ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬಿದರೂ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ

siddaramiah
  • ಸಂವಿಧಾನ ರಕ್ಷಣೆಗಾಗಿ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಶೋಷಿತರ ಸಮಾವೇಶ
  • ಸಂವಿಧಾನ ಜಾರಿಗೆ ಬಂದ ಕಾರಣಕ್ಕೆ ನಾವು ವಿದ್ಯಾವಂತರಾಗಿದ್ದೇವೆ

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬುತ್ತಿದೆ. ಆದರೂ ಇನ್ನೂ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ಬರೀ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದರಷ್ಟೇ ಸಾಲದು ಇದರ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ಬಂದದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಬಾಬಾ ಸಾಹೇಬರು ಪ್ರತಿಪಾದಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ದಲಿತ ಸಂಘರ್ಷ ಸಮಿತಿ (ಸಂಯೋಜಕ) ಬೆಂಗಳೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ರಕ್ಷಣೆಗಾಗಿ ರಾಜ್ಯ ಮಟ್ಟದ ಶೋಷಿತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಸಾವಿರಾರು ವರ್ಷಗಳ ಕಾಲ ಸಮಾಜದ ಕೆಳವರ್ಗದ ಜನರನ್ನು ಅಕ್ಷರ ಸಂಸ್ಕೃತಿಯಿಂದ ವಂಚಿತರನ್ನಾಗಿಸಲಾಗಿತ್ತು, ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ಕಾರಣಕ್ಕೆ ನಾವು ವಿದ್ಯಾವಂತರಾಗಿದ್ದು. ಬ್ರಿಟೀಷರು ತಮಗೆ ಕಾರಕೂನರ ಅಗತ್ಯ ಇದ್ದುದ್ದರಿಂದ ನಮಗೆಲ್ಲ ಶಿಕ್ಷಣ ಕೊಡಲು ಆರಂಭ ಮಾಡಿದರು. ನಮಗೆ ಸ್ವಾತಂತ್ರ್ಯ ಬಂದಾಗ ದೇಶದ ಶಿಕ್ಷಿತರ ಪ್ರಮಾಣ ಇದ್ದದ್ದು ಬರೀ 15 ರಿಂದ 16%ಶೇ. ಇಂದು ಇದು 75% ಶೇಕಡಕ್ಕೆ ಏರಿಕೆಯಾಗಿದ್ದರೆ ಸಂವಿಧಾನ ಕಾರಣ ಎಂದು ಸಿದ್ದರಾಮಯ್ಯ ಹೇಳಿದರು. 

ಬಾಬಾ ಸಾಹೇಬರು ನವೆಂಬರ್‌ 25, 1949 ರಲ್ಲಿ ಸಂವಿಧಾನ ಸಭೆಯಲ್ಲಿ ಒಂದು ಐತಿಹಾಸಿಕ ಭಾಷಣ ಮಾಡಿದ್ದಾರೆ. ಇದನ್ನು ಪ್ರತಿಯೊಬ್ಬರು ಓದಲೇಬೇಕು. 1950 ಜನವರಿ 26ರಂದು ಸಂವಿಧಾನದ ಕರಡನ್ನು ಸಂವಿಧಾನ ಸಭೆ ಮುಂದಿಟ್ಟು ಮಾತನಾಡುತ್ತಾ, ವೈರುಧ್ಯ ಇರುವ ಬದುಕಿಗೆ ನಾವು ಕಾಲಿಡುತ್ತಿದ್ದೇವೆ. ಇಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಅಸಮಾನತೆ ಇದೆ. ಹೀಗಿರುವಾಗ ಬರೀ ರಾಜಕೀಯ ಪ್ರಭುತ್ವ ಇದ್ದರೆ ಸಾಲದು. ಇದನ್ನು ಸಾಮಾಜಿಕ ಮತ್ತು ಆರ್ಥಿಕ ಪ್ರಭುತ್ವವಾಗಿ ಮಾಡದೇ ಹೋದರೆ ಸಮಾಜದಲ್ಲಿ ಸಮಾನತೆ ಬರಲು ಸಾಧ್ಯವಿಲ್ಲ ಎಂದು ಅಂಬೇಡ್ಕರರು ಹೇಳಿದ್ದರು. ಇಂದು ಒಬ್ಬ ವ್ಯಕ್ತಿ, ಒಂದು ಮತ ಮತ್ತು ಒಂದು ಮೌಲ್ಯ ಇದೆ. ಆದರೆ ಸಾಮಾಜಿಕ ಮತ್ತು ಆರ್ಥಿಕವಾಗಿ ಒಬ್ಬ ವ್ಯಕ್ತಿ, ಒಂದೆ ಮೌಲ್ಯ ಎಂದಾಗಿಲ್ಲ. ಇಂತಹ ಸಂದರ್ಭದಲ್ಲಿ ಸಂವಿಧಾನದ ರಕ್ಷಣೆಗಾಗಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಬಾಬಾ ಸಾಹೇಬರ ಚಿಂತನೆಗಳು ಮತ್ತು ಸಂವಿಧಾನವೇ ನಮಗೆ ಪ್ರೇರಣೆ. ರಾಜಕೀಯ ಅಧಿಕಾರ ಅಭಿವೃದ್ಧಿಯ ಹೆಬ್ಬಾಗಿಲನ್ನು ತೆರೆಯುವ ಕೀಲಿಕೈ ಎಂಬುದು ಅಂಬೇಡ್ಕರ್‌ ಅವರ ನಿಲುವಾಗಿತ್ತು. ಅಧಿಕಾರ ಬಂದಾಗ ಸಾಮಾಜಿಕ ನ್ಯಾಯವನ್ನು ನೀಡುವ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಆರ್ಥಿಕ ಮತ್ತು ಸಾಮಾಜಿಕ ಪಾಲು ಸಮನಾಗಿ ಸಿಗುವಂತೆ ಮಾಡಲು ನಮ್ಮ ಸರ್ಕಾರವು ಎಸ್‌,ಸಿ,ಪಿ/ಟಿ,ಎಸ್‌,ಪಿ ಕಾನೂನು ಜಾರಿಗೆ ತಂದಿತು. ಆಗ ಪ್ರೊ. ರವಿವರ್ಮಕುಮಾರ್‌ ಅವರು ಅಡ್ವೊಕೇಟ್‌ ಜನರಲ್‌ ಆಗಿದ್ದರು. ಈ ಕಾನೂನು ಆಂಧ್ರದಲ್ಲಿ ಜಾರಿಯಾಗಿದ್ದರೂ ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ. ನಮ್ಮಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆ 24.1% ಇತ್ತು. ಬಜೆಟ್‌ ನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡುವ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡುವಂತೆ ಕಾನೂನು ಜಾರಿಗೊಳಿಸಲಾಯಿತು. ಇದನ್ನು ಬಿಜೆಪಿ ಆಡಳಿತವಿರುವ ಬೇರೆ ರಾಜ್ಯಗಳಲ್ಲಿ ಯಾಕೆ ಮಾಡುತ್ತಿಲ್ಲ? ಜನ ಇದನ್ನು ಕೇಳುತ್ತಿಲ್ಲ. ಈ ವರ್ಗಗಳ ನಾಯಕರು ಕೂಡ ಹೋಗಿ ಬಿಜೆಪಿ ಸೇರಿಕೊಂಡು ನರೇಂದ್ರ ಮೋದಿ ಅವರನ್ನು ಹೊಗಳಲು ಆರಂಭಿಸಿದರು. ಇದರಿಂದ ಜನ ಗೊಂದಲದಲ್ಲಿ ಸಿಲುಕಿದರು. ನಮ್ಮವರೇ ಮೋದಿ ಮೋದಿ ಎಂದು ಜೈಕಾರ ಹಾಕುತ್ತಾರೆ. ಯಾಕಾಗಿ ಎಂದು ನನಗೂ ಗೊತ್ತಿಲ್ಲ ಎಂದು ಹೇಳಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ಟೆಂಡರ್‍‌ಗಳಲ್ಲಿ ಮೀಸಲಾತಿ ಜಾರಿಗೆ ತಂದು ಆರ್ಥಿಕ ಸಮಾನತೆ ನೀಡುವ ಪ್ರಯತ್ನ ಮಾಡಿದ್ದೆ.  ದೇಶದ ಬೇರೆ ಯಾವ ರಾಜ್ಯಗಳಲ್ಲಿ ಇಂಥಾ ಕಾನೂನು ಇದೆಯಾ? ಇಲ್ಲ. 2018-19ರ ಬಜೆಟ್‌ ಭಾಷಣದಲ್ಲಿ 50 ಲಕ್ಷದಿಂದ 1 ಕೋಟಿಗೆ ಏರಿಕೆ ಮಾಡುವ ಪ್ರಸ್ತಾಪ ಮಾಡಿದ್ದೆವು. ಕೆ,ಎಸ್‌,ಎಫ್‌,ಡಿ ಯಲ್ಲಿ ದಲಿತ, ಶೋಷಿತ ಜಾತಿಯ ಜನರಿಗೆ 10 ಕೋಟಿ ವರೆಗೆ 4% ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಿದ್ದೆವು. ನಾರಾಯಣ ಸ್ವಾಮಿ ಅವರು ಒಳ ಮೀಸಲಾತಿ ಸಾಧ್ಯವಾಗಲ್ಲ ಎಂದು ಮೈಸೂರಿನಲ್ಲಿ ಹೇಳುತ್ತಾರೆ, ಅದಕ್ಕೆ ಜನ ಚಪ್ಪಾಳೆ ತಟ್ಟುತ್ತಾರೆ. ಆದರೆ ಈ ವಿಚಾರ ನಮ್ಮ ಸರ್ಕಾರದ ಅವಧಿಯಲ್ಲಿ ದೊಡ್ಡ ವಿಷಯವಾಗಿತ್ತು ಎಂದರು.

ಸುಪ್ರೀಂಕೋರ್ಟ್‌ ಬಡ್ತಿಯಲ್ಲಿ ಮೀಸಲಾತಿ ನೀಡಲು ಬರುವುದಿಲ್ಲ ಎಂದು ಆದೇಶ ನೀಡಿತ್ತು. ಅದಕ್ಕೆ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ದಲಿತರಿಗೆ ಕ್ಲಾಸ್‌ 1 ಮತ್ತು ಕ್ಲಾಸ್‌ 2 ರಲ್ಲಿ ಕರಾರುವಕ್ಕಾದ ಮೀಸಲಾತಿ ಸಿಕ್ಕಿದೆಯಾ ಇಲ್ಲವಾ ಎಂಬುದನ್ನು ಸಮೀಕ್ಷೆ ಮಾಡಿ ವರದಿ ನೀಡುವಂತೆ ಹೇಳಿದೆ. ಈ ಸಮಿತಿ ವರದಿ ಬಂದ ಮೇಲೆ ನಾವು ಒಂದು ಕಾನೂನು ಜಾರಿ ಮಾಡಿದೆವು. ಇದನ್ನು ಸುಪ್ರೀಂಕೋರ್ಟ್‌ ನಲ್ಲಿ ಪ್ರಶ್ನಿಸಲಾಯಿತು. ಆದರೆ ಕೊನೆಗೆ ಸುಪ್ರೀಂ ಕೋರ್ಟ್‌ ನಾವು ಮಾಡಿದ್ದ ಕಾನೂನನ್ನು ಎತ್ತಿ ಹಿಡಿಯಿತು. ಬೇರೆ ರಾಜ್ಯದಲ್ಲಿ ಇಂಥಾ ಕಾನೂನು ಮಾಡಿದ್ದಾರಾ? ಈ ಸಂದರ್ಭದಲ್ಲಿ ಅಹಿಂಸಾ ( ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ಸಾಮಾನ್ಯ ವರ್ಗದ ಜನರು) ದವರು ಚುನಾವಣೆ ಹತ್ತಿರ ಇದೆ ನಿಮಗೆ ನಮ್ಮ ಮತ ಬೇಡವೇ ಎಂದು ಹೆದರಿಸಿದರು. ನೋಡಪ್ಪಾ ನಾನು ಸಂವಿಧಾನದಿಂದ ಪ್ರೇರಣೆ ಪಡೆದು ಇದನ್ನು ಮಾಡಿದ್ದೇನೆ. ಓಟು ಕೊಡುವುದು, ಬಿಡುವುದು ನಿಮಗೆ ಬಿಟ್ಟಿದ್ದು ಎಂದು ಹೇಳಿದೆ. ಕೊನೆಗೆ ಇವರೆಲ್ಲ ನನ್ನ ವಿರುದ್ಧ ಕೆಲಸ ಮಾಡಿದರು. ಅಧಿಕಾರದಲ್ಲಿದ್ದಾಗ ಸಂವಿಧಾನದ ಪರವಾಗಿ ಕೆಲಸ ಮಾಡುವುದು ನಮ್ಮ ಕರ್ತವ್ಯವಾಗಬೇಕು,. ಸಂವಿಧಾನ ರಕ್ಷಣೆ ಹೋರಾಟ ಇಡೀ ದೇಶದಲ್ಲಿ ನಡೆಯಬೇಕು ಎಂದರು.

ಸಾವರ್ಕರ್‌, ಗೋಲ್ವಾಲ್ಕರ್‌ ಮತ್ತು ಆರ್‌ ಎಸ್‌ ಎಸ್‌ ಮುಖವಾಣಿ ಆರ್ಗನೈಸರ್‌ ಒಂದು ಕಾಲದಲ್ಲಿ ನಮ್ಮ ತ್ರಿವರ್ಣ ಧ್ವಜವನ್ನು ವಿರೋಧ ಮಾಡಿದ್ದರು. ಇಂದು ಅವರೇ ಹರ್‌ ಘರ್‌ ಪೆ ತಿರಂಗಾ ಅಭಿಯಾನ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಈಗ ಹಿಂದೆ ಹೇಳಿದ ಯಾವ ಮಾತುಗಳೂ ಇಲ್ಲ. ಇವರ ಜೊತೆ ನಮ್ಮವರೂ ಹೋಗಿ ಸೇರಿಕೊಂಡಿದ್ದಾರೆ. ಹೀಗಾಗಿ ಶೋಷಿತ ವರ್ಗದ ಜನ ಒಗ್ಗಟ್ಟಾಗಿ ಸಾಮಾಜಿಕ ನ್ಯಾಯ, ಸಂವಿಧಾನದ ಹಕ್ಕುಗಳಿಗಾಗಿ ಹೋರಾಟ ಮಾಡದೆ ಹೋದರೆ ನಮಗೆ ಸಮಾನತೆ ಸಿಗಲ್ಲ. ಹನ್ನೆರಡನೆಯ ಶತಮಾನದಲ್ಲಿ ಬಸವೇಶ್ವರರು, “ಇವನಾರವ, ಇವನಾರವ, ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ, 
ಎನ್ನ ಮನೆ ಮಗನೆಂದಿನಿಸಯ್ಯ ಕೂಡಲಸಂಗಮದೇವ” ಎಂದು ಹೇಳಿದ್ದರು. ಇಂದು ಜಾತಿ ವ್ಯವಸ್ಥೆ ಹೋಗಿದೆಯಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Image
samavesha

ಭೂ ಸುಧಾರಣೆ ಕಾಯ್ದೆಯನ್ನು ತಿದ್ದುಪಡಿ ಮಾಡಿದರು. ಹಿಂದೆ ಉಳುವವನೆ ಭೂಮಿಯ ಒಡೆಯ ಅಂತ ಇತ್ತು. ಇಂದು ಯಾರು ಬೇಕಾದರೂ ಜಮೀನು ತೆಗೆದುಕೊಳ್ಳುವಂತೆ ತಿದ್ದುಪಡಿ ಮಾಡಿದ್ದಾರೆ. ಇದರಿಂದ ಸಣ್ಣ, ಅತಿ ಸಣ್ಣ ರೈತರು ಜಮೀನು ಮಾರಿಕೊಂಡು ಭೂ ರಹಿತರಾಗಿದ್ದಾರೆ. ನಾನು ನ್ಯಾಯ ಸಿಗದವರ ಪರವಾಗಿ ಇರುವವನು. ನಿಮ್ಮ ಕೂಗಿಗೆ ಧ್ವನಿಗೂಡಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಬಾಬಾ ಸಾಹೇಬರು ನಮಗೆ ಸಂವಿಧಾನ ಬರೆದುಕೊಟ್ಟು ಹೋಗಿದ್ದಾರೆ. ಆದರೆ ನಾವೆಲ್ಲ ಒಟ್ಟಾಗಿ ಹೋರಾಟ ಮಾಡದೆ ಹೋದರೆ ನ್ಯಾಯ ಸಿಗುವುದಿಲ್ಲ. ಇಂತಹಾ ಸಮಾವೇಶಗಳು ಮೇಲಿಂದ ಮೇಲೆ ನಡೆಯಬೇಕು ಮತ್ತು ಜನ ಬೀದಿಗಿಳಿದು ಹೋರಾಟ ಮಾಡಬೇಕು. ಒಂದು ವೇಳೆ ಬಾಬಾ ಸಾಹೇಬರು ಈ ದೇಶದಲ್ಲಿ ಹುಟ್ಟದೆ ಹೋಗಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ನಾವು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.

ಬಿಜೆಪಿಯವರು ತಾವು ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿದ್ದೇವೆ ಎನ್ನುತ್ತಿದ್ದಾರೆ. ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿದ್ದು ಬಹಳ ಸಂತೋಷ. ಹಾಗೆಯೇ ಆರ್‌,ಎಸ್‌,ಎಸ್‌ ನ ಸರಸಂಘಚಾಲಕರಾಗಿ ಒಬ್ಬ ದಲಿತರನ್ನು ಮಾಡಿ ಎಂದು ಉತ್ತರ ನೀಡಿದ್ದೇನೆ. ಇವರು ನಮಗೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಾರೆ. ಆದರೆ ಇವರಿಗೆ ಅಂಬೇಡ್ಕರ್‌ ಅವರು ಹೇಳಿರುವ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಬಗ್ಗೆ ಗೌರವ ಇದೆಯಾ ಎಂಬುದು ಜನರಿಗೆ ಗೊತ್ತಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು‌.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಹೆಚ್ ಸಿ ಮಹದೇವಪ್ಪ,  ರಮಾಬಾಯಿ ಡಾ. ಆನಂದ್ ತೇಲ್ತುಂಬ್ಡೆ, ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್, ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್, ಪ್ರೊ. ಎಸ್.ಜಿ.‌ ಸಿದ್ದರಾಮಯ್ಯ, ವಿ. ನಾಗರಾಜ್ ಮತ್ತಿತರರು ಹಾಜರಿದ್ದರು. 

ನಿಮಗೆ ಏನು ಅನ್ನಿಸ್ತು?
0 ವೋಟ್