರಾಮನಗರ ತಾಲೂಕಿನ ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಪ್ರಸೂತಿ ತಜ್ಞೆ ಡಾ. ಶಶಿಕಲಾ ಎಂಬವರು ಬಾಣಂತಿಯನ್ನು ಡಿಸ್ಚಾರ್ಜ್ ಮಾಡಲು 6 ಸಾವಿರಕ್ಕೆ ಬೇಡಿಕೆ ಇಟ್ಟು, 'ನೀವ್ ಕೊಡೋ ಟೂ ತೌಸೆಂಡ್‌ನ್ನು ನಾನೊಬ್ಬೇ ಇಟ್ಕಳೋಕೆ ಆಗಲ್ಲ. ನಾನು ಎಲ್ಲರಿಗೂ ಡಿವೈಡ್ ಮಾಡೇಕು,ನೀವು ಕೊಟ್ಟಿರೋ ಟೂ ತೌಸೆಂಡ್‌ನಲ್ಲಿ ಯಾರ್ಯಾರಿಗೆ ಕೊಡ್ಲಿ... ಐನೂರು ಐನೂರು ಹಂಚಿಕೊಡ್ಲಾ' ಎಂದು ಚಿಕಿತ್ಸೆ ಸಲುವಾಗಿ ಬಂದಿದ್ದ ಗಾರ್ಮೆಂಟ್ ನೌಕರೊಬ್ಬರೆದುರು ಹಣಕ್ಕಾಗಿ ಬೇಡಿಕೆ ಇರಿಸಿದ್ದರು. ಇದರ ವಿಡಿಯೋ ವೈರಲ್ ಆಗಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app