ಪ್ರಧಾನಿ ಮೋದಿ ಆಡುವುದೇ ಒಂದು, ಮಾಡುವುದೇ ಇನ್ನೊಂದು: ದಿನೇಶ್‌ ಗುಂಡೂರಾವ್‌ ಟೀಕೆ

dinesh gundu rao
  • ಬುಧವಾರ ಸರಣಿ ಟ್ವೀಟ್‌ ಮಾಡುವ ಮೂಲಕ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ಗುಂಡೂರಾವ್
  • ದೇಶದಲ್ಲಿರುವುದು ಹಿಟ್ಲರ್‌ನ ಆಡಳಿತವೋ, ಪ್ರಜಾಪ್ರಭುತ್ವದ ಆಡಳಿತವೋ ಎಂದು ಕಟು ಪ್ರಶ್ನೆ

ಆಡಿದ ಮಾತಿಗೆ ಬದ್ಧನಾಗಿರಬೇಕಾಗಿರುವುದು ಉತ್ತಮ ನಾಯಕನ ಲಕ್ಷಣ‌. ಆದರೆ ಮೋದಿಯವರದ್ದು ಆಡುವುದೇ ಒಂದು, ಮಾಡುವುದೇ ಇನ್ನೊಂದು ಎಂಬಂತಾಗಿದೆ ಎಂದು ಮಾಜಿ ಸಚಿವ ದಿನೇಶ್‌ ಗುಂಡೂರಾವ್‌ ಪ್ರಧಾನಿ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬುಧವಾರ ಸರಣಿ ಟ್ವೀಟ್ ಮೂಲಕ ಕಿಡಿಕಾರಿರುವ ದಿನೇಶ್ ಗುಂಡೂರಾವ್, "ಮೋದಿಯವರಿಗೆ ಆತ್ಮಸಾಕ್ಷಿಯಿದ್ದರೆ ತಾವು ಆಡಿರುವ ಮಾತುಗಳ ವಿಡಿಯೋ ಕ್ಲಿಪ್ಪಿಂಗ್ ನೋಡಲಿ‌. ಆಗಲೂ ತಮ್ಮ‌ ಮೇಲೆ ತಮಗೇ ಅಸಹ್ಯಭಾವ ಮೂಡದಿದ್ದರೆ ಅವರ ಆತ್ಮಸಾಕ್ಷಿ ಸತ್ತು ಹೋಗಿದೆ ಎಂದೇ ಅರ್ಥ," ಎಂದು ಕುಟುಕಿದ್ದಾರೆ.

"ಸರ್ಕಾರ ಫ್ಯಾಸಿಸ್ಟ್ ಧೋರಣೆಯಿಂದ ಸರ್ವಾಧಿಕಾರಿಯಾಗಿದೆ. ಫ್ಯಾಸಿಸ್ಟ್‌ಗಳು ವಿರೋಧವನ್ನು ಹತ್ತಿಕ್ಕುವುದೇ ಧಮನಕಾರಿ ನಡೆಯ ಮೂಲಕ. ಮೋದಿ ತಮ್ಮ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಇಡಿ, ಸಿಬಿಐ ಹಾಗೂ ಐಟಿ ದುರ್ಬಳಕೆ ಮಾಡಿಕೊಂಡಿದಲ್ಲದೆ, ಈಗ ವಿರೋಧಿಗಳನ್ನು ಹಣಿಯಲು ದೆಹಲಿ ಪೊಲೀಸರನ್ನು ಕೂಡ ಗೂಂಡಾಗಳಾಗಿ ಪರಿವರ್ತಿಸಿದೆ," ಆರೋಪಿಸಿದ್ದಾರೆ.

"ಕೇಂದ್ರದ ಗೃಹ ಇಲಾಖೆಯ ಅಡಿ ಕಾರ್ಯನಿರ್ವಹಿಸುವ ದೆಹಲಿ‌ ಪೊಲೀಸರು ಸಚಿವ ಅಮಿತ್ ಶಾ ಹುಕುಂ ಪಾಲಿಸುವ ಅಡಿಯಾಳುಗಳಾಗಿದ್ದಾರೆ. ಕಾಂಗ್ರೆಸ್ ನಾಯಕರಿಗೇ ಪಕ್ಷದ ಕಚೇರಿಗೆ ಹೋಗಲು ದೆಹಲಿ ಪೊಲೀಸರು ಅವಕಾಶ ನೀಡುವುದಿಲ್ಲವೆಂದರೆ ನಾವು ಯಾವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ? ದೇಶದಲ್ಲಿರುವುದು ಹಿಟ್ಲರ್‌ನ ಆಡಳಿತವೋ ಅಥವಾ ಪ್ರಜಾಪ್ರಭುತ್ವದ ಆಡಳಿತವೋ,” ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೂ ಬಂದು ರಸ್ತೆಗುಂಡಿ ಸೊಬಗು ನೋಡಲಿ: ಆಪ್‌ ಆಗ್ರಹ

“ಉದ್ಯೋಗ ಕೇಳಿದ ಯುವಕರಿಗೆ ಪಕೋಡಾ ಮಾರಲು ಹೇಳಿದ್ದ ನರೇಂದ್ರ ಮೋದಿಯವರು ಈಗ ಒಂದೂವರೆ ವರ್ಷದಲ್ಲಿ 10 ಲಕ್ಷ ಉದ್ಯೋಗ ಕೊಡುವುದಾಗಿ ಹೇಳಿದ್ದಾರೆ. ಆದರೆ ಮೋದಿಯವರ ಈ ಮಾತನ್ನು ನಂಬಲು ದೇಶದ ಯುವಕರು ಇಂದು ಮೂರ್ಖರಲ್ಲ. ತಮ್ಮ 8 ವರ್ಷದ ಆಡಳಿತದಲ್ಲಿ 16 ಕೋಟಿ ಹೋಗಲಿ, ಕೇವಲ 16 ಲಕ್ಷ ಉದ್ಯೋಗ ಸೃಷ್ಟಿಸಲು ಮೋದಿಯವರಿಗೆ ಈವರೆಗೂ ಯಾಕೆ ಸಾಧ್ಯವಾಗಲಿಲ್ಲ," ಎಂದು ದಿನೇಶ್ ಗುಂಡೂರಾವ್ ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್