ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ: ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮುಖಂಡರ ದೂರು

Congress
  • 'ಹೊಂಬಾಳೆ' ಸಂಸ್ಥೆಯಲ್ಲಿರುವವರೇ 'ಚಿಲುಮೆ' ಸಂಸ್ಥೆಯಲ್ಲಿಯೂ ಇದ್ದಾರೆ: ಡಿ ಕೆ ಶಿವಕುಮಾರ್
  • ಹೈಕೋರ್ಟ್ ಮಧ್ಯ ಪ್ರವೇಶಿಸಿ ಸುವೋ-ಮೋಟೋ ಕೇಸು ದಾಖಲಿಸಿಕೊಳ್ಳವಂತೆ ಕಾಂಗ್ರೆಸ್ ಮನವಿ 

'ಚಿಲುಮೆ' ಸಂಸ್ಥೆಯಿಂದ ಮತದಾರರ ವೈಯಕ್ತಿಕ ಮಾಹಿತಿ ಕಳವು, ಪಟ್ಟಿಯಿಂದ ನಿರ್ದಿಷ್ಟ ಮತದಾರರ ಹೆಸರು ಕಿತ್ತು ಹಾಕಿರುವುದು ಸೇರಿದಂತೆ ಮತದಾರರ ಪಟ್ಟಿ ಅಕ್ರಮಗಳ ಕುರಿತು ಕೇಂದ್ರ ಚುನಾವಣೆ ಆಯೋಗದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಕಾಂಗ್ರೆಸ್ ಮುಖಂಡರ ನಿಯೋಗ ದೂರು ನೀಡಿತು.

ನಗರದ ಕೆ ಆರ್ ಸರ್ಕಲ್‌ನಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಆಗಮಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ರಾಮಲಿಂಗಾರೆಡ್ಡಿ, ಸೌಮ್ಯ ರೆಡ್ಡಿ, ರಿಜ್ವಾನ್ ಅರ್ಷದ್, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಮನೋಜ್ ಕುಮಾರ್ ಮೀನಾ ಅವರಿಗೆ ದೂರು ನೀಡಿದರು.

Eedina App

ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ದೂರು ಸಲ್ಲಿಸಿದ ಸಂದರ್ಭದಲ್ಲಿ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಧರಣಿ ಕುಳಿತು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, “ಹೊಂಬಾಳೆ ಪ್ರೈವೇಟ್ ಲಿಮಿಟೆಡ್‌ನಲ್ಲಿ ಯಾರಿದ್ದಾರೆ, ಅವರೇ 'ಚಿಲುಮೆ' ಸಂಸ್ಥೆಯಲ್ಲಿಯೂ ಇದ್ದಾರೆ. 2019ರಿಂದಲೇ ಬಹಳ ವ್ಯವಸ್ಥಿತವಾಗಿ ಇದನ್ನು ಪ್ಲಾನ್ ಮಾಡಿಕೊಂಡು ಬಂದಿದ್ದಾರೆ. ಲಕ್ಷಾಂತರ ಜನರ ಮಾಹಿತಿಯನ್ನು ಕಳವು ಮಾಡಿದ್ದಾರೆ" ಎಂದು ಆರೋಪಿಸಿದರು.

AV Eye Hospital ad

“ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನೆಪ ಮಾತ್ರಕ್ಕೆ ಒಂದು ಸಣ್ಣ ದೂರು ದಾಖಲು ಮಾಡಿದ್ದಾರೆ. 'ಚಿಲುಮೆ' ಕಂಪನಿಯ ಸಿಇಒ, ಎಂಡಿ ಯಾರನ್ನೂ ಬಂಧಿಸಿಲ್ಲ. ನೆನ್ನೆ ರಾತ್ರಿ ಆ ಕಂಪೆನಿಯಲ್ಲಿ ನೋಟು ಎಣಿಸುವ ಯಂತ್ರ ಕೂಡಾ ದೊರೆತಿದೆ. ಸಂಸ್ಥೆ ನಷ್ಟದಲ್ಲಿದೆ, ಹಣವೇ ಇಲ್ಲ ಎನ್ನುತ್ತಾರೆ. ಹಾಗಾದರೆ ಹಣ ಎಣಿಸುವ ಯಂತ್ರ ಹೇಗೆ ಬಂತು? ಅದೇನು ಬ್ಲಾಕ್ ಮನಿಯನ್ನು ವೈಟ್ ಮಾಡಲು ಇಟ್ಟುಕೊಂಡಿದ್ದಾರೆಯೇ” ಎಂದು ಪ್ರಶ್ನಿಸಿದರು. 

“ಚುನಾವಣಾ ಆಯೋಗದ ಕಮಿಷನರ್‌ಗೆ ನಾವು ಇಂದು ದೂರು ನೀಡಿದ್ದೇವೆ. ಮುಂದೆ ಏನು ಕ್ರಮ ಕೈಗೊಳ್ಳುತ್ತಾರೆ ನೋಡೋಣ. ಯಾರೋ ಒಬ್ಬನ ಮೇಲೆ ಕ್ರಮ ಆದರೆ ಸಾಲದು. ಪ್ರಕರಣದಲ್ಲಿ ಭಾಗಿಯಾಗಿರುವ ಕಮಿಷನರ್‌ಗಳು, ಎಆರ್‌ಒಗಳು ಸೇರಿದಂತೆ ಎಲ್ಲರ ವಿರುದ್ಧವೂ ಕಾನೂನು ಕ್ರಮ ಆಗಬೇಕು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕು” ಎಂದು ಆಗ್ರಹಿಸಿದರು.

“ಚುನಾವಣಾ ಆಯೋಗ ಒಂದು ವೇಳೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಹೈಕೋರ್ಟ್ ಮೊರೆ ಹೋಗುತ್ತೇವೆ. ಹಾಗೆಯೇ ಈ ಪ್ರಕರಣದಲ್ಲಿ ಕೋರ್ಟ್ ಮಧ್ಯ ಪ್ರವೇಶಿಸಿ ಸುವೊ-ಮೋಟೊ ಕೇಸು ದಾಖಲಿಸಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಮನವಿ ಮಾಡುತ್ತೇನೆ” ಎಂದರು. 

ಈ ಸುದ್ದಿ ಓದಿದ್ದೀರಾ? ಎಸ್‌ಸಿ, ಎಸ್‌ಟಿ ಮೀಸಲಾತಿ ಮರುನಿಗದಿ | ಎಲ್ಲ ನೇರ ನೇಮಕಾತಿ, ಪದೋನ್ನತಿ ತಡೆ ಹಿಡಿದ ರಾಜ್ಯ ಸರ್ಕಾರ

ಚುನಾವಣಾ ಮತದಾರರ ಗುರುತಿನ ಚೀಟಿ ಮಾಹಿತಿ ಕಳವು ಪ್ರಕರಣದಲ್ಲಿ ಸಚಿವ ಅಶ್ವತ್ಥನಾರಾಯಣ ಕೂಡ ಭಾಗಿಯಾಗಿದ್ದಾರೆ ಎಂಬ ಕಾಂಗ್ರೆಸ್ ಆರೋಪವನ್ನು ಸಮರ್ಥಿಸಿಕೊಂಡ ಡಿ ಕೆ ಶಿವಕುಮಾರ್, “ಅವರ ಕಾಲ್ ಲಿಸ್ಟ್ ತೆಗೆಯಿರಿ ಗೊತ್ತಾಗಲಿದೆ. ಕಾಲ್ ರೆಕಾರ್ಡ್ ತೆಗೆದರೆ ಎಷ್ಟು ದಿನ, ಎಷ್ಟು ಗಂಟೆಗಳ ಕಾಲ ಈ ಸಂಸ್ಥೆಗಳ ಜೊತೆಗೆ ಯಾರ್ಯಾರು ಸಂಪರ್ಕದಲ್ಲಿದ್ದಾರೆ ಎನ್ನುವ ಬಗ್ಗೆ ಎಲ್ಲ ಮಾಹಿತಿಯೂ ಸಿಗುತ್ತದೆ” ಎಂದು ಹೇಳಿದರು.

ಕಾಂಗ್ರೆಸ್ ನಿಯೋಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಮಾಜಿ ಸಚಿವರಾದ ಎಚ್ ಎಂ ರೇವಣ್ಣ, ಕೆ ಜೆ ಜಾರ್ಜ್, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ಶಾಸಕ ರಿಜ್ವಾನ್ ಅರ್ಷದ್, ಸೌಮ್ಯಾ ರೆಡ್ಡಿ, ಎಂಎಲ್ಸಿ ಯು ಬಿ ವೆಂಕಟೇಶ್ ಮತ್ತಿತರರನ್ನು ಒಳಗೊಂಡ ಕಾಂಗ್ರೆಸ್ ನಿಯೋಗವು ದೂರು ಸಲ್ಲಿಸಿತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app