ತಿಂಗಳಾಂತ್ಯಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆ, ನೂತನ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರು ಅಂತಿಮ!

BJP Karnataka
  • ಸದ್ಯದಲ್ಲೇ ನೂತನ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರು ಅಂತಿಮ?
  • ಈಶ್ವರಪ್ಪ, ಜಾರಕಿಹೊಳಿ, ಸವದಿ, ಸಿ ಪಿ ಯೋಗೇಶ್ವರ್‌ಗೆ ಅವಕಾಶ

ಹಲವು ತಿಂಗಳಿನಿಂದ ನೆನೆಗುದಿಗೆ ಬಿದ್ದಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ಜೊತೆಗೆ ಭಾರತೀಯ ಜನತಾ ಪಕ್ಷದ ನೂತನ ರಾಜ್ಯಾಧ್ಯಕ್ಷರ ಹೆಸರನ್ನು ಅಂತಿಮಗೊಳಿಸಲಾಗುತ್ತದೆ ಎಂದು ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.

ಸಂಪುಟ ವಿಸ್ತರಣೆ ಸಂಬಂಧ ಹಲವು ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಭೇಟಿ ನೀಡಿದ್ದರು. ಆದರೂ ದೆಹಲಿ ವರಿಷ್ಠರು ಅನುಮತಿ ನೀಡದ ಕಾರಣಕ್ಕೆ ಹಲವು ತಿಂಗಳಿನಿಂದ ನೆನೆಗುದಿಗೆ ಬಿದ್ದಿದೆ. ಆ.3ರಂದು ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಗ ಅನುಮತಿ ನೀಡಿದ್ದು, ಶೀಘ್ರದಲ್ಲೇ ಸಂಪುಟ ವಿಸ್ತರಣೆಯಾಗುತ್ತದೆ ಎನ್ನಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೂಡ ಅಮಿತ್ ಶಾ ಬಳಿ ಇದೇ ವಿಚಾರ ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೋವಿಡ್ ಸೋಂಕಿಗೆ ಒಳಗಾಗಿದ್ದು, ಅವರು ಗುಣಮುಖರಾದ ನಂತರ ಸಂಪುಟ ವಿಸ್ತರಣೆಗೆ ಚಾಲನೆ ಸಿಗಲಿದೆ; ಈ ಬಗ್ಗೆ ಈಗಾಗಲೇ ಬಿಜೆಪಿ ಹೈಕಮಾಂಡ್ ಜೊತೆಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಖಾಲಿ ಇರುವ ಒಟ್ಟು 5 ಸಚಿವ ಸ್ಥಾನಗಳ ಪೈಕಿ 4 ಸ್ಥಾನ ಭರ್ತಿ ಮಾಡಲು ಮುಖ್ಯಮಂತ್ರಿ ಬೊಮ್ಮಾಯಿ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಮಾಜಿ ಸಚಿವರುಗಳಾದ ಕೆ ಎಸ್ ಈಶ್ವರಪ್ಪ, ರಮೇಶ್ ಜಾರಕಿಹೊಳಿ, ಲಕ್ಷ್ಮಣ ಸವದಿ, ಸಿ ಪಿ ಯೋಗೇಶ್ವರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಈ ಬಗ್ಗೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಓದಿದ್ದೀರಾ?: ಬಿಬಿಎಂಪಿ | ಕಾಂಗ್ರೆಸ್ ನಾಯಕರಿಗೆ ಅವಕಾಶ ತಪ್ಪಿಸಲು ಬೇಕಾಬಿಟ್ಟಿಯಾಗಿ ಮೀಸಲಾತಿ ಪ್ರಕಟ: ಡಿ ಕೆ ಶಿವಕುಮಾರ್

ಸದ್ಯದಲ್ಲೇ ನೂತನ ರಾಜ್ಯಾಧ್ಯಕ್ಷರ ಹೆಸರೂ ಅಂತಿಮ?

ಹಲವು ವಿವಾದಗಳು ಮತ್ತು ಹಗರಣಗಳ ಆರೋಪದಿಂದ ರಾಜ್ಯ ಬಿಜೆಪಿ ನಲುಗುತ್ತಿದೆ. ಸ್ವಪಕ್ಷೀಯ ಮುಖಂಡರೇ ಹಾಲಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಬಿಜೆಪಿ ಕಾರ್ಯಕರ್ತರು ಕಟೀಲ್ ವಿರುದ್ಧ ಆಕ್ರೋಶ ಹೊರಹಾಕುತ್ತಲೇ ಇದ್ದಾರೆ. ಇದೆಲ್ಲದರ ಪರಿಣಾಮ 2023ರ ಚುನಾವಣೆ ಮೇಲೆ ಬೀರುವ ಸಾಧ್ಯತೆ ಇರುವುದರಿಂದ ಕಟೀಲ್ ಬದಲಾವಣೆ ಖಚಿತ ಎನ್ನುತ್ತವೆ ಬಿಜೆಪಿ ಮೂಲಗಳು.

ಹಾಲಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೂರು ವರ್ಷಗಳ ಅವಧಿ ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಪ್ರಖರ ಹಿಂದುತ್ವ ಪ್ರತಿಪಾದಕರಿಗೆ ಮನ್ನಣೆ ನೀಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ. 'ದಲಿತ ಟ್ರಂಪ್ ಕಾರ್ಡ್' ಬಳಸಲು ಮುಂದಾಗಿರುವ ಬಿಜೆಪಿ, ಅರವಿಂದ ಲಿಂಬಾವಳಿ ಅವರನ್ನು ರಾಜ್ಯಾಧ್ಯಕ್ಷರ ಹುದ್ದೆಗೇರಿಸುವ ಸಾಧ್ಯತೆ ಕೂಡ ಇದೆ. ಬಿ ಎಸ್ ಯಡಿಯೂರಪ್ಪ ಬಣ ಹಠ ಹಿಡಿದರೆ ಸಚಿವ ಗೋವಿಂದ ಕಾರಜೋಳ ಅವರಿಗೆ ಅವಕಾಶ ಸಿಗುವ ಎಲ್ಲ ಸಾಧ್ಯತೆಗಳಿವೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿಯ ಮುಂದಿನ ಸಾರಥಿ ‘ದಲಿತ ನಾಯಕ’ ಎನ್ನಲಾಗುತ್ತಿದೆ.

ಸಿದ್ದರಾಮೋತ್ಸವದ ಮೂಲಕ ಶಕ್ತಿ ಪ್ರದರ್ಶನ ಮಾಡಿರುವ ಕಾಂಗ್ರೆಸ್‌ಗೆ ಬಿಜೆಪಿ ಕೂಡ ಕೌಂಟರ್ ಕೊಡಲು ಮುಂದಾಗಿದ್ದು, ಸದ್ಯದಲ್ಲೇ ಬೃಹತ್ ಸಮಾವೇಶ ಒಂದನ್ನು ನಡೆಸಲು ಬಿಜೆಪಿ ನಾಯಕರು ತಯಾರಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಸಮಾವೇಶದ ಹೊತ್ತಿಗೆ ನೂತನ ರಾಜ್ಯಾಧ್ಯಕ್ಷರ ಹೆಸರು ಪ್ರಕಟವಾದರೂ ಆಗಬಹುದು.

ನಿಮಗೆ ಏನು ಅನ್ನಿಸ್ತು?
0 ವೋಟ್