ʻಚಿಲುಮೆʼ ಅಕ್ರಮಕ್ಕೆ ಚುನಾವಣಾ ಆಯೋಗದ ಮೌನ ಸಮ್ಮತಿ; ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ

ಸಿದ್ದರಾಮಯ್ಯ
  • ಉಚ್ಛ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ
  • ಈಗ ಸಿದ್ಧಪಡಿಸಿರುವ ಮತದಾರರ ಪಟ್ಟಿಯನ್ನು ಪ್ರಕಟಿಸದೆ ತಡೆಹಿಡಿಯಿರಿ

ಚಿಲುಮೆ ಸಂಸ್ಥೆಯ ಅಕ್ರಮಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಮೊದಲೇ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಿತ್ತು ಎನ್ನುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಮತದಾರಪಟ್ಟಿ ಪರಿಷ್ಕರಣೆ ಅಕ್ರಮದ ವಿಚಾರಕ್ಕೆ ಹೊಸ ತಿರುವು ನೀಡಿದ್ದಾರೆ.

ಬುಧವಾರ ಚಿಲುಮೆ ವೋಟರ್ ಗೇಟ್‌ ಅಕ್ರಮದ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡಿರುವ ಕಾನೂನು ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಆಡಳಿತ ಪಕ್ಷವನ್ನು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೆಲ ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಖಾಸಗಿ ಸಂಸ್ಥೆ ಚಿಲುಮೆಗೆ ಮತದಾರರ ಪಟ್ಟಿಯನ್ನು ಪರಿಷ್ಕರಣೆಗೆ ವಹಿಸಿದ್ದರ ಹಿಂದೆ ಬಿಬಿಎಂಪಿ ಮತ್ತು ಚುನಾವಣಾ ಆಯೋಗದ ಅಧಿಕಾರಿಗಳೂ ಇದ್ದಾರೆ. ಚುನಾವಣಾ ಆಯೋಗಕ್ಕೆ ಈ ಕುರಿತು ಮೊದಲೇ ಮಾಹಿತಿ ಇತ್ತು. ಚುನಾವಣಾ ಆಯೋಗದವರು ಬಿಬಿಎಂಪಿಗೆ ಈ ಕುರಿತು ಪತ್ರಗಳನ್ನೂ ಬರೆದಿದ್ದರು. ಆದರೂ ಆಯೋಗಕ್ಕೂ ಕೇರ್ ಮಾಡದೆ ಚಿಲುಮೆ ಸಂಸ್ಥೆಯ ಅಕ್ರಮ ಹೆಚ್ಚಾಗುತ್ತಾ ಹೋಗಿದೆ. ಹಾಗಾಗಿ ಚುನಾವಣಾ ಆಯೋಗ ಈ ಅಕ್ರಮಕ್ಕೆ ಮೌನ ಸಮ್ಮತಿ ನೀಡಿದೆಯೆ? ಸುಪ್ರೀಂ ಕೋರ್ಟ್‌ ಚುನಾವಣಾ ಆಯೋಗದ ವಿರುದ್ಧ ಇತ್ತೀಚೆಗೆ ಮಾಡಿರುವ ವಿಮರ್ಶೆಗಳು ಸರಿಯಾಗಿವೆ ಅಲ್ಲವೆ?ಎಂದು ಪ್ರಶ್ನಿಸಿದ್ದಾರೆ.

ಹೊಂಗಸಂದ್ರದ ಬಿಜೆಪಿಯ ಕಚೇರಿಯಲ್ಲಿ ವಿಧಾನಸಭೆಯ ಮುಖ್ಯ ಸಚೇತಕ ಸತೀಶ್‌ ರೆಡ್ಡಿ ನೇತೃತ್ವದಲ್ಲಿಯೇ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸುವ ಕುರಿತು ತರಬೇತಿ ನೀಡಲಾಗಿತ್ತು. ಪರಿಷ್ಕರಣೆ ಕೆಲಸ ಮಾಡಲು 25,000ದಿಂದ 30,000 ರೂಪಾಯಿ ನೀಡಿ ಸಿಬ್ಬಂದಿಗಳನ್ನು ನೇಮಕಾತಿ ಮಾಡಲಾಗಿತ್ತೆಂದು ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ಈ ಹಣದ ಮೂಲದ ಬಗ್ಗೆ ತನಿಖೆ ನಡೆಯಬೇಕು ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

ನೂರಾರು ಸಂಖ್ಯೆಯ ನೌಕರರಿಗೆ ಸಂಬಳ ಕೊಡಲು ಖರ್ಚು ಮಾಡಿದ ಕೋಟ್ಯಾಂತರ ರೂಪಾಯಿಗಳನ್ನು ಈ ಸಂಸ್ಥೆಗೆ ನೀಡಿದವರು ಯಾರು? ಅಕ್ರಮವಾಗಿ ವಿನಿಯೋಗಿಸಿದ ಹಣದ ಕುರಿತು ಇನ್ನೂ ದಾಳಿಗಳನ್ನು ನಡೆಸದೆ ಐಟಿ, ಇಡಿಗಳು ಯಾಕೆ ಇನ್ನೂ ಕಣ್ಣು ಮುಚ್ಚಿಕೊಂಡಿವೆ? ಎಂದು ಸಿದ್ದರಾಮಯ್ಯ ಸರ್ಕಾರವನ್ನು ಕೇಳಿದ್ದಾರೆ. 

Image
ಸಿದ್ದರಾಮಯ್ಯ

ಬಿಬಿಎಂಪಿಯಲ್ಲಿ ನಡೆದಿರುವ ಮತದಾರರ ಪಟ್ಟಿಯ ಅಕ್ರಮಕ್ಕೆ ಸರ್ಕಾರ, ಚುನಾವಣಾ ಆಯೋಗ ಮತ್ತು ಬಿಬಿಎಂಪಿಯ ಜಿಲ್ಲಾ ಚುನಾವಣಾಧಿಕಾರಿ, ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳು ಸಂಪೂರ್ಣ ಜವಾಬ್ಧಾರರಾಗಿರುತ್ತಾರೆ. ಇಷ್ಟು ದೊಡ್ಡ ಹಗರಣ ನಡೆದಿದ್ದರೂ ಬಿಬಿಎಂಪಿ ಹಿರಿಯ ಅಧಿಕಾರಿಗಳು, ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಯಾಕೆ ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ? ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿರುವ ಬಿಜೆಪಿಯ ಎಂಎಲ್ಎಗಳು, ಸಚಿವರುಗಳ ಮೇಲೆ ಮತ್ತು ಬೆಂಗಳೂರು ಅಭಿವೃದ್ಧಿಯ ಉಸ್ತುವಾರಿ ಹೊತ್ತಿರುವ ಮುಖ್ಯಮಂತ್ರಿಗಳ ಮೇಲೆ ಏಕೆ ಯಾವುದೇ ಕ್ರಮ ವಹಿಸಿಲ್ಲ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರಿ/ಅರೆ ಸರ್ಕಾರಿ ನೌಕರರನ್ನು ನೇಮಿಸುವುದರ ಬದಲಿಗೆ ಖಾಸಗಿ ವ್ಯಕ್ತಿಗಳನ್ನು ಬಿಎಲ್ಓ ಗಳಾಗಿ ನೇಮಕ ಮಾಡಲಾಗಿದೆ. ಖಾಸಗಿ ವ್ಯಕ್ತಿಗಳನ್ನು ಯಾವ ಕಾರಣಕ್ಕೂ ನೇಮಕ ಮಾಡಬಾರದೆಂದು ಕಾನೂನು ಹೇಳುತ್ತದೆ. ಇವರು ಒಂದು ಪಕ್ಷದ ಕಾರ್ಯಕರ್ತರಂತೆ ಕಾಣಿಸುತ್ತಾರೆ. ಚಿಲುಮೆ ಸಂಸ್ಥೆಯ ಕಚೇರಿಗಳಲ್ಲಿ ಸಚಿವರ ಚೆಕ್ಕುಗಳು ಮತ್ತು ಲೆಟರ್ ಹೆಡ್‌ಗಳು ದೊರೆತಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇಷ್ಟಿದ್ದರೂ ಆ ಸಚಿವರ ಮೇಲೆ ಯಾಕೆ ಯಾವುದೇ ಪ್ರಕರಣ ದಾಖಲಿಸಿಲ್ಲ? ಎಂದು ವಿಪಕ್ಷ ನಾಯಕರು ಸರ್ಕಾರವನ್ನು ಕೇಳಿದ್ದಾರೆ.

ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು, ಸೇರಿಸಲು ಯಾವುದೇ ಅರ್ಜಿ ನಮೂನೆಗಳನ್ನು ಪಡೆಯದೆ ಈ ಕೃತ್ಯ ಎಸಗಿರುವುದು ಘೋರವಾದ ಅಪರಾಧವಾಗಿದೆ. ಆದ್ದರಿಂದ ಈ ಕೂಡಲೇ ಜನರು ನೀಡಿರುವ ನಮೂನೆ 6, 7, 8, ಮತ್ತು 8ಎ ಗಳ ಅರ್ಜಿಗಳನ್ನು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದಿರುವ ಸಿದ್ದರಾಮಯ್ಯ, ಯಾವುದೇ ಅರ್ಜಿಗಳಿಲ್ಲದೆ ಮತದಾರರ ಪಟ್ಟಿಗೆ ಸೇರಿಸಿರುವ, ಕೈಬಿಟ್ಟಿರುವ, ತಿದ್ದುಪಡಿ ಮಾಡಿರುವ, ವರ್ಗಾವಣೆ ಮಾಡಿರುವ ಪ್ರಕರಣಗಳೆಷ್ಟು ಎಂಬುದನ್ನು ಚುನಾವಣಾ ಆಯೋಗ ಈ ಕೂಡಲೆ ಎಲ್ಲ ರಾಜಕೀಯ ಪಕ್ಷಗಳಿಗೆ, ಸಾರ್ವಜನಿಕರಿಗೆ ತಿಳಿಸಬೇಕು. ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸದೆ, ನೋಟೀಸು ನೀಡದೆ ಮಾಡಿರುವ ಎಲ್ಲ ಬದಲಾವಣೆಗಳನ್ನು ಈ ಕೂಡಲೇ ರದ್ದು ಮಾಡುವಂತೆ ಆಗ್ರಹಿಸಿದ್ದಾರೆ.

ಅರ್ಜಿ ಸ್ವೀಕರಿಸದೆ, ನೋಟೀಸು ನೀಡದೆ, ಅರ್ಜಿಗಳ ಮೇಲೆ ಆದೇಶ ಮಾಡದೆ ಮತದಾರರ ಪಟ್ಟಿಗೆ ಸೇರಿಸಿರುವ, ತೆಗೆದಿರುವ, ವರ್ಗಾವಣೆ ಮಾಡಿರುವ ಎಲ್ಲ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಅಟ್ಟಬೇಕು. ನಿಷ್ಪಕ್ಷಪಾತವಾಗಿ ವರ್ತಿಸದ ಅಧಿಕಾರಿಗಳನ್ನು ಈ ಕೂಡಲೇ ಚುನಾವಣಾ ಕರ್ತವ್ಯಗಳಿಂದ ಬಿಡುಗಡೆ ಗೊಳಿಸಬೇಕು.

ಯಾವ ವರ್ಷದಿಂದ ಅಕ್ರಮಗಳಾಗಿವೆಯೋ ಆ ವರ್ಷದಿಂದ ಪ್ರತಿಯೊಂದು ಸೇರ್ಪಡೆ, ಪ್ರತಿಯೊಂದು ತೆಗೆಯುವಿಕೆಯನ್ನು ಚುನಾವಣಾ ಆಯೋಗವು ಖುದ್ದು ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳಬೇಕು. ಅದುವರೆಗೂ ಈಗ ಸಿದ್ಧಪಡಿಸಿರುವ ಮತದಾರರ ಪಟ್ಟಿಯನ್ನು ಪ್ರಕಟ ಮಾಡದೆ ತಡೆಹಿಡಿಯಬೇಕು. ಜೊತೆಗೆ ಅಕ್ರಮದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಚಿಲುಮೆ ವೋಟರ್ ಗೇಟ್ ಅಕ್ರಮ | ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ವಜಾಗೆ ಕಾಂಗ್ರೆಸ್ ಆಗ್ರಹ

ಚಿಲುಮೆ ಸಂಸ್ಥೆಗೆ ಹಣ ನೀಡಿರುವವರು ಯಾರು? ಏತಕ್ಕಾಗಿ ಅವರಿಗೆ ಹಣ ನೀಡುತ್ತಿದ್ದರು? ಚಿಲುಮೆ ಸಂಸ್ಥೆಯ ಹಿನ್ನೆಲೆ ಏನು? ಅವರ ಹಿಂದೆ ಯಾರು ಯಾರು ಇದ್ದಾರೆ? ಸಂಸ್ಥೆಯವರು ಯಾರೊಂದಿಗೆ ಸಂಪರ್ಕದಲ್ಲಿದ್ದರು? ಅವರ ನಡುವೆ ನಡೆದ ಸಂವಹನಗಳೇನು? ಸಂವಾದಗಳೇನು? ಇವೆಲ್ಲ ಅಂಶಗಳನ್ನು ತನಿಖೆ ಮಾಡಿ ಸಾರ್ವಜನಿಕರ ಮುಂದೆ ಇಡಬೇಕಾಗಿದೆ. ಹಾಗೆಯೆ ರಾಜ್ಯದಲ್ಲಿ ಎಲ್ಲೆಲ್ಲಿ ಹೀಗಾಗಿದೆ ಎಂಬ ಮಾಹಿತಿಯನ್ನೂ ಆಯೋಗವು ಸ್ಪಷ್ಟಪಡಿಸಬೇಕು. 

ಮತದಾರರ ಪಟ್ಟಿಗಳ ಪರಿಷ್ಕರಣೆಯ ಮೇಲೆ ನಿಗಾವಹಿಸಬೇಕಾದ ಎಲೆಕ್ಟೋರಲ್ ರೋಲ್ ಅಬ್ಸರ್ವರ್ ಗಳು ಏನು ಮಾಡಿದ್ದಾರೆ ? ಅವರು ನಿರ್ಲಕ್ಷ್ಯ ವಹಿಸಿದ್ದರೆ, ಪಕ್ಷಪಾತ ಮಾಡಿದ್ದರೆ ಅವರ ಮೇಲೆಯೂ ನಿರ್ದಾಕ್ಷಿಣ್ಯವಾದ ಕ್ರಮ ತೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬಿಬಿಎಂಪಿ ಡಿ ಲಿಮಿಟೇಷನ್ ಪ್ರಕ್ರಿಯೆಯಲ್ಲಿಯೂ ಈ ಸಂಸ್ಥೆ ಭಾಗವಹಿಸಿದೆಯೆಂದು ಹೇಳಲಾಗುತ್ತಿದೆ. ಈ ಕೆಲಸವು ವೈಜ್ಞಾನಿಕವಾಗಿ ನಡೆದಿದೆಯೆ? ಎಂಬುದರ ಕುರಿತು ರಾಜ್ಯ ಚುನಾವಣಾ ಆಯೋಗವು ಪರಿಶೀಲನೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು. ಅವೈಜ್ಞಾನಿಕವಾಗಿದ್ದರೆ, ಪಕ್ಷಪಾತದಿಂದ ಕೂಡಿದ್ದರೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. 
ತನಿಖೆಯನ್ನು ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳು ಮಾಡಿದರೆ ಅದು ಪಕ್ಷಪಾತದಿಂದ ಕೂಡಿರುತ್ತದೆ. ಆದ್ದರಿಂದ ಕೂಡಲೇ ಉಚ್ಛ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180