ಗೌರವಕ್ಕೆ ಧಕ್ಕೆ ಬಂದ್ರೆ ನಾವು ಅಲ್ಲಿರಲ್ಲ: ತಿರುಗಿ ಬಿದ್ದ ‘ಬಲಿಜ ನಾಯಕ’ | ಡಿಕೆ-ಬಿಕೆ ವಿರುದ್ಧ ಸೀತಾರಾಮ್ ವಾಗ್ದಾಳಿ

ಅವರು ಎರಡು ಬಾರಿ ಮಲ್ಲೇಶ್ವರಂ ಶಾಸಕರಾಗಿದ್ದರು. ಒಮ್ಮೆ ವಿಧಾನ ಪರಿಷತ್ ಸದಸ್ಯರೂ ಆಗಿದ್ದ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದರು. ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವ ಅವರು ಆರ್ಥಿಕವಾಗಿ ಬಲಾಢ್ಯರು; ರಾಜ್ಯದ ಬಲಿಜ ಸಮುದಾಯದ ಪ್ರಭಾವಿ ನಾಯಕರು. ಆದರೆ, ಮತಬ್ಯಾಂಕ್ ಸೃಷ್ಟಿಸುವ ರಾಜಕಾರಣಿಯಲ್ಲ. ಅವರೀಗ ತಮ್ಮ ರಾಜಕೀಯ ಬದುಕಿನ ಮಹತ್ವದ ತಿರುವಿನಲ್ಲಿದ್ದಾರೆ.
M R Sitharam

ಕಳೆದ ತಿಂಗಳು ದೇವನಹಳ್ಳಿಯ ಖಾಸಗಿ ರೆಸಾರ್ಟ್‌ನಲ್ಲಿ ನಡೆದಿದ್ದ ರಾಜ್ಯ ಮಟ್ಟದ ಚಿಂತನಾ ಶಿಬಿರದಲ್ಲಿ ಕಾಂಗ್ರೆಸ್ ನಾಯಕರು ಪಕ್ಷದ ಪುನಶ್ಚೇತನದ ಮಾತುಗಳನ್ನಾಡಿದ್ದರು. ಅಂದು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಪರಸ್ಪರ ಅಪ್ಪಿಕೊಂಡು ಒಗ್ಗಟ್ಟು ಪ್ರದರ್ಶಿಸಿದ್ದರು.

ಆದರೆ, ಪ್ರಸ್ತುತ ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆ ಗಮನಿಸಿದವರು ಉಭಯ ನಾಯಕರ ನಡುವಿನ ‘ಕದನ ವಿರಾಮ’ ಮುರಿದುಬಿದ್ದಿದೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಎಂ ಆರ್ ಸೀತಾರಾಮ್ ಅವರು ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಎರಡು ಬಾರಿ ಮಲ್ಲೇಶ್ವರಂ ಶಾಸಕರಾಗಿ, ಒಮ್ಮೆ ವಿಧಾನ ಪರಿಷತ್ ಸದಸ್ಯರಾಗಿದ್ದ ಅವರು, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದರು. ಎಂ ಎಸ್ ರಾಮಯ್ಯ ಸಮೂಹ ಸಂಸ್ಥೆಗಳನ್ನು ನಡೆಸುತ್ತಿರುವ ಅವರು ಆರ್ಥಿಕವಾಗಿ ಪ್ರಬಲರು. ರಾಜ್ಯದ ಬಲಿಜ ಸಮುದಾಯದ ಪ್ರಭಾವಿ ನಾಯಕರು. ಆದರೆ, ಮತಬ್ಯಾಂಕ್ ಸೃಷ್ಟಿಸುವ ರಾಜಕಾರಣಿಯಲ್ಲ; ರಾಜ್ಯದ ಜನತೆಗೆ ಚಿರಪರಿಚಿತ ಮುಖವೂ ಅಲ್ಲ.

ರಾಜ್ಯ ರಾಜಧಾನಿ ಬೆಂಗಳೂರು, ನೆರೆಯ ಜಿಲ್ಲೆಗಳಾದ ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಒಂದಷ್ಟು ಪ್ರಸಿದ್ಧಿ ಗಳಿಸಿರುವುದು ಬಿಟ್ಟರೆ, ತಂದೆ ಎಂ ಎಸ್ ರಾಮಯ್ಯ ಅವರ ಹೆಸರಿನ ಮೇಲೆಯೇ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ದಶಕಗಳಿಂದ ಕಾಂಗ್ರೆಸ್ ಜತೆಗೆ ಗುರುತಿಸಿಕೊಂಡಿರುವ ಹಿರಿಯ ರಾಜಕಾರಣಿ ಈಗ ಕಾಂಗ್ರೆಸ್ ಪಕ್ಷದ ರಾಜ್ಯದ ನಾಯಕರು ಮತ್ತು ಹೈಕಮಾಂಡ್ ಮೇಲೆ ಮುನಿಸಿಕೊಂಡಿದ್ದಾರೆ. ಶುಕ್ರವಾರ (ಜು.24) ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಪ್ತರ ಸಭೆ ನಡೆಸಿ ಅಸಮಾಧಾನ ಹೊರ ಹಾಕಿದ್ದಾರೆ.

AV Eye Hospital ad

ಕೈ ತಪ್ಪಿದ ಪರಿಷತ್ ಸ್ಥಾನ: ಬಿಜೆಪಿ ಸೇರುತ್ತಾರಾ ಸೀತಾರಾಮ್?

2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಂ ಆರ್ ಸೀತಾರಾಮ್ ಅವರಿಗೆ ಮಲ್ಲೇಶ್ವರಂ ಕ್ಷೇತ್ರದ ಟಿಕೆಟ್ ನೀಡಿತ್ತು. ಆದರೆ ಟಿಕೆಟ್ ಅನ್ನು ನಿರಾಕರಿಸಿದ್ದ ಸೀತಾರಾಮ್, ತಮ್ಮ ಪ್ರಭಾವ ಹೆಚ್ಚಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಕೇಳಿದ್ದರು ಎನ್ನಲಾಗಿದೆ. ಆದರೆ ಅವರಿಗೆ ಚಿಕ್ಕಬಳ್ಳಾಪುರ ಟಿಕೆಟ್ ನಿರಾಕರಿಸಿ ವೀರಪ್ಪ ಮೊಯ್ಲಿ ಅವರಿಗೆ ಎರಡನೇ ಅವಕಾಶ ನೀಡಲಾಗಿತ್ತು. ಚಿಕ್ಕಬಳ್ಳಾಪುರದಲ್ಲಿ ಟಿಕೆಟ್ ತಪ್ಪಿದ ನಂತರ ಪರಿಷತ್ ಸ್ಥಾನ ಸಿಗುತ್ತದೆ ಎಂಬ ಅವರ ವಿಶ್ವಾಸಕ್ಕೆ ಕಾಂಗ್ರೆಸ್ ಹೈಕಮಾಂಡ್ ತಣ್ಣೀರು ಎರಚಿದೆ.

ಕಳೆದ ತಿಂಗಳು ವಿಧಾನಸಭೆಯಿಂದ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ನಡೆದ ಚುನಾವಣೆಯಲ್ಲೂ ತಮಗೆ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದರು. ಪಟ್ಟಿಯಲ್ಲಿ ಸೀತಾರಾಮ್ ಹೆಸರಿದ್ದರೂ ಕೂಡ ಕೊನೇ ಕ್ಷಣದಲ್ಲಿ ಅವರನ್ನು ಕೈಬಿಡಲಾಗಿತ್ತು. ಇದೇ ಕಾರಣಕ್ಕೆ ಕೋಪಗೊಂಡಿರುವ ಅವರು, ತಮ್ಮ ಬೆಂಬಲಿಗರ ಸಭೆ ಕರೆದು ಪಕ್ಷ ಬಿಡುವ ತೀರ್ಮಾನ ಮಾಡಿದ್ದಾರೆ. ತಿಂಗಳ ಒಳಗಾಗಿ ಕಾಂಗ್ರೆಸ್ ನಾಯಕರಿಂದ ಸೂಕ್ತ ಭರವಸೆ ಸಿಗದೇ ಇದ್ದಲ್ಲಿ ಅವರು ಬಿಜೆಪಿ ಸೇರುವ ಎಲ್ಲ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. 

M R Sitharam
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಎಂ ಆರ್ ಸೀತಾರಾಮ್ ಬೆಂಬಲಿಗರ ಸಮಾಲೋಚನಾ ಸಭೆ.

ಬಲಿಜ ಸಮುದಾಯದ ಮೇಲೆ ಬಿಜೆಪಿ ಕಣ್ಣು!

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ ಸಿ ಮೋಹನ್ ಸೇರಿದಂತೆ ಹಲವು ಬಲಿಜ ನಾಯಕರು ಈಗಾಗಲೇ ಬಿಜೆಪಿಯಲ್ಲಿದ್ದಾರೆ. ಎಂ ಆರ್ ಸೀತಾರಾಮ್ ಬಲಿಜ ಸಮುದಾಯದ ಪ್ರಭಾವಿ ನಾಯಕ. ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಸಂಪನ್ಮೂಲಭರಿತರಾಗಿರುವ ಇವರ ಕುಟುಂಬ ಬಲಿಜ ಸಮುದಾಯದಲ್ಲಿ ಪ್ರಭಾವಿ ಎನಿಸಿಕೊಂಡಿದೆ. ಶ್ರೀ ಕ್ಷೇತ್ರ ಕೈವಾರದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಸಮುದಾಯದ ಜನರು ಇವರನ್ನು ಹೆಚ್ಚು ಒಪ್ಪಿಕೊಂಡು, ಬೆಂಬಲಿಸಲು ಪ್ರಮುಖ ಕಾರಣಗಳಲ್ಲೊಂದಾಗಿದೆ. ಇಂತಹ ನಾಯಕನ ಮೇಲೆ ಈಗ ಬಿಜೆಪಿ ಕಣ್ಣಿಟ್ಟಿದ್ದು, ಕಾಂಗ್ರೆಸ್ ತೊರೆದರೆ ಅವರನ್ನು ಸ್ವಾಗತಿಸಲು ಸಿದ್ಧವಾಗಿದೆ. 

ರಕ್ಷಾ ರಾಮಯ್ಯ ಕಥೆಯೇನು?

ಎಂ ಆರ್ ಸೀತಾರಾಮ್ ಕಾಂಗ್ರೆಸ್ ನಾಯಕರ ಮೇಲೆ ಮುನಿಸಿಕೊಳ್ಳಲು ಅವರ ಪುತ್ರ ರಕ್ಷಾ ರಾಮಯ್ಯ ಅವರನ್ನು ಪಕ್ಷವು ನಡೆಸಿಕೊಂಡ ರೀತಿಯೂ ಒಂದು ಪ್ರಮುಖ ಕಾರಣವಾಗಿದೆ. ಕಳೆದ ವರ್ಷ ನಡೆದಿದ್ದ ರಾಜ್ಯ ಯುವ ಕಾಂಗ್ರೆಸ್‌ ಚುನಾವಣೆಯಲ್ಲಿ ರಕ್ಷಾ ರಾಮಯ್ಯ ಎರಡನೇ ಸ್ಥಾನ ಪಡೆದಿದ್ದರೂ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಒಂದೇ ವರ್ಷದಲ್ಲಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಮೊಹಮ್ಮದ್ ನಲಪಾಡ್ ಅವರನ್ನು ಆ ಸ್ಥಾನಕ್ಕೆ ಕೂರಿಸಲಾಗಿದೆ.

ಯುವ ಕಾಂಗ್ರೆಸ್ ಚುನಾವಣೆಯಲ್ಲಿ ನಲಪಾಡ್ ಹೆಚ್ಚಿನ ಮತಗಳಿಂದ ಗೆದ್ದಿದ್ದರೂ ಸಹ, ಅವರು ಈ ಹಿಂದೆ ಮಾಡಿಕೊಂಡಿದ್ದ ವಿವಾದಗಳಿಂದ ಅಧ್ಯಕ್ಷ ಸ್ಥಾನಕ್ಕೇರಲು ಸಾಧ್ಯವಾಗಿರಲಿಲ್ಲ. ಸಿದ್ದರಾಮಯ್ಯ ಅವರ ಒತ್ತಡಕ್ಕೆ ಮಣಿದಿದ್ದ ಕಾಂಗ್ರೆಸ್ ಹೈಕಮಾಂಡ್, ರಕ್ಷಾ ರಾಮಯ್ಯ ಅವರನ್ನು ಒಂದು ವರ್ಷದ ಅವಧಿಗೆ ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. 

ರಕ್ಷಾ ರಾಮಯ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೇರುವಲ್ಲಿ ಸಿದ್ದರಾಮಯ್ಯ ಪಾತ್ರ ಹೆಚ್ಚಿತ್ತು. ತನ್ನ ಮಗನ ಕೈಹಿಡಿದಿರುವ ಮತ್ತು ತನ್ನನ್ನು ಸಚಿವರನ್ನಾಗಿ ಮಾಡಿದ್ದ ಸಿದ್ದರಾಮಯ್ಯ ಈ ಬಾರಿ ಎಂಎಲ್‌ಸಿ ಟಿಕೆಟ್ ಕೊಡಿಸೇ ತೀರುತ್ತಾರೆ ಎಂಬ ಭರವಸೆಯಲ್ಲಿದ್ದ ಸೀತಾರಾಮ್‌ಗೆ ನಂತರ ನಿರಾಶೆಯಾಗಿತ್ತು.

ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ರಕ್ಷಾ ರಾಮಯ್ಯರನ್ನು ಕೆಳಗಿಳಿಸಿದ ನಂತರ, ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನಾಗಿ ಅವರನ್ನು ನೇಮಕ ಮಾಡಲಾಗಿದೆ. 2024ರ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳು ಕೂಡಾ ಹೆಚ್ಚಿವೆ. ಇದೆಲ್ಲರದ ನಡುವೆ ಸೀತಾರಾಮ್ ಬಂಡಾಯ ಎದ್ದಿರುವುದು ಯಾಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ!

ಡಿ ಕೆ ಶಿವಕುಮಾರ್ ಮತ್ತು ಹರಿಪ್ರಸಾದ್ ಮೇಲೆ ಸೀತಾರಾಮ್ ವಾಗ್ದಾಳಿ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಎಂ ಆರ್ ಸೀತಾರಾಮ್, ತಮ್ಮ ಇಡೀ ಭಾಷಣದಲ್ಲಿ ಡಿ ಕೆ ಶಿವಕುಮಾರ್ ಮತ್ತು ಬಿ ಕೆ ಹರಿಪ್ರಸಾದ್ ಅವರನ್ನು ಗುರಿಯಾಗಿಸಿಕೊಂಡಿದ್ದರು.  

“ನಮಗೆ ಪಕ್ಷದಿಂದ ನಾಲ್ಕು ಸಲ ಅನ್ಯಾಯ ಮಾಡಿದ್ದಾರೆ. ಯುವ ಕಾಂಗ್ರೆಸ್ ಚುನಾವಣೆಯಲ್ಲಿ ನನ್ನ ಮಗ ರಕ್ಷಾ ರಾಮಯ್ಯ ಬೆಂಗಳೂರು ಉತ್ತರ ವಿಭಾಗದಲ್ಲಿ ಗೆದ್ದಿದ್ದ. ನಂತರ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ. ಮತ್ತೊಬ್ಬ ಅಭ್ಯರ್ಥಿ ಕೂಡಾ ಸ್ಪರ್ಧೆ ಮಾಡಿದ್ದರು. ಹಲವು ಕಾರಣಗಳಿಂದ ಅವರ ನಾಮಪತ್ರ ತಿರಸ್ಕಾರ ಮಾಡಲಾಗಿತ್ತು. ಆದರೂ ನಂತರ ಆ ವ್ಯಕ್ತಿ ಸ್ಪರ್ಧೆ ಮಾಡೋಕೆ ಅವಕಾಶ ಮಾಡಿಕೊಡ್ತಾರೆ. ನಂತರ ಅವರನ್ನ ಅಧ್ಯಕ್ಷರನ್ನಾಗಿ ಮಾಡ್ತಾರೆ” ಎಂದು ಪರೋಕ್ಷವಾಗಿ ಡಿ ಕೆ ಶಿವಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿದರು.

“ನನಗೆ ಪಕ್ಷದ‌ ಮೇಲೆ ಬೇಜಾರಿಲ್ಲ. ಪಕ್ಷದ ಚುಕ್ಕಾಣಿ ಹಿಡಿದಿರುವ ನಾಯಕರ ಮೇಲೆ ಬೇಜಾರಿದೆ. ರಾಜ್ಯದ ನಾಯಕರು, ಹೈಕಮಾಂಡ್ ಮೇಲೆ ಅಸಮಾಧಾನ ಇದೆ. ಪರಿಷತ್‌ಗೆ ಅಭ್ಯರ್ಥಿ ಆಯ್ಕೆ ಮಾಡಿ ಒಂದು ತಿಂಗಳಾಗಿದೆ. ಈವರೆಗೆ ಸೌಜನ್ಯಕ್ಕೂ ಕೂಡಾ ನಿರಾಸೆಗೊಂಡವರನ್ನ ಕರೆದು ಮಾತಾಡಿಸಿಲ್ಲ. ಪಕ್ಷದಿಂದ ನನಗೆ ಯಾವುದೇ ಲಾಭ ಬೇಕಿಲ್ಲ. ಗೌರವಕ್ಕೆ ಧಕ್ಕೆ ಬಂದ್ರೆ ಅಲ್ಲಿ ನಾವು ಇರಲ್ಲ” ಎಂದು ಅವರು ಹೇಳಿದ್ದಾರೆ.

ತಮ್ಮ ಇಡೀ ಭಾಷಣದಲ್ಲಿ ಅವರು "ಪಕ್ಷ ನನಗೆ ಅನಿವಾರ್ಯವಲ್ಲ, ಪಕ್ಷಕ್ಕೆ ನಾನು ಅನಿವಾರ್ಯ" ಎಂಬರ್ಥದ ಮಾತುಗಳನ್ನಾಡಿದ್ದಾರೆ. ಆದರೆ, ಪಕ್ಷ ಬಿಡುವವರ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಖಚಿತ ಅಭಿಪ್ರಾಯ ಹೊಂದಿದೆ.  “ಅಧಿಕಾರ ಸಿಕ್ಕಿಲ್ಲ ಎಂಬ ಕಾರಣಕ್ಕೆ ಹೊರ ಹೋಗುತ್ತೇವೆ ಎಂಬುವವರನ್ನು ಯಾವುದೇ ಕಾರಣಕ್ಕೂ ತಡೆಯಬೇಡಿ” ಎಂಬ ಸ್ಪಷ್ಟ ಸಂದೇಶವನ್ನು ಪಕ್ಷವು ರವಾನಿಸಿದೆ.

ಪಕ್ಷ ತೊರೆಯುತ್ತಿರುವ ಆಪ್ತರು: ಸಿದ್ದರಾಮಯ್ಯ ಮೌನವೇಕೆ?

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವಾಗ ತಮ್ಮ ಜತೆಗೆ ಬಂದಿದ್ದ ಸಿ ಎಂ ಇಬ್ರಾಹಿಂ ಕೂಡಾ ಪಕ್ಷದ ನಾಯಕತ್ವಕ್ಕೆ (ಬಿ ಕೆ ಹರಿಪ್ರಸಾದ್ ಮತ್ತು ಡಿ ಕೆ ಶಿವಕುಮಾರ್) ಬೇಸರಗೊಂಡು ಜೆಡಿಎಸ್ ಸೇರಿದ್ದಾರೆ. ಈಗ ಎಂ ಆರ್ ಸೀತಾರಾಮ್ ಕೂಡಾ ಪಕ್ಷ ತೊರೆಯುವ ಸಾಧ್ಯಗಳಿವೆ. ಇಷ್ಟೆಲ್ಲ ನಡೆಯುತ್ತಿರುವುದು ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಎನ್ನುವುದು ಕುತೂಹಲಕಾರಿ ವಿಷಯ.

ಈ ಸುದ್ದಿ ಓದಿದ್ದೀರಾ?: ಡಿ ಕೆ ಶಿವಕುಮಾರ್ ವಿರುದ್ಧ ಎಂ ಆರ್‌ ಸೀತಾರಾಂ ಬಂಡಾಯ | ಬೆಂಬಲಿಗರ ಸಭೆ ಕರೆದ ಮಾಜಿ ಸಚಿವ

ಸಿ ಎಂ ಇಬ್ರಾಹಿಂ ಕಾಂಗ್ರೆಸ್ ತೊರೆಯುವಾಗಲೂ ಸಹ ಅವರನ್ನು ಉಳಿಸಿಕೊಳ್ಳುವ ಯಾವ ಪ್ರಯತ್ನವನ್ನೂ ಸಿದ್ದರಾಮಯ್ಯ ಮಾಡಲಿಲ್ಲ. ‘ಇಬ್ರಾಹಿಂ ಪಕ್ಷ ಬಿಡಲ್ಲ, ಪಕ್ಷದಲ್ಲೇ ಇರುತ್ತಾರೆ’ ಎಂದು ಹೇಳುತ್ತಿರುವಾಗಲೇ ಅವರು ಜೆಡಿಎಸ್ ಪಡಸಾಲೆ ಸೇರಿಯಾಗಿತ್ತು.

ಈಗ ತಮ್ಮ ಮತ್ತೊಬ್ಬ ಅತ್ಯಾಪ್ತ ಕಾಂಗ್ರೆಸ್ ಹಿರಿಯ ನಾಯಕ ಎಂ ಆರ್ ಸೀತಾರಾಮ್ ಕೂಡಾ ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ತೊರೆಯುವ ಮುನ್ಸೂಚನೆಯನ್ನೂ ನೀಡಿದ್ದಾರೆ. ಆದರೆ, ಸಿದ್ದರಾಮಯ್ಯ ಮಾತ್ರ ಈ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. 

ಎಂ ಅರ್ ಸೀತಾರಾಮ್ ಅವರಿಗಿರುವ ಅಸಮಾಧಾನವನ್ನು ಪಕ್ಷದೊಳಗೆಯೇ ಮಾತನಾಡಿ ಬಗೆಹರಿಸುವ ಎಲ್ಲ ಶಕ್ತಿ, ಅವಕಾಶ ಸಿದ್ದರಾಮಯ್ಯ ಅವರಿಗಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಸಿದ್ದರಾಮಯ್ಯ ಮಾತನ್ನು ಗಂಭೀರವಾಗಿ ಪರಿಗಣಿಸುತ್ತದೆ. ಇಷ್ಟೆಲ್ಲಾ ಸಾಧ್ಯತೆಗಳು ಇದ್ದಾಗಲೂ ಸಿದ್ದರಾಮಯ್ಯ ಮೌನ ವಹಿಸಿರುವುದು ಕುತೂಹಲ ಮೂಡಿಸಿದೆ.

ಒಂದು ತಿಂಗಳ ನಂತರ ಮುಂದೇನು?

ತನ್ನನ್ನು ಕರೆದು ಮಾತನಾಡುವಂತೆ ಎಂ ಆರ್ ಸೀತಾರಾಮ್ ಕಾಂಗ್ರೆಸ್ ನಾಯಕರಿಗೆ ಒಂದು ತಿಂಗಳ ಸಮಯಾವಕಾಶ ನೀಡಿದ್ದಾರೆ. ಇದರ ನಡುವೆಯೇ ಕಾಂಗ್ರೆಸ್ ಹೈಕಮಾಂಡ್ ಸೀತಾರಾಮ್ ವಿರುದ್ಧ ಕೋಪಗೊಂಡಿದೆ. ಒಂದು ತಿಂಗಳ ನಂತರ ಏನಾಗುತ್ತದೆ? ಸೀತಾರಾಮ್ ಬಿಜೆಪಿ ಸೇರುತ್ತಾರಾ? ರಕ್ಷಾ ರಾಮಯ್ಯ ಕಾಂಗ್ರೆಸ್‌ನಲ್ಲೇ ಮುಂದುವರಿಯುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ. ಎಲ್ಲವೂ ಸಿದ್ದರಾಮಯ್ಯ ಅವರ ಮಧ್ಯಪ್ರವೇಶ ಮತ್ತು ನಿರ್ಧಾರಗಳ ಮೇಲೆ ನಿಂತಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app