ಸಿದ್ದರಾಮಯ್ಯ-75 | ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತರಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ: ರಾಹುಲ್ ಗಾಂಧಿ

  • ಸಿದ್ದರಾಮಯ್ಯ ಅವಧಿಯಲ್ಲಿನ ಜನಪರ, ಮಾದರಿ ಸರ್ಕಾರವೇ ಮರಳಿ ಅಧಿಕಾರಕ್ಕೆ ಬರಲಿ
  • ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಆಲಿಂಗನ ಮಾಡಿಕೊಂಡಿದ್ದು ಖುಷಿಯ ವಿಚಾರ

"ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ತರಲು ರಾಜ್ಯ ನಾಯಕರೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಸಿದ್ದರಾಮಯ್ಯ ಕೊಟ್ಟ ಮಾದರಿ ಸರ್ಕಾರವನ್ನೇ ಮರಳಿ ನಾವು ಇಲ್ಲಿ ತರಬೇಕು" ಎಂದು ರಾಹುಲ್ ಗಾಂಧಿ ಕರೆ ನೀಡಿದರು.

ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು. ತಮ್ಮ ಭಾಷಣದ ಆರಂಭದಲ್ಲಿ ರಾಜ್ಯದಲ್ಲಿನ ಅತಿವೃಷ್ಟಿ ಹಾಗೂ ಪ್ರವಾಹದಿಂದ ಮೃತರಾದ ಕುಟುಂಬಗಳಿಗೆ ರಾಹುಲ್ ಗಾಂಧಿ ಸಂತಾಪ ಸೂಚಿಸಿದರು. ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಸಿದ್ದರಾಮಯ್ಯ ಜೊತೆಗಿನ ತಮ್ಮ ಭಾಂದವ್ಯದ ಕ್ಷಣಗಳನ್ನು ಮೆಲುಕು ಹಾಕಿದರು. ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣದ ಪೂರ್ಣ ಪಾಠ ಈ ಕೆಳಗಿನಂತಿದೆ:

"ಸಾಮಾನ್ಯವಾಗಿ ನಾನು ಯಾವುದೇ ಜನ್ಮದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ಆದರೆ, ಸಿದ್ದರಾಮಯ್ಯ ಜೊತೆ ನನಗೆ ಅವಿನಾಭಾವ ಸಂಬಂಧವಿದೆ. ಹೀಗಾಗಿ ಈ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿದ್ದೇನೆ. ಸಿದ್ದರಾಮಯ್ಯ 75 ವರ್ಷ ಕಳೆದರೂ ಚಿರಯುವಕನಂತಿದ್ದಾರೆ." 

"ನಾನು ವ್ಯಕ್ತಿಯಾಗಿ ಸಿದ್ದರಾಮಯ್ಯ ಅವರನ್ನು ಇಷ್ಟಪಡುತ್ತೇನೆ. ಅವರ ವಿಚಾರಧಾರೆಗಳೂ ನನಗೆ ಇಷ್ಟ. ಸಿದ್ದರಾಮಯ್ಯ ಅವರ ರಾಜಕೀಯ ನಿಲುವು, ಧೋರಣೆ ಬಗೆಗೂ ನನಗೆ ಸಹಮತವಿದೆ. ಅವರು ಸರ್ಕಾರ ನಡೆಸಿದ ರೀತಿ ನನಗೆ ಸಂತಸ ತಂದಿದೆ. ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ನೀಡಿದ ಸಿದ್ದರಾಮಯ್ಯ ನಮಗೆಲ್ಲಾ ಆದರ್ಶ. ಈಗಿನ ಜನವಿರೋಧಿ ಬಿಜೆಪಿಗಿಂತ ಜನರಲ್ಲಿ ಸಾಮರಸ್ಯ ಕೋಮು ಸೌಹಾರ್ದತೆ ಭ್ರಾತೃತ್ವದ ಸರ್ಕಾರವನ್ನು ನಮ್ಮ ಕಾಂಗ್ರೆಸ್ ನೀಡಿತ್ತು." 

"ಸಿದ್ದರಾಮಯ್ಯ ಸರ್ಕಾರ ನೀಡಿದ್ದ ಭಾಗ್ಯಗಳ ಸರಣಿ ಯೋಜನೆ ಇಂದಿಗೂ ಜನರ ಮನಸ್ಸಿನಲ್ಲಿದೆ. ಇಂದಿರಾ ಕ್ಯಾಂಟೀನ್, ಸಾಲ ಮನ್ನಾ, ಮಕ್ಕಳಿಗೆ ಬಿಸಿಯೂಟ ಯೋಜನೆ ಇವೆಲ್ಲವೂ ಇನ್ನೂ ಜನರ ಮನಸ್ಸಿನಲ್ಲಿ ಹಸಿರಾಗಿವೆ. ಇಂತಹ ಜನಪರ ಯೋಜನೆಗಳನ್ನು ನಮ್ಮ ಕಾಂಗ್ರೆಸ್ ಸರ್ಕಾರ ನೀಡಿತ್ತು. ಆದರೆ, ಈಗ ಅಧಿಕಾರದಲ್ಲಿರುವ ಬಿಜೆಪಿ ಇವೆಲ್ಲದಕ್ಕೂ ತಿಲಾಂಜಲಿ ಹಾಡಿದೆ. ಬಸವಣ್ಣನ ಪ್ರತಿಮೆ ಎದುರು ಪ್ರಮಾಣ ಮಾಡಿ ಅವರ ವಚನಗಳಿಗೆ ವಿರುದ್ಧವಾಗಿ ನಡೆದುಕೊಂಡು ಜನರನ್ನು ಕೊಳ್ಳೆ ಹೊಡೆಯುತ್ತಿದೆ. ಇಲ್ಲಿನ ಸಂಸ್ಕೃತಿ, ಜನರ ಭಾಷೆ ಕಾಪಾಡಲು ನಾವು ಬದ್ಧರಾಗಿ ನಡೆದುಕೊಂಡಿದ್ದೆವು. ಆದರೆ, ಅವೆಲ್ಲವನ್ನೂ ಬಿಜೆಪಿಗರು ನಾಶ ಮಾಡಿ ಧ್ರುವೀಕರಣದ ರಾಜಕೀಯ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಜನ ಎಚ್ಚರದಿಂದಿರಬೇಕು." 

"ಭಾರತ ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ದೇಶ. ಇದನ್ನು ನಾವು ಉಳಿಸಿ ಬೆಳೆಸಬೇಕಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕಿದೆ. ಆದರೆ, ಬಿಜೆಪಿಗರು ಇಂತಹ ದೇಶವನ್ನು ಒಡೆದಾಳಲು ಹೊರಟಿದ್ದಾರೆ. ರೈತರ, ಬಡವರ, ಕಾರ್ಮಿಕರ ಜೀವನವನ್ನು ಕಿತ್ತುಕೊಂಡಿದ್ದಾರೆ. ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾರೆ. ಜಿಎಸ್‌ಟಿ ಜಾರಿಗೆ ತಂದು ಜನಸಾಮಾನ್ಯರ ಬದುಕನ್ನು ಕಿತ್ತುಕೊಂಡಿದ್ದಾರೆ. ದೇಶದ ಬೆರಳೆಣಿಕೆಯ ಉದ್ಯಮಿಗಳನ್ನು ಶ್ರೀಮಂತರನ್ನಾಗಿಸಲು ಹೊರಟಿರುವ ಬಿಜೆಪಿ, ದೇಶದ ಸಂಪನ್ಮೂಲ ಕೊಳ್ಳೆ ಹೊಡೆದು ಅವರ ಜೇಬು ತುಂಬಿಸುತ್ತಿದೆ. ಇವೆಲ್ಲವನ್ನೂ ನಾವು ತಡೆಯ ಬೇಕಿದೆ". 

"ಇಂದಿಗೆ ಬೆಂಗಳೂರು ಸಿಲಿಕಾನ್ ವ್ಯಾಲಿ ಎನಿಸಿಕೊಂಡಿರುವುದು ರಾಜೀವ್ ಗಾಂಧಿ ತಂದಿದ್ದ ಕಂಪ್ಯೂಟರೀಕರಣದ ಬದಲಾವಣೆಯಿಂದ ಎನ್ನುವುದನ್ನು ನೀವೆಲ್ಲ ನೆನಪಿಟ್ಟುಕೊಳ್ಳಬೇಕು. ವಿದೇಶದಲ್ಲೂ ಕರ್ನಾಟಕದ ಕೆಟ್ಟ ಕಾನೂನು ಸುವ್ಯವಸ್ಥೆ ಚರ್ಚೆಯಾಗುವಂತೆ ಮಾಡಿರುವುದೇ ಬಿಜೆಪಿ ಸಾಧನೆ".

"ಅಮೆರಿಕದ ಪ್ರಜೆಗಳು ಕರ್ನಾಟಕದ ಸಮಸ್ಯೆಗಳ ಬಗ್ಗೆ ಅಲ್ಲಿ ಮಾತನಾಡುತ್ತಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಈ ಸಮಸ್ಯೆ ಇರಲಿಲ್ಲ , ಭಯ ಎನ್ನುವುದೂ ಇರಲಿಲ್ಲ. ಆದರೆ, ಬಿಜೆಪಿ ಅವಧಿಯಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ಹೇಳುವಂತಾದರೆ, ಬಿಜೆಪಿ ಸರ್ಕಾರದ ಜನಪರ ಆಡಳಿತ ಹೇಗಿದೆ ಎನ್ನುವುದು ಅರ್ಥವಾಗುತ್ತದೆ". 

"ಯಾವ ನೆಲದಲ್ಲಿ ಸಾಮರಸ್ಯ ನೆಲೆ ನಿಂತಿರುತ್ತದೆಯೋ ಆ ಭೂಮಿಯಲ್ಲಿ ಉದ್ಯೋಗಗಳು ಚೆನ್ನಾಗಿ ನಡೆಯುತ್ತವೆ. ಇಲ್ಲದಿದ್ದಲ್ಲಿ ಅವೆಲ್ಲ ಅಲ್ಲಿಂದ ಹೊರಹೋಗುತ್ತವೆ. ಈಗ ರಾಜ್ಯದಲ್ಲೂ ಅಂತಹುದ್ದೇ ಪರಿಸ್ಥಿತಿ ಇದೆ. ಇಲ್ಲಿನ ಸರ್ಕಾರ 40% ಕಮಿಷನ್‌ ಸರ್ಕಾರ ಎನಿಸಿಕೊಂಡಿದೆ". 

"ಮನ್ರೇಗಾ, ಕೃಷಿ ಸಾಲ ಮನ್ನಾ, ಮಾಹಿತಿ ಹಕ್ಕು ಕಾಯಿದೆಯಂಥ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನೀಡಿತ್ತು. ಈಗಿನ ಬಿಜೆಪಿ ಸರ್ಕಾರ ಇಂತಹ ಯಾವ ಯೋಜನೆ ಕೊಟ್ಟಿದೆ?" 

"ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಆಲಿಂಗನ ಮಾಡಿಕೊಂಡಿದ್ದು ಖುಷಿಯ ವಿಚಾರ. ಡಿ ಕೆ ಶಿವಕುಮಾರ್ ತಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ಬಲಯುತ ಪಕ್ಷ ಸಂಘಟನೆಯ ಕೆಲಸ ಮಾಡಿದ್ದಾರೆ. ಜನವಿರೋಧಿ ಆರ್‌ಎಸ್‌ಎಸ್, ಬಿಜೆಪಿ ಸೋಲಿಸಲು ಕಾಂಗ್ರೆಸ್ ಒಟ್ಟಾಗಿದೆ. ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಕ್ರಮ ವಹಿಸುತ್ತೇವೆ" 

"ದ್ವೇಷದ ರಾಜಕಾರಣ ಮಾಡಲು ನಾವು ಬಿಡುವುದಿಲ್ಲ. ಬಸವಣ್ಣ ತತ್ವ ಪಾಲನೆ ಮಾಡುವ ಸರ್ಕಾರವನ್ನು ನಾವು ನೀಡುತ್ತೇವೆ. ಈ ಹಿನ್ನೆಲೆಯಲ್ಲಿ ನಾನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪಕ್ಷಕ್ಕೆ ಶುಭ ಕೋರುತ್ತೇನೆ. ಎಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು  ಅಧಿಕಾರಕ್ಕೆ ತರಲು ಪ್ರಯತ್ನಿಸಿ". 

ನಿಮಗೆ ಏನು ಅನ್ನಿಸ್ತು?
0 ವೋಟ್