ಬಹುತೇಕ ನಗರಗಳು ಸ್ಲಂಗಳಾಗಿ ಬದಲಾದರೂ ಅಚ್ಚರಿ ಇಲ್ಲ; ಸ್ಪೀಕರ್ ಕಾಗೇರಿ ಕಿಡಿ

  • ಕೆಲ ಇಲಾಖೆಗಳು ತಮ್ಮ ಮೂಲ ಕೆಲಸವನ್ನೇ ಮರೆತಿವೆ
  • ಅಧಿಕಾರಿಗಳ ಕಾರ್ಯವೈಖರಿಗೆ ಚಾಟಿ ಬೀಸಿದ ಸ್ಪೀಕರ್

ನಗರಾಭಿವೃದ್ದಿ ಇಲಾಖೆ, ಟೌನ್ ಪ್ಲಾನಿಂಗ್ ಕಮಿಟಿ ಹೀಗೆ ಕೆಲ ಇಲಾಖೆಗಳು ಮತ್ತು ಅವುಗಳ ಕಾರ್ಯ ವೈಖರಿ ನೋಡಿದರೆ ನಮ್ಮ ಬಹುಪಾಲು ನಗರಗಳು ಸ್ಲಂಗಳಾಗಿ ಬದಲಾದರೂ ಅಚ್ಚರಿ ಇಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಗರಾಭಿವೃದ್ದಿ ಇಲಾಖೆಯ ಬಗ್ಗೆ ಲೇವಡಿ ಮಾಡಿದರು.

ವಿಧಾನಸಭೆಯ ಏಳನೇ ದಿನದ ಕಲಾಪದಲ್ಲಿ ಮಂಡನೆಯಾದ 2022ರ ಮುನಿಸಿಪಾಲಿಟಿ ತಿದ್ದುಪಡಿ ವಿಧೇಯಕ ಅಂಗೀಕಾರಕ್ಕಾಗಿ ಮುಖ್ಯಮಂತ್ರಿಗಳು ಸದನಕ್ಕೆ ಕೋರಿಕೊಂಡರು.

ಕಾಯ್ದೆ ಬಗ್ಗೆ ಸದನಕ್ಕೆ ಮಾಹಿತಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಇಲಾಖೆ ಮತ್ತು ಟೌನ್ ಪ್ಲಾನಿಂಗ್ ರೂಪುರೇಷೆ ಮತ್ತು ಕಾನೂನು ಬಹಳ ಕ್ಲಿಷ್ಟವಾಗಿದೆ. ಇದರಿಂದಾಗಿ ಬಡವರಿಗೆ ಮನೆ ಕಟ್ಟಿಕೊಳ್ಳಲು ಕಷ್ಟವಾಗುತ್ತಿದೆ. ಟೌನ್ ಪ್ಲಾನಿಂಗ್ ನಲ್ಲಿ ಬಂದಿರುವ ಸೈಟುಗಳ ವಿಚಾರವೀಗ ಕೋರ್ಟ್‌ನಲ್ಲಿದೆ. ಪ್ಲಾನಿಂಗ್ ವ್ಯಾಪ್ತಿ ಹೊರಗೆ ನಿವೇಶನ ಹೊಂದಿರುವವರಿಗೆ ಅವಕಾಶ ಮಾಡಿಕೊಡುವ ನಿರ್ಧಾರದಿಂದ ಈ ವಿಧೇಯಕ ತರಲಾಗಿದೆ ಎಂದು ಹೇಳಿದರು.

ಬಳಿಕ ಅದನ್ನು ಅಂಗೀಕರಿಸುವಂತೆ ಸದನಕ್ಕೆ ಕೇಳಿಕೊಂಡರು. ಬಳಿಕ ಸ್ಪೀಕರ್ ಮತಕ್ಕೆ ಹಾಕಿ 2022ರ ಕರ್ನಾಟಕ ಮುನಿಸಿಪಾಲಿಟಿ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಿದರು.

ಇದಾದ ಬಳಿಕ ಸರ್ಕಾರಿ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಮಾತನಾಡಿದ ಸಭಾಧ್ಯಕ್ಷ ಕಾಗೇರಿ, "ಟೌನ್ ಪ್ಲಾನಿಂಗ್, ನಗರಾಭಿವೃದ್ಧಿ ಇಲಾಖೆ, ಅಭಿವೃದ್ಧಿ ಪ್ರಾಧಿಕಾರ ಹೀಗೆ ಹಲವು ಅಭಿವೃದ್ಧಿ ಇಲಾಖೆಗಳಿವೆ. ಆದರೆ ಅವರ ಕರ್ತವ್ಯ ಮತ್ತು ಕಾರ್ಯ ವೈಖರಿ ನೋಡಿದ್ರೆ ಅಬ್ಬಬ್ಬಾ ಅನಿಸುತ್ತೆ. ಅವರು ಸುಧಾರಿಸಿಕೊಳ್ಳಬೇಕಿದೆ. ಗಂಭಿರವಾಗಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದಲ್ಲಿ ನಗರಗಳ ಜಾಗದಲ್ಲಿ ಸ್ಲಂಗಳು ತಲೆಎತ್ತುತ್ತವೆ" ಎಂದು ತಮ್ಮ ಅಸಮಾಧಾನ ಹೊರಹಾಕಿದರು.

ಈ ಸುದ್ದಿ ಓದಿದ್ದೀರಾ?: ಮಳೆಗಾಲ ಅಧಿವೇಶನ | ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ವಯೋಮಿತಿ ಏರಿಕೆ ಯೋಚನೆ ಇಲ್ಲ: ಆರಗ ಜ್ಞಾನೇಂದ್ರ 

"ಸರ್ಕಾರ ಈ ವಿಚಾರದಲ್ಲಿ ಗಂಭೀರ ಕ್ರಮಕ್ಕೆ ಮುಂದಾಗಬೇಕು. ಯಾರಾದರೂ ಇದರ ಹೊಣೆ ಹೊರಬೇಕು. ಸದ್ಯ ಕಾನೂನು ಸಚಿವ ಮಾಧುಸ್ವಾಮಿ ಮತ್ತವರ ಉಪ ಸಮಿತಿ ಅಂತಹ ಧೈರ್ಯ ತೋರಿದ ಫಲವಾಗಿ ಕೊಂಚ ಮಟ್ಟಿಗೆ ಈ ಸಮಸ್ಯೆ ಬಗೆಹರಿದಿದೆ. ಇಲ್ಲದಿದ್ದಲ್ಲಿ ಸಮಸ್ಯೆ ಗಂಭೀರವಾಗುತ್ತದೆ" ಎಂದು ಸಭಾಧ್ಯಕ್ಷರು ಸದನಕ್ಕೆ ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್