ತ್ರಿವರ್ಣ ಧ್ವಜ ವಿರೋಧಿಸಿದ್ದ ಸಾವರ್ಕರ್ ಅವರನ್ನು ಆರ್‌ಎಸ್ಎಸ್‌ ಆರಾಧಿಸುತ್ತದೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

Siddaramaiah
  • ಸಂವಿಧಾನ, ರಾಷ್ಟ್ರಗೀತೆ, ರಾಷ್ಟ್ರಧ್ವಜದ ಬಗ್ಗೆ ಬಿಜೆಪಿಗೆ ಗೌರವ ಇಲ್ಲ
  • ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಹೋರಾಡಿದೆ; ಆರ್‌ಎಸ್ಎಸ್‌ ಕೊಡುಗೆ ಇಲ್ಲ

ಭಾರತದ ತ್ರಿವರ್ಣ ಧ್ವಜವನ್ನು ವಿರೋಧ ಮಾಡಿದ್ದ ಸಾವರ್ಕರ್ ಅವರನ್ನು ಆರ್‌ಎಸ್ಎಸ್‌ ಆರಾಧನೆ ಮಾಡುತ್ತದೆ. ಆರ್‌ಎಸ್ಎಸ್‌ನ ಸರಸಂಘಚಾಲಕರಾಗಿದ್ದ ಗೋಲ್ವಾಲ್ಕರ್ ಕೂಡ ತ್ರಿವರ್ಣ ಧ್ವಜವನ್ನು ವಿರೋಧ ಮಾಡಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ತ್ರಿವರ್ಣ ಧ್ವಜವನ್ನು ‘ಆರ್ಗನೈಝರ್’ ಎಂಬ ಬಿಜೆಪಿಯ ಮುಖವಾಣಿ ವಿರೋಧ ಮಾಡಿತ್ತು. ಆಗ ವಿರೋಧ ಮಾಡಿ ಈಗ 'ಹರ್ ಘರ್ ತಿರಂಗ' ಎಂದು ಅಭಿಯಾನ ಮಾಡೋದು ನಾಟಕವಲ್ವ? ಸಂವಿಧಾನ, ರಾಷ್ಟ್ರಗೀತೆ, ರಾಷ್ಟ್ರಧ್ವಜದ ಬಗ್ಗೆ ಬಿಜೆಪಿಗೆ ಗೌರವ ಇಲ್ಲ. ಅಮೃತ ಮಹೋತ್ಸವವನ್ನು ರಾಜಕೀಯ ಮಾಡಲು ಹೊರಟಿದ್ದಾರೆ. ನಾವು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುತ್ತಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ” ಎಂದು ಅವರು ಹೇಳಿದರು.

“ಬಿಜೆಪಿಗೆ ನನ್ನ ಕಂಡರೆ ಭಯ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಬಿಜೆಪಿ ಹೆದರಿದೆ. ಅದೇ ಕಾರಣಕ್ಕೆ ನನ್ನ ಜನ್ಮದಿನ ಮುಗಿದು ವಾರ ಕಳೆದರೂ ಟೀಕೆ ಮಾಡೋದು ನಿಲ್ಲಿಸಿಲ್ಲ” ಎಂದರು. 

“ತಗಡೂರು ರಾಮಚಂದ್ರ ರಾವ್ ಅವರು ಸ್ವಾತಂತ್ರ್ಯ ಹೋರಾಟಗಾರರು, ಅವರನ್ನು ಕರ್ನಾಟಕದ ಗಾಂಧಿ ಎನ್ನುತ್ತಾರೆ. ಹಾಗಾಗಿ ತಗಡೂರಿಂದ ಪಾದಯಾತ್ರೆ ಮಾಡುತ್ತಿದ್ದೇವೆ. ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ 75 ಕಿ.ಮೀ ಪಾದಯಾತ್ರೆ ಮಾಡಬೇಕು ಎಂದು ಪಕ್ಷ ತೀರ್ಮಾನ ಮಾಡಿದೆ. ನಾನೊಬ್ಬ ಕಾಂಗ್ರೆಸ್ಸಿಗನಾಗಿ ಪಕ್ಷದ ಕೆಲಸ ಮಾಡುತ್ತಿದ್ದೇನೆ” ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

“ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂಬುದು ಬರಿ ಊಹಾಪೋಹ. ನಾನು ಇದಕ್ಕೂ ಮೊದಲು ಮಾಲೂರು, ಚಿಂತಾಮಣಿ, ಚಾಮುಂಡೇಶ್ವರಿಯಲ್ಲಿ ಪಾದಯಾತ್ರೆ ಮಾಡಿದ್ದೆ, ಈ ಎಲ್ಲ ಕಡೆ ಚುನಾವಣೆಗೆ ನಿಲ್ಲೋಕಾಗುತ್ತಾ? ಚುನಾವಣೆ ಹತ್ತಿರ ಬಂದಾಗ ಯಾವ ಕ್ಷೇತ್ರ ಎಂದು ಎಲ್ಲರಿಗೂ ಹೇಳ್ತೇನೆ” ಎಂದರು.

“ಬಿಬಿಎಂಪಿ ಚುನಾವಣೆ ಸಂಬಂಧ ಭಕ್ತವತ್ಸಲಂ ನೇತೃತ್ವದಲ್ಲಿ ಸಮಿತಿ ಮಾಡಿದ್ದರು. ಅವರು ಎರಡೇ ತಿಂಗಳಲ್ಲಿ ವರದಿ ನೀಡಿದ್ದಾರೆ. ಇದನ್ನು ಸರ್ಕಾರ ತೆಗೆದುಕೊಂಡಿದೆ. ಅದರ ಬದಲು ಕಾಂತರಾಜ್ ಅವರ ಸಮಿತಿ ನೀಡಿದ್ದ ವರದಿ ಪಡೆಯಬೇಕಿತ್ತು. ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಲು ಮೂರು ಹಂತದ ಪರೀಕ್ಷೆ ಆಗಬೇಕು ಎಂದು ಸುಪ್ರೀಂಕೋರ್ಟ್ ತನ್ನ ನಿರ್ಣಯದಲ್ಲಿ ಬಹಳ ಸ್ಪಷ್ಟವಾಗಿ ಹೇಳಿದೆ. ಹಿಂದುಳಿದ ಜಾತಿಗಳ ಬಗ್ಗೆ ಕರಾರುವಕ್ಕಾದ ಮಾಹಿತಿ ಇರಬೇಕು. ಇದಕ್ಕಾಗಿ ಒಂದು ನಿರ್ದಿಷ್ಟ ಆಯೋಗ ರಚಿಸಿ, ಅವರು ವರದಿ ನೀಡಬೇಕು. ಈ ವರದಿಯನ್ನು ಸುಪ್ರೀಂಕೋರ್ಟ್ ಒಪ್ಪಿದರೆ ಮಾತ್ರ ಮೀಸಲಾತಿ ನೀಡಲು ಸಾಧ್ಯವಿದೆ” ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

ಈ ಸುದ್ದಿ ಓದಿದ್ದೀರಾ?: ಹುಟ್ಟಿದ ಕೂಡಲೇ ಪಂಚೆ ಕಟ್ಟಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ರಾ?: ಸಿದ್ದರಾಮಯ್ಯ ವಿರುದ್ಧ ಎಚ್‌ಡಿಕೆ ವಾಗ್ದಾಳಿ

“ರಾಜ್ಯದಲ್ಲಿ ಅಹಿಂದಾ ಮತಗಳನ್ನು ತೆಗೆದುಹಾಕುವ ಕೆಲಸ ನಡೆಯುತ್ತಿದೆ ಎಂದು ಪಕ್ಷದ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಈ ವರ್ಗದ ಜನರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸುತ್ತಾರೆ ಎಂದು ತೆಗೆದು ಹಾಕುತ್ತಾರೆ ಅನ್ನಿಸುತ್ತೆ. ಚುನಾವಣೆ ಗೆಲ್ಲಲು ಏನನ್ನೂ ಬೇಕಾದರೂ ಮಾಡುತ್ತಾರೆ” ಎಂದು ಆರೋಪ ಮಾಡಿದರು.

“ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಕಾಂಗ್ರೆಸ್‌ನವರು. ಆರ್‌ಎಸ್ಎಸ್‌ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿತ್ತಾ, ಜನಸಂಘ ಹುಟ್ಟಿದ್ದು 1951ರಲ್ಲಿ, ಬಿಜೆಪಿಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಗೊತ್ತಾ? ಆರ್‌ಎಸ್ಎಸ್‌ ನವರು ಯಾರಾದ್ರೂ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ರಾ? ಸಂಘದ ಸ್ಥಾಪಕರಾದ ಹೆಡ್ಗೆವಾರ್, ಗೋಲ್ವಾಲ್ಕರ್ ಜೈಲಿಗೆ ಹೋಗಿದ್ರಾ” ಎಂದು ಅವರು ಪ್ರಶ್ನಿಸಿದ್ದಾರೆ. 

“ರಾಷ್ಟ್ರಧ್ವಜವನ್ನು ಖಾದಿ ಬಟ್ಟೆಯಿಂದ ತಯಾರಿಸಬೇಕು. ಪಾಲಿಸ್ಟರ್‌ನಿಂದ ಮಾಡಬಾರದು. ಖಾದಿ ಬಟ್ಟೆ ಕೈಮಗ್ಗಗಳಲ್ಲಿ ತಯಾರಾಗುತ್ತೆ. ಇದರ ಉದ್ದೇಶ ಏನೆಂದರೆ, ಚರಕದಿಂದ ನೂಲು ತೆಗೆಯುವ ಕರಕುಶಲ ಕರ್ಮಿಗಳಿಗೆ ಉದ್ಯೋಗ ಸಿಗಬೇಕು ಎಂದು. ಚೀನಾದ ಪಾಲಿಸ್ಟರ್ ಬಟ್ಟೆಯಲ್ಲಿ ಧ್ವಜ ತಯಾರಿಸಿದರೆ ಇದರ ಉದ್ದೇಶವೇ ಹಾಳಾಗುತ್ತದೆ” ಎಂದರು. 

“ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಚೀನಾದಿಂದ ಆಮದು ಜಾಸ್ತಿಯಾಗಿ, ರಫ್ತು ಕಡಿಮೆಯಾಗಿದೆ. ಮೇಕ್ ಇನ್ ಇಂಡಿಯಾ ಎಂದರೆ ರಫ್ತು ಜಾಸ್ತಿಯಾಗಬೇಕಿತ್ತು. ಹೊರಗಡೆಯಿಂದ ತಂದು ಕೊಟ್ಟರೆ ಅದಕ್ಕೆ ಅರ್ಥ ಇರುತ್ತಾ” ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್